Gruha Lakshmi: ಕಲಬುರಗಿ ಜಿಲ್ಲೆಯಲ್ಲಿ ಗೃಹಲಕ್ಷ್ಮಿ ಯೋಜನೆಗೆ ನೋಂದಣಿ ಪ್ರಕ್ರಿಯೆ ಆರಂಭ; ನೋಂದಣಿ ಹೇಗೆ, ಯಾರು ಅರ್ಹರು, ಇಲ್ಲಿದೆ ಮಾಹಿತಿ
Jul 20, 2023 08:39 AM IST
ಕಲಬುರಗಿ ಜಿಲ್ಲೆಯಲ್ಲಿ ಗೃಹಲಕ್ಷ್ಮಿ ಯೋಜನೆಗೆ ನೋಂದಣಿ ಪ್ರಕ್ರಿಯೆ ಆರಂಭ.
- Karnataka Gruha Lakshmi Scheme: ಮಾಸಿಕ 2,000 ರೂಪಾಯಿ ಒದಗಿಸುವ ಗೃಹಲಕ್ಷ್ಮಿ ಯೋಜನೆ ನೋಂದಣಿಯು ಕಲಬುರಗಿ ಜಿಲ್ಲಯಲ್ಲಿ ಆರಂಭಗೊಂಡಿದೆ. ಈ ಯೋಜನೆಗೆ ಸಂಬಂಧಿಸಿ ಮಾಹಿತಿ ಇಲ್ಲಿದೆ.
ಕಲಬುರಗಿ: ಮಹಿಳೆಯರನ್ನು ಆರ್ಥಿಕ ಸಶಕ್ತರನ್ನಾಗಿ ಮಾಡುವ ಉದ್ದೇಶದಿಂದ ರಾಜ್ಯ ಸರ್ಕಾರದ ಪ್ರಮುಖ ಐದು ಗ್ಯಾರಂಟಿ ಯೋಜನೆಗಳಲ್ಲಿ ಒಂದಾದ ಮಾಸಿಕ 2,000 ರೂಪಾಯಿ ಒದಗಿಸುವ ‘ಗೃಹ ಲಕ್ಷ್ಮೀ’ ಯೋಜನೆಯ ನೋಂದಣಿ ಪ್ರಕ್ರಿಯೆ ಕಲಬುರಗಿ ಜಿಲ್ಲೆಯಲ್ಲಿ ಬುಧವಾರದಿಂದ (ಜುಲೈ 19ರಿಂದ) ಪ್ರಾರಂಭವಾಗಿದೆ. ಅರ್ಹ ಫಲಾನುಭವಿಗಳು ನೋಂದಣಿ ಮಾಡಿಕೊಂಡು ಈ ಯೋಜನೆಯ ಲಾಭ ಪಡೆಯುವಂತೆ ಜಿಲ್ಲಾಧಿಕಾರಿ ಬಿ. ಫೌಜಿಯಾ ತರನ್ನುಮ್ ಮನವಿ ಮಾಡಿದ್ದಾರೆ.
ಜಿಲ್ಲೆಯ ಗ್ರಾಮೀಣ ಪ್ರದೇಶಗಳಲ್ಲಿ 308 ಗ್ರಾಮ ಒನ್, 261 ಬಾಪೂಜಿ ಸೇವಾ ಕೇಂದ್ರಗಳನ್ನು ಹಾಗೂ ನಗರ ಪ್ರದೇಶಗಳಲ್ಲಿ 14 ಕರ್ನಾಟಕ ಒನ್ ಮತ್ತು 3 ಗೃಹಲಕ್ಷ್ಮೀ ಯೋಜನೆ ನೊಂದಣಿ ಸೇವಾ ಕೇಂದ್ರಗಳನ್ನಾಗಿ ಗುರುತಿಸಲಾಗಿದೆ. ಈ ಕೇಂದ್ರಗಳಲ್ಲಿ ಉಚಿತವಾಗಿ ನೋಂದಣಿ ಮಾಡಿಕೊಳ್ಳಬಹುದಾಗಿದೆ. ಅರ್ಜಿ ಸಲ್ಲಿಸಲು ಕೇಂದ್ರದಲ್ಲಿ ಯಾವುದೇ ಸೇವಾ ಶುಲ್ಕ ನೀಡಬೇಕಿಲ್ಲ. ಇನ್ನು ಅರ್ಜಿ ಸಲ್ಲಿಕೆಗೆ ಯಾವುದೇ ಕಾಲಮಿತಿ ಇಲ್ಲ. ಹೀಗಾಗಿ ಆತಂಕ ಪಡುವ ಅಗತ್ಯವಿಲ್ಲ ಎಂದು ಅವರು ಸ್ಪಷ್ಟಪಡಿಸಿದ್ದಾರೆ.
ಗೃಹ ಲಕ್ಷ್ಮೀ ಯೋಜನೆಗೆ ಯಾರು ಅರ್ಹರು
ಪಡಿತರ ಚೀಟಿಯಲ್ಲಿ ಯಜಮಾನಿ ಮಹಿಳೆ ಎಂದು ಗುರುತಿಸಿರುವ ಮಹಿಳೆ ಇದಕ್ಕೆ ಅರ್ಹರು. ಆದರೆ ಫಲಾನುಭವಿ ಯಜಮಾನಿ ಮಹಿಳೆ ಅಥವಾ ಆಕೆಯ ಪತಿ ಆದಾಯ ತೆರಿಗೆ ಅಥವಾ ಜಿಎಸ್ಟಿ ಪಾವತಿದಾರರಾಗಿದಲ್ಲಿ ಯೋಜನೆ ವ್ಯಾಪ್ತಿಗೆ ಬರುವುದಿಲ್ಲ. ಲಿಂಗತ್ವ ಅಲ್ಪಸಂಖ್ಯಾತರು ಯೋಜನೆಯ ಲಾಭ ಪಡೆಯಲು ಸಹ ಅರ್ಹರು.
ನೋಂದಣಿ ಪ್ರಕ್ರಿಯೆ
ಫಲಾನುಭವಿ ನೊಂದಣಿ ಪ್ರಕ್ರಿಯೆ 2 ವಿಧಾನದ ಮೂಲಕ ಮಾಡಲಾಗುತ್ತಿದೆ. ಮೊದಲನೇಯದಾಗಿ ಈಗಾಗಲೇ ಪಡಿತರ ಚೀಟಿಯಲ್ಲಿ ಗುರುತಿಸಲಾಗಿರುವ ಪ್ರತಿಯೊಬ್ಬ ಯಜಮಾನಿ ಮಹಿಳೆಯ ಮೊಬೈಲ್ ಸಂಖ್ಯೆಗೆ ನೋಂದಣಿ ದಿನಾಂಕ, ಸಮಯ ಹಾಗೂ ನೊಂದಣಿ ಕೇಂದ್ರದ ವಿವರಗಳನ್ನು ಎಸ್ಎಂಎಸ್ ಮೂಲಕ ತಿಳಿಸಲಾಗುತ್ತದೆ. ಅಲ್ಲದೆ, ಟೋಲ್ ಫ್ರೀ ಸಂಖ್ಯೆ 1902 ಕರೆ ಮಾಡಿ ಅಥವಾ 8147500500 ಸಂಖ್ಯೆಗೆ ಎಸ್ಎಂಎಸ್ ಮೂಲಕ ಸಂದೇಶ ಕಳುಹಿಸಿ ನೋಂದಣಿ ಕುರಿತು ಮಾಹಿತಿ ಪಡೆಯಬಹುದು.
ನಂತರ ಗ್ರಾಮಾಂತರ ಪ್ರದೇಶದಲ್ಲಿ ವಾಸಿಸುವ ಫಲಾನುಭವಿಗಳು ಗ್ರಾಮದ ಸಮೀಪವಿರುವ ಗ್ರಾಮ ಒನ್ ಕೇಂದ್ರ ಅಥವಾ ಬಾಪೂಜಿ ಸೇವಾ ಕೇಂದ್ರಗಳಿಗೆ ಮತ್ತು ನಗರ ಪ್ರದೇಶದಲ್ಲಿ ವಾಸಿಸುವ ಫಲಾನುಭವಿಗಳು ಸಮೀಪದ ಕರ್ನಾಟಕ ಒನ್, ವಾರ್ಡ್ ಕಚೇರಿ, ಸ್ಥಳಿಯ ನಗರಾಡಳಿತ ಸಂಸ್ಥೆಯ ಕಚೇರಿ, ಗೃಹಲಕ್ಷ್ಮಿ ನೋಂದಣಿ ಕೇಂದ್ರಕ್ಕೆ ಹೋಗಿ ನೋಂದಣಿ ಮಾಡಿಕೊಳ್ಳಬಹುದಾಗಿದೆ.
2ನೇ ವಿಧಾನ
ಇನ್ನು ಎರಡನೇ ವಿಧಾನವಾಗಿ ‘ಪ್ರಜಾಪ್ರತಿನಿಧಿ’ (ಸರ್ಕಾರದಿಂದ ಗುರುತಿಸಲ್ಪಟ್ಟ ಸ್ವಯಂ ಸೇವಕರು) ಫಲಾನುಭವಿಗಳ ಮನೆಗೆ ಭೇಟಿ ನೀಡಲಿದ್ದು, ಅವರಿಂದಲೂ ಸಹ ಸ್ಥಳದಲ್ಲಿಯೇ ನೊಂದಾಯಿಸಿಕೊಳ್ಳಬಹುದಾಗಿದೆ. ಒಂದು ವೇಳೆ ನಿಗದಿಪಡಿಸಿದ ದಿನಾಂಕ ಮತ್ತು ಸಮಯದಂದು ಗ್ರಾಮ ಒನ್, ಬಾಪೂಜಿ ಕೇಂದ್ರ, ಕರ್ನಾಟಕ ಒನ್ ಕೇಂದ್ರಗಳಿಗೆ ಹೋಗಲು ಸಾಧ್ಯವಾಗದೆ ಇದ್ದಲ್ಲಿ ಅದೇ ಸೇವಾ ಕೇಂದ್ರಗಳಿಗೆ ಮುಂದಿನ ಯಾವುದೇ ದಿನಾಂಕದಂದು ಸಂಜೆ 5 ರಿಂದ 7 ಗಂಟೆಯೊಳಗೆ ಭೇಟಿ ನೀಡಿ ನೊಂದಣಿ ಮಾಡಿಕೊಳ್ಳಬಹುದು.
ಯಾವೆಲ್ಲಾ ದಾಖಲೆ ಬೇಕು
ಯೋಜನೆಯಡಿ ನೊಂದಾಯಿಸಿಕೊಳ್ಳಲು ಪಡಿತರ ಚೀಟಿ ಸಂಖ್ಯೆ, ಫಲಾನುಭವಿ ಮತ್ತು ಪತಿಯ ಆಧಾರ ಕಾರ್ಡ್ ಸಂಖ್ಯೆ, ಬ್ಯಾಂಕ್ ಖಾತೆ ಪಾಸ್ ಬುಕ್ (ಆಧಾರ ನಂಬರ್ ಜೋಡಣೆಯಾಗಿರುವ ಬ್ಯಾಂಕ್ ಖಾತೆ ಹೊರತುಪಡಿಸಿ ಪರ್ಯಾಯ ಬ್ಯಾಂಕ್ ಖಾತೆಗೆ ಹಣ ವರ್ಗಾವಣೆ ಬಯಸಿದ್ದಲ್ಲಿ, ಸದರಿ ಬ್ಯಾಂಕ್ ಖಾತೆಯ ಪಾಸ್ ಬುಕ್) ಮಾಹಿತಿ ಅಗತ್ಯವಿದ್ದು, ನೋಂದಣಿ ಕೇಂದ್ರಕ್ಕೆ ಈ ಎಲ್ಲಾ ಮಾಹಿತಿಗಳೊಂದಿಗೆ ಹಾಜರಾಗುವುದು.
2000 ಖಚಿತ
ಗ್ರಾಮ-ಒನ್, ಬಾಪೂಜಿ ಕೇಂದ್ರ, ಕರ್ನಾಟಕ ಒನ್ ಕೇಂದ್ರಗಳಲ್ಲಿ ನೊಂದಾಯಿಸಿಕೊಂಡ ಮಂಜೂರಾತಿ ಪತ್ರವನ್ನು ಸ್ಥಳದಲ್ಲಿಯೇ ನೀಡಲಾಗುತ್ತದೆ. ಪ್ರಜಾಪ್ರತಿನಿಧಿ ಮೂಲಕ ನೊಂದಾಯಿಸಿಕೊಂಡಲ್ಲಿ ಮಂಜೂರಾತಿ ಪತ್ರ ತದನಂತರ ಮನೆಗೆ ತಲುಪಿಸಲಾಗುತ್ತದೆ. ಇದಲ್ಲದೆ ನೋಂದಣಿ ನಂತರ ಮೊಬೈಲ್ ಸಂಖ್ಯೆಗೆ ಎಸ್ಎಂಎಸ್ ಮೂಲಕ ಮಂಜೂರಾತಿ ಬಗ್ಗೆ ಸಂದೇಶ ಸಹ ಬರಲಿದೆ. ನೋಂದಣಿ ನಂತರ ಆಧಾರ್ ಜೋಡಣೆಯಾಗಿರುವ ಫಲಾನುಭವಿಯ ಖಾತೆಗೆ ಡಿಬಿಟಿ ಮತ್ತು ಆಧಾರ್ ಜೋಡಣೆಯಾಗದ ಬ್ಯಾಂಕ್ ಖಾತೆಗೆ ಆರ್ಟಿಜಿಎಸ್ ಮೂಲಕ ತಿಂಗಳಿಗೆ 2,000 ರೂಪಾಯಿ ಜಮೆ ಮಾಡಲಾಗುತ್ತದೆ.