Kalaburagi News: ಕಲಬುರಗಿಗೆ ಬಂದ್ರು ಪ್ರಧಾನಿ ಮೋದಿ, ಮಧ್ಯಾಹ್ನ ಬೆಂಗಳೂರಿನತ್ತ ಪಯಣ
Jan 19, 2024 11:05 AM IST
ಕಲಬುರಗಿ ವಿಮಾನ ನಿಲ್ದಾಣಕ್ಕೆ ಬಂದಿಳಿದ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರನ್ನು ರಾಜ್ಯ ಶಿಷ್ಟಾಚಾರದ ಪ್ರಕಾರ ಜಿಲ್ಲಾಡಳಿತ ಬರಮಾಡಿಕೊಂಡಿತು.
PM Modi in Kalaburgi: ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು ಶುಕ್ರವಾರ (ಜ.19) ಕಲುಬರಗಿ ತಲುಪಿದ್ದು, ಅಲ್ಲಿಂದ ಮಹಾರಾಷ್ಟ್ರದ ಸೋಲಾಪುರಕ್ಕೆ ತೆರಳಿದರು. ಮಧ್ಯಾಹ್ನ ಕಲಬುರಗಿಗೆ ವಾಪಸಾಗಿ, ಬೆಂಗಳೂರಿಗೆ ಪ್ರಯಾಣಿಸಲಿದ್ದಾರೆ.
ಕಲಬುರಗಿ: ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು ಶುಕ್ರವಾರ (ಜ.19) ನವದೆಹಲಿಯಿಂದ ಇಂಡಿಯನ್ ಏರ್ ಪೋರ್ಸ್ ವಿಶೇಷ ವಿಮಾನದ ಮೂಲಕ ಹೊರಟು ಬೆಳಗ್ಗೆ 9.30ಕ್ಕೆ ಕಲಬುರಗಿ ವಿಮಾನ ನಿಲ್ದಾಣ ತಲುಪಿದರು. ಮಹಾರಾಷ್ಟ್ರದ ಸೋಲಾಪುರದಲ್ಕಿ ಆಯೋಜಿಸಿರುವ ಕಾರ್ಯಕ್ರಮದಲ್ಲಿ ಭಾಗವಹಿಸಲು ಆಗಮಿಸಿದ ಅವರನ್ನು, ರಾಜ್ಯ ಶಿಷ್ಟಾಚಾರದ ಪ್ರಕಾರ ಜಿಲ್ಲಾಡಳಿತ ಬರಮಾಡಿಕೊಂಡಿದೆ.
ಕೇಂದ್ರ ರಸಾಯನಿಕ, ರಸಗೊಬ್ಬರ ಹಾಗೂ ಹೊಸ ನವೀಕರಣ ಇಂಧನ ಖಾತೆಯ ರಾಜ್ಯ ಸಚಿವ ಭಗವಂತ ಖೂಬಾ, ಕರ್ನಾಟಕದ ವೈದ್ಯಕೀಯ ಶಿಕ್ಷಣ ಸಚಿವ ಡಾ.ಶರಣಪ್ರಕಾಶ ಪಾಟೀಲ, ಸಂಸದ ಡಾ. ಉಮೇಶ ಜಾಧವ, ಶಾಸಕರಾದ ಬಸವರಾಜ ಮತ್ತಿಮಡು, ವಿಧಾನ ಪರಿಷತ್ ಸದಸ್ಯ ಬಿ.ಜಿ.ಪಾಟೀಲ, ಶಶೀಲ ಜಿ. ನಮೋಶಿ, ಕಲಬುರಗಿ ಮಹಾನಗರ ಪಾಲಿಕೆಯ ಮಹಾಪೌರರಾದ ವಿಶಾಲ ಧರ್ಗಿ, ಪ್ರಾದೇಶಿಕ ಆಯುಕ್ತ ಕೃಷ್ಣ ಬಾಜಪೇಯಿ, ಜಿಲ್ಲಾಧಿಕಾರಿ ಬಿ. ಫೌಜಿಯಾ ತರನ್ನುಮ್, ಕಲಬುರಗಿ ನಗರ ಪೊಲೀಸ್ ಆಯುಕ್ತ ಆರ್. ಚೇತನ ಕುಮಾರ, ಎಸ್.ಪಿ. ಅಡ್ಡೂರು ಶ್ರೀನಿವಾಸಲು ಅವರು ಹೂಗುಚ್ಚ ನೀಡಿ ಪ್ರಧಾನಮಂತ್ರಿಗಳನ್ನು ಬರಮಾಡಿಕೊಂಡರು.
ಈ ಸಂದರ್ಭದಲ್ಲಿ ಮಾಜಿ ಶಾಸಕರಾದ ದತ್ತಾತ್ರೇಯ ಪಾಟೀಲ ರೇವೂರ, ರಾಜಕುಮಾರ ಪಾಟೀಲ ತೇಲ್ಕೂರ, ಸುಭಾಷ ಗುತ್ತೇದಾರ, ಮಾಲಿಕಯ್ಯ ಗುತ್ತೇದಾರ, ಅಮರನಾಥ ಪಾಟೀಲ, ಬಿ.ಜೆ.ಪಿ. ಪಕ್ಷದ ಕಲಬುರಗಿ ನಗರಾಧ್ಯಕ್ಷ ಚಂದು ಪಾಟೀಲ, ಜಿಲ್ಲಾ ಅಧ್ಯಕ್ಷ ಶಿವರಾಜ ಪಾಟೀಲ ರದ್ದೆವಾಡಗಿ ಸೇರಿದಂತೆ ಜಿಲ್ಲೆಯ ಅನೇಕ ಮುಖಂಡರು ಇದ್ದರು.
ನಂತರ ಪ್ರಧಾನಮಂತ್ರಿಗಳು ಇಂಡಿಯನ್ ಏರ್ ಫೋರ್ಸ್ ಹೆಲಿಕಾಪ್ಟರ್ ಮೂಲಕ ಸೋಲಾಪುರಕ್ಕೆ ಪ್ರಯಾಣ ಬೆಳೆಸಿದರು. ಅಲ್ಲಿ ಎರಡು ಗಂಟೆ ಕಾಲ ಕಾರ್ಯಕ್ರಮದಲ್ಲಿ ಭಾಗಿಯಾಗುವರು. ಬಳಿಕ ಮಧ್ಯಾಹ್ನ 12.10ಕ್ಕೆ ಹೆಲಿಕಾಪ್ಟರ್ ಮೂಲಕ ಸೊಲ್ಲಾಪುರದಿಂದ ನಿರ್ಗಮಿಸಿ, ಮಧ್ಯಾಹ್ನ 1 ಗಂಟೆಗೆ ಕಲಬುರಗಿ ವಿಮಾನ ನಿಲ್ದಾಣಕ್ಕೆ ವಾಪಸಾಗಲಿದ್ದಾರೆ.
ಮಧ್ಯಾಹ್ನ 1.05 ಕ್ಕೆ ವಿಶೇಷ ವಿಮಾನದ ಮೂಲಕ ಕಲಬುರಗಿಯಿಂದ ಬೆಂಗಳೂರಿಗೆ 2.10ಕ್ಕೆ ತಲುಪಲಿದ್ದಾರೆ. ನಂತರ ರಸ್ತೆ ಮಾರ್ಗವಾಗಿ ದೇವನಹಳ್ಳಿ ತಾಲೂಕಿನ ಮಾರನಹಳ್ಳಿಗೆ ಅಪರಾಹ್ನ 2.45 ಕ್ಕೆ ತಲುಪಲಿದ್ದಾರೆ. ಅಲ್ಲಿ ಬಿಐಇಟಿಸಿ ಉದ್ಘಾಟನೆ ಮತ್ತು ಬೋಯಿಂಗ್ ಸುಕನ್ಯಾ ಕಾರ್ಯಕ್ರಮ ಲೋಕಾರ್ಪಣೆ ಮಾಡಿ ಸಂಜೆ 4ಕ್ಕೆ ತಮಿಳುನಾಡು ಕಡೆಗೆ ನಿರ್ಗಮಿಸುವರು. ಚೆನ್ನೈನಲ್ಲಿ ಸಂಜೆ 6ಕ್ಕೆ ಖೇಲೋ ಇಂಡಿಯಾ ಯೂತ್ ಗೇಮ್ಸ್‌ಗೆ ಚಾಲನೆ ನೀಡುವರು.
------------------------------------
'ಮನೆ-ಮನದಲ್ಲಿ ಶ್ರೀರಾಮ' ಸರಣಿಗೆ ನೀವೂ ಬರೆಯಿರಿ. ಇತರರೂ ಬರೆಯುವಂತೆ ಪ್ರೇರೇಪಿಸಿ.. ನಮ್ಮ ಇಮೇಲ್: ht.kannada@htdigital.in