Lokayukta Raid: ಲಂಚ ಸ್ವೀಕರಿಸುತ್ತಿದ್ದಾಗಲೇ ಲೋಕಾಯುಕ್ತ ಬಲೆಗೆ ಬಿದ್ದ ರಾಜ್ಯ ಬಿಜೆಪಿ ಶಾಸಕನ ಪುತ್ರ!
Mar 03, 2023 09:30 AM IST
ಲೋಕಾಯುತ ದಾಳಿ
- ಕರ್ನಾಟಕ ಸಾಬೂನು ಹಾಗೂ ಮಾರ್ಜಕ ನಿಯಮಿತ (ಕೆಎಸ್‌ಡಿಎಲ್) ಅಧ್ಯಕ್ಷರಾಗಿರುವ ಬಿಜೆಪಿ ಶಾಸಕ ಕೆ. ಮಾಡಾಳ್ ವಿರೂಪಾಕ್ಷಪ್ಪ ಪುತ್ರ ಹಾಗೂ ಕೆಎಎಸ್ ಅಧಿಕಾರಿ ಪ್ರಶಾಂತ್ ಮಾಡಾಳ್, 40 ಲಕ್ಷ ರೂಪಾಯಿ ಲಂಚ ಸ್ವೀಕರಿಸುವಾಗಲೇ ಲೋಕಾಯುಕ್ತ ಪೊಲೀಸರ ಬಲೆಗೆ ಬಿದ್ದಿದ್ದಾರೆ. ಆರೋಪಿ ಪ್ರಶಾಂತ್ ಬೆಂಗಳೂರು ಜಲಮಂಡಳಿಯ ಮುಖ್ಯ ಲೆಕ್ಕಪರಿಶೋಧಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ.
ಬೆಂಗಳೂರು: ಎಸಿಬಿ ರದ್ದುಗೊಳಿಸಿ ಲೋಕಾಯುಕ್ತಕ್ಕೆ ಮರುಜನ್ಮ ನೀಡಿದ ಬಳಿಕ ನಡೆದ ದೊಡ್ಡ ಕಾರ್ಯಾಚರಣೆಯೊಂದರಲ್ಲಿ, ರಾಜ್ಯ ಬಿಜೆಪಿ ಶಾಸಕನ ಪುತ್ರ ಹಾಗೂ ಕೆಎಎಸ್ ಅಧಿಕಾರಿಯೋರ್ವ ಲಂಚ ಸ್ವೀಕರಿಸುತ್ತಿದ್ದಾಗಲೇ ಅಧಿಕಾರಗಳ ಬಲೆಗೆ ಬಿದ್ದ ಘಟನೆ ನಡೆದಿದೆ.
ಕರ್ನಾಟಕ ಸಾಬೂನು ಹಾಗೂ ಮಾರ್ಜಕ ನಿಯಮಿತ (ಕೆಎಸ್‌ಡಿಎಲ್) ಅಧ್ಯಕ್ಷರಾಗಿರುವ ಬಿಜೆಪಿ ಶಾಸಕ ಕೆ. ಮಾಡಾಳ್ ವಿರೂಪಾಕ್ಷಪ್ಪ ಪುತ್ರ ಹಾಗೂ ಕೆಎಎಸ್ ಅಧಿಕಾರಿ ಪ್ರಶಾಂತ್ ಮಾಡಾಳ್, 40 ಲಕ್ಷ ರೂಪಾಯಿ ಲಂಚ ಸ್ವೀಕರಿಸುವಾಗಲೇ ಲೋಕಾಯುಕ್ತ ಪೊಲೀಸರ ಬಲೆಗೆ ಬಿದ್ದಿದ್ದಾರೆ.
ಆರೋಪಿ ಪ್ರಶಾಂತ್ ಮಾಡಾಳ್ ಬೆಂಗಳೂರು ಜಲಮಂಡಳಿಯ ಮುಖ್ಯ ಲೆಕ್ಕಪರಿಶೋಧಕರಾಗಿ ಸೇವೆ ಸಲ್ಲಿಸುತ್ತಿದ್ದು, ಕೆಎಸ್‌ಡಿಎಲ್‌ಗೆ ಕಚ್ಚಾವಸ್ತು ಪೂರೈಕೆ ಟೆಂಡರ್ ನೀಡುವ ಸಂಬಂಧ ಲಂಚ ಪಡೆಯುತ್ತಿದ್ದಾಗ ಲೋಕಾಯಕ್ತ ಪೊಲೀಸರು ದಾಳಿ ಮಾಡಿದ್ದಾರೆ ಎನ್ನಲಾಗಿದೆ.
ಗುತ್ತಿಗೆದಾರರಿಗೆ ಮೊದಲು 80 ಲಕ್ಷ ರೂ. ಬೇಡಿಕೆ ಇರಿಸಲಾಗಿತ್ತು. ಆದರೆ ಅಂತಿಮವಾಗಿ 40 ಲಕ್ಷ ರೂ.ಗಳಿಗೆ ಒಪ್ಪಂದ ಏರ್ಪಟ್ಟಿತ್ತು. ಕ್ರಸೆಂಟ್ ರಸ್ತೆಯಲ್ಲಿರುವ ಶಾಸಕ ವಿರೂಪಾಕ್ಷಪ್ಪ ಅವರಿಗೆ ಸೇರಿದ ಕಚೇರಿಯಲ್ಲಿ, ನಿನ್ನೆ(ಮಾ.೦೨-ಗುರುವಾರ) ಸಾಯಂಕಾಲ ಗುತ್ತಿಗೆದಾರರಿಂದ ಪ್ರಶಾಂತ್ 40 ಲಕ್ಷ ರೂ. ಲಂಚ ಸ್ಚೀಕರಿಸುವ ವೇಳೆ, ಲೋಕಾಯುಕ್ತ ಎಸ್‌ಪಿ ಕೆ.ವಿ ಅಶೋಕ್ ನೇತೃತ್ವದ ತಂಡ ದಾಳಿ ಮಾಡಿ ಬಂಧಿಸಿದೆ.
ಕೆಎಸ್‌ಡಿಎಲ್ ಅಧ್ಯಕ್ಷರಾಗಿರುವ ತಮ್ಮ ತಂದೆ ಮಾಡಾಳ್ ವಿರೂಪಾಕ್ಷಪ್ಪ ಅವರ ಪರವಾಗಿ ಪ್ರಶಾಂತ್ ಲಂಚ ಸ್ವೀಕರಿಸಿದ್ದರು ಎಂದು ಲೋಕಾಯುಕ್ತ ಪೊಲೀಸರು ಮಾಹಿತಿ ನೀಡಿದ್ದಾರೆ. ಅಲ್ಲದೇ ದಾಳಿಯ ಸಂದರ್ಭದಲ್ಲಿ ಕಚೇರಿಯಲ್ಲಿ 2.2 ಕೋಟಿ ರೂ. ಅನಧಿಕೃತ ಹಣ ಕೂಡ ಪತ್ತೆಯಾಗಿದೆ ಎನ್ನಲಾಗಿದೆ.
ಕೆಎಎಸ್ ಅಧಿಕಾರಿ ಪ್ರಶಾಂತ್ ಅವರ ಬ್ಯಾಂಕ್ ಖಾತೆಗೆ ಗುರುವಾರ 94 ಲಕ್ಷ ರೂ. ಜಮಾವಣೆಯಾಗಿದ್ದು, ಈ ಹಣವನ್ನೂ ಕೂಡ ಲೋಕಾಯುಕ್ತ ಪೊಲೀಸರು ಜಪ್ತಿ ಮಾಡಿಕೊಂಡಿದ್ದಾರೆ. ಇಷ್ಟೇ ಅಲ್ಲದೇ ಆರೋಪಿಗೆ ಸೇರಿದ ಡಾಲರ್ಸ್ ಕಾಲೋನಿಯ ನಿವಾಸದಲ್ಲಿ ಶೋಧ ಕಾರ್ಯಾಚರಣೆ ನಡೆಸಿ, ಮಹತ್ವದ ದಾಖಲೆಗಳನ್ನು ಜಪ್ತಿ ಮಾಡಲಾಗಿದೆ ಎಂದು ಮೂಲಗಳು ಖಚಿತಪಡಿಸಿವೆ.
94 ಲಕ್ಷ ರೂ.ಗಳನ್ನು ಬೇರೆಬೇರೆ ವ್ಯಕ್ತಿಗಳು ಆರೋಪಿತರ ಬ್ಯಾಂಕ್ ಖಾತೆಗೆ ಜಮಾವಣೆ ಮಾಡಿದ್ದಾರೆ. ಯಾವ ಉದ್ದೇಶಕ್ಕೆ ಈ ಹಣ ಕಳುಹಿಸಲಾಗಿದೆ ಎಂಬುದರ ಕುರಿತು ತನಿಖೆ ನಡೆಸುತ್ತೇವೆ. ಅದೇ ರೀತಿ ಕಚೇರಿಯಲ್ಲಿ ದೊರೆತ 2.2 ಕೋಟಿ ರೂ. ಅನಧಿಕೃತ ಹಣದ ಮೂಲದ ಬಗ್ಗೆಯೂ ತನಿಖೆ ಮಾಡುತ್ತೇವೆ. ದಾಖಲೆಗಳ ಪರಿಶೀಲನೆ ವೇಳೆ ಅಕ್ರಮ ಆದಾಯ ಗಳಿಸಿರುವುದು ಕಂಡು ಬಂದರೆ, ಪ್ರತ್ಯೇಕ ಪ್ರಕರಣ ದಾಖಲಿಸಿ ಕ್ರಮ ಕೈಗೊಳ್ಳಲಾಗುವುದು ಎಂದು ಲೋಕಾಯುಕ್ತ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಇನ್ನು ಪುತ್ರನ ಬಂಧನದ ಬೆನ್ನಲ್ಲೇ ಚನ್ನಗಿರಿ ಶಾಸಕ ಮಾಡಾಳ್ ವಿರೂಪಾಕ್ಷಪ್ಪ ಸಂಕಷ್ಟಕ್ಕೆ ಸಿಲುಕಿದ್ದಾರೆ. ತಮಗೂ ಈ ತನಿಖೆ ಉರುಳು ಸುತ್ತಿಕೊಳ್ಳುವ ಸಾಧ್ಯತೆ ಇದೆ ಎಂಬ ಆತಂಕದಲ್ಲಿರುವ ವಿರುಪಾಕ್ಷಪ್ಪ, ತಮ್ಮ ರಾಜಕೀಯ ಭವಿಷ್ಯದ ಬಗ್ಗೆಯೂ ಚಿಂತೆ ಮಾಡುತ್ತಿದ್ದಾರೆ. ಅಲ್ಲದೇ ತಮ್ಮ ಪುತ್ರ ಪ್ರಶಾಂತ್ ಅವರನ್ನು ಪ್ರಕರಣದ ಮೊದಲ ಆರೋಪಿಯನ್ನಾಗಿ ಪರಿಗಣಿಸಿರುವುದು, ವಿರುಪಾಕ್ಷಪ್ಪ ಅವರನ್ನು ಚಿಂತೆಗೀಡು ಮಾಡಿದೆ.
ಆರೋಪಿ ಲಂಚ ಪಡೆಯುತ್ತಿದ್ದ ಸಂದರ್ಭದಲ್ಲೇ ಲೋಕಾಯುಕ್ತ ಪೊಲೀಸರ ಬಲೆಗೆ ಬಿದ್ದಿದ್ದು, ಈ ಕುರಿತು ಪ್ರಬಲ ಸಾಕ್ಷ್ಯಾಧಾರಗಳು ಲಭ್ಯ ಒವೆ. ಅಲ್ಲದೇ ಈ ಪ್ರಕರಣದಲ್ಲಿ ಇನ್ನೂ ಹಲವು ಭಾಗಿಯಾಗಿರುವ ಸಾಧ್ಯತೆ ಇದೆ ಎಂದು ಅನುಮಾನ ವ್ಯಕ್ತಪಡಿಸಿರುವ ಲೋಕಾಯುಕ್ತ ಪೊಲೀಸರು, ಪ್ರಕರಣದ ತನಿಖೆಯನ್ನು ನಡೆಸುವುದಾಗಿ ಸ್ಪಷ್ಟಪಡಿಸಿದ್ದಾರೆ.
ಒಟ್ಟಿನಲ್ಲಿ ಲೋಕಾಯುಕ್ತಕ್ಕೆ ಮರುಜನ್ಮ ನೀಡಿದ ಬಳಿಕ, ರಾಜ್ಯದಲ್ಲಿ ಭ್ರಷ್ಟರ ಬೇಟೆ ಆರಂಭವಾಗಿರುವುದು ರಾಜ್ಯದಲ್ಲಿ ತೀವ್ರ ಚರ್ಚೆಗೆ ಕಾರಣವಾಗಿದೆ ಎಂದು ಹೇಳಬಹುದು.
ವಿಭಾಗ