Kalaburagi Crime: ಕಲಬುರಗಿಯಲ್ಲಿ ಪ್ರತ್ಯೇಕ ಅಪಘಾತದಲ್ಲಿ ಇಬ್ಬರ ಸಾವು, ಬೀದರ್‌ನಲ್ಲಿ ವಿದ್ಯಾರ್ಥಿಗಳ ಬೆತ್ತಲೆಗೊಳಿಸಿದ ಶಿಕ್ಷಕನ ಬಂಧನ
Dec 19, 2023 06:48 PM IST
ಕಲಬುರಗಿಯಲ್ಲಿ ಪ್ರತ್ಯೇಕ ಅಪಘಾತದಲ್ಲಿ ಇಬ್ಬರ ಸಾವು ಸಂಭವಿಸಿದ್ದು, ನಾಲ್ವರು ಗಾಯಗೊಂಡಿದ್ದಾರೆ (ಸಾಂಕೇತಿಕ ಚಿತ್ರ)
ಕಲಬರುಗಿಯಲ್ಲಿ ಸೋಮವಾರ ತಡರಾತ್ರಿ ಸಂಭವಿಸಿದ ಪ್ರತ್ಯೇಕ ಅಪಘಾತದಲ್ಲಿ ಇಬ್ಬರು ಮೃತಪಟ್ಟು, ನಾಲ್ವರು ಗಾಯಗೊಂಡಿರುವ ಘಟನೆ ನಡೆದಿದೆ. ಇನ್ನೊಂದೆಡೆ, ಬೀದರ್‌ನಲ್ಲಿ ವಿದ್ಯಾರ್ಥಿಗಳನ್ನು ಬೆತ್ತಲೆಗೊಳಿಸಿ ಹಲ್ಲೆ ಮಾಡಿದ ಶಿಕ್ಷಕನನ್ನು ಪೊಲೀಸರು ಬಂಧಿಸಿದ್ದಾರೆ.
ಕಲಬುರಗಿ: ನಗರದ ಹುಮನಾಬಾದ್ ರಸ್ತೆಯ ಆಲಗೂಡ್ ಕ್ರಾಸ್ ಹತ್ತಿರ ಮತ್ತು ಸುಲ್ತಾನಪುರ ರಿಂಗ್ ರೋಡ್ ಬಳಿ ಸೋಮವಾರ ತಡರಾತ್ರಿ ಸಂಭವಿಸಿದ ಪ್ರತ್ಯೇಕ ಅಪಘಾತದಲ್ಲಿ ಇಬ್ಬರು ಮೃತಪಟ್ಟು, ನಾಲ್ವರು ಗಾಯಗೊಂಡಿರುವ ಘಟನೆ ನಡೆದಿದೆ.
ಹುಮನಾಬಾದ್ ರಸ್ತೆಯ ಆಲಗೂಡ್ ಕ್ರಾಸ್ ಹತ್ತಿರ ಎರಡು ಕಾರುಗಳ ನಡುವೆ ಡಿಕ್ಕಿ ಸಂಭವಿಸಿ ಶಹಾಬಾದ ಪಟ್ಟಣದ ಮಕ್ತೂಮ್ ತಂದೆ ಲಾಲ್ ಅಹ್ಮದ್ (52) ಎಂಬುವವರು ಮೃತಪಟ್ಟಿದ್ದಾರೆ. ಇವರೊಂದಿಗೆ ಕಾರಿನಲ್ಲಿ ಪ್ರಯಾಣಿಸುತ್ತಿದ್ದ ಅಬ್ದುಲ್ ರೌಫ್, ಬಸವರಾಜ, ಮಲ್ಲಿಕಾರ್ಜುನ ಮತ್ತು ಇನ್ನೊಂದು ಕಾರಿನಲ್ಲಿದ್ದ ಕೋಹಿನೂರ ಗ್ರಾಮದ ಸಂಜೀವಕುಮಾರ ತಂದೆ ಪಂಡಿತರಾವ ಎಂಬುವವರು ಗಾಯಗೊಂಡಿದ್ದಾರೆ.
ಮಕ್ತೂಮ್, ಅಬ್ದುಲ್ ರೌಫ್, ಬಸವರಾಜ ಮತ್ತು ಮಲ್ಲಿಕಾರ್ಜುನ ಅವರು ಕಾರಿನಲ್ಲಿ ಹುಮನಾಬಾದಗೆ ಹೋಗಿ ಮರಳಿ ಬರುತ್ತಿದ್ದಾಗ ಎದುರಿನಿಂದ ಬರುತ್ತಿದ್ದ ಸಂಜೀವಕುಮಾರ ಅವರಿದ್ದ ಕಾರು ಡಿಕ್ಕಿ ಹೊಡೆದಿದೆ ಎಂದು ತಿಳಿದುಬಂದಿದೆ.
ಇನ್ನು ಸುಲ್ತಾನಪುರ ರಿಂಗ್ ರೋಡ್ನಲ್ಲಿ ಮೈಮೇಲೆ ಲಾರಿ ಹರಿದು ಹೋಗಿ ಆಶ್ರಯ ಕಾಲೋನಿಯ ನಿವಾಸಿ ಅಂಬರೀಶ ಅಣವೀರಪ್ಪ ಪಡಶೆಟ್ಟಿ (43) ಎಂಬುವವರು ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ.
ಇವರು ಕುಸನೂರ ರಸ್ತೆಯ ಗಾಂಧಿ ಬಜಾರ್ದಬಲ್ಲಿ ಕೆಲಸ ಮಾಡುತ್ತಿದ್ದರು. ರಾತ್ರಿ 11ರ ಸುಮಾರಿಗೆ ಕೆಲಸ ಮುಗಿಸಿಕೊಂಡು ಬೈಕ್ ಮೇಲೆ ಮನೆಯ ಕಡೆಗೆ ಹೊರಟಿದ್ದಾಗ ಯಾವುದೋ ವಾಹನ ಡಿಕ್ಕಿ ಹೊಡೆದಿದೆ. ವಾಹನ ಡಿಕ್ಕಿ ಹೊಡೆದಿದ್ದರಿಂದ ಕೆಳಗೆ ಬಿದ್ದ ಅವರ ಮೇಲೆ ಹಿಂದೆ ಬರುತ್ತಿದ್ದ ಲಾರಿಯೊಂದು ಹರಿದು ಹೋದ ಕಾರಣ ಅವರು ಸ್ಥಳದಲ್ಲೇ ಮೃತಪಟ್ಟಿದ್ದಾರೆ ಎಂದು ತಿಳಿದುಬಂದಿದೆ. ಸಂಚಾರಿ ಪೊಲೀಸ್ ಠಾಣೆ-1ರಲ್ಲಿ ಎರಡು ಪ್ರತ್ಯೇಕ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರಿದಿದೆ.
ನರ್ಸಿಂಗ್ ವಿದ್ಯಾರ್ಥಿ ಮೇಲೆ ಅತ್ಯಾಚಾರ
ಮದುವೆಯಾಗುವುದಾಗಿ ನಂಬಿಸಿ ನರ್ಸಿಂಗ್ ಓದುತ್ತಿದ್ದ ವಿದ್ಯಾರ್ಥಿನಿ ಮೇಲೆ ಯುವಕನೊಬ್ಬ ಅತ್ಯಾಚಾರವೆಸಗಿರುವ ಘಟನೆ ನಡೆದಿದೆ.
ಆಂಧ್ರಪ್ರದೇಶದ ಅನ್ನಮ್ಮಯ್ಯಾ ಜಿಲ್ಲೆಯ ಗುರ್ರಾಮಗೊಂಡದ ನೂರ್ ಅಲಿ ಎಂಬಾತನೆ ಮದುವೆಯಾಗುವುದಾಗಿ ನಂಬಿಸಿ ಅತ್ಯಾಚಾರ ವೆಸಗಿದ್ದಾನೆ ಎಂದು ವಿದ್ಯಾರ್ಥಿನಿ ದೂರು ನೀಡಿದ್ದಾಳೆ.
ಕಲಬುರಗಿ ಕಾಲೇಜವೊಂದರಲ್ಲಿ ನರ್ಸಿಂಗ್ 2ನೇ ಸೆಮಿಸ್ಟರ್‌ನಲ್ಲಿ ಓದುತ್ತಿದ್ದ ವಿದ್ಯಾರ್ಥಿನಿಯನ್ನು ಪರಿಚಯಿಸಿಕೊಂಡ ನೂರ್ ಅಲಿ, ಆಕೆಯನ್ನು ಮದುವೆಯಾಗುವುದಾಗಿ ನಂಬಿಸಿ ಹೈದ್ರಾಬಾದಗೆ ಕರೆದುಕೊಂಡು ಹೋಗಿ ಅತ್ಯಾಚಾರವೆಸಗಿದ್ದಾನೆ ಎನ್ನಲಾಗಿದೆ. ಈ ಕುರಿತು ರೋಜಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರಿದಿದೆ.
ವಿದ್ಯಾರ್ಥಿಗಳನ್ನು ಬೆತ್ತಲೆಗೊಳಿಸಿ ಹಲ್ಲೆ ಮಾಡಿದ ಶಿಕ್ಷಕ ಬಂಧನ
ಬೀದರ್: ವಿದ್ಯಾರ್ಥಿಗಳನ್ನು ಬೆತ್ತಲೆಗೊಳಿಸಿ ಹಲ್ಲೆ ಮಾಡಿದ ಆರೋಪದ ಮೇಲೆ ಶಿಕ್ಷಕನನ್ನು ಪೊಲೀಸರು ಬಂಧಿಸಿದ ಘಟನೆ ನಡೆದಿದೆ.
ಬೀದರ್ ಜಿಲ್ಲೆಯ ಹುಮ್ನಾಬಾದ್ ಗ್ರಾಮದ ನಗರೇಶ್ವರ ಹಿರಿಯ ಪ್ರಾಥಮಿಕ ಮತ್ತು ಪ್ರೌಢ ಶಾಲೆಯ ದೈಹಿಕ ಶಿಕ್ಷಕರಾದ ರಮೇಶ್ ಎಂಬುವರನ್ನು ಪೋಕ್ಸೋ ಕಾಯ್ದೆಯಡಿ ಪೊಲೀಸರು ಬಂಧಿಸಿದ್ದಾರೆ.
ವಿದ್ಯಾರ್ಥಿಗಳು ಗಲಾಟೆ ಮಾಡಿದ್ದಾರೆಂಬ ನೆಪವೊಡ್ಡಿ ಶಿಕ್ಷಕ ವಿದ್ಯಾರ್ಥಿಗಳ ಮೇಳೆ ಹಲ್ಲೆ ಮಾಡಿದ್ದರು ಎಂದು ಆರೋಪಿಸಿ ಶಿಕ್ಷಕನ ವಿರುದ್ಧ ಹುಮ್ನಾಬಾದ್ ಠಾಣೆಯಲ್ಲಿ ಪೋಷಕರು ದೂರು ದಾಖಲಿಸಿದ್ದರು. ಪೋಷಕರ ದೂರು ಆಧರಿಸಿ ಶಿಕ್ಷಕನನ್ನು ಬಂಧಿಸಲಾಗಿದೆ.
ಪ್ರೌಢ ಶಾಲೆಯ ದೈಹಿಕ ಶಿಕ್ಷಕರಾದ ರಮೇಶ್ ಎಂಬುವವರು 9ನೇ ಮತ್ತು 10ನೇ ತರಗತಿಯ ವಿದ್ಯಾರ್ಥಿಗಳಿಗೆ ಹೊಡೆದಿದ್ದರು. ಮಕ್ಕಳು ಗಲಾಟೆ ಮಾಡುತ್ತಿದ್ದಾರೆ ಎಂದು ಬಟ್ಟೆ ಬಿಚ್ಚಿಸಿ ಬೆತ್ತಲೆ ಮಾಡಿ ಅವಾಚ್ಯ ಶಬ್ದಗಳಿಂದ ಬೈದು ಹಲ್ಲೆ ಮಾಡಿದ್ದರು. ಅಲ್ಲದೆ ಯಾರಿಗಾದರು ಈ ವಿಚಾರ ಹೇಳಿದರೆ ನಿಮ್ಮನ್ನು ಸುಮ್ಮನೆ ಬಿಡುವುದಿಲ್ಲ ಎಂದು ಬೆದರಿಕೆ ಕೂಡ ಹಾಕಿದ್ದರು. ಮಕ್ಕಳಿಗೆ ಆದ ಗಾಯಗಳನ್ನು ಗಮನಿಸಿ ಪೋಷಕರು ಠಾಣೆಯಲ್ಲಿ ದೂರು ದಾಖಲಿಸಿರುವ ಹಿನ್ನೆಲೆಯಲ್ಲಿ ಶಿಕ್ಷಕನನ್ನು ಪೊಲೀಸರು ಬಂಧಿಸಿ ಮುಂದಿನ ವಿಚಾರಣೆ ನಡೆಸುತ್ತಿದ್ದಾರೆ.