PM Modi Chittapur Campaign: ಬಿಜೆಪಿ ಅಭ್ಯರ್ಥಿ ಮಣಿಕಂಠ ವಿರುದ್ಧ ಕಳ್ಳತನ ಆರೋಪ ಸಾಬೀತು; ಚಿತ್ತಾಪುರದಲ್ಲಿ ಪ್ರಧಾನಿ ಮೋದಿ ಸಭೆ ರದ್ದು
May 03, 2023 09:56 AM IST
ಮಣಿಕಂಠ ರಾಠೋಡ್ - ಪ್ರಧಾನಿ ಮೋದಿ
- ಬಿಜೆಪಿ ಅಭ್ಯರ್ಥಿ ಮಣಿಕಂಠ ರಾಠೋಡ್ ಮೇಲಿದ್ದ ಕಳ್ಳತನ ಆರೋಪವೊಂದು ಸಾಬೀತಾಗಿದ್ದು, ಚಿತ್ತಾಪುರದಲ್ಲಿ ಪಿಎಂ ಮೋದಿ ನಡೆಸಬೇಕಿದ್ದ ಪ್ರಚಾರ ರದ್ದಾಗಿದೆ ಎಂದು ಮೂಲಗಳು ತಿಳಿಸಿವೆ.
ಕಲಬುರಗಿ: ಕರ್ನಾಟಕ ವಿಧಾನಸಭೆ ಚುನಾವಣೆಗೆ (Karnataka Assembly Elections) ಬಿಜೆಪಿಯ ಸ್ಟಾರ್ ಪ್ರಚಾರಕರೂ ಆಗಿರುವ ಪ್ರಧಾನಿ ನರೇಂದ್ರ ಮೋದಿ (PM Modi) ಅವರು ಭರ್ಜರಿ ಪ್ರಚಾರ ನಡೆಸುತ್ತಿದ್ದಾರೆ. ಆದರೆ, ಕಲಬುರಗಿ ಜಿಲ್ಲೆಯ ಚಿತ್ತಾಪುರ (Chittapur) ಕ್ಷೇತ್ರದಲ್ಲಿ ಮೇ 6 ರಂದು ಪಿಎಂ ಮೋದಿ ಭಾಗವಹಿಸಬೇಕಾಗಿದ್ದ ಸಾರ್ವಜನಿಕ ಸಭೆಯನ್ನು ರದ್ದುಗೊಳಿಸಲಾಗಿದೆ. ಇದಕ್ಕೆ ಕಾರಣ ಹೀಗಿದೆ..
ಚಿತ್ತಾಪುರ ವಿಧಾನಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಮಣಿಕಂಠ ರಾಠೋಡ್ ವಿರುದ್ಧ ಹಲವಾರು ಅಪರಾಧ ಪ್ರಕರಣಗಳಿದ್ದು, ಈ ಬಗ್ಗೆ ಪ್ರತಿಪಕ್ಷಗಳು ಕಿಡಿಕಾರುತ್ತಲೇ ಇವೆ. ಇದೀಗ ಮಣಿಕಂಠನ ಮೇಲಿದ್ದ ಕಳ್ಳತನ ಆರೋಪವೊಂದು ಸಾಬೀತಾಗಿದ್ದು, ಇದರಿಂದ ಮೋದಿ ಚಿತ್ತಾಪುರದಲ್ಲಿ ಮಣಿಕಂಠ ರಾಠೋಡ್ ಪರ ನಡೆಸಬೇಕಿದ್ದ ಪ್ರಚಾರ ರದ್ದಾಗಿದೆ ಎಂದು ಮೂಲಗಳು ತಿಳಿಸಿವೆ.
ಅಂಗನವಾಡಿ ಮಕ್ಕಳ ಹಾಲಿನ ಪೌಡರ್ ಕಳ್ಳತನ ಮಾಡಿದ ಆರೋಪ ಸಾಬೀತಾಗಿದ್ದು, ಮಣಿಕಂಠನ ಪರ ದೇಶದ ಪ್ರಧಾನಿ ಪ್ರಚಾರ ನಡೆಸಿದರೆ ಬಿಜೆಪಿ ಪಕ್ಷಕ್ಕೆ ಮುಜುಗರ ಉಂಟಾಗಬಹುದು ಎಂಬುದು ಪಕ್ಷದ ಅಭಿಪ್ರಾಯವಾಗಿದೆ.
ಏಪ್ರಿಲ್ 28 ರಂದು ಚಿತ್ತಾಪುರದಲ್ಲಿ ಮಣಿಕಂಠ ರಾಠೋಡ್ ಪರ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ರೋಡ್ ಶೋ ನಡೆಸಿದ್ದರು. ಇದನ್ನು ಸಮರ್ಥಿಸಿಕೊಂಡಿದ್ದ ಸಿಎಂ ಬೊಮ್ಮಾಯಿ, ಮಣಿಕಂಠನ ಮೇಲೆ ಹಲವಾರು ಕೇಸ್ ಇದೆ. ಸಿಎಂ ಅವರ ಪರ ಮತ ಯಾಚನೆ ಮಾಡುವುದು ದುರಂತ ಅಂತ ಕಾಂಗ್ರೆಸ್ ನಾಯಕರು ಹೇಳಿದ್ದಾರೆ. ಆದರೆ ಕಾಂಗ್ರೆಸ್ನ ರಾಷ್ಟ್ರೀಯ-ರಾಜ್ಯ ನಾಯಕರ ಮೇಲೆ ಕೇಸ್ ಇದೆ. ಅವರುಗಳೇ ಬೇಲ್ ಮೇಲೆ ಇದ್ದಾರೆ. ನಿಮ್ಮ ಮಾತಿನಂತೆಯೇ ನಡೆಯುವುದಾದರೇ ನೀವೆಲ್ಲರೂ ರಾಜಕೀಯದಿಂದಲೇ ಹೊರಗುಳಿಯಬೇಕು ಎಂದು ಹೇಳಿದ್ದರು.
ಮಣಿಕಂಠನ ವಿರುದ್ಧ ಇರುವ ಪ್ರಕರಣಗಳು
ಚಿತ್ತಾಪುರ ಬಿಜೆಪಿ ಅಭ್ಯರ್ಥಿ ಮಣಿಕಂಠ ಅವರಿಗೆ ವಯಸ್ಸು ಕೇವಲ 26. ಆದರೆ ಅವರ ವಿರುದ್ಧ ಕರ್ನಾಟಕಕ್ಕೆ ಮಾತ್ರವಲ್ಲದೇ ನೆರೆ ರಾಜ್ಯಗಳಲ್ಲಿ ಸೇರಿದಂತೆ ಬರೋಬ್ಬರಿ 40 ಪ್ರಕರಣಗಳು ದಾಖಲಾಗಿವೆ. ಈ ಪೈಕಿ ಪಡಿತರ ಅಕ್ಕಿ ಕಳ್ಳ ಸಾಗಣೆ, ಅಂಗನವಾಡಿ ಮಕ್ಕಳ ಹಾಲಿನ ಪುಡಿ ಕಳ್ಳ ಸಾಗಣೆ ಕೂಡ ಸೇರಿದೆ. ಎಸ್‌ಎಸ್‌ಎಲ್‌ಸಿ ಫೇಲ್ ಆಗಿರುವ ಈತ 29 ಕೋಟಿ ರೂ.ಗಳ ಆಸ್ತಿ ಒಡೆಯನಾಗಿದ್ದಾರೆ.ಕೆಲವು ಪ್ರಕರಣಗಳು ವಿಚಾರಣೆ ಹಂತದಲ್ಲಿದ್ದು, ಕೆಲವು ಪ್ರಕರಣಗಳಿಗೆ ಹೈಕೋರ್ಟ್ ತಡೆ ನೀಡಿದೆ.
ಚುನಾವಣೆಗೆ ನಾಮಪತ್ರ ಸಲ್ಲಿಕೆ ವೇಳೆ ತಮ್ಮ ಬಳಿ 29 ಕೋಟಿ ರೂ. ಆಸ್ತಿ ಇದೆ ಎಂದು ಮಣಿಕಂಠ ಘೋಷಣೆ ಮಾಡಿದ್ದರು. ಕೈಯಲ್ಲಿ 6.75 ಲಕ್ಷ ರೂ. ನಗದು, 11.34 ಕೋಟಿ ಚರಾಸ್ತಿ ಮತ್ತು 17 ಕೋಟಿ ರೂ. ಸ್ಥಿರಾಸ್ತಿ ಇದೆ ಎಂದು ಅವರು ಪ್ರಮಾಣ ಪತ್ರ ಸಲ್ಲಿಸಿದ್ದಾರೆ, ಹಾಗೆಯೇ 15 ಕೋಟಿ ರೂ. ಸಾಲ ಇದೆ ಎಂದು ಹೇಳಿದ್ದಾರೆ ಎಂದು ವಿಜಯ ಕರ್ನಾಟಕ ಸುದ್ದಿ ಪತ್ರಿಕೆ ವರದಿ ಮಾಡಿದೆ.