Kalaburgi News: ಮದುವೆ ಮಾಡುತ್ತಿಲ್ಲ ಎಂಬ ಸಿಟ್ಟಿಗೆ ಅಮ್ಮನನ್ನೇ ಕೊಂದ ಕುಡುಕ ಮಗ; ಚಿಂಚೋಳಿಯಲ್ಲಿ ಘಟನೆ
Feb 05, 2024 07:42 PM IST
ಮದುವೆ ಮಾಡುತ್ತಿಲ್ಲ ಎಂಬ ಸಿಟ್ಟಿಗೆ ಅಮ್ಮನನ್ನೇ ಕೊಂದ ಕುಡುಕ ಮಗ; ಚಿಂಚೋಳಿಯಲ್ಲಿ ಘಟನೆ
- ಮದುವೆ ಮಾಡುತ್ತಿಲ್ಲ ಎಂಬ ಕೋಪಕ್ಕೆ ಕುಡುಕ ಮಗನೊಬ್ಬ ತಾಯಿಯನ್ನೇ ಕೊಂದ ಘಟನೆ ಕಲಬುರಗಿಯ ಚಿಂಚೋಳಿಯಲ್ಲಿ ನಡೆಡಿದೆ. 23 ವರ್ಷ ಅನಿಲ್ ಎಂಬಾತ ಕುಡಿದ ನಶೆಯಲ್ಲಿ ಕಟ್ಟಿಗೆಯ ತಾಯಿಗೆ ಹೊಡೆದು ಕೊಲೆ ಮಾಡಿದ್ದಾನೆ.
ಕಲಬುರಗಿ: ಇತ್ತೀಚಿನ ದಿನಗಳಲ್ಲಿ ಮದುವೆ ವಿಚಾರಕ್ಕೆ ಏನೇನೋ ರಂಪಗಳು ಆಗುವುದು ಸಹಜ. ಬಹಳಷ್ಟು ಕಡೆ ಮದುವೆಯಾಗಲು ಹೆಣ್ಣು ಸಿಗುತ್ತಿಲ್ಲ ಎಂಬ ಗೋಳು ಕೂಡ ಇದೆ. ಆದರೆ ಇಲ್ಲೊಬ್ಬ ಮಗ ಮದುವೆ ಮಾಡಲಿಲ್ಲ ಎಂಬ ಕಾರಣಕ್ಕೆ ತನ್ನ ತಾಯಿಯನ್ನೇ ಕೊಲೆ ಮಾಡಿದ್ದಾನೆ.
ತನಗೆ ಮದುವೆ ಮಾಡುತ್ತಿಲ್ಲ ಎಂದು ಸಿಟ್ಟಿಗೆದ್ದ ಆತ ಕುಡಿದ ನಶೆಯಲ್ಲಿ ಅಮ್ಮನ ತಲೆಗೆ ಕಟ್ಟಿಗೆಯಿಂದ ಹೊಡೆದು ಕೊಂದಿದ್ದಾನೆ. ಚಿಂಚೋಳಿ ತಾಲೂಕಿನ ಪೋಚಾವರಂ ಗ್ರಾಮದಲ್ಲಿ ಈ ಘಟನೆ ನಡೆದಿದೆ.
ಶೋಭಾ ಅಂಜಪ್ಪ (45) ಮಗನಿಂದ ಕೊಲೆಯಾದ ಮಹಿಳೆ. ಆಕೆಯ ಪುತ್ರ ಅನಿಲ್ (23) ಇಂತಹ ಕೃತ್ಯ ಎಸಗಿದ್ದು ಈಗ ಪೊಲೀಸರ ಅತಿಥಿಯಾಗಿದ್ದಾನೆ.
ಅನಿಲ್‍ಗೆ ಮೊದಲಿನಿಂದಲೂ ಕುಡಿತದ ಚಟವಿತ್ತು. ‘ಕುಡಿತದ ಚಟ ಇರುವ ನೀನೇ ನೆಟ್ಟಗೆ ಬದುಕುತ್ತಿಲ್ಲ. ಹೀಗಿರುವಾಗ ನಿನಗೊಂದು ಮದುವೆ ಮಾಡಿ ಮತ್ತೊಂದು ಹೆಣ್ಣಿನ ಬಾಳನ್ನು ನಾನೇಕೆ ಹಾಳು ಮಾಡಲಿ? ಸದ್ಯ ನಿನಗಷ್ಟೇ ದುಡಿದು ಹಾಕಬೇಕಾದ ನಾನು, ನಿನಗೆ ಮದುವೆ ಮಾಡಿದ ಮೇಲೆ ನಿನ್ನ ಹೆಂಡತಿಯನ್ನೂ ನಾನೇ ಸಲಹಬೇಕಾಗುತ್ತದೆ’ ಎಂದು ತನ್ನ ಅಸಹಾಯಕತೆ ತೋಡಿಕೊಳ್ಳುತ್ತಿದ್ದಳು ಎಂದು ಎನ್ನಲಾಗಿದೆ.
ಭಾನುವಾರ ಮಧ್ಯರಾತ್ರಿ ಎಂದಿನಂತೆ ಕುಡಿದು ಬಂದಿದ್ದ ಅನಿಲ್, ತಾಯಿಯೊಂದಿಗೆ ತನ್ನ ಮದುವೆಯ ವಿಚಾರ ಪ್ರಸ್ತಾಪಿಸಿದ್ದಾನೆ. ಆಗಲೂ ಆಕೆಯಿಂದ ಇದೇ ರೀತಿಯ ಸ್ಪಂದನೆ ವ್ಯಕ್ತವಾಗುತ್ತಿದ್ದಂತೆಯೇ ಸಿಟ್ಟಿಗೆದ್ದ ಅನಿಲ್ ಪಕ್ಕದಲ್ಲಿ ಬಿದ್ದಿದ್ದ ಕಟ್ಟಿಗೆಯಿಂದ ತಾಯಿಯ ತಲೆಗೆ ಜೋರಾಗಿ ಹೊಡೆದಿದ್ದಾನೆ. ಹೊಡೆತದ ಪೆಟ್ಟಿಗೆ ತೀವ್ರ ಅಸ್ವಸ್ಥಳಾದ ಶೋಭಾ ಸ್ಥಳದಲ್ಲೇ ಸಾವನ್ನಪ್ಪಿದ್ದಾಳೆ.
ಈ ಕುರಿತು ಕೊಂಚಾವರಂ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.