Kalburgi News: ಈದ್‌ಮಿಲಾದ್ ರಜೆ, ಬೆಂಗಳೂರು ಸಹಿತ ಪ್ರಮುಖ ನಗರಗಳಿಗೆ ಕಲ್ಯಾಣ ಕರ್ನಾಟಕ ಸಾರಿಗೆ 200 ಹೆಚ್ಚುವರಿ ಬಸ್
Sep 13, 2024 11:55 AM IST
ಕಲಬುರಗಿಯಿಂದ ಬೆಂಗಳೂರು ಸಹಿತ ಹಲವು ನಗರಗಳಿಗೆ ಹೆಚ್ಚುವರಿ ಬಸ್‌ಗಳನ್ನು ಕಲ್ಯಾಣ ಕರ್ನಾಟಕ ಸಾರಿಗೆ ಓಡಿಸಲಿದೆ.
- ಈದ್ ಮಿಲಾದ್ ಹಬ್ಬವೂ ಸೇರಿ ವಾರಾಂತ್ಯ ರಜೆ ಇರುವುದರಿಂದ ಕಲ್ಯಾಣ ಕಲ್ಯಾಣ ಸಾರಿಗೆಯು ಬೆಂಗಳೂರು ಸಹಿತ ಪ್ರಮುಖ ನಗರಗಳಿಗೆ ಹೆಚ್ಚುವರಿ ಬಸ್ ಗಳನ್ನು ಓಡಿಸಲು ಮುಂದಾಗಿದೆ.
ಕಲಬುರಗಿ: ಕಲಬುರಗಿ ಕೇಂದ್ರ ಕಲ್ಯಾಣ ಕರ್ನಾಟಕ ಸಾರಿಗೆ ಸಂಸ್ಥೆಯು ಈದ್ ಮಿಲಾದ್ ಹಬ್ಬದ ಹಿನ್ನೆಲೆಯಲ್ಲಿ ವಾರಾಂತ್ಯವೂ ಸೇರಿ ಮೂರು ದಿನ ರಜೆ ಇರುವ ಕಾರಣಕ್ಕೆ ಜನ ಸಂದಣಿ ತಗ್ಗಿಸಲು ವಿಶೇಷ ಬಸ್‌ಗಳನ್ನು ಓಡಿಸಲು ಮುಂದಾಗಿದೆ. ಅದರಲ್ಲೂ ಕಲಬುರಗಿಯಿಂದ ಬೆಂಗಳೂರು ಸೇರಿದಂತೆ ಪ್ರಮುಖ ನಗರಗಳಿಗೆ ಮೂರು ದಿನ ಹೆಚ್ಚುವರಿಯಾಗಿ 200 ಬಸ್‌ಗಳನ್ನು ಸಂಚರಿಸಲು ಯೋಜಿಸಿಕೊಂಡಿದೆ. ಶುಕ್ರವಾರದಿಂದಲೇ ಈ ಬಸ್ ಸೇವೆ ಶುರುವಾಗಲಿದ್ದು, ಸೋಮವಾರದವರೆಗೆ ಮುಂದುವರಿಯಲಿವೆ. ಉತ್ತರ ಕರ್ನಾಟಕ ಹಾಗೂ ದಕ್ಷಿಣ ಕರ್ನಾಟಕ ಭಾಗವನ್ನು ಸಂಪರ್ಕಿಸುವ ಭಾಗವಾಗಿ ಹೆಚ್ಚುವರಿ ಬಸ್ ಓಡಿಸಲಾಗುತ್ತಿದೆ ಎಂದು ಕಲ್ಯಾಣ ಕರ್ನಾಟಕ ಸಾರಿಗೆ ವ್ಯವಸ್ಥಾಪಕ ನಿರ್ದೇಶಕ ರಾಚಪ್ಪ ಮಾಹಿತಿ ನೀಡಿದ್ದಾರೆ.
ಈದ್ ಮಿಲಾದ್ ಹಾಗೂ ವಾರಾಂತ್ಯದ ದಿನಗಳ ರಜೆ ಪ್ರಯುಕ್ತ ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ನಿಗಮದಿಂದ ಸಾರ್ವಜನಿಕರ ಪ್ರಯಾಣಿಕರ ಅನುಕೂಲಕ್ಕಾಗಿ ಇದೇ ಸೆಪ್ಟೆಂಬರ್ 14 ರಂದು ಎರಡನೆಯ ಶನಿವಾರ, ಸೆಪ್ಟೆಂಬರ್ 15 ರಂದು ರಂದು ಭಾನುವಾರ ಹಾಗೂ ಸೆಪ್ಟೆಂಬರ್ 16 ರಂದು ಈದ್-ಮಿಲಾದ್ ಹಬ್ಬ ಪ್ರಯುಕ್ತ ನಿಗಮದಿಂದ ಹೆಚ್ಚುವರಿ ವಾಹನಗಳನ್ನು ಕಾರ್ಯಾಚರಣೆ ಮಾಡಲಾಗುತ್ತಿದೆ ಎಂದು ನಿಗಮದ ವ್ಯವಸ್ಥಾಪಕ ನಿರ್ದೇಶಕರು ತಿಳಿಸಿದ್ದಾರೆ.
ಇದೇ ಸೆಪ್ಟೆಂಬರ್ 12 ಹಾಗೂ 13 ರಂದು ನಿಗಮದ ತಾಲ್ಲೂಕು ಹಾಗೂ ಜಿಲ್ಲಾ ಕೇಂದ್ರಗಳಿಂದ ಬೆಂಗಳೂರಿಗೆ ಮತ್ತು ಇತರೆ ಪ್ರಮುಖ ಸ್ಥಳಗಳಿಗೆ ಹಾಗೂ ಇದೇ ಸೆಪ್ಟೆಂಬರ್ 13 ಮತ್ತು 14 ರಂದು ಬೆಂಗಳೂರಿನಿಂದ ಕ.ಕ.ರ.ಸಾ.ನಿಗಮದ ವ್ಯಾಪ್ತಿಯ ವಿವಿಧ ಸ್ಥಳಗಳಿಗೆ ದೈನಂದಿನ ಕಾರ್ಯಾಚರಣೆಯಲ್ಲಿರುವ 202 ಸಾರಿಗೆಗಳನ್ನು ಹೊರತುಪಡಿಸಿ, 200 ಹೆಚ್ಚುವರಿ ವಾಹನಗಳ ಕಾರ್ಯಾಚರಣೆಯನ್ನು ಮಾಡಲಾಗುತ್ತಿದೆ. ಹಬ್ಬ ಮುಗಿದ ನಂತರ ಮರಳಿ ಹೋಗುವ ಪ್ರಯಾಣಿಕರಿಗೆ ಇದೇ ಸೆಪ್ಟೆಂಬರ್ 16 ರಿಂದ 19 ರವರೆಗೆ ವರೆಗೆ ಕ.ಕ.ರ.ಸಾ ನಿಗಮದ ವ್ಯಾಪ್ತಿಯ ಎಲ್ಲಾ ಜಿಲ್ಲೆಗಳಿಂದ ಬೆಂಗಳೂರು ಮತ್ತು ಇತರೆ ಸ್ಥಳಗಳಿಗೆ ಸಂಚಾರ ದಟ್ಟಣೆಗನುಗುಣವಾಗಿ ಹೆಚ್ಚುವರಿ ವಾಹನಗಳನ್ನು ಕಾರ್ಯಾಚರಣೆ ಮುಂದುವರಿಯಲಿದೆ.
ಈ ಹೆಚ್ಚುವರಿ ಸಾರಿಗೆಗಳಿಗೆ ಮುಂಗಡವಾಗಿ ಆಸನಗಳನ್ನು ಕಾಯ್ದಿರಿಸುವ ಸೌಲಭ್ಯ ಕಲ್ಪಿಸಲಾಗಿದೆ. ಕರ್ನಾಟಕ ಹಾಗೂ ಅಂತರ ರಾಜ್ಯದಲ್ಲಿ ಇರುವ 16 ಗಣಕೀಕೃತ ಬುಕ್ಕಿಂಗ್ ಕೌಂಟರ್‍ಗಳ ಮೂಲಕ ಮುಂಗಡವಾಗಿ ಆಸನಗಳನ್ನು ಕಾಯ್ದಿರಿಸಿಕೊಳ್ಳಬಹುದಾಗಿದೆ. ಪ್ರಯಾಣಿಕರು ಬಸ್ ನಿಲ್ದಾಣಗಳಿಗೆ ತೆರಳುವ ಮುನ್ನ ಮುಂಗಡ ಕಾಯ್ದಿರಿಸಲಾಗುವ ಟಿಕೇಟುಗಳ ಮೇಲೆ ನಮೂದಿಸಲಾಗಿರುವ ಬಸ್ ನಿಲ್ದಾಣ/ಪಿಕ್ ಆಫ್ ಪಾಯಿಂಟ್‍ನ ಹೆಸರನ್ನು ಗಮನಿಸಬೇಕು.
ನಾಲ್ಕು ಅಥವಾ ಹೆಚ್ಚು ಪ್ರಯಾಣಿಕರು ಒಟ್ಟಾಗಿ ಮುಂಗಡ ಟಿಕೇಟ್ ಕಾಯ್ದಿರಿಸಿದ್ದಲ್ಲಿ ಶೇ. 5ರಷ್ಟು ರಿಯಾಯಿತಿ ನೀಡಲಾಗುತ್ತದೆ. ಹೋಗುವ ಮತ್ತು ಬರುವ ಪ್ರಯಾಣದ ಟಿಕೇಟ್‍ನ್ನು ಒಟ್ಟಿಗೆ ಕಾಯ್ದಿರಿಸಿದಾಗ ಬರುವ ಪ್ರಯಾಣ ದರದಲ್ಲಿ ಶೇ. 10 ರಷ್ಟು ರಿಯಾಯಿತಿ ನೀಡಲಾಗುತ್ತದೆ. ಅಲ್ಲದೇ ನಿಗಮದ ಕಾರ್ಯಾಚರಣೆ ವ್ಯಾಪ್ತಿಯಲ್ಲಿನ ಎಲ್ಲಾ ತಾಲೂಕು/ಜಿಲ್ಲಾ ಬಸ್ ನಿಲ್ದಾಣಗಳಿಂದ ಸಂಚಾರ ಒತ್ತಡಕ್ಕನುಗುಣವಾಗಿ ಹೆಚ್ಚುವರಿ ಸಾರಿಗೆಗಳನ್ನು ಕಾರ್ಯಾಚರಣೆ ಮಾಡಲಾಗುತ್ತದೆ. ಸಾರ್ವಜನಿಕ ಪ್ರಯಾಣಿಕರು ಇದರ ಸದುಪಯೋಗ ಪಡೆದುಕೊಳ್ಳಬಹುದು ಎಂದು ಮನವಿ ಮಾಡಿದ್ದಾರೆ.
ಹೆಚ್ಚಿನ ಮಾಹಿತಿಗೆ ಕೆಕೆಆರ್‌ಟಿಸಿ ಮುಖ್ಯ ಸಂಚಾರ ವ್ಯವಸ್ಥಾಪಕರು 7760992000 ಹಾಗೂ ಉಪಮುಖ್ಯ ಸಂಚಾರ ವ್ಯವಸ್ಥಾಪಕರು 7760992047 ಸಂಪರ್ಕಿಸಬಹುದು ಎಂದು ತಿಳಿಸಲಾಗಿದೆ.