Priyank Kharge: ನಮ್ಮ ಸಿಎಂ ಪ್ರಿಯಾಂಕ್ ಖರ್ಗೆ, ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ವೈರಲ್
May 14, 2023 08:34 PM IST
ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆದ ಪೋಸ್ಟರ್
- Priyank Kharge: ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರ ಸುಪುತ್ರ ಹಾಗೂ ಕಲಬುರಗಿ ಜಿಲ್ಲೆಯ ಚಿತ್ತಾಪುರ ವಿಧಾನಸಭಾ ಕ್ಷೇತ್ರದಿಂದ ಹ್ಯಾಟ್ರಿಕ್ ಗೆಲುವು ಸಾಧಿಸಿದ ಪ್ರಿಯಾಂಕ್ ಖರ್ಗೆ ಅವರನ್ನು ಸಿಎಂ ಮಾಡಬೇಕೆಂಬ ಪೋಸ್ಟ್ಗಳು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ.
ಕಲಬುರಗಿ: ಕಾಂಗ್ರೆಸ್ ಪಕ್ಷ ಬಹುಮತ ಪಡೆದು ಅಧಿಕಾರದ ಚುಕ್ಕಾಣಿ ಹಿಡಿಯಲಿದ್ದು, ಮುಖ್ಯಮಂತ್ರಿ ಕುರ್ಚಿಗಾಗಿ ಮಾಜಿ ಸಿಎಂ ಸಿದ್ದರಾಮಯ್ಯ ಮತ್ತು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ ಅವರ ಮಧ್ಯ ತೀವ್ರ ಪೈಪೋಟಿ ನಡೆಯುತ್ತಿರುವ ಸಂದರ್ಭದಲ್ಲಿಯೇ ದಲಿತ ಸಿಎಂ ಕೂಗು ಕೇಳಿ ಬಂದಿದೆ. ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರ ಸುಪುತ್ರ ಹಾಗೂ ಕಲಬುರಗಿ ಜಿಲ್ಲೆಯ ಚಿತ್ತಾಪುರ (chittapur) ವಿಧಾನಸಭಾ ಕ್ಷೇತ್ರದಿಂದ ಹ್ಯಾಟ್ರಿಕ್ ಗೆಲುವು ಸಾಧಿಸಿದ ಪ್ರಿಯಾಂಕ್ ಖರ್ಗೆ (Priyank Kharge) ಅವರನ್ನು ಸಿಎಂ ಮಾಡಬೇಕೆಂಬ ಪೋಸ್ಟ್ಗಳು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ.
ಅಪ್ಪನ ಕನಸಲ್ಲೆ ಕೋಟ್ಯಂತರ ಕನ್ನಡಿಗರ ಕನಸು ಎಂಬ ಪೋಸ್ಟರ್ಗಳು ವೈರಲ್ ಆಗುತ್ತಿವೆ. ಮತ್ತೊಂದಡೆ ಟ್ವೀಟರ್ನಲ್ಲಿ ನಮ್ಮ ಸಿಎಂ ಪ್ರಿಯಾಂಕ್ ಖರ್ಗೆ ಎಂದು ಬೆಂಬಲಿಗರು ಟ್ರೆಂಡ್ ಹುಟ್ಟು ಹಾಕುತ್ತಿದ್ದಾರೆ.
ಸಿಎಂ ರೇಸ್ ಆರಂಭವಾಗಿದೆ. ಪದೇ ಪದೇ ಕಾಂಗ್ರೆಸ್ ಪಾಳಯದಲ್ಲಿ ಸಿಎಂ ಸ್ಥಾನಕ್ಕಾಗಿ ಕೂಗು ಕೇಳಿ ಬರುತ್ತಿತ್ತು. ಇದೀಗ ಚುನಾವಣಾ ಫಲಿತಾಂಶಕ್ಕೂ ಮುನ್ನವೇ ದಲಿತ ಸಿಎಂ ಕೂಗು ಕೇಳಿ ಬಂದಿತ್ತು.
ಕಾಂಗ್ರೆಸ್‌ನಲ್ಲಿ ದಲಿತ ಸಮುದಾಯದ ಮುಂಚೂಣಿ ನಾಯಕರಲ್ಲಿ ಮಲ್ಲಿಕಾರ್ಜುನ ಖರ್ಗೆ, ಡಾ.ಜಿ.ಪರಮೇಶ್ವರ್, ಕೆ.ಎಚ್.ಮುನಿಯಪ್ಪ ಅವರ ಹೆಸರು ಕೇಳಿಬರುತ್ತದೆ. ಮಲ್ಲಿಕಾರ್ಜುನ ಖರ್ಗೆ ಅವರಂತೂ ದಲಿತ ಸಮುದಾಯ ಎಂದು ಅವಕಾಶ ಬೇಡ, ಕಾಂಗ್ರೆಸ್ ಪಕ್ಷದಲ್ಲಿ ಎಲ್ಲ ಸಮುದಾಯದ ನಾಯಕ ಎಂದು ಪರಿಗಣಿಸಿ ಅವಕಾಶ ಕೊಡಿ ಎಂದು ಹಲವಾರು ಬಾರಿ ಹೇಳಿದ್ದಾರೆ. ಡಾ.ಜಿ. ಪರಮೇಶ್ವರ್ ಅವರು ಸಹ, ಯಾಕೆ ಅವಕಾಶ ಸಿಗುವುದಿಲ್ಲ ಎಂಬ ಬೇಸರವನ್ನು ಹಾರ ಹಾಕಿದ ಉದಾಹರಣೆಗಳಿವೆ.
ಕಾಂಗ್ರೆಸ್‌ನಲ್ಲಿ ಮೊದಲಿನಿಂದಲೂ ದಲಿತ ಸಿಎಂ ಕೂಗು ಕೇಳಿ ಬರುತ್ತಿದೆ. ಆದರೆ ದಲಿತ ನಾಯಕರನ್ನು ಸಿಎಂ ಮಾಡೋ ಕಾಲವಿನ್ನೂ ಕೂಡ ಬಂದಿಲ್ಲ. ಕಾಂಗ್ರೆಸ್ ಹಿರಿಯ ನಾಯಕರಾದ ಮಾಜಿ ಉಪ ಮುಖ್ಯಮಂತ್ರಿ ಡಾ.ಜಿ ಪರಮೇಶ್ವರ್, ಕೆ.ಹೆಚ್ ಮುನಿಯಪ್ಪರಂತ ಘಟಾನುಘಟಿಗಳು ಇದ್ದಾರೆ. ಇಂತಹ ಸಂದರ್ಭದಲ್ಲಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ್ ಖರ್ಗೆ ಅವರ ಪುತ್ರ ಪ್ರಿಯಾಂಕ ಖರ್ಗೆರನ್ನು ಸಿಎಂ ಮಾಡಬೇಕು ಎನ್ನುವ ಅಭಿಯಾನ ಮಾಡಲಾಗುತ್ತಿದೆ.
ಚಿತ್ತಾಪುರ ಕ್ಷೇತ್ರದ ಕಾಂಗ್ರೆಸ್ ಶಾಸಕ ಪ್ರಿಯಾಂಕ್ ಖರ್ಗೆ ಪಕ್ಷದ ಹಿರಿಯ ನಾಯಕ, ರಾಜ್ಯಸಭಾ ವಿಪಕ್ಷ ನಾಯಕ ಮಲ್ಲಿಕಾರ್ಜುನ ಖರ್ಗೆ ಪುತ್ರ. 2013 ಮತ್ತು 2018ರ ಚುನಾವಣೆಯಲ್ಲಿಯೂ ಶಾಸಕರಾಗಿ ಆಯ್ಕೆಯಾಗಿದ್ದರು. ಕರ್ನಾಟಕ ಕಾಂಗ್ರೆಸ್‌ನ ಯುವ ನಾಯಕರಲ್ಲಿ ಪ್ರಿಯಾಂಕ್ ಎಂ. ಖರ್ಗೆ ಸಹ ಒಬ್ಬರು. ಬಿಎ ಪದವೀಧರರಾದ ಪ್ರಿಯಾಂಕ್ ಖರ್ಗೆ ಡಿಪಿ ಗ್ರಾಫಿಕ್ಸ್, ಡಿಎನ್ ಇನ್ ಅನಿಮೇಷನ್ ವ್ಯಾಸಂಗ ಮಾಡಿದ್ದಾರೆ.
2008ರ ತನಕ ಚಿತ್ತಾಪುರ ಕ್ಷೇತ್ರವನ್ನು ಮಲ್ಲಿಕಾರ್ಜುನ ಖರ್ಗೆ ಪ್ರತಿನಿಧಿಸುತ್ತಿದ್ದರು. ಅವರು ರಾಷ್ಟ್ರ ರಾಜಕೀಯಕ್ಕೆ ತೆರಳಿದ ಮೇಲೆ ಪ್ರಿಯಾಂಕ್ ಖರ್ಗೆ ಕ್ಷೇತ್ರದಿಂದ ಎರಡು ಬಾರಿ ಶಾಸಕರಾಗಿ ಆಯ್ಕೆಯಾಗಿದ್ದಾರೆ. 2013ರ ಚುನಾವಣೆಯಲ್ಲಿ ಮೊದಲ ಬಾರಿಗೆ ಗೆದ್ದ ಪ್ರಿಯಾಂಕ್ ಖರ್ಗೆ 2016ರಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಸಂಪುಟ ಪುನಾರಚನೆ ಮಾಡಿದಾಗ ಸಚಿವರಾದರು. ಐಟಿ & ಬಿಟಿ ಖಾತೆಯನ್ನು ನೀಡಲಾಯಿತು. 2018ರಲ್ಲಿ ಕಾಂಗ್ರೆಸ್-ಜೆಡಿಎಸ್ ಮೈತ್ರಿ ಸರ್ಕಾರದಲ್ಲಿ ಎಚ್. ಡಿ. ಕುಮಾರಸ್ವಾಮಿ ಸಂಪುಟದಲ್ಲಿ ಸಮಾಜ ಕಲ್ಯಾಣ ಸಚಿವರಾಗಿಯೂ ಕೆಲಸ ಮಾಡಿದರು. ವಿದ್ಯಾರ್ಥಿಯಾಗಿದ್ದ ಸಂದರ್ಭದಲ್ಲಿಯೇ ಎನ್‌ಎಸ್‌ಯುಐ ಸೇರಿದ್ದ ಪ್ರಿಯಾಂಕ್ ಖರ್ಗೆ ಬಳಿಕ ರಾಜಕೀಯಕ್ಕೆ ಬಂದರು. ಕರ್ನಾಟಕ ಪ್ರದೇಶ ಯುವ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿಯಾಗಿಯೂ ನೇಮಕಗೊಂಡರು. ಪ್ರಸ್ತುತ ಕೆಪಿಸಿಸಿ ಸಾಮಾಜಿಕ ಜಾಲತಾಣ ಹಾಗೂ ಸಂವಹನ ವಿಭಾಗದ ಅಧ್ಯಕ್ಷರಾಗಿ ಕಾರ್ಯ ನಿರ್ವಹಣೆ ಮಾಡುತ್ತಿದ್ದಾರೆ.