logo
ಕನ್ನಡ ಸುದ್ದಿ  /  ಕರ್ನಾಟಕ  /  Political Analysis: ಕಾಂಗ್ರೆಸ್ ಪ್ರಣಾಳಿಕೆಯಲ್ಲಿ ಬಜರಂಗದಳ, ಪಿಎಫ್‌ಐ; ಬಿಜೆಪಿಗೆ ಮತ್ತೊಂದು ಅಸ್ತ್ರ, ಕಾಂಗ್ರೆಸ್‌ ಎದುರು ಹಲವು ಸವಾಲು

Political Analysis: ಕಾಂಗ್ರೆಸ್ ಪ್ರಣಾಳಿಕೆಯಲ್ಲಿ ಬಜರಂಗದಳ, ಪಿಎಫ್‌ಐ; ಬಿಜೆಪಿಗೆ ಮತ್ತೊಂದು ಅಸ್ತ್ರ, ಕಾಂಗ್ರೆಸ್‌ ಎದುರು ಹಲವು ಸವಾಲು

D M Ghanashyam HT Kannada

May 03, 2023 10:23 AM IST

google News

ಕಾಂಗ್ರೆಸ್ ಪ್ರಣಾಳಿಕೆ

    • Karnataka Assembly Elections 2023: ಕಾಂಗ್ರೆಸ್ ಪ್ರಣಾಳಿಕೆಯನ್ನು ಸೂಕ್ಷ್ಮವಾಗಿ ಗಮನಿಸಿದರೆ ಹಲವು ಕಾರಣಗಳಿಗೆ 'ಬಜರಂಗ ದಳ' ಮತ್ತು 'ಪಿಎಫ್‌ಐ' ಸಂಘಟನೆಗಳ ಹೆಸರುಗಳು ಗಮನ ಸೆಳೆಯುತ್ತವೆ. ಈ ಪ್ರಸ್ತಾಪದ ಮೂಲಕ ಕಾಂಗ್ರೆಸ್ ಅತ್ಯಂತ ಜಾಣತನದಿಂದ ಯೋಚಿತ ಹೆಜ್ಜೆಯೊಂದನ್ನು ಇರಿಸಿದೆ.
ಕಾಂಗ್ರೆಸ್ ಪ್ರಣಾಳಿಕೆ
ಕಾಂಗ್ರೆಸ್ ಪ್ರಣಾಳಿಕೆ

Congress Manifesto: ಚುನಾವಣೆಯನ್ನು ಯುದ್ಧಕ್ಕೆ ಹೋಲಿಸುವ ವಾಡಿಕೆ ಬಹುಕಾಲದಿಂದ ಚಾಲ್ತಿಯಲ್ಲಿದೆ. ಇದೀಗ ಕರ್ನಾಟಕದಲ್ಲಿ ನಡೆಯುತ್ತಿರುವ ವಿಧಾನಸಭಾ ಚುನಾವಣೆಯೂ (Karnataka Assembly Elecions 2023) ಇದಕ್ಕೆ ಹೊರತಾಗಿಲ್ಲ. ಚುನಾವಣಾ ಕದನ ಕಣ, ಸಮರ ತಂತ್ರದಂಥ ಪದಗಳ ಬಳಕೆಯೂ ತೀರಾ ಸಾಮಾನ್ಯ ಎನ್ನುವಂತೆ ಆಗಿದೆ. ಈಗ ಈ ಪದಗಳು ಮತ್ತು ಅವುಗಳಿಗೆ ಇರುವ ಅರ್ಥವನ್ನೇ ತುಸು ವಿಸ್ತರಿಸಿ ಕಾಂಗ್ರೆಸ್ ಪಕ್ಷದ ಪ್ರಣಾಳಿಕೆಯನ್ನು (Congress Manifesto) ಒಮ್ಮೆ ಗಮನಿಸೋಣ. ಎದುರಾಳಿ ನಿರೀಕ್ಷಿಸುವ, ಹಣಿಯಲೆಂದು ಕಾದುಕುಳಿತಿರುವ ಹಾದಿಯಲ್ಲಿ ಹೆಜ್ಜೆ ಹಾಕಬಾರದು ಎನ್ನುವುದು ಸಮರತಂತ್ರದ ಅತಿಮುಖ್ಯ ಅಂಶ. ಅಚ್ಚರಿಯೊಂದಿಗೆ ಆಘಾತ ಉಂಟು ಮಾಡುವ ಸಾಮರ್ಥ್ಯವೂ ಯುದ್ಧಗಳನ್ನು ಜಯಿಸುವಲ್ಲಿ ಸೇನಾನಿಗಳು ನೆಚ್ಚಿಕೊಳ್ಳುವ ಅತಿಮುಖ್ಯ ತಂತ್ರ. ಈ ಹಿನ್ನೆಲೆಯಲ್ಲಿ ನಿನ್ನೆಯಷ್ಟೇ (ಮೇ 2) ಬಿಡುಗಡೆಯಾದ ಕಾಂಗ್ರೆಸ್ ಪ್ರಣಾಳಿಕೆಯನ್ನು ಸೂಕ್ಷ್ಮವಾಗಿ ಗಮನಿಸಿದರೆ ಹಲವು ಕಾರಣಗಳಿಗೆ 'ಬಜರಂಗ ದಳ' (Bajrangdal) ಮತ್ತು 'ಪಿಎಫ್‌ಐ' (PFI) ಸಂಘಟನೆಗಳ ಹೆಸರುಗಳು ಗಮನ ಸೆಳೆಯುತ್ತವೆ.

ಪ್ರತಿಪಕ್ಷಗಳು ತನ್ನತ್ತ ಎಸೆಯುವ ಪ್ರತಿ ಕಲ್ಲನ್ನೂ ಮತಸೌಧದ ತಳಪಾಯವಾಗಿಸಿಕೊಳ್ಳುವ ಚಾಕಚಕ್ಯತೆ ಇರುವ ಬಿಜೆಪಿ ನಾಯಕರು ಮತ್ತು ಸ್ವತಃ ಪ್ರಧಾನಿ ನರೇಂದ್ರ ಮೋದಿ ಇದೇ ವಿಷಯವನ್ನು ಪ್ರಸ್ತಾಪಿಸಿ ತಿರುಗೇಟು ಕೊಟ್ಟಿದ್ದಾರೆ. ಕಾಂಗ್ರೆಸ್ ಪ್ರಣಾಳಿಕೆಯಲ್ಲಿ ಈ ಹೆಸರುಗಳು ಇರಬಹುದು ಎಂಬ ನಿರೀಕ್ಷೆ ಬಿಜೆಪಿಗೆ ಇತ್ತು ಎನ್ನುವುದನ್ನು ಮೋದಿ ಅವರ ರಾಯಚೂರು ಭಾಷಣ ಎತ್ತಿ ತೋರಿಸಿದೆ. 'ಜೈ ಬಜರಂಗಬಲಿ ಎನ್ನುವವರನ್ನೂ ಇವರು ಜೈಲಿಗೆ ಹಾಕುತ್ತಾರೆ' ಎಂದು ಮೋದಿ ಟೀಕಿಸಿದ್ದರು. ಆದರೆ ಬಿಜೆಪಿ ಹೀಗೆಯೇ ಪ್ರತಿಕ್ರಿಯಿಸಬಹುದು ಎಂಬ ನಿರೀಕ್ಷೆಯೂ ಕಾಂಗ್ರೆಸ್‌ಗೆ ಇತ್ತು ಎನ್ನುವುದನ್ನು ಕೆಪಿಸಿಸಿ ಮಾಜಿ ಅಧ್ಯಕ್ಷ ಜಿ.ಪರಮೇಶ್ವರ ಅವರ ಸಮರ್ಥನೆ ಬಿಂಬಿಸಿದೆ. ಅಷ್ಟರಮಟ್ಟಿಗೆ ಎರಡೂ ಪಕ್ಷಗಳು ಮೈಂಡ್‌ಗೇಮ್‌ ಮೇಲಾಟದಲ್ಲಿ ಗೆದ್ದಿವೆ.

ಈ ವಿಚಾರ ಇಷ್ಟಕ್ಕೇ ನಿಲ್ಲುವುದಿಲ್ಲ. ಗೋರಕ್ಷಣೆಯ ಅತಿರೇಕ, ಕೋಮು ಹಿಂಸಾಚಾರ ಸೇರಿದಂತೆ ಹಲವು ಸಂದರ್ಭಗಳಲ್ಲಿ ಬಜರಂಗದಳದ ಬಗ್ಗೆ ರಾಜ್ಯದಲ್ಲಿ ಚರ್ಚೆಗಳು ಆರಂಭವಾಗಿದ್ದವು. ಕ್ರಮೇಣ ಅದು ಹಿನ್ನೆಲೆಗೂ ಸರಿಯುತ್ತಿತ್ತು. ಕಾನೂನು ಕೈಗೆತ್ತಿಕೊಳ್ಳುವುದು, ಒಂದು ಸಮುದಾಯಕ್ಕೆ ಸೇರಿದವರಲ್ಲಿ ಭಯ ಹುಟ್ಟಿಸುವಂತೆ ನಡೆದುಕೊಳ್ಳುತ್ತಾರೆ ಎಂಬ ಆರೋಪಗಳು ವ್ಯಾಪಕವಾಗಿದ್ದವು. ಪ್ರತಿಬಾರಿಯೂ ಬಜರಂಗದಳದ ವಿರುದ್ಧ ಕಾಂಗ್ರೆಸ್ ವೀರಾವೇಶದಿಂದ ಹರಿಹಾಯುತ್ತಿತ್ತು. ಬಿಜೆಪಿ ನಾಯಕರು ಅಷ್ಟೇ ತೀವ್ರವಾಗಿ ಸಮರ್ಥಿಸಿಕೊಳ್ಳುತ್ತಿದ್ದರು. ಈ ಬೆಳವಣಿಗೆಗಳನ್ನು ಒಂದು ತಾರ್ಕಿಕ ಅಂತ್ಯಕ್ಕೆ ಕೊಂಡೊಯ್ಯುವ ರೀತಿಯಲ್ಲಿ ಕಾಂಗ್ರೆಸ್ ತನ್ನ ಪ್ರಣಾಳಿಕೆಯಲ್ಲಿ ಬಜರಂಗದಳ ನಿಷೇಧದ ವಿಚಾರ ಪ್ರಸ್ತಾಪಿಸಿದೆ.

ಉಡುಪಿ ಹಿಜಾಬ್‌ ವಿವಾದ ಹಾಗೂ ಪ್ರವೀಣ್ ನೆಟ್ಟಾರು ಹತ್ಯೆಯಲ್ಲಿ ಪಿಎಫ್‌ಐ ಕೈವಾಡದ ಶಂಕೆ ವ್ಯಕ್ತವಾದ ನಂತರ ಪಿಎಫ್‌ಐ ನಿಷೇಧಿಸಬೇಕೆಂಬ ಕೂಗು ಜೋರಾಗಿತ್ತು. ಅದಕ್ಕೆ ಪೂರಕವಾಗಿ ಕೇಂದ್ರ ಸರ್ಕಾರ ಈ ಸಂಘಟನೆಯನ್ನು ನಿಷೇಧಿಸಿದ್ದು ಮೆಚ್ಚುಗೆಗೂ ಪಾತ್ರವಾಗಿತ್ತು. ಒಂದು ವೇಳೆ ಕಾಂಗ್ರೆಸ್ ಸರ್ಕಾರವೇ ಮುಂದಿನ ಬಾರಿ ರಾಜ್ಯದಲ್ಲಿ ಅಧಿಕಾರಕ್ಕೆ ಬಂದರೂ ಈಗಾಗಲೇ ಕೇಂದ್ರ ಸರ್ಕಾರ ನಿಷೇಧಿತ ಸಂಘಟನೆಯ ಬಗ್ಗೆ ಹೊಸದಾಗಿ ರಾಜ್ಯ ಸರ್ಕಾರ ಮಾಡುವುದು ಏನಿದೆ ಎಂಬ ಪ್ರಶ್ನೆಯನ್ನು ಹಲವರು ಕೇಳುತ್ತಿದ್ದಾರೆ.

ಕಾಂಗ್ರೆಸ್ ಪ್ರಣಾಳಿಕೆಯಲ್ಲಿ ಏನಿದೆ?

ಕಾಂಗ್ರೆಸ್ ಪಕ್ಷವು ಮಾಧ್ಯಮಗಳಿಗೆ ಬಿಡುಗಡೆ ಮಾಡಿರುವ ಪ್ರಣಾಳಿಕೆಯ ಕನ್ನಡ ಅವತರಣಿಕೆಯ 10ನೇ ಪುಟದಲ್ಲಿ "ಕಾನೂನು ಮತ್ತು ನ್ಯಾಯ" ಎನ್ನುವ ವಿಭಾಗವಿದೆ. ಇದರಲ್ಲಿ ಕೆಂಪು ಅಕ್ಷರಗಳಲ್ಲಿ ಹೀಗೆ ಮುದ್ರಿಸಲಾಗಿದೆ. ‘ಬಜರಂಗದಳ ಮತ್ತು ಪಿಎಫ್‌ಐ’ ಎಂದು ಒಮ್ಮೆಲೆ ಹೇಳಿರುವುದು ಗಮನ ಸೆಳೆಯುತ್ತದೆ. ಈ ಮೂಲಕ ಈ ಎರಡೂ ಸಂಘಟನೆಗಳನ್ನು ಒಂದೇ ತಕ್ಕಡಿಯಲ್ಲಿ ತೂಗಲು, ಅದರಲ್ಲಿಯೂ ಒಂದು ಸಂದೇಶ ಕೊಡಲು ಕಾಂಗ್ರೆಸ್ ಯತ್ನಿಸಿದೆ.

'ಧರ್ಮ ಮತ್ತು ಜಾತಿಯ ಹೆಸರಿನಲ್ಲಿ ಸಮಾಜದಲ್ಲಿ ದ್ವೇಷವನ್ನು ಬಿತ್ತಿ ವಿಭಜನೆಗೆ ಕಾರಣವಾಗುವ, ವ್ಯಕ್ತಿಗಳು ಮತ್ತು ಸಂಘಟನೆಗಳ ವಿರುದ್ಧ ಕಠಿಣ ಮತ್ತು ನಿರ್ಣಾಯಕ ಕಾನೂನು ಕ್ರಮವನ್ನು ತೆಗೆದುಕೊಳ್ಳಲು ಕಾಂಗ್ರೆಸ್ ಪಕ್ಷವು ಬದ್ಧವಾಗಿದೆ. ಸಂವಿಧಾನವೇ ಪವಿತ್ರ ಎಂದು ನಂಬಿರುವ ನಾವು ಯಾವುದೇ ವ್ಯಕ್ತಿಗಳಾಗಲಿ ಬಜರಂಗದಳ ಮತ್ತು ಪಿಎಫ್‌ಐಗಳು ಸೇರಿದಂತೆ ಬಹುಸಂಖ್ಯಾತ ಅಥವಾ ಅಲ್ಪಸಂಖ್ಯಾತ ಇತರರಾಗಲಿ ಸಂವಿಧಾನದ ವಿಧಿಗಳನ್ನು ಉಲ್ಲಂಘಿಸುವುದನ್ನು ಸಹಿಸುವುದಿಲ್ಲ. ಆದ ಕಾರಣ ಇಂತಹ ವ್ಯಕ್ತಿಗಳು ಮತ್ತು ಸಂಘಟನೆಗಳ ನಿಷೇಧವೂ ಸೇರಿದಂತೆ ಬಲವಾದ ಕಾನೂನು ಕ್ರಮಗಳನ್ನು ತೆಗೆದುಕೊಳ್ಳಲಾಗುವುದು' ಎಂದು ಕಾಂಗ್ರೆಸ್ ಪಕ್ಷವು ಹೇಳಿದೆ.

ರಾಜಕೀಯ ವಿಶ್ಲೇಷಣೆಯಲ್ಲಿ 'ಸಾಲುಗಳ ನಡುವೆ ಓದುವುದು' (Reading between the lines) ಎನ್ನುವ ಕ್ರಮವೊಂದು ಇದೆ. ಕಾಂಗ್ರೆಸ್ ಪ್ರಣಾಳಿಕೆಯ ಈ ಸಾಲುಗಳನ್ನು ಪ್ರಣಾಳಿಕೆಯ ಮುಖ್ಯ ಆಶಯವಾಗಿರುವ 'ಸರ್ವಜನಾಂಗದ ಶಾಂತಿಯ ತೋಟ' ಎನ್ನುವ ಹೆಸರಿನೊಂದಿಗೆ ಏಕಕಾಲಕ್ಕೆ ಸೂಕ್ಷ್ಮವಾಗಿ ಗಮನಿಸಿದರೆ ಹಲವು ಅರ್ಥಗಳು ಹೊಳೆಯುತ್ತವೆ. ಅವುಗಳನ್ನು ಹೀಗೆ ಕಟ್ಟಿಕೊಡಬಹುದು.

ಹಿಂದುತ್ವದ ಪರ ಮತ್ತು ವಿರೋಧ

ಕರ್ನಾಟಕದ ಚುನಾವಣೆಯಲ್ಲಿ ಅಭಿವೃದ್ಧಿಯ ವಿಚಾರಕ್ಕಿಂತಲೂ ಧರ್ಮವೇ ಪ್ರಧಾನವಾಗಿ ಚರ್ಚೆಯಾಗುತ್ತಿದೆ. ಜಾತಿ ಮತ್ತು ಮೀಸಲಾತಿಯ ವಿಚಾರಗಳನ್ನು ಪ್ರಮುಖವಾಗಿ ಪ್ರಸ್ತಾಪಿಸುವುದು ರಿಸ್ಕ್ ಎಂದು ಬಿಜೆಪಿ ಮತ್ತು ಕಾಂಗ್ರೆಸ್ ಪಕ್ಷಗಳಿಗೆ ಮನವರಿಕೆಯಾಗಿದೆ. ಹೀಗಾಗಿಯೇ ಧಾರ್ಮಿಕ ನೆಲೆಯಲ್ಲಿ ಧ್ರುವೀಕರಣಕ್ಕೆ ಎರಡೂ ಪಕ್ಷಗಳು ಮುಂದಾಗಿವೆ. ಪ್ರಣಾಳಿಕೆಯಲ್ಲಿ ಈ ಹಿಂದೆ ನಿಷೇಧಗೊಂಡಿರುವ ಪಿಎಫ್‌ಐ ಜೊತೆಗೆ ಬಜರಂಗದಳವನ್ನು ಸೇರಿಸುವ ಮೂಲಕ ಕಾಂಗ್ರೆಸ್ ತನ್ನ ನಿಲುವನ್ನು ಸ್ಪಷ್ಟವಾಗಿ ರವಾನಿಸಿದೆ. "ನಮಗೆ ಹೇಗೂ ಕಟ್ಟರ್ ಹಿಂದುತ್ವವಾದಿಗಳ ಮತ ಸಿಗುವುದಿಲ್ಲ. ಪ್ರತಿಬಾರಿ ನಮ್ಮತ್ತ ಬರಬೇಕಿರುವ ಜಾತ್ಯತೀತ ಹಾಗೂ ಹಿಂದುತ್ವವಾದಿಗಳ ವಿರೋಧಿಗಳ ಮತವಾದರೂ ಬರಲಿ. ಅವು ಜೆಡಿಎಸ್‌ ಪಾಲಾಗುವುದು ಬೇಡ" ಎನ್ನುವ ತಂತ್ರ ಈ ಉಲ್ಲೇಖದ ಹಿಂದೆ ಇದ್ದಂತೆ ಇದೆ.

ಕರ್ನಾಟಕದಲ್ಲಿ ಬಿಜೆಪಿಯೇತರ ಮತಗಳ ಹಂಚಿಕೆಯ ಲಾಭ ಯಾರಿಗೆ ಆಗಲಿದೆ ಎಂಬ ಚರ್ಚೆಯೂ ಬಹುಕಾಲದಿಂದ ನಡೆಯುತ್ತಿದೆ. ಕಾಂಗ್ರೆಸ್ ಮತ್ತು ಜೆಡಿಎಸ್ ಪ್ರತ್ಯೇಕವಾಗಿ ಸ್ಪರ್ಧಿಸಿ ಮತಗಳು ವಿಭಜನೆಯಾದರೆ ಬಿಜೆಪಿಗೆ ಹಿನ್ನಡೆ. ಒಂದು ವೇಳೆ ಹಿಂದುತ್ವವೇ ಚುನಾವಣೆಯ ವಿಷಯವಾದರೆ ಬಿಜೆಪಿ ಸುಲಭ ಎಂಬ ವಿಶ್ಲೇಷಣೆಯೂ ಚಾಲ್ತಿಯಲ್ಲಿದೆ. ಕಳೆದ ಲೋಕಸಭೆ ಚುನಾವಣೆಯೂ ಸೇರಿದಂತೆ ಹಲವು ಬಾರಿ ಇದು ಸಾಬೀತೂ ಆಗಿದೆ. ಈ ಹಿನ್ನೆಲೆಯಲ್ಲಿ ಕಾಂಗ್ರೆಸ್ ಪ್ರಣಾಳಿಕೆಯ ಬಜರಂಗದಳದ ನಿಷೇಧದ ಪ್ರಸ್ತಾಪ, ಅದನ್ನು ಪ್ರತಿಷ್ಠೆಯ ಪ್ರಶ್ನೆಯಾಗಿಸಿ ಸಮರ್ಥಿಸಿಕೊಳ್ಳುವ ಬಿಜೆಪಿಯ ನಡೆ, ಈ ವಿಚಾರದ ಬಗ್ಗೆ ಜೆಡಿಎಸ್‌ನ ಮೌನ ಹಲವು ಹೊಸ ನಿರೀಕ್ಷೆಗಳಿಗೂ ಕಾರಣವಾಗಿದೆ. ಕೋಮುಧ್ರುವೀಕರಣದ ರಾಜಕಾರಣ ಮುಂದಿನ ದಿನಗಳಲ್ಲಿ ಹೇಗೆಲ್ಲಾ ಹೊರಳಬಹುದು ಎಂಬುದನ್ನು ಅಷ್ಟು ಸುಲಭವಾಗಿ ಹೇಳಲು ಸಾಧ್ಯವಿಲ್ಲ.

ಚುನಾವಣೆಯನ್ನು ಯುದ್ಧಗಳಿಗೆ ಹೋಲಿಸುವ ರೂಢಿಯನ್ನು ಮತ್ತೊಮ್ಮೆ ನೆನಪಿಸಿಕೊಳ್ಳೋಣ. ಯುದ್ಧಗಳಲ್ಲಿ ಒಂದು ಸೇನೆಯು ತನ್ನದೇ ಮಾಹಿತಿಯನ್ನು, ಆಲೋಚನೆಗಳನ್ನು ಯೋಜಿತ ರೀತಿಯಲ್ಲಿ ಹರಿಬಿಟ್ಟು ಎದುರಾಳಿಯ ನಡೆ ಮತ್ತು ಸಾಮರ್ಥ್ಯ ಪರಿಶೀಲಿಸುವುದು ಸಹ ಒಂದು ತಂತ್ರ ಎನಿಸಿಕೊಂಡಿದೆ. ಪ್ರಣಾಳಿಕೆಯಲ್ಲಿ ಬಜರಂಗದಳ ನಿಷೇಧದ ಪ್ರಸ್ತಾಪ ಮುಂದಿಡುವ ಮೂಲಕ ಬಿಜೆಪಿಯ ನಿರೀಕ್ಷೆಯಂತೆ ಕಾಂಗ್ರೆಸ್ ನಡೆದುಕೊಂಡಿದೆಯೇ ಅಥವಾ ಬಿಜೆಪಿಯ ಪ್ರತಿಕ್ರಿಯೆಯ ತೀವ್ರತೆ ಪರೀಕ್ಷಿಸುತ್ತಿದೆಯೇ?

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ