logo
ಕನ್ನಡ ಸುದ್ದಿ  /  ಕರ್ನಾಟಕ  /  Kalaburagi News: ಪೇದೆ ಮಯೂರ್ ಸಾವು ಪ್ರಕರಣದಲ್ಲಿ ರಾಜಕೀಯ ಬೇಡ ಎಂದ ಶಾಸಕ ಅಜಯಸಿಂಗ್

Kalaburagi News: ಪೇದೆ ಮಯೂರ್ ಸಾವು ಪ್ರಕರಣದಲ್ಲಿ ರಾಜಕೀಯ ಬೇಡ ಎಂದ ಶಾಸಕ ಅಜಯಸಿಂಗ್

HT Kannada Desk HT Kannada

Jun 24, 2023 06:30 AM IST

google News

ಶಾಸಕ ಅಜಯಸಿಂಗ್

    • MLA Ajay Singh: ಜೇವರ್ಗಿ ತಾಲೂಕಿನ ನಾರಾಯಣಪುರ ಬಳಿ ನಡೆದ ಪೇದೆ ಮಯೂರ್ ಚವ್ಹಾಣ್ ಸಾವಿನಲ್ಲಿ ರಾಜಕೀಯ ಬೆರೆಸಬಾರದು ಎಂದು ಜೇವರ್ಗಿ ಶಾಸಕ ಡಾ.ಅಜಯಸಿಂಗ್ ಮನವಿ ಮಾಡಿದ್ದಾರೆ.
ಶಾಸಕ ಅಜಯಸಿಂಗ್
ಶಾಸಕ ಅಜಯಸಿಂಗ್

ಕಲಬುರಗಿ: ಜೇವರ್ಗಿ ತಾಲೂಕಿನ ನಾರಾಯಣಪುರ ಬಳಿ ಇತ್ತೀಚೆಗೆ ನಡೆದ ಪೇದೆ ಮಯೂರ್ ಚವ್ಹಾಣ್ ದುರಂತ ಸಾವು ಕುರಿತಂತೆ ತನಿಖೆ ನಡೆಯುತ್ತಿದೆ. ಅನಗತ್ಯವಾಗಿ ಇದರಲ್ಲಿ ರಾಜಕೀಯ ಬೆರೆಸಬಾರದು ಎಂದು ಜೇವರ್ಗಿ ಶಾಸಕ ಡಾ.ಅಜಯಸಿಂಗ್ ಸಲಹೆ ನೀಡಿದರು.

ತಮ್ಮ ನಿವಾಸದಲ್ಲಿ ಇಂದು ಕರೆದಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಪ್ರಕರಣದಲ್ಲಿ ಯಾರೇ ತಪ್ಪು ಮಾಡಿದ್ದರೂ ತಪ್ಪಿತಸ್ಥರಿಗೆ ಶಿಕ್ಷೆ ಆಗಲಿದೆ. ಈ ನಿಟ್ಟಿನಲ್ಲಿ ಬಿಜೆಪಿ ಮುಖಂಡರು ರಾಜಕೀಯ ಬೆರೆಸಬಾರದು ಎಂದರು‌.

ಪೊಲೀಸ್ ಪೇದೆ ಮಯೂರ್ ಚವ್ಹಾಣ್ ದುರಂತ ಸಾವಿನ ಬಳಿಕ ಪ್ರಮುಖ ಆರೋಪಿ ಸಾಯಬಣ್ಣ ಕರಜಗಿಯನ್ನು ಬಂಧಿಸಿ ಕರೆ ತರುವಾಗ ಆತ ತನ್ನ ಬಳಿ ಬಚ್ಚಿಟ್ಟುಕೊಂಡಿದ್ದ ಪಾಕೆಟ್ ಚಾಕುವಿಂದ ಪೊಲೀಸರ ಮೇಲೆ ಹಲ್ಲೆ ನಡೆಸಲು ಯತ್ನಿಸಿದ್ದಾನೆ. ಸ್ವಯಂ ರಕ್ಷಣೆಗಾಗಿ ಪೊಲೀಸರು ಆತನಿಗೆ ಗುಂಡು ಹೊಡೆದಿದ್ದಾರೆಯೇ ಹೊರತು; ಆತನ ಜಾತಿ ಅಥವಾ ಧರ್ಮ ನೋಡಿ ಗುಂಡು ಹಾರಿಸಿಲ್ಲ ಎಂದು ಸ್ಪಷ್ಟೀಕರಣ ನೀಡಿದರು.

ಗುಂಡೇಟಿನಿಂದ ಗಾಯಗೊಂಡಿರುವ ಸಾಯಬಣ್ಣನ ಮುಖವನ್ನೇ ತಾವು ನೋಡಿಲ್ಲ. ತಮ್ಮೊಂದಿಗೆ ಆತ ಇರುವ ಒಂದಾದರೂ ಫೋಟೊ ತೋರಿಸಿ ಎಂದು ಸುದ್ದಿಗಾರರ ಪ್ರಶ್ನೆಯೊಂದಕ್ಕೆ ಪ್ರತಿಕ್ರಿಯಿಸಿದರು.

ಮಯೂರ್ ಚವ್ಹಾಣ್ ದುರಂತ ಸಾವಿನ ಕುರಿತಂತೆ ಬಿಜೆಪಿ ಮುಖಂಡರ ಒತ್ತಾಯಕ್ಕೆ ಅನುಗುಣವಾಗಿ ನ್ಯಾಯಾಂಗ ತನಿಖೆ ನಡೆಸಲಾಗುವುದು ಎಂದರು. ಈಗಾಗಲೇ ಪೊಲೀಸ್ ಇಲಾಖೆ ಅತ್ಯಂತ ಪಾರದರ್ಶಕವಾಗಿ ತನಿಖೆ ನಡೆಸುತ್ತಿದೆ ಎಂದು ಸಮಜಾಯಿಷಿ ನೀಡಿದರು.

ರೂ.50 ಲಕ್ಷ ಪರಿಹಾರಕ್ಕೆ ಒತ್ತಾಯ

ಮೃತ ಪೇದೆ ಮಯೂರ್ ಚವ್ಹಾಣ್ ಸಂತ್ರಸ್ತ ಕುಟುಂಬಕ್ಕೆ ಈಗ ಘೋಷಿಸಿರುವ 30 ಲಕ್ಷ ರೂಪಾಯಿ ಪರಿಹಾರದ ಬದಲು 50 ಲಕ್ಷ ರೂಪಾಯಿ ಪರಿಹಾರ ನೀಡುವಂತೆ ಮುಖ್ಯಮಂತ್ರಿಗಳು ಹಾಗೂ ಗೃಹ ಸಚಿವರನ್ನು ಕೋರಲಾಗುವುದು ಎಂದು ಡಾ.ಅಜಯ್ ಹೇಳಿದರು.

ಸ್ಪಷ್ಟ ಮರಳು ನೀತಿಗೆ ಆಗ್ರಹ

ಮನೆ ನಿರ್ಮಾಣ ಸೇರಿದಂತೆ ರಾಜ್ಯ ಸರ್ಕಾರದ ಅಭಿವೃದ್ಧಿ ಕಾಮಗಾರಿಗಳಿಗೆ ಸುಲಭವಾಗಿ ಮರಳು ಲಭಿಸುವಂತೆ ರಾಜ್ಯದಲ್ಲಿ ಸ್ಪಷ್ಟ ಮರಳು ನೀತಿ ರೂಪಿಸುವಂತೆ ಮುಖ್ಯಮಂತ್ರಿಗಳೊಂದಿಗೆ ಚರ್ಚಿಸುವುದಾಗಿ ಅಜಯಸಿಂಗ್ ಭರವಸೆ ನೀಡಿದರು.

ಜೇವರ್ಗಿ ತಾಲೂಕಿನ ನಾರಾಯಣಪುರ ಬಳಿ ನಡೆದ ಪೇದೆ ಮಯೂರ್ ಚವ್ಹಾಣ್ ದುರಂತ ಸಾವಿನ ಬಳಿಕ ಜಿಲ್ಲೆಯಲ್ಲಿ ಮರಳು ಲಭ್ಯತೆ ಸಮಸ್ಯೆ ಕಾಡುತ್ತಿದೆ. ಸದ್ಯಕ್ಕೆ ಒಂದು ಟ್ರಿಪ್ ಮರಳಿಗೆ ರೂ.80 ಸಾವಿರ ನೀಡಬೇಕಾದ ಸ್ಥಿತಿ ನಿರ್ಮಾಣಗೊಂಡಿದೆ ಎಂದು ಸುದ್ದಿಗಾರರು ಗಮನ ಸೆಳೆದರು. ಇದಕ್ಕೆ ಶಾಸಕರು ಪ್ರತಿಕ್ರಿಯೆ ನೀಡಿದರು.

ನನಗೆ ಹುದ್ದೆ ಮುಖ್ಯ ಅಲ್ಲ

ಸತತ ಮೂರನೇ ಬಾರಿ ಶಾಸಕನಾಗಿ ಆಯ್ಕೆಗೊಂಡಿದ್ದು ಈ ಬಾರಿ ಖಚಿತವಾಗಿ ಸಚಿವ ಸ್ಥಾನ ಸಿಗಬಹುದು ಎಂಬ ನಂಬಿಕೆ ಇತ್ತು. ಆದರೂ ಕಾರಣಾಂತರಗಳಿಂದ ಸಿಕ್ಕಿಲ್ಲ. ಹಾಗಂತ ನನಗೆ ಬೇಸರವೂ ಇಲ್ಲ. ನನಗೆ ಹುದ್ದೆ ಮುಖ್ಯ ಅಲ್ಲ. ಕೆಕೆಆರ್‌ಡಿಬಿ ಅಧ್ಯಕ್ಷ ಸ್ಥಾನಕ್ಕೆ ಲಾಬಿ ನಡೆಸುತ್ತಿರುವ ಕುರಿತು ಸುದ್ದಿಗಾರರು ಗಮನ ಸೆಳೆದಾಗ, ನಾನೊಬ್ಬ ಕಾಂಗ್ರೆಸ್ ಪಕ್ಷದ ಶಿಸ್ತಿನ ಸಿಪಾಯಿ. ಪಕ್ಷ ಯಾವುದೇ ಜವಾಬ್ದಾರಿ ನೀಡಿದರೂ ಅದನ್ನು ನಿಭಾಯಿಸಲು ಸಿದ್ಧ ಎಂದರು.

ಕೆಕೆಆರ್‌ಡಿಬಿ ಅಧ್ಯಕ್ಷ ಸ್ಥಾನವನ್ನು ಕ್ಯಾಬಿನೆಟ್ ದರ್ಜೆ ಸಚಿವರಿಗೇ ನೀಡಬೇಕೆಂದು ಸಚಿವ ಪ್ರಿಯಾಂಕ್ ಖರ್ಗೆ ಒತ್ತಾಯಿಸುತ್ತಿದ್ದಾರಲ್ಲ ಎಂಬ ಸುದ್ದಿಗಾರರ ಪ್ರಶ್ನೆಗೆ, "ಈ ಪ್ರಶ್ನೆ ಸಚಿವರಿಗೇ ಕೇಳಿ" ಎಂದು ಮುಗುಳ್ನಕ್ಕರು.

ವರದಿ: ಎಸ್‌ಬಿ ರೆಡ್ಡಿ, ಕಲಬುರಗಿ

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ