logo
ಕನ್ನಡ ಸುದ್ದಿ  /  ಕರ್ನಾಟಕ  /  Anna Bhagya Scheme: ಸಿಎಂ ಸಿದ್ದರಾಮಯ್ಯ ಬಜೆಟ್‌ನಲ್ಲಿ ಹಸಿದವರಿಗೆ ಅನ್ನ, ಯೋಜನೆಗೆ ಬೇಕು ಎಷ್ಟು ಹಣ, ಏನಾಗಬಹುದು ಪರಿಣಾಮ, ಇಲ್ಲಿದೆ ವಿವರ

Anna Bhagya Scheme: ಸಿಎಂ ಸಿದ್ದರಾಮಯ್ಯ ಬಜೆಟ್‌ನಲ್ಲಿ ಹಸಿದವರಿಗೆ ಅನ್ನ, ಯೋಜನೆಗೆ ಬೇಕು ಎಷ್ಟು ಹಣ, ಏನಾಗಬಹುದು ಪರಿಣಾಮ, ಇಲ್ಲಿದೆ ವಿವರ

Praveen Chandra B HT Kannada

Jul 05, 2023 05:30 PM IST

google News

ಕರ್ನಾಟಕ ಬಜೆಟ್‌ ಕಾಂಗ್ರೆಸ್‌ ಗ್ಯಾರಂಟಿ ಅನ್ನಭಾಗ್ಯ ಯೋಜನೆ ವಿವರ

    • Anna Bhagya Scheme Karnataka: ಹಸಿದವರಿಗೆ ಅನ್ನ ನೀಡಿದರೆ ಒಳ್ಳೆಯದೇ ಆಗುತ್ತದೆ ಎನ್ನುವುದು ನಂಬಿಕೆ. ಅನ್ನಭಾಗ್ಯ ಯೋಜನೆಯ ಮೂಲಕ ರಾಜ್ಯದ ಬಡವರಿಗೆ ಉಚಿತವಾಗಿ ಅಕ್ಕಿ/ಹಣ ನೀಡಿದರೆ ರಾಜ್ಯದ ಬೊಕ್ಕಸಕ್ಕೆ ಹೊರೆಯಾಗಬಹುದೇ? ಚುನಾವಣೆಯಲ್ಲಿ ಗೆಲ್ಲಲು ಬಯಸುವ ಇತರೆ ರಾಜ್ಯಗಳಿಗೂ ಈ ಯೋಜನೆ ಆಕರ್ಷಕವಾಗಬಲ್ಲದೇ? ಕರ್ನಾಟಕ ಬಜೆಟ್‌ ಹಿನ್ನೆಲೆಯಲ್ಲಿ ಇಲ್ಲಿದೆ ವಿಶ್ಲೇಷಣೆ.
ಕರ್ನಾಟಕ ಬಜೆಟ್‌ ಕಾಂಗ್ರೆಸ್‌ ಗ್ಯಾರಂಟಿ ಅನ್ನಭಾಗ್ಯ ಯೋಜನೆ ವಿವರ
ಕರ್ನಾಟಕ ಬಜೆಟ್‌ ಕಾಂಗ್ರೆಸ್‌ ಗ್ಯಾರಂಟಿ ಅನ್ನಭಾಗ್ಯ ಯೋಜನೆ ವಿವರ

ಬೆಂಗಳೂರು: ಕರ್ನಾಟಕ ಕಾಂಗ್ರೆಸ್‌ ಸರಕಾರದ ಐದು ಚುನಾವಣಾ ಗ್ಯಾರಂಟಿ ಘೋಷಣೆಗಳಲ್ಲಿ ಒಂದಾಗಿರುವ ಅನ್ನಭಾಗ್ಯವು ಈ ಬಾರಿಯ ರಾಜ್ಯ ಬಜೆಟ್‌ನಲ್ಲಿ ಪ್ರಮುಖ ವಿಷಯವಾಗಲಿದೆ. ಈಗಾಗಲೇ ರಾಜ್ಯಪಾಲರ ಭಾಷಣದಲ್ಲಿ ಈ ಕುರಿತು ಸ್ಪಷ್ಟವಾಗಿ ಹೇಳಲಾಗಿತ್ತು. "ಪ್ರತಿತಿಂಗಳು ರಾಜ್ಯದ ಬಡತನ ರೇಖೆಗಿಂತ ಕೆಳಗಿರುವ ಪುತಿ ಕುಟುಂಬದ ಪ್ರತಿ ಸದಸ್ಯರಿಗೆ ಹೆಚ್ಚುವರಿಯಾಗಿ 5 ಕೆ.ಜಿ ಅಕ್ಕಿಯನ್ನು ನಾವು ಕೊಡಲು ಬದ್ಧರಾಗಿದ್ದೇವೆ" ಎಂದು ಹೇಳಿದ್ದರು. ಆದರೆ, ಅಕ್ಕಿಯ ಲಭ್ಯತೆ ಇಲ್ಲದೆ ಇರುವುದರಿಂದ ಸದ್ಯ ಬಡತನ ರೇಖೆಗಿಂತ ಕೆಳಗೆ ಇರುವ ಪ್ರತಿ ಕುಟುಂಬದ ಪ್ರತಿ ಸದಸ್ಯರಿಗೆ ಪ್ರತಿ ಕೆ.ಜಿ. ಅಕ್ಕಿಗೆ ಬದಲಿಯಾಗಿ ರೂ.34 ರಂತ ಹಣವನ್ನು ಅವರವರ ಬ್ಯಾಂಕ್‌ ಖಾತೆಗಳಿಗೆ ನೇರ ನಗದು ವರ್ಗಾವಣೆ (ಡಿಬಿಟಿ) ಮಾಡುವ ನಿರ್ಧಾರ ಕೈಗೊಳ್ಳಲಾಗಿದೆ.

ಎಷ್ಟು ಅಕ್ಕಿ ಬೇಕು?

ಅನ್ನಭಾಗ್ಯ ಯೋಜನೆ ಯಶಸ್ವಿಯಾಗಬೇಕಿದ್ದರೆ, ಕಾಂಗ್ರೆಸ್‌ ಸರಕಾರ ಹೇಳಿದಂತೆ 5+5 ಕೆಜಿ ಅಕ್ಕಿ ನೀಡಬೇಕಿದ್ದರೆ ಹೆಚ್ಚುವರಿ ಅಕ್ಕಿ ಅಗತ್ಯವಿರುತ್ತದೆ. ಅಂದರೆ, ಬಿಪಿಎಲ್‌ ಕುಟುಂಬದ ಮನೆಯ ಪ್ರತಿ ಸದಸ್ಯರಿಗೆ ಹೆಚ್ಚುವರಿ ಐದು ಕೆ.ಜಿ. ಅಕ್ಕಿ ನೀಡಲು ಕರ್ನಾಟಕಕ್ಕೆ ಪ್ರತಿತಿಂಗಳು 2.29 ಲಕ್ಷ ಟನ್‌ ಅಕ್ಕಿಯ ಅಗತ್ಯವಿರುತ್ತದೆ. ಈಗ ಅಕ್ಕಿ ದುಬಾರಿ, ಇನ್ನು ಮೂರು ತಿಂಗಳು ಕಳೆದ ಬಳಿಕ ಅಕ್ಕಿ ದರ ಸ್ವಲ್ಪ ಕಡಿಮೆಯಾಗಬಹುದು, ಆಗ ಖರೀದಿಸುವುದು ಸೂಕ್ತ ಎಂಬ ಅಭಿಪ್ರಾಯವೂ ಸರಕಾರದ ಮುಂದಿದೆ ಎಂದು ಮೂಲಗಳು ತಿಳಿಸಿವೆ.

ಯೋಜನೆಗೆ ಎಷ್ಟು ಹಣ ಬೇಕು?

ಈ ಯೋಜನೆಯನ್ನು ಜಾರಿಗೆ ತರಲು ತಿಂಗಳಿಗೆ ಅಂದಾಜು 840 ಕೋಟಿ ರೂ. ಅಗತ್ಯವಿರುತ್ತದೆ ಎಂದು ವರದಿಗಳು ತಿಳಿಸಿವೆ. ಎಲ್ಲಾದರೂ ತುಸು ಡಿಸ್ಕೌಂಟ್‌ ದೊರಕಿದರೆ ತಿಂಗಳ ಖರ್ಚು 750-800 ಕೋಟಿ ರೂ. ನಡುವೆ ಇರಬಹುದು. ತಿಂಗಳಿಗೆ 840 ರೂಪಾಯಿ ಎಂದುಕೊಂಡರೂ ವರ್ಷಕ್ಕೆ 10080 ಕೋಟಿ ರೂಪಾಯಿ ಅನ್ನ ಭಾಗ್ಯಕ್ಕೆ ಬೇಕಾಗಬಹುದು.

ಹಸಿದವರಿಗೆ ಅನ್ನ ನೀಡುವುದು ಸರಕಾರದ ಕರ್ತವ್ಯ

ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್‌ ಸರಕಾರವು ಅನ್ನಭಾಗ್ಯ ಯೋಜನೆಯ ಕುರಿತು ಸಾಕಷ್ಟು ಭರವಸೆ ಹೊಂದಿದೆ. ಜತೆಗೆ, ಹಸಿದವರಿಗೆ ಅನ್ನ ನೀಡುವುದು ತಮ್ಮ ಕರ್ತವ್ಯ ಎಂದು ತಿಳಿದಿದೆ. ಈ ಹಿಂದೆಯೂ ಸಿದ್ದರಾಮಯ್ಯ ಅನ್ನಭಾಗ್ಯ, ಇಂದಿರಾ ಕ್ಯಾಂಟಿನ್‌ ಇತ್ಯಾದಿಗಳನ್ನು ಜಾರಿಗೊಳಿಸಿದ್ದರು. ಮೊನ್ನೆ ಆರಂಭವಾದ ಬಜೆಟ್‌ ಅಧಿವೇಶನ ಭಾಷಣದಲ್ಲಿ ರಾಜ್ಯಪಾಲರು ಸರಕಾರದ ಧ್ವನಿಯಾಗಿ ಇದೇ ಮಾತನ್ನು ಹೇಳಿದ್ದರು. "ಹಸಿದವರಿಗೆ ಅನ್ನ ನೀಡದ ಸರ್ಕಾರ ಅತ್ಯಂತ ಜನದ್ರೋಹಿ ಸರ್ಕಾರ ಎಂದು ಕರೆಸಿಕೊಳ್ಳುತ್ತದೆ. ಬಡವರು, ದುಡಿಯುವ ವರ್ಗದ ಜನರು, ವಲಸೆ ಕಾರ್ಮಿಕರು, ನಿರಾಶ್ರಿತರು ಮುಂತಾದವರ ಹಸಿವನ್ನು ತಣಿಸಲು ಹಿಂದೆ ಇಂದಿರಾ ಕ್ಯಾಂಟೀನ್‌ಗಳನ್ನು ಸ್ಥಾಪಿಸಲಾಗಿತ್ತು. ಈ ಕ್ಯಾಂಟೀನ್‌ಗಳು ಲಕ್ಷಾಂತರ ಜನರ ಹಸಿದ ಹೊಟ್ಟೆ ತುಂಬಿಸಿ ತೃಪ್ತಿ ನೀಡಿವೆ. ಇವುಗಳನ್ನು ಇನ್ನೂ ಸಮರ್ಥವಾಗಿ ನಾವು ನಡೆಸುತ್ತೇವೆ. ಅನ್ನಭಾಗ್ಯ ಯೋಜನೆ ಮತ್ತು ಇಂದಿರಾ ಕ್ಯಾಂಟೀನ್‌ಗಳ ಮೂಲಕ ನನ್ನ ಸರ್ಕಾರವು ರಾಜ್ಯವನ್ನು ಹಸಿವು ಮುಕ್ತ ಮಾಡಲಿದೆ" ಎಂದು ಅವರು ಹೇಳಿದ್ದರು.

ಸವಾಲುಗಳೇನು?

ಅವಶ್ಯಕತೆ ಇರುವಷ್ಟು ಅಕ್ಕಿಯನ್ನು ರಾಜ್ಯಕ್ಕೆ ತರುವುದು ರಾಜ್ಯ ಸರಕಾರದ ಮುಂದಿರುವ ಪ್ರಮುಖ ಸವಾಲು. ಇದಕ್ಕಾಗಿ ಇತರೆ ರಾಜ್ಯಗಳಿಂದ ಖರೀದಿಸಲು ಸರಕಾರ ಸಿದ್ಧವಿದೆ ಎಂದು ಈ ಹಿಂದೆ ಮುಖ್ಯಮಂತ್ರಿಗಳು ಹೇಳಿದ್ದಾರೆ. ಸತತ ಪ್ರಯತ್ನ ಮಾಡಿ ರಾಜ್ಯಕ್ಕೆ ಅಕ್ಕಿ ತರುವುದು ಸರಕಾರದ ಮುಂದಿರುವ ಸವಾಲು. ಜತೆಗೆ, ಮುಂದಿನ ದಿನಗಳಲ್ಲಿ ಈ ರೀತಿ ಅಕ್ಕಿ ಪೂರೈಕೆ ನಿರಂತರವಾಗಿರುವಂತೆ ನೋಡಿಕೊಳ್ಳುವುದು ಪ್ರಮುಖ ಸವಾಲಾಗಿದೆ. ಇಲ್ಲವಾದರೆ ರೇಷನ್‌ ಅಂಗಡಿಗಳಲ್ಲಿ "ಈ ಬಾರಿ ಅಕ್ಕಿ ಬಂದಿಲ್ಲ, ಇಷ್ಟೇ ಕೆಜಿ" ಎಂದೆಲ್ಲ ಡೈಲಾಗ್‌ಗಳನ್ನು ಬಿಪಿಎಲ್‌ ಕಾರ್ಡ್‌ದಾರರು ಕೇಳಬೇಕಾಗಬಹುದು. ಈ ಬಾರಿಯ ಬಜೆಟ್‌ನಲ್ಲಿ ಅನ್ನಭಾಗ್ಯಕ್ಕಾಗಿ ದೊಡ್ಡಮೊತ್ತವನ್ನು ಸರಕಾರ ಇಡಬೇಕಾಗುತ್ತದೆ. ಅನ್ನಭಾಗ್ಯದಿಂದ ಬೊಕ್ಕಸಕ್ಕೆ ಆಗುವ ಹೊರೆಯನ್ನು ತಪ್ಪಿಸಲು ಸರಕಾರದ ಆದಾಯ ಹೆಚ್ಚಿಸಲು ಸರಕಾರ ಕ್ರಮ ಕೈಗೊಳ್ಳಬೇಕಾಗುತ್ತದೆ. ಇದೇ ಸಮಯದಲ್ಲಿ ಸರಕಾರದ ಸಾಲ ಹೆಚ್ಚಾಗದಂತೆ ನೋಡಿಕೊಳ್ಳುವ ಜವಾಬ್ದಾರಿಯೂ ಇರುತ್ತದೆ.

ಅನ್ನಭಾಗ್ಯ ಪರಿಣಾಮ

ಉಚಿತ ಯೋಜನೆಗಳಿಂದ ಜನರು ಸೋಮಾರಿಗಳಾಗಬಹುದು, ಆತ್ಮವಿಶ್ವಾಸ ಕಡಿಮೆಯಾಗಬಹುದು ಎಂಬ ವಾದಗಳನ್ನು ಪಕ್ಕಕ್ಕಿಟ್ಟು ನೋಡಿದರೆ ರಾಜ್ಯದಲ್ಲಿ ತಮ್ಮ ಹೊಟ್ಟೆ ತುಂಬಿಸಿಕೊಳ್ಳಲು ಕಷ್ಟ ಪಡುವವರಿಗೆ ಇದು ನೆರವಾಗಬಹುದು. ದಿನದ ಮೂರು ಹೊತ್ತು ಊಟಕ್ಕೆ ಆಗುವಷ್ಟು ಆದಾಯ ಗಳಿಸಲಾಗದವರು ಇದರ ಪ್ರಯೋಜನ ಪಡೆಯಬಹುದು. ಜತೆಗೆ, ಮನೆಯಲ್ಲಿ ಮಕ್ಕಳು, ಕುಟುಂಬದ ಸದಸ್ಯರ ಹೊಟ್ಟೆ ತುಂಬಿಸುವುದೇ ದೊಡ್ಡ ಸವಾಲು ಎಂದು ಕಷ್ಟಪಡುವರು ಇದರಿಂದ ಪ್ರಯೋಜನ ಪಡೆಯಬಹುದು.

ಇದೇ ಸಮಯದಲ್ಲಿ ಕುಟುಂಬದ ಸದಸ್ಯರು ಉತ್ತಮ ಸಂಪಾದನೆ ಹೊಂದಿದ್ದರೂ ಬಿಪಿಎಲ್‌ ಕಾರ್ಡ್‌ ಹೊಂದಿರುವವರಿಗೆ ಕಡಿಮೆಯೇನಿಲ್ಲ. ಇಂತವರು ಈ ಅಕ್ಕಿಯನ್ನು ಮಾರಾಟ ಮಾಡಿ ಹಣ ಸಂಪಾದಿಸಬಹುದು. ಸರಕಾರದ ಯೋಜನೆಯು ಅರ್ಹರಿಗಿಂತ ಅನರ್ಹರ ಪಾಲಾಗುವ ಸಾಧ್ಯತೆಯೂ ಹೆಚ್ಚಿರುತ್ತದೆ.

ಈ ಯೋಜನೆಗೆ ಸಾಕಾಗುವಷ್ಟು ಅಕ್ಕಿಯ ಲಭ್ಯತೆ ರಾಜ್ಯದಲ್ಲಿ ಇಲ್ಲದೆ ಇರುವುದು ಸವಾಲು ಎಂದು ಅನ್ನ ಭಾಗ್ಯದ ಕುರಿತು ಈ ಹಿಂದೆ ನಡೆದ ಅಧ್ಯಯನವೊಂದು ತಿಳಿಸಿತ್ತು. (EPRA International Journal of Economic and Business Review Volume - 6, Issue- 12, December 2018 .) ಹೀಗಿದ್ದರೂ ಕರ್ನಾಟಕದಲ್ಲಿ ಈ ಹಿಂದೆಯೇ ಅನ್ನಭಾಗ್ಯ ಎಂಬ ಯೋಜನೆ ಯಶಸ್ವಿಯಾಗಿದೆ. ಜತೆಗೆ, ಸಾಕಷ್ಟು ಹಣಕಾಸು ಸಂಪನ್ಮೂಲ ಲಭ್ಯತೆ ಇಲ್ಲದೆ ಇರುವುದು ಮತ್ತು ಅಕ್ಕಿಯ ಕೊರತೆ ಈ ಯೋಜನೆಗೆ ಇರುವ ಸವಾಲು. ಜತೆಗೆ, ಜನರಿಗೆ ಜನರಿಗೆ ಗುಣಮಟ್ಟದ ಅಕ್ಕಿ ನೀಡುವ ಸವಾಲು ಕೂಡ ಸರಕಾರದ ಮುಂದಿದೆ ಎಂದು ಆ ಸಂದರ್ಭದಲ್ಲಿ ಈ ಅಧ್ಯಯನ ವರದಿಯಲ್ಲಿ ತಿಳಿಸಿತ್ತು. ಈ ವಿಷಯಗಳು ಕಾಂಗ್ರೆಸ್‌ ಸರಕಾರದ ಈ ಅವಧಿಗೂ ಅನ್ವಯವಾಗುವಂತೆ ಇದೆ.

ಕಾಂಗ್ರೆಸ್‌ ಸರಕಾರದ ಹಸಿದವರಿಗೆ ಅಕ್ಕಿ ನೀಡುವ ಅನ್ನ ಭಾಗ್ಯ ಯೋಜನೆಯು ಅವಶ್ಯಕತೆ ಇರುವವರಿಗೆ ನಿಜಕ್ಕೂ ಪ್ರಯೋಜನಕಾರಿ. ಇದೇ ಸಮಯದಲ್ಲಿ ಜನರಿಗೆ ಅನ್ನ ಸಂಪಾದನೆಯ ದಾರಿಗೂ ಬಜೆಟ್‌ನಲ್ಲಿ ಒತ್ತು ನೀಡಲಿ. ಬಡವರ ಮಕ್ಕಳ ಶಿಕ್ಷಣ, ಕೌಶಲ ಕಲಿಕೆ ಇತ್ಯಾದಿಗಳಿಗೆ ಉತ್ತೇಜನ ನೀಡುವ ಮೂಲಕ ಅನ್ನದ ದಾರಿ ತೋರಿಸುವ ಯೋಜನೆಗಳಿಗೂ ಬಜೆಟ್‌ನಲ್ಲಿ ಹೆಚ್ಚಿನ ಒತ್ತು ದೊರಕುವ ನಿರೀಕ್ಷೆಯಲ್ಲಿರೋಣ.

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ