logo
ಕನ್ನಡ ಸುದ್ದಿ  /  ಕರ್ನಾಟಕ  /  Kalaburagi News: ಜನತಾ ದರ್ಶನ ಫಲ; ಪೋಲಕಪಲ್ಲಿ ಆದರ್ಶ ವಿದ್ಯಾಲಯಕ್ಕೆ ಬಂತು ಬಸ್‌

Kalaburagi News: ಜನತಾ ದರ್ಶನ ಫಲ; ಪೋಲಕಪಲ್ಲಿ ಆದರ್ಶ ವಿದ್ಯಾಲಯಕ್ಕೆ ಬಂತು ಬಸ್‌

HT Kannada Desk HT Kannada

Sep 27, 2023 04:08 PM IST

google News

ಜನತಾ ದರ್ಶನ ಫಲ; ಪೋಲಕಪಲ್ಲಿ ಆದರ್ಶ ವಿದ್ಯಾಲಯಕ್ಕೆ ಬಂತು ಬಸ್‌

    • ಮಂಗಳವಾರ ಬೆಳಗ್ಗೆಯ ಕೆಕೆಆರ್‌ಟಿಸಿ ಬಸ್‌ ಚಿಂಚೋಳಿ ಪಟ್ಟಣದಿಂದ ಪೋಲಕಪಲ್ಲಿ ಆದರ್ಶ ವಿದ್ಯಾಲಯ ಕಾರ್ಯಾಚರಣೆ ಆರಂಭಿಸಿದೆ. ಶಾಲೆಗೆ ಬಂದ ಬಸ್ ಕಂಡು ಮಕ್ಕಳು ಖುಷ್ ಆಗಿದ್ದಾರೆ.
ಜನತಾ ದರ್ಶನ ಫಲ; ಪೋಲಕಪಲ್ಲಿ ಆದರ್ಶ ವಿದ್ಯಾಲಯಕ್ಕೆ ಬಂತು ಬಸ್‌
ಜನತಾ ದರ್ಶನ ಫಲ; ಪೋಲಕಪಲ್ಲಿ ಆದರ್ಶ ವಿದ್ಯಾಲಯಕ್ಕೆ ಬಂತು ಬಸ್‌

ಕಲಬುರಗಿ: ಸೋಮವಾರ ಚಿಂಚೋಳಿಯಲ್ಲಿ ನಡೆದ ಜನತಾ ದರ್ಶನದಲ್ಲಿ ದೂರುಗಳನ್ನು ಆಧಾರಿಸಿ ಜಿಲ್ಲಾ ಉಸ್ತುವಾರಿ ಸಚಿವ ಪ್ರಿಯಾಂಕ್‌ ಖರ್ಗೆ ಅವರು ಸಂಬಂಧಿಸಿದ ಅಧಿಕಾರಿಗಳಿಗೆ ಸೂಚನೆ ನೀಡಿರುವ ಹಿನ್ನೆಲೆಯಲ್ಲಿ ಮಂಗಳವಾರವೇ ಜಿಲ್ಲೆಯ ಚಿಂಚೋಳಿ ತಾಲೂಕಿನ ಪೋಲಕಪಲ್ಲಿ ಆದರ್ಶ ವಿದ್ಯಾಲಯದ ಮಕ್ಕಳಿಗೆ ಬಸ್‌ ಸೌಲಭ್ಯ ಕಲ್ಪಿಸಲಾಗಿದೆ. ಇನ್ನೊಂದೆಡೆ ಕಲಬುರಗಿ ಜಿಲ್ಲೆಯ ಚಿಂಚೋಳಿ ತಾಲೂಕಿನ ಸುಲೇಪೇಟೆ ಗ್ರಾಮ ಪಂಚಾಯಿತಿ ಸದಸ್ಯರ ಗೌರವಧನ ದುರುಪಯೋಗ ಮಾಡಿಕೊಂಡ ಆರೋಪದ ಮೇಲೆ ಈ ಹಿಂದಿನ ಪಿಡಿಒ (ಪ್ರಸ್ತುತ ಶಾದಿಪುರ) ರಾಮಕೃಷ್ಣ ಕೊರಡಂಪಳ್ಳಿ ಅವರನ್ನು ಅಮಾನತು ಮಾಡಲಾಗಿದೆ.

ಪೋಲಕಪಲ್ಲಿ ಆದರ್ಶ ವಿದ್ಯಾಲಯಕ್ಕೆ ಬಂತು ಬಸ್

ಸೋಮವಾರ ಚಿಂಚೋಳಿಯಲ್ಲಿ ನಡೆದ ಜನತಾ ದರ್ಶನದಲ್ಲಿ ಚಿಂಚೋಳಿಯ ಪೋಲಕಪಲ್ಲಿ ಆದರ್ಶ ವಿದ್ಯಾಲಯದ ಮಕ್ಕಳು ಜಿಲ್ಲಾ ಉಸ್ತುವಾರಿ ಸಚಿವ ಪ್ರಿಯಾಂಕ್ ಖರ್ಗೆ ಅವರಿಗೆ ಚಿಂಚೋಳಿ ಪಟ್ಟಣದಿಂದ ತಮ್ಮ ಶಾಲೆಗೆ ಬಸ್‌ ಓಡಿಸಬೇಕೆಂಬ ಮನವಿಗೆ ತಕ್ಷಣ ಸ್ಪಂದಿಸಿದ ಸಚಿವರು ಬಸ್ ಓಡಿಸುವಂತೆ ಸ್ಥಳದಲ್ಲಿದ್ದ ಕೆಕೆಅರ್‌ಟಿಸಿ ಎಂಡಿ ಎಂ.ರಾಚಪ್ಪ ಅವರಿಗೆ ನಿರ್ದೇಶನ ನೀಡಿದರು.

ಅದರಂತೆ ಮಂಗಳವಾರ ಬೆಳಗ್ಗೆಯ ಕೆಕೆಆರ್‌ಟಿಸಿ ಬಸ್‌ ಚಿಂಚೋಳಿ ಪಟ್ಟಣದಿಂದ ಪೋಲಕಪಲ್ಲಿ ಆದರ್ಶ ವಿದ್ಯಾಲಯ ಕಾರ್ಯಾಚರಣೆ ಆರಂಭಿಸಿದೆ. ಶಾಲೆಗೆ ಬಂದ ಬಸ್ ಕಂಡು ಮಕ್ಕಳು ಖುಷ್ ಆಗಿದ್ದಾರೆ. ಈ ಹಿಂದೆ ಬಸ್ ಮುಖ್ಯ ರಸ್ತೆ ಮೂಲಕ ಹಾದು ಹೋಗುತ್ತಿತ್ತು. ಶಾಲೆ ಮುಖ್ಯ ರಸ್ತೆಯಿಂದ ಅಂದಾಜು ಒಂದು ಕಿ.ಮೀ. ದೂರ ಇರುವುದರಿಂದ ಮಕ್ಕಳಿಗೆ ತೊಂದರೆಯಾಗಿತ್ತು. ಇದೀಗ ಜನತಾ ದರ್ಶನದಿಂದ ಕೊನೆಗೂ ಮಕ್ಕಳಿಗೆ ಬಸ್‌ ಸೌಲಭ್ಯ ಸಿಕ್ಕಿದೆ.

ಪ್ರತಿ ದಿನ ಈ ಬಸ್ ಚಿಂಚೋಳಿ ಪಟ್ಟಣದಿಂದ ಬೆಳಿಗ್ಗೆ 9 ಗಂಟೆಗೆ ಆದರ್ಶ‌ ವಿದ್ಯಾಲಯಕ್ಕೆ ಹೊರಡಲಿದೆ. ಅದೇ ರೀತಿ ಸಂಜೆ 4.15 ಗಂಟೆಗೆ ಶಾಲೆಯಿಂದ ಮಕ್ಕಳನ್ನು ತರಲು ಬಸ್ ಸಂಚರಿಸಲಿದೆ ಎಂದು ಚಿಂಚೋಳಿ ಡಿಪೋ ಮ್ಯಾನೇಜರ್ ಅಶೋಕ ಪಾಟೀಲ ಮಾಹಿತಿ ನೀಡಿದ್ದಾರೆ.

ಪಿಡಿಒ ಅಮಾನತು

ಕಲಬುರಗಿ ಜಿಲ್ಲೆಯ ಚಿಂಚೋಳಿ ತಾಲೂಕಿನ ಸುಲೇಪೇಟೆ ಗ್ರಾಮ ಪಂಚಾಯಿತಿ ಸದಸ್ಯರ ಗೌರವಧನ ದುರುಪಯೋಗ ಮಾಡಿಕೊಂಡ ಆರೋಪದ ಮೇಲೆ ಈ ಹಿಂದಿನ ಪಿಡಿಒ (ಪ್ರಸ್ತುತ ಶಾದಿಪುರ) ರಾಮಕೃಷ್ಣ ಕೊರಡಂಪಳ್ಳಿ ಅವರನ್ನು ಅಮಾನತು ಮಾಡಲಾಗಿದೆ. ತಾಲೂಕು ಕ್ರೀಡಾಂಗಣದಲ್ಲಿ ಸೋಮವಾರ ನಡೆದ ಜನತಾ ದರ್ಶನಾ ಕಾರ್ಯಕ್ರಮದಲ್ಲಿ ಗ್ರಾಪಂ ಸದಸ್ಯರು ರಾಮಕೃಷ್ಣ ಅವರು ಗೌರವಧನ ದುರುಪಯೋಗ ಮಾಡಿಕೊಂಡಿದ್ದಾರೆ. ಒಮ್ಮೆ 3 ಸಾವಿರ, ಇನ್ನೊಮ್ಮೆ 6 ಸಾವಿರ ರೂ.ಗೌರವಧನ ಪಾವತಿಸಿದ್ದಾರೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಪ್ರಿಯಾಂಕ್‌ ಖರ್ಗ ಅವರ ಗಮನಕ್ಕೆ ತಂದರು. ಈ ಬಗ್ಗೆ ವಿಚಾರಿಸಿದಾಗ ಈ ಖಾತೆಯಲ್ಲಿ ಅನುದಾನವಿಲ್ಲವೆಂದು ಪಿಡಿಒ ಸ್ಪಷ್ಟನೆ ನೀಡಿದ್ದರು. ಸುಲೇಪೇಟೆ ಗ್ರಾಪಂ ಸ್ವಚ್ಛತಾ ಸಿಬ್ಬಂದಿ ಸಹ 8 ತಿಂಗಳಿನಿಂದ ವೇತನ ನೀಡಿಲ್ಲವೆಂದು ದೂರು ಸಲ್ಲಿಸಿದ್ದರು. ಕರ್ತವ್ಯ ಪಾಲನೆ ಮಾಡುವಲ್ಲಿ ನಿರ್ಲಕ್ಷ್ಯ ತೋರಿ ಅನುದಾನ ದುರುಪಯೋಗ ಮಾಡಿಕೊಂಡ ಆರೋಪದಡಿ ವಿಚಾರಣೆಯನ್ನು ಕಾಯ್ದಿರಿಸಿ ತಕ್ಷಣದಿಂದಲೇ ಜಾರಿಗೆ ಬರುವಂತೆ ಪಿಡಿಒ ರಾಮಕೃಷ್ಣ ಅವರನ್ನು ಅಮಾನತು ಮಾಡಿ ಜಿಪಂ ಸಿಒಓ ಭಂವರಸಿಂಗ್‌ ಮೀನಾ ಅವರು ಆದೇಶ ಹೊರಡಿಸಿದ್ದಾರೆ.

ಒಟ್ಟಾರೆ ಸೋಮವಾರ ನಡೆದ ಜನತಾ ದರ್ಶನದ ಫಲವಾಗಿ ಮಕ್ಕಳಿಗೆ ಬಸ್‌ ಸೌಲಭ್ಯ ಸಿಕ್ಕರೆ, ಕರ್ತವ್ಯ ಲೋಪ ವೆಸದಿದ ಪಿಡಿಒ ಅವರನ್ನು ಅಮಾನತುಗೊಳಿಸಿ ಶಿಕ್ಷಿಸುವ ಕೆಲಸವಾಗಿದೆ. ಹೀಗೆ ಜನತಾ ದರ್ಶನ ನಿರಂತರ ನಡೆಯಬೇಕೆಂಬ ಒತ್ತಾಸೆ ಸಾರ್ವಜನಿಕರದು.

(ವರದಿ: ಎಸ್.ಬಿ.ರೆಡ್ಡಿ, ಕಲಬುರಗಿ)

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ