Tumkur News: ತುಮಕೂರಿನಲ್ಲಿ ಗಣ್ಯರು ಹಾಗೂ ಅಭ್ಯರ್ಥಿಗಳಿಂದ ಹಕ್ಕು ಚಲಾವಣೆ
May 10, 2023 05:24 PM IST
ತುಮಕೂರಿನಲ್ಲಿ ಮತದಾನ ಮಾಡಿದ ಗಣ್ಯರು
- ಕೊರಟಗೆರೆ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಡಾ.ಜಿ ಪರಮೇಶ್ವರ್, ತುಮಕೂರಿನ ಹೊರವಲಯದ ಗೊಲ್ಲಹಳ್ಳಿಯ ಸರ್ಕಾರಿ ಪ್ರಾಥಮಿಕ ಶಾಲೆಯ ಮತಗಟ್ಟೆಗೆ ತಮ್ಮ ಪತ್ನಿಯೊಂದಿಗೆ ತೆರಳಿ ಮತ ಚಲಾಯಿಸಿದರು.
ತುಮಕೂರು: ಜಿಲ್ಲೆಯಾದ್ಯಂತ ವಿಧಾನಸಭೆ ಚುನಾವಣೆಗೆ ಮತದಾರರು ಹುರುಪಿನಿಂದ ಹಕ್ಕು ಚಲಾಯಿಸಿದರು. ಬಹುತೇಕ ಎಲ್ಲಾ ಮತಗಟ್ಟೆಗಳಲ್ಲೂ ಸರತಿ ಸಾಲಿನಲ್ಲಿ ನಿಂತು ಮತ ಹಾಕಿದರು. ಅದರಲ್ಲೂ ಗಣ್ಯರು, ಚುನಾವಣೆಗೆ ಸ್ಪರ್ಧಿಸಿರುವ ಅಭ್ಯರ್ಥಿಗಳು, ಜಿಲ್ಲಾಧಿಕಾರಿ, ಜಿಲ್ಲಾ ಪಂಚಾಯಿತಿ ಸಿಇಒ ಹಾಗೂ ಸ್ವಾಮೀಜಿಗಳು ವೋಟ್ ಮಾಡಿ ಗಮನ ಸೆಳೆದರು.
ತುಮಕೂರಿನ ಶ್ರೀ ಸಿದ್ದಗಂಗಾ ಮಠದ ಆವರಣದಲ್ಲಿರುವ ಶ್ರೀ ಸಿದ್ದಲಿಂಗೇಶ್ವರ ಸನಿವಾಸ ಹಿರಿಯ ಪ್ರಾಥಮಿಕ ಪಾಠ ಶಾಲೆಯ ಮತಗಟ್ಟೆಗೆ ಮಠಾಧ್ಯಕ್ಷ ಸಿದ್ದಲಿಂಗ ಸ್ವಾಮೀಜಿ ತೆರಳಿ ಮತದಾನ ಮಾಡಿದರು.
ಕೊರಟಗೆರೆ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಡಾ.ಜಿ ಪರಮೇಶ್ವರ್, ತುಮಕೂರಿನ ಹೊರವಲಯದ ಗೊಲ್ಲಹಳ್ಳಿಯ ಸರ್ಕಾರಿ ಪ್ರಾಥಮಿಕ ಶಾಲೆಯ ಮತಗಟ್ಟೆಗೆ ತಮ್ಮ ಪತ್ನಿ ಕನ್ನಿಕ ಪರಮೇಶ್ವರ್ ಅವರೊಂದಿಗೆ ತೆರಳಿ ಮತ ಚಲಾಯಿಸಿದರು.
ತುಮಕೂರಿನ ಬಿಎಚ್ ರಸ್ತೆಯಲ್ಲಿರುವ ಸಿದ್ದಗಂಗಾ ಕಾಲೇಜಿನ ಮತಗಟ್ಟೆಯಲ್ಲಿ ಶಾಸಕ ಹಾಗೂ ತುಮಕೂರು ನಗರ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಜಿಬಿ ಜ್ಯೋತಿಗಣೇಶ್ ಸರತಿ ಸಾಲಿನಲ್ಲಿ ನಿಂತು ಓಟ್ ಮಾಡಿದರು.
ತುಮಕೂರಿನ ಚಿಕ್ಕಪೇಟೆಯ ಮತಗಟ್ಟೆಯಲ್ಲಿ ಮಾಜಿ ಸಚಿವ ಹಾಗೂ ಪಕ್ಷೇತರ ಅಭ್ಯರ್ಥಿ ಸೊಗಡು ಶಿವಣ್ಣ ಹಾಗೂ ಅವರ ಪತ್ನಿ ಮತದಾನ ಮಾಡಿದರು.
ತುಮಕೂರಿನ ಕುಣಿಗಲ್ ರಸ್ತೆಯಲ್ಲಿರುವ ಪಿಡಬ್ಲ್ಯೂಡಿ ಕಚೇರಿ ಆವರಣದಲ್ಲಿರುವ ಮತಗಟ್ಟೆಗೆ ತುಮಕೂರು ನಗರ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಇಕ್ಬಾಲ್ ಅಹಮದ್ ಪತ್ನಿ ಜುಮೇದಾ ಖಾನಂ ಅವರೊಂದಿಗೆ ತೆರಳಿ ಮತ ಚಲಾಯಿಸಿದರು.
ತುಮಕೂರಿನ ವಿದ್ಯಾನಗರದಲ್ಲಿರುವ ವಿವೇದಾನಂದ ಶಾಲೆಯ ಮತಗಟ್ಟೆಯಲ್ಲಿ ತುಮಕೂರು ನಗರ ಕ್ಷೇತ್ರದ ಜೆಡಿಎಸ್ ಅಭ್ಯರ್ಥಿ ಗೋವಿಂದರಾಜು ಮತದಾನ ಮಾಡಿದರು. ಬಿಎಚ್ ರಸ್ತೆಯಲ್ಲಿರುವ ಸಿದ್ದಗಂಗಾ ಕಾಲೇಜಿನ ಮತಗಟ್ಟೆಯಲ್ಲಿ ಸಂಸದ ಜಿಎಸ್ ಬಸವರಾಜು ಮತ್ತು ಪತ್ನಿ ಶಂಕುತಲಾ ಬಸವರಾಜು ಅವರು ತಮ್ಮ ಹಕ್ಕು ಚಲಾಯಿಸಿದರು.
ಜಯನಗರದ ಸರ್ಕಾರಿ ಶಾಲೆಯ ಮತಗಟ್ಟೆಗೆ ಮಾಜಿ ಶಾಸಕ ಡಾ.ರಫಿಕ್ ಅಹಮದ್ ಅವರು ಕುಟುಂಬ ಸಮೇತರಾಗಿ ತೆರಳಿ ಮತ ಚಲಾಯಿಸಿದರು. ತುಮಕೂರಿನ ಶಿರಾ ಗೇಟ್‌ನ ಕಾಳಿದಾಸ ಶಾಲೆಯ ಮತಗಟ್ಟೆಗೆ ಜಿಲ್ಲಾಧಿಕಾರಿ ವೈಎಸ್ ಪಾಟೀಲ್ ಅವರು ಪತ್ನಿ ರಶ್ಮಿಪಾಟೀಲ್ ಹಾಗೂ ಪುತ್ರಿ ಅಪೂರ್ವ ಅವರೊಂದಿಗೆ ತೆರಳಿ ಮತದಾನ ಮಾಡಿದರು. ಜಿಲ್ಲಾ ಪಂಚಾಯಿತಿ ಸಿಇಒ ಡಾ.ಕೆ ವಿದ್ಯಾಕುಮಾರಿ ತಮ್ಮ ಹಕ್ಕು ಚಾಲಯಿಸಿದರು.
ತುಮಕೂರು ಗ್ರಾಮಾಂತರ ಬಿಜೆಪಿ ಅಭ್ಯರ್ಥಿ ಬಿ ಸುರೇಶ್‌ಗೌಡ ಬಾಣಾವರದಲ್ಲಿರುವ ನಮ್ಮೂರ ಸರ್ಕಾರಿ ಶಾಲೆಯ ಮತಗಟ್ಟೆಯಲ್ಲಿ ಹಕ್ಕು ಚಲಾಯಿಸಿದರು. ಹೊರಪೇಟೆಯಲ್ಲಿರುವ ಸರ್ಕಾರಿ ಶಾಲೆಯ ಮತಗಟ್ಟೆಯಲ್ಲಿ ಜೆಡಿಎಸ್ ಮುಖಂಡ ಹಾಗೂ ಮಾಜಿ ಶಾಸಕ ಎಸ್ ಷಫಿ ಅಹಮದ್ ಮತ ಚಲಾಯಿಸಿದರು.