logo
ಕನ್ನಡ ಸುದ್ದಿ  /  ಕರ್ನಾಟಕ  /  Kalburgi News: ತೊಗರಿ ಬೇಳೆ ಬೆಲೆಯಲ್ಲಿ ದಿಢೀರ್‌ ಕುಸಿತ; ಆತಂಕದಲ್ಲಿ ಬೆಳೆಗಾರರು, ಹೇಗಿದೆ ಸದ್ಯದ ರೇಟು?

Kalburgi News: ತೊಗರಿ ಬೇಳೆ ಬೆಲೆಯಲ್ಲಿ ದಿಢೀರ್‌ ಕುಸಿತ; ಆತಂಕದಲ್ಲಿ ಬೆಳೆಗಾರರು, ಹೇಗಿದೆ ಸದ್ಯದ ರೇಟು?

HT Kannada Desk HT Kannada

Jan 10, 2024 08:59 PM IST

google News

ತೊಗರಿ ಬೇಳೆ ಬೆಲೆಯಲ್ಲಿ ದಿಢೀರ್‌ ಕುಸಿತ; ಆತಂಕದಲ್ಲಿ ಬೆಳೆಗಾರರು, ಹೇಗಿದೆ ಸದ್ಯದ ರೇಟು?

    • ತಿಂಗಳ ಹಿಂದೆ ಕೆಜಿ ತೊಗರಿ ಬೇಳೆ ಬೆಲೆ 200 ರೂಪಾಯಿವರೆಗೂ ತಲುಪಿತ್ತು. ಕ್ರಮೇಣ 160 ರೂಪಾಯಿಗೆ ಬಂದು ನಿಂತಿತ್ತು. ಈಗ 120ಕ್ಕೆ ಕುಸಿತ ಕಂಡಿದೆ. ಈ  ಹಿಂದೆ ಚಿನ್ನದ ಬೆಳೆಯಂತಿದ್ದ ತೊಗರಿ ಇದೀಗ ದಿಢೀರ್‌ ಕುಸಿತ ಕಂಡಿದ್ದು ಬೆಳೆಗಾರರ ವಲಯದಲ್ಲಿ ಆತಂಕಕ್ಕೆ ಕಾರಣವಾಗಿದೆ.
ತೊಗರಿ ಬೇಳೆ ಬೆಲೆಯಲ್ಲಿ ದಿಢೀರ್‌ ಕುಸಿತ; ಆತಂಕದಲ್ಲಿ ಬೆಳೆಗಾರರು, ಹೇಗಿದೆ ಸದ್ಯದ ರೇಟು?
ತೊಗರಿ ಬೇಳೆ ಬೆಲೆಯಲ್ಲಿ ದಿಢೀರ್‌ ಕುಸಿತ; ಆತಂಕದಲ್ಲಿ ಬೆಳೆಗಾರರು, ಹೇಗಿದೆ ಸದ್ಯದ ರೇಟು?

ಕಲಬುರಗಿ: ರಾಜ್ಯದ ತೊಗರಿ ಕಣಜವೆಂದೇ ಖ್ಯಾತಿ ಪಡೆದಿರುವ ಕಲಬುರಗಿಯಲ್ಲಿ ದಿಢೀರ್‌ ತೊಗರಿ ಬೇಳೆ ದರ ಕುಸಿತಗೊಂಡಿರುವುದರಿಂದ ತೊಗರಿ ಬೆಳೆಗಾರರು ಆತಂಕ ಪಡುವಂತಾಗಿದೆ. ವಾರದ ಹಿಂದೆ ಕೆಜಿ ತೊಗರಿ ಬೇಳೆಗೆ 160 ರೂ. ಗಳಿಂದ 200 ರೂ.ಗಳಿಗೆ ಇತ್ತು. ಆದರೆ, ಇದೀಗ ಈ ದರ 120 ರೂ.ಗೆ ಇಳಿಕೆ ಕಂಡಿದೆ.

ಹೊಸದಾಗಿ ತೊಗರಿ ಬೇಳೆ ಆಗಮನ ಹಾಗೂ ಕೇಂದ್ರ ಸರ್ಕಾರ ಭಾರತ್ ಬ್ರ್ಯಾಂಡ್ ಹೆಸರಲ್ಲಿ ತೊಗರಿ ಬೇಳೆ ವಿತರಿಸುತ್ತಿರುವುದು ಕೂಡ ದರ ಇಳಿಕೆಗೆ ಕಾರಣ ಎಂದು ಅಭಿಪ್ರಾಯಪಡುತ್ತಿದ್ದಾರೆ ವ್ಯಾಪಾರಿಗಳು. ತಿಂಗಳ ಹಿಂದೆ ಕೆಜಿ ತೊಗರಿ ಬೆಲೆ 200 ರೂ.ವರೆಗೂ ತಲುಪಿತ್ತು. ಕ್ರಮೇಣ 160 ರೂ.ಗೆ ಬಂದು ನಿಂತಿತ್ತು. ಈಗ 120 ರೂ. ಬೆಲೆ ಇದೆ. ಸಗಟು ವ್ಯಾಪಾರದಲ್ಲಿ ಹೀಗಿದ್ದರೆ ಚಿಲ್ಲರೆ ಮಾರಾಟದಲ್ಲಿ ನಿಗದಿಗಿಂತ 5-6 ರೂ. ದರ ಹೆಚ್ಚಿರುತ್ತದೆ. 15 ದಿನಗಳಲ್ಲಿ ಇನ್ನಷ್ಟು ಇಳಿಕೆಯಾಗುವ ಸಾಧ್ಯತೆ ಇದೆ ಎನ್ನುತ್ತಾರೆ ವ್ಯಾಪಾರಿಗಳು. ಮಾರುಕಟ್ಟೆಯಲ್ಲಿ ತೊಗರಿ ಬೆಲೆ ದಿಢೀರ್ ಕುಸಿತದಿಂದ ಬೆಳೆಗಾರರು ಕಂಗಾಲಾಗಿದ್ದು, ಚಿನ್ನದ ದರದ ಖುಷಿಯಲ್ಲಿದ್ದ ರೈತರು ಈಗ ನಿರಾಸೆಗೊಳ್ಳುವಂತಾಗಿದೆ.

ಕಲಬುರಗಿ ಮಾರುಕಟ್ಟೆಯಲ್ಲಿ ಕ್ವಿಂಟಲ್‌ಗೆ 12ರಿಂದ 14ಸಾವಿರ ರೂ. ಗಡಿ ದಾಟಿದ್ದ ತೊಗರಿ ಧಾರಣೆ ಏಕಾಏಕಿ 8000- 8500 ರೂ. ಗೆ ಇಳಿದು, ರೈತರನ್ನು ದಿಕ್ಕು ತೋಚದಂತೆ ಮಾಡಿದೆ. ಮಾರುಕಟ್ಟೆಯಲ್ಲಿ ಬೆಲೆ ಕುಸಿದಾಗ ಸರ್ಕಾರ ಮಧ್ಯೆ ಪ್ರವೇಶಿಸಬೇಕು. ಆದರೆ, ಬೆಂಬಲ ಬೆಲೆಗೆ ಖರೀದಿ ಕೇಂದ್ರ ತೆರೆಯುವುದಕ್ಕಿಂತ ಬೇರೆ ವಿಷಯಗಳಲ್ಲಿ ಮಗ್ನವಾಗಿದೆ. ಪ್ರತಿವರ್ಷ ತೊಗರಿ ಖರೀದಿಗೆ ಡಿಸೆಂಬರ್‌ನಲ್ಲಿ ನೋಂದಣಿ, ಜನವರಿ ಮೊದಲ ವಾರ ಖರೀದಿ ಪ್ರಕ್ರಿಯೆ ಪ್ರಾರಂಭವಾಗುತ್ತಿತ್ತು. ಆದರೀಗ ಖರೀದಿ ಕೇಂದ್ರ ಆರಂಭಿಸುವ ಲಕ್ಷಣ ಗೋಚರಿಸುತ್ತಿಲ್ಲ. ಹೀಗಾಗಿ ಬರದ ಬವಣೆಗೆ ಸಿಲುಕಿರುವ ಅನ್ನದಾತ ಆಡಳಿತಕ್ಕೆ ಹಿಡಿಶಾಪ ಹಾಕುತ್ತಿದ್ದಾನೆ. ಕಳೆದ ಜನವರಿಯಲ್ಲಿ ರಾಶಿಯಾದ ಸಂದರ್ಭದಲ್ಲಿ ಕ್ವಿಂಟಲ್‌ಗೆ 6,500 ರೂ. ದರದಲ್ಲಿ ತೊಗರಿ ಮಾರಾಟವಾಗಿದೆ.

ಬರದಿಂದ ಇಳುವರಿ ಕುಸಿತ

ಆರು ತಿಂಗಳಲ್ಲೇ ದಾಖಲೆ ದರ ಏರಿಕೆಯಾಗಿ ಅಚ್ಚರಿ ಮೂಡಿಸಿತ್ತು. ಅಷ್ಟೇ ಶೀಘ್ರವಾಗಿ ಬೆಲೆಯಲ್ಲಿ ಕುಸಿತ ಕಂಡು ಮತ್ತೆ ಸಂಕಟಕ್ಕೆ ದೂಡಿದೆ. ವಾಡಿಕೆಯಂತೆ ಕಲಬುರಗಿ ಜಿಲ್ಲೆಯೊಂದರಲ್ಲೇ 42-45 ಲಕ್ಷ ಟನ್ ತೊಗರಿ ಇಳುವರಿ ಬರುತ್ತದೆ. ಆದರೆ, ಕಳೆದ ವರ್ಷ ಅತಿವೃಷ್ಟಿ, ನೆಟೆರೋಗದಿಂದ ಬೆಳೆ ಸಂಪೂರ್ಣ ಹಾನಿಗೀಡಾಗಿ ಕೇವಲ 20 ಲಕ್ಷ ಟನ್ ಇಳುವರಿ ಬಂದಿತ್ತು. ಈ ಸಲವೂ ಪರಿಸ್ಥಿತಿ ವಿಭಿನ್ನವಾಗಿಲ್ಲ. ಮಳೆ ಕೈಕೊಟ್ಟು ಬರ ಆವರಿಸಿದ್ದರಿಂದ ಕಳೆದ ಬಾರಿಗಿಂತ ಈಗ ಇಳುವರಿ ಇನ್ನಷ್ಟು ಕಮ್ಮಿಯಾಗುವ ಸಾಧ್ಯತೆ ಇದೆ. ತೊಗರಿ ಕಟಾವು ಪ್ರಕ್ರಿಯೆ ಜನವರಿ ಅಂತ್ಯದವರೆಗೂ ನಡೆಯಲಿದೆ.

ಮಾರುಕಟ್ಟೆಯಲ್ಲಿ ತೊಗರಿ ಬೆಲೆ 12 ಸಾವಿರ ರೂ. ಗಡಿ ದಾಟಿ ಇದೀಗ ದಿಢೀರ್ ಕುಸಿದಿದ್ದು, ರೈತರಿಗೆ ಮಾರಕವಾಗಿ ಪರಿಣಮಿಸಿದೆ. ಈ ವರೆಗೂ ಸರ್ಕಾರ ತೊಗರಿ ಖರೀದಿ ಬಗ್ಗೆ ಚಕಾರ ಎತ್ತಿಲ್ಲ. ಸರ್ಕಾರ ಯಾವುದಿದ್ದರೂ ರೈತರ ಗೋಳು ತಪ್ಪಿದಲ್ಲ.

ಮಾರುಕಟ್ಟೆಯಲ್ಲಿ ಬೆಲೆ ಏರಿಳಿತ ನಿಯಂತ್ರಿಸಿ ರೈತರಿಗೆ ನೆರವಾಗುವ ನಿಟ್ಟಿನಲ್ಲಿ ಕೇಂದ್ರ ಸರ್ಕಾರ ಬೆಲೆ ಸ್ಥಿರೀಕರಣ ಯೋಜನೆ ಜಾರಿಗೊಳಿಸಿದ್ದು, ಈ ಮೂಲಕ ಸರ್ಕಾರಗಳು ಮಾರುಕಟ್ಟೆ ದರದಲ್ಲೇ ಖರೀದಿಸುವ ಚಿಂತನೆ ನಡೆಸಿವೆ. ಕೇಂದ್ರದ ನಫೆಡ್ ಮತ್ತು ರಾಜ್ಯದ ಕರ್ನಾಟಕ ಕೃಷಿ ಸಹಕಾರ ಮಾರಾಟ ಮಂಡಳಿ ಮೂಲಕ ನೇರವಾಗಿ ರೈತರಿಂದ ಮಾರುಕಟ್ಟೆ ಬೆಲೆಯಲ್ಲಿ ಖರೀದಿಸಲು ಯೋಜನೆ ರೂಪಿಸಲಾಗಿದೆ. ಸರ್ಕಾರದ ಬೆಂಬಲ ಬೆಲೆ ಕ್ವಿಂಟಲ್‌ಗೆ 7 ಸಾವಿರ ರೂ. ಇದ್ದು, ರಾಜ್ಯ ಸರ್ಕಾರ ಪ್ರೋತ್ಸಾಹಧನವಾಗಿ 500 ರೂ. ನೀಡಿದರೆ 7500 ರೂ. ನಿಗದಿಯಾಗಲಿದೆ.

ಕೃಷಿ ಅಧಿಕಾರಿಗಳ ಮಾತೇನು?

ಆದರೀಗ ಮಾರುಕಟ್ಟೆ ದರ 8000- 8500 ರೂ. ಇದೆ. ಈ ಬೆಲೆಯಲ್ಲಿ ಸರ್ಕಾರ ಖರೀದಿಗೆ ಮುಂದಾದರೆ ಮಾರುಕಟ್ಟೆಯಲ್ಲಿ ಸ್ಥಿರೀಕರಣ ಕಾಣಬಹುದಾಗಿದೆ. ತೊಗರಿ ಕಟಾವು ಜನವರಿ ಅಂತ್ಯದವರೆಗೆ ನಡೆಯಲಿದೆ. ಬರದಿಂದಾಗಿ ಉತ್ಪಾದನೆ ಗಣನೀಯ ಪ್ರಮಾಣದಲ್ಲಿ ಕುಸಿಯಲಿದೆ. ತೊಗರಿ ಖರೀದಿ ಕೇಂದ್ರ ಪ್ರಾರಂಭಿಸುವ ಪ್ರಕ್ರಿಯೆ ಬಹುತೇಕ ಪೂರ್ಣಗೊಂಡಿದ್ದು, ಮಾರುಕಟ್ಟೆ ದರದಲ್ಲೇ ಖರೀದಿಸಲು ಯೋಜಿಸಲಾಗಿದೆ. ಸರ್ಕಾರದ ಆದೇಶ 2-3 ದಿನದಲ್ಲಿ ಹೊರಬೀಳಲಿದೆ ಎನ್ನುತ್ತಾರೆ ಕಲಬುರಗಿ ಕೃಷಿ ಇಲಾಖೆಯ ಜಂಟಿ ನಿರ್ದೇಶಕ ಸಮದ್‌ ಪಟೇಲ್.‌

ಬೆಂಬಲ ಬೆಲೆಗೆ ರೈತರ ಆಗ್ರಹ

ಹಿಂದಿನ ಬಿಜೆಪಿ ಸರ್ಕಾರದ ಅವಧಿಯಲ್ಲಿ ಕರ್ನಾಟಕ ದ್ವಿದಳ ಧಾನ್ಯ ಅಭಿವೃದ್ಧಿ ಮಂಡಳಿಯಿಂದ ಭೀಮಾ ಪಲ್ಸ್ ಬ್ರ್ಯಾಂಡ್‌ನ ತೊಗರಿ ಬೇಳೆ ಪ್ಯಾಕೆಟ್ ಬಿಡುಗಡೆ ಮಾಡಲಾಯಿತು. ಈಗಿನ ಸರ್ಕಾರದ ಅವಧಿಯಲ್ಲೂ ಮತ್ತೊಮ್ಮೆ ಬಿಡುಗಡೆ ಆಗಿದ್ದೇ ಸಾಧನೆ ಎನ್ನಬಹುದಾಗಿದೆ. ತೊಗರಿ ಸಂಸ್ಕರಣೆ ಮಾಡುತ್ತಿಲ್ಲ, ಸಂಸ್ಕರಣಾ ಯಂತ್ರವೂ ಇಲ್ಲದಿರುವುದು ವಿಚಿತ್ರ. ಸರಕಾರ ಕೂಡಲೇ ತೊಗರಿ ಖರೀದಿ ಕೇಂದ್ರ ಆರಂಭಿಸಿ ಬೆಂಬಲ ಬೆಲೆಗೆ ತೊಗರಿ ಖರೀದಿಸಲು ಮುಂದಾಗಬೇಕು ಎನ್ನುತ್ತಾರೆ ರೈತ ಮುಖಂಡ ಶರಣಬಸಪ್ಪ ಮಮಶೆಟ್ಟಿ.

ವರದಿ: ಎಸ್.ಬಿ.ರೆಡ್ಡಿ, ಕಲಬುರಗಿ

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ