ಸ್ಮಾರ್ಟ್ ಮೀಟರ್ ಟೆಂಡರ್ ಪ್ರಕ್ರಿಯೆಯಲ್ಲಿ 15,568 ಕೋಟಿ ಅವ್ಯವಹಾರ; ಡಾ ಸಿಎನ್ ಅಶ್ವತ್ಥನಾರಾಯಣ ಗಂಭೀರ ಆರೋಪ
Published Mar 26, 2025 10:22 AM IST
ಸ್ಮಾರ್ಟ್ ಮೀಟರ್ ಟೆಂಡರ್‌ನಲ್ಲಿ 15,568 ಕೋಟಿ ಅವ್ಯವಹಾರ; ಅಶ್ವತ್ಥನಾರಾಯಣ ಆರೋಪ
- ಸ್ಮಾರ್ಟ್ ಮೀಟರ್ ಟೆಂಡರ್ ಪ್ರಕ್ರಿಯೆಯಲ್ಲಿ 15,568 ಕೋಟಿ ರೂ ಅವ್ಯವಹಾರ ನಡೆದಿದೆ ಎಂದು ಬಿಜೆಪಿಯ ಡಾ ಸಿಎನ್ ಅಶ್ವತ್ಥನಾರಾಯಣ ಗಂಭೀರ ಆರೋಪ ಮಾಡಿದ್ದಾರೆ. ಮಾತ್ರವಲ್ಲ ಕೆಇಆರ್‌ಸಿ ನಿಯಮಗಳ ಪ್ರಕಾರ ಸ್ಮಾರ್ಟ್ ಮೀಟರ್ ಅಳವಡಿಕೆ ಕಡ್ಡಾಯವಲ್ಲ ಎಂದಿದ್ದಾರೆ.

Smart Meter Tender Scam: ಬೆಂಗಳೂರು ವಿದ್ಯುತ್ ಸರಬರಾಜು ಕಂಪನಿ ಲಿಮಿಟೆಡ್ (BESCOM) ಮತ್ತು ಇತರ ವಿದ್ಯುತ್ ಸರಬರಾಜು ಕಂಪನಿಗಳ (ESCOMS) ಸ್ಮಾರ್ಟ್ ಮೀಟರ್ ಟೆಂಡರ್ ಪ್ರಕ್ರಿಯೆಯಲ್ಲಿ ಸುಮಾರು 15,568 ಕೋಟಿ ರೂಪಾಯಿ ಅವ್ಯವಹಾರ ನಡೆದಿದೆ ಎಂದು ಬಿಜೆಪಿ ನಾಯಕ ಡಾ ಸಿಎನ್ ಅಶ್ವತ್ಥನಾರಾಯಣ ಆರೋಪಿಸಿದ್ದಾರೆ.
ಟೆಂಡರ್ ಪ್ರಕ್ರಿಯೆಯಲ್ಲಿ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ ಪಕ್ಷಪಾತ ಮಾಡಿದೆ ಮತ್ತು ಅಕ್ರಮ ಎಸಗಿದೆ ಎಂದು ಆರೋಪ ಮಾಡಿರುವ ಶಾಸಕರು ಈ ಇದರಲ್ಲಿ ಬಹುಕೋಟಿ ಅವ್ಯವಹಾರ ನಡೆದಿದೆ ಎಂದಿದ್ದಾರೆ. ಎಸ್ಕಾಂಗಳು ಕರ್ನಾಟಕ ವಿದ್ಯುತ್ ನಿಯಂತ್ರಣ ಆಯೋಗದ (KERC) ನಿಯಮಗಳನ್ನು ಪಾಲಿಸಬೇಕು ಎಂದು ಅವರು ಒತ್ತಿ ಹೇಳಿದರು.
ಸ್ಮಾರ್ಟ್ ಮೀಟರ್‌ಗಳ ಅಳವಡಿಕೆಯಲ್ಲಿನ ಅಕ್ರಮಗಳ ಆರೋಪವನ್ನು ಇಂಧನ ಇಲಾಖೆ ತಳ್ಳಿಹಾಕಿದ ಒಂದು ದಿನದ ನಂತರ ಮಾಜಿ ಉಪಮುಖ್ಯಮಂತ್ರಿ ಈ ರೀತಿ ಹೇಳಿಕೆ ನೀಡಿದ್ದಾರೆ. ಬೆಸ್ಕಾಂ ವ್ಯವಸ್ಥಾಪಕ ನಿರ್ದೇಶಕ ಶಿವಶಂಕರ ‘ಸ್ಮಾರ್ಟ್ ಮೀಟರ್ ಖರೀದಿ ಬೆಲೆಯನ್ನು ವೈಜ್ಞಾನಿಕವಾಗಿ ನಿರ್ಧರಿಸಲಾಗಿದೆ ಮತ್ತು ಸಂಪೂರ್ಣ ಪಾರದರ್ಶಕತೆಯೊಂದಿಗೆ ಕಾರ್ಯಗತಗೊಳಿಸಲಾಗಿದೆ‘ ಎಂದು ಪ್ರತಿಪಾದಿಸಿದ್ದರು.
ಸ್ಮಾರ್ಟ್ ಮೀಟರ್ ಕಡ್ಡಾಯವಲ್ಲ
ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅಶ್ವತ್ಥನಾರಾಯಣ ಕರ್ನಾಟಕ ವಿದ್ಯುತ್ ನಿಯಂತ್ರಣ ಆಯೋಗದ (ಕೆಇಆರ್‌ಸಿ) ನಿಯಮಗಳು ಸ್ಮಾರ್ಟ್ ಮೀಟರ್‌ಗಳ ಬಳಕೆಯನ್ನು ಕಡ್ಡಾಯಗೊಳಿಸುವುದಿಲ್ಲ. ತಾತ್ಕಾಲಿಕ ಸಂಪರ್ಕಗಳಿಗೆ ಸ್ಮಾರ್ಟ್ ಮೀಟರ್‌ಗಳನ್ನು ಕಡ್ಡಾಯಗೊಳಿಸಬಹುದಾದರೂ, ಶಾಶ್ವತ ಮತ್ತು ಹೊಸ ಗ್ರಾಹಕರಿಗೆ ಅವುಗಳ ಅಳವಡಿಕೆ ಕಡ್ಡಾಯ ಮಾಡುವಂತಿಲ್ಲ ಎಂದು ಅವರು ಹೇಳಿದ್ದಾರೆ.
ಕೇಂದ್ರ ವಿದ್ಯುತ್ ಪ್ರಾಧಿಕಾರದ (ಸಿಇಎ) ನಿಯಮಗಳನ್ನು ಉಲ್ಲೇಖಿಸಿರುವ ಅವರು ಅಸ್ತಿತ್ವದಲ್ಲಿರುವ ಎಲ್ಲಾ ಮೀಟರ್‌ಗಳನ್ನು ಸ್ಮಾರ್ಟ್ ಮೀಟರ್‌ಗಳೊಂದಿಗೆ ಬದಲಾಯಿಸಿದ ನಂತರವೇ ಹೊಸ ಗ್ರಾಹಕರಿಗೆ ಸ್ಮಾರ್ಟ್ ಮೀಟರ್‌ಗಳನ್ನು ಕಡ್ಡಾಯಗೊಳಿಸಬಹುದು ಎಂದು ವಿವರಿಸಿದರು.
ಕೇಂದ್ರ ವಿದ್ಯುತ್ ಪ್ರಾಧಿಕಾರದ ನಿಯಮಗಳ ಅಡಿಯಲ್ಲಿಯೂ ಸಹ ಸ್ಮಾರ್ಟ್ ಮೀಟರ್‌ಗಳು ಕಡ್ಡಾಯವಲ್ಲ. ಕೆಟಿಪಿಪಿ ಕಾಯ್ದೆಯಡಿಯಲ್ಲಿ ಬಿಡ್ ಸಾಮರ್ಥ್ಯವನ್ನು ಟೆಂಡರ್‌ನಲ್ಲಿ ಉಲ್ಲೇಖಿಸಲಾಗಿಲ್ಲ. ಅದು 6,800 ಕೋಟಿ ರೂ ಆಗಬೇಕಿತ್ತು ಎಂದು ಅಶ್ವತ್ಥನಾರಾಯಣ ಹೇಳಿದ್ದಾರೆ.
ಕೆಟಿಪಿಪಿ ಕಾಯ್ದೆಯಡಿ ಅಗತ್ಯವಿರುವ ವಹಿವಾಟು 1,920 ಕೋಟಿ ರೂ ಆಗಿರಬೇಕು, ಆದರೆ ಟೆಂಡರ್ ತಿದ್ದುಪಡಿ ಒಪ್ಪಂದದ ಮೌಲ್ಯವನ್ನು ವಾರ್ಷಿಕ 107 ಕೋಟಿ ರೂ ಎಂದು ನಿಗದಿಪಡಿಸಲಾಗಿದೆ ಎಂದಿದ್ದಾರೆ.
ಕಪ್ಪುಪಟ್ಟಿಗೆ ಸೇರಿಸಲಾದ ಯಾವುದೇ ಕಂಪನಿಗೆ ಒಪ್ಪಂದವನ್ನು ನೀಡಬಾರದು ಎಂಬ ನಿಯಮದ ಹೊರತಾಗಿಯೂ, ಉತ್ತರ ಪ್ರದೇಶದಲ್ಲಿ ಕಪ್ಪುಪಟ್ಟಿಗೆ ಸೇರಿಸಲಾದ BCITS ಅನ್ನು ಇನ್ನೂ ಪರಿಗಣಿಸಲಾಗಿದೆ ಎಂದು ಅವರು ಆರೋಪಿಸಿದರು.
ಕಾಂಗ್ರೆಸ್ ಆಡಳಿತವಿರುವ ಹಿಮಾಚಲ ಪ್ರದೇಶ, ತೆಲಂಗಾಣ ಮತ್ತು ಕೇರಳದಂತಹ ರಾಜ್ಯಗಳಲ್ಲಿ ಕಡಿಮೆ ವೆಚ್ಚದಲ್ಲಿ ಸ್ಮಾರ್ಟ್ ಮೀಟರ್‌ಗಳನ್ನು ಅಳವಡಿಸಲಾಗಿದೆ ಎಂಬುದನ್ನು ಎತ್ತಿ ತೋರಿಸಿದ ಅವರು, "ಕರ್ನಾಟಕದಲ್ಲಿ, ಪ್ರತಿ ಮೀಟರ್‌ಗೆ 17,000 ರೂ ವೆಚ್ಚವಾಗುತ್ತದೆ, ಆದರೆ ಇತರ ರಾಜ್ಯಗಳಲ್ಲಿ ಪ್ರತಿ ಮೀಟರ್‌ಗೆ 7,740 ರೂ ವೆಚ್ಚವಾಗಿದೆ‘ ಎಂದು ಹೇಳಿದರು.
2023 ರಲ್ಲಿ ಬಿಹಾರದಲ್ಲಿ ಇದೇ ರೀತಿಯ ಹಗರಣದ ಆರೋಪದ ಮೇಲೆ ಐಎಎಸ್ ಅಧಿಕಾರಿ ಮತ್ತು ಸಚಿವರನ್ನು ಬಂಧಿಸಲಾಯಿತು ಎಂದು ನೆನಪಿಸಿಕೊಂಡ ನಾರಾಯಣ್, ಕರ್ನಾಟಕ ಸರ್ಕಾರವು ಪ್ರತಿ ಹಂತದಲ್ಲೂ ಕೆಟಿಪಿಪಿ ಕಾಯ್ದೆಯನ್ನು ಉಲ್ಲಂಘಿಸಿದೆ ಎಂದು ಆರೋಪಿಸಿದರು.
"ಇದು ಹಗಲು ದರೋಡೆ. (ರಾಜ್ಯ) ಸರ್ಕಾರವನ್ನು ಹೊಣೆಗಾರರನ್ನಾಗಿ ಮಾಡಬೇಕು. ಅವರು ಯಾವುದೇ ಕಾನೂನು ಬೆಂಬಲವಿಲ್ಲದೆ ಸ್ಮಾರ್ಟ್ ಮೀಟರ್‌ಗಳನ್ನು ಕಡ್ಡಾಯಗೊಳಿಸುತ್ತಿದ್ದಾರೆ" ಎಂದು ಅವರು ಆರೋಪಿಸಿದರು.
2024ರ ಸೆಪ್ಟೆಂಬರ್ 26 ರಂದು ಟೆಂಡರ್ ಕರೆಯಲಾಗಿತ್ತು. ಬೆಸ್ಕಾಂ ನಿರ್ದೇಶಕರ ಮಂಡಳಿಯ ಅನುಮೋದನೆಯೊಂದಿಗೆ 2024ರ ಡಿಸೆಂಬರ್ 23 ರಂದು ಕಡಿಮೆ ಬಿಡ್ ಸಲ್ಲಿಸಿದ ರಾಜಶ್ರೀ ಎಲೆಕ್ಟ್ರಿಕಲ್ಸ್‌ಗೆ ಗುತ್ತಿಗೆ ನೀಡಲಾಯಿತು.
ಏನಿದು ಸ್ಮಾರ್ಟ್ ಮೀಟರ್
ಅಧಿಕಾರಿಗಳ ಪ್ರಕಾರ, ಸ್ಮಾರ್ಟ್ ಮೀಟರ್ ಎನ್ನುವುದು ಎಲೆಕ್ಟ್ರಾನಿಕ್ ಸಾಧನವಾಗಿದ್ದು ಅದು ವಿದ್ಯುತ್ ಬಳಕೆ, ವೋಲ್ಟೇಜ್ ಮಟ್ಟಗಳು, ಲೋಡ್ ಮತ್ತು ಇತರ ಹಲವಾರು ತಾಂತ್ರಿಕ ನಿಯತಾಂಕಗ ( technical parameters) ಳಂತಹ ಡೇಟಾವನ್ನು ದಾಖಲಿಸುತ್ತದೆ. ಈ ಮಾಹಿತಿಯನ್ನು ನಿಯತಕಾಲಿಕವಾಗಿ ಸರ್ವರ್‌ಗೆ ರವಾನಿಸಲಾಗುತ್ತದೆ.