PM Modi Campaign: ನಾಮಪತ್ರ ಪ್ರಕ್ರಿಯೆ ನಂತರ ಪ್ರಚಾರಕ್ಕೆ ಬರ್ತಾರೆ ಪ್ರಧಾನಿ ಮೋದಿ
Apr 20, 2023 01:16 PM IST
ಪ್ರಧಾನಿ ನರೇಂದ್ರ ಮೋದಿ
- ಬೆಂಗಳೂರಿನಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಸಿಎಂ ಬೊಮ್ಮಾಯಿ, ನಾಮಪತ್ರ ಪ್ರಕ್ರಿಯೆ ಮುಗಿದ ನಂತರ ಪ್ರಧಾನಿ ನರೇಂದ್ರ ಮೋದಿಯವರು ಪ್ರಚಾರಕ್ಕೆ ಬರಲಿದ್ದಾರೆ ಎಂದು ತಿಳಿಸಿದ್ದಾರೆ.
ಬೆಂಗಳೂರು : ರಾಜ್ಯ ವಿಧಾನಸಭೆ ಚುನಾವಣೆಗೆ ಪ್ರಧಾನಿ ನರೇಂದ್ರ ಮೋದಿ ಸೇರಿದಂತೆ ಬಿಜೆಪಿ ಸ್ಟಾರ್ ಪ್ರಚಾರಕರ ಪಟ್ಟಿಯನ್ನು ಈಗಾಗಲೇ ಬಿಡುಗಡೆ ಮಾಡಲಾಗಿದೆ. ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆಪಿ ನಡ್ಡಾ ನಿನ್ನೆ (ಏ.19) ಶಿಗ್ಗಾಂವಿಯಲ್ಲಿ ರೋಡ್ಶೋ ನಡೆಸಿ, ಪಕ್ಷದ ಸಮಾವೇಶದಲ್ಲಿ ಪಾಲ್ಗೊಂಡಿದ್ದರು. ಇದೀಗ ಪ್ರಧಾನಿ ಮೋದಿ ಯಾವಾಗ ಪ್ರಚಾರಕ್ಕೆ ಎಂಬುದನ್ನು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸ್ಪಷ್ಟಪಡಿಸಿದ್ದಾರೆ.
ಬೆಂಗಳೂರಿನಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಸಿಎಂ ಬೊಮ್ಮಾಯಿ, ನಾಮಪತ್ರ ಪ್ರಕ್ರಿಯೆ ಮುಗಿದ ನಂತರ ಪ್ರಧಾನಿ ನರೇಂದ್ರ ಮೋದಿಯವರು ಪ್ರಚಾರಕ್ಕೆ ಬರಲಿದ್ದಾರೆ ಎಂದು ತಿಳಿಸಿದ್ದಾರೆ. ಇಂದು (ಏ 20) ನಾಮಪತ್ರ ಸಲ್ಲಿಕೆಗೆ ಕೊನೆಯ ದಿನವಾಗಿದೆ. ಏಪ್ರಿಲ್ 21ರಂದು ನಾಮಪತ್ರ ಪರಿಶೀಲನೆ ನಡೆಯಲಿದ್ದು, ಏ. 24ಕ್ಕೆ ನಾಮಪತ್ರ ಹಿಂಪಡೆಯಲು ಕೊನೆಯ ದಿನವಾಗಿದೆ.
ಇದೇ ವೇಳೆ, ಯಡಿಯೂರಪ್ಪ ನೇತೃತ್ವದಲ್ಲಿ ಲಿಂಗಾಯತ ನಾಯಕರ ಸಭೆ ನಡೆದ ಕುರಿತು ಮಾತನಾಡಿದ ಸಿಎಂ ಬೊಮ್ಮಾಯಿ, ಲಿಂಗಾಯತ ಸಿಎಂ ಘೋಷಣೆ ಬಗ್ಗೆ ಯಾವುದೇ ನಿರ್ಣಯ ಆಗಿಲ್ಲ. ಸದ್ಯದ ರಾಜಕೀಯ ಸ್ಥಿತಿಗತಿಗಳ ಬಗ್ಗೆ ಚರ್ಚೆ ಆಗಿದೆ. ಲಿಂಗಾಯತ ಮುಖ್ಯಮಂತ್ರಿ ಬಗ್ಗೆಯೂ ಕೆಲವರು ಸಲಹೆ ಕೊಟ್ಟಿದ್ದಾರೆ ಎಂದರು.
ಕಾಂಗ್ರೆಸ್ ನವರ ಅಪಪ್ರಚಾರಕ್ಕೆ ಹೇಗೆ ಪ್ರತ್ತುತ್ತರ ನೀಡಬೇಕು ತಿಳಿದಿದೆ. ಸಭೆಯಲ್ಲಿ ಧರ್ಮೇಂದ್ರ ಪ್ರಧಾನ್ ಅವರೂ ಇದ್ದರು. ಸಭೆಯಲ್ಲಿ ವ್ಯಕ್ತವಾಗಿರುವ ಭಾವನೆಗಳನ್ನು ವರಿಷ್ಠರಿಗೆ ತಿಳಿಸುವುದಾಗಿ ಹೇಳಿದ್ದಾರೆ. ಲಿಂಗಾಯತ ಸಿಎಂ ಘೋಷಣೆ ಬಗ್ಗೆ ಯಾವುದೇ ನಿರ್ಣಯ ಆಗಿಲ್ಲ ಎಂದು ಸ್ಪಷ್ಟ ಪಡಿಸಿದರು.
ಮಿಲಿಟರಿ ಹೋಟೆಲ್ನಿಂದಲೇ ಪ್ರಚಾರ ಆರಂಭ
ಅಶೋಕ್ ಅವರಿಗೆ ಕನಕಪುರದಲ್ಲಿ ಮಿಲಿಟರಿ ಹೊಟೇಲ್ ಗೆ ಬಂದು ಹೋಗಿ ಎಂಬ ಡಿ.ಕೆ.ಶಿವಕುಮಾರ್ ಅವರ ಹೇಳಿಕೆ ಬಗ್ಗೆ ಉತ್ತರಿಸಿ, ನಮ್ಮ ಪ್ರಚಾರ ಮಿಲಿಟರಿ ಹೋಟೆಲ್ನಿಂದಲೇ ಆರಂಭವಾಗಲಿದೆ. ಅಲ್ಲಿ ಸ್ಥಳೀಯ ಸಾಮಾನ್ಯ ಜನರಿರುತ್ತಾರೆ. ಅಂಥ ಸಾಮಾನ್ಯ ಜನರನ್ನು ಡಿಕೆಶಿ ಭೇಟಿ ಮಾಡುವುದಿಲ್ಲ. ಸಾಮಾನ್ಯ ಜನರನ್ನು ಭೇಟಿ ಮಾಡಲು ಅಶೋಕ್ ತೆರಳಿದ್ದಾರೆ. ಇದರಲ್ಲಿ ತಪ್ಪೇನಿದೆ. ಮಿಲಿಟರಿ ಹೊಟೇಲ್ ಗೆ ಯಾಕೆ ಹೋಗಬಾರದು ಎಂದು ಪ್ರಶ್ನಿಸಿದರು. ವಲಸೆ ಹೋದವರನ್ನು ವಾಪಸ್ಸು ಕರೆತರುವ ಕೆಲಸ ಮಾಡುತ್ತಿದ್ದು, ಜಿಲ್ಲಾ, ಹೋಬಳಿ ಮಟ್ಟದಲ್ಲಿ ಆ ಕೆಲಸ ಮಾಡಲಾಗುತ್ತಿದೆ ಎಂದರು.
ಲಿಂಗಾಯತ ವಿರೋಧಿ ನಡೆ
ಕಾಂಗ್ರೆಸ್ನದ್ದು ಲಿಂಗಾಯತ ವಿರೋಧಿ ನಡೆ. 1967 ರಿಂದ ಈ ವರೆಗೆ 50 ವರ್ಷದಲ್ಲಿ ಒಬ್ಬ ಲಿಂಗಾಯತರನ್ನು ಕಾಂಗ್ರೆಸ್ ಸಿಎಂ ಮಾಡಿಲ್ಲ. ಮಧ್ಯೆ ವಿರೇಂದ್ರ ಪಾಟೀಲರು ಒಂಭತ್ತು ತಿಂಗಳು ಮುಖ್ಯಮಂತ್ರಿಗಳಾಗಿದ್ದರೂ ವಿರೇಂದ್ರ ಪಾಟೀಲರನ್ನು ಕಾಂಗ್ರೆಸ್ ಸರಿಯಾಗಿ ನಡೆಸಿಕೊಳ್ಳಲಿಲ್ಲ. ವಿಮಾನನಿಲ್ದಾಣದಲ್ಲಿಯೇ ಅವರನ್ನು ತೆಗೆದು ಹಾಕಲಾಗಿದೆ. ರಾಜಶೇಖರ ಮೂರ್ತಿಯವರನ್ನು ನಡೆಸಿಕೊಂಡ ರೀತಿಯೂ ಸರಿಯಲ್ಲ
ಲಿಂಗಾಯತ ಧರ್ಮವನ್ನು ಒಡೆಯಲು ಕಾಂಗ್ರೆಸ್ ಪ್ರಯತ್ನಿಸಿತ್ತು. ಮತಬ್ಯಾಂಕ್ ಗಾಗಿ ಧರ್ಮ ಒಡೆಯಲು ಹೋಗಿದ್ದನ್ನು ಜನ ಮರೆಯೋಲ್ಲ. ಕಾಂಗ್ರೆಸ್‌ನವರು ದಲಿತರು, ಹಿಂದುಳಿದವರು, ಲಿಂಗಾಯತರಿಗೆ ಮೋಸ ಮಾಡಿದ್ದಾರೆ ಎಂದು ಸಿಎಂ ಬೊಮ್ಮಾಯಿ ಆರೋಪಿಸಿದರು.