Karnataka Budget 2023: ಮದ್ಯಪ್ರಿಯರಿಗೆ ಶಾಕ್ ಕೊಟ್ಟ ಸಿದ್ದರಾಮಯ್ಯ; ಕರ್ನಾಟಕ ಬಜೆಟ್‌ನಲ್ಲಿ ಅಬಕಾರಿ ಸುಂಕ ಹೆಚ್ಚಳ, ಎಷ್ಟು ಇಲ್ಲಿದೆ ವಿವರ
Jul 07, 2023 01:26 PM IST
ಮದ್ಯಪ್ರಿಯರಿಗೆ ಶಾಕ್ ಕೊಟ್ಟ ಮುಖ್ಯಮಂತ್ರಿ ಸಿದ್ದರಾಮಯ್ಯ
Karnataka Budget 2023: ಕರ್ನಾಟಕ ಬಜೆಟ್‌ನಲ್ಲಿ ನಿರೀಕ್ಷೆಯಂತೆ ಈ ಸಲವೂ ಮದ್ಯಪ್ರಿಯರಿಗೆ ಆಘಾತವೇ ಸಿಕ್ಕಿದೆ. ಮದ್ಯದ ಮೇಲಿನ ಅಬಕಾರಿ ಸುಂಕ ಹೆಚ್ಚಳವಾಗಿದೆ. ಯಾವಪ್ರಮಾಣದಲ್ಲಿ ಎಂಬುದರ ವಿವರ ಇಲ್ಲಿದೆ ನೋಡಿ
ಬೆಂಗಳೂರು: ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮದ್ಯ ಪ್ರಿಯರಿಗೆ ಶಾಕ್ ನೀಡಿದ್ದು, ಅಬಕಾರಿ ಸುಂಕ ಶೇಕಡ 10 ರಷ್ಟು ಹೆಚ್ಚಳ ಮಾಡುತ್ತಿರುವುದಾಗಿ ಘೋಷಿಸಿದ್ದಾರೆ.
ವಿವಿಧ ಜನಪ್ರಿಯ ಯೋಜನೆಗಳ, ಗ್ಯಾರೆಂಟಿ ಯೋಜನೆಗಳಿಗೆ ಹಣಕಾಸು ಹೊಂದಿಸುವ ಸಲುವಾಗಿ ಆದಾಯ ಹೆಚ್ಚಿಸಬೇಕಾದ ಅನಿವಾರ್ಯತೆ ಕಾಂಗ್ರೆಸ್ ಸರ್ಕಾರದ್ದು. ಇದರ ಪರಿಣಾಮವಾಗಿ ನಿರೀಕ್ಷೆಯಂತೆಯೇ ಮದ್ಯದ ಮೇಲಿನ ಅಬಕಾರಿ ಸುಂಕವನ್ನು ಹೆಚ್ಚಿಸಿದೆ.
ಅಬಕಾರಿ ಸುಂಕ ಹೆಚ್ಚಳ ಬಹುತೇಕ ಕೂಡಲೇ ಜಾರಿಗೆ ಬರಲಿದೆ. ಬಜೆಟ್ ಪ್ರತಿಯಲ್ಲಿ ಕೊಟ್ಟಿರುವ ಪಟ್ಟಿಯ ಪ್ರಕಾರ, ಮದ್ಯದ ರಟ್ಟಿನ ಪೆಟ್ಟಿಗೆಯ ದರಗಳ ಅಬಕಾರಿ ಸುಂಕ ಹೆಚ್ಚಳದ ವಿವರ ಹೀಗಿದೆ.
ಮದ್ಯದ ಪೆಟ್ಟಿಗೆಯ ದರಗಳ ಅಬಕಾರಿ ಸುಂಕ ಹೆಚ್ಚಳ
ಪ್ರತಿ ರಟ್ಟಿನ ಪೆಟ್ಟಿಗೆಯ ಬೆಲೆ 450 ರೂಪಾಯಿ ತನಕ ಇದ್ದರೆ ಅದರ ಈಗಿನ ಅಬಕಾರಿ ಸುಂಕ 179 ರೂಪಾಯಿ ಇದೆ. ಈ ಸುಂಕ 215 ರೂಪಾಯಿ ಆಗಲಿದೆ. ಇದೇ ರೀತಿ, 450ರಿಂದ 499 ರೂಪಾಯಿ ತನಕದ ಮೌಲ್ಯದ ಪೆಟ್ಟಿಗೆ ಮೇಲಿನ ಅಬಕಾರಿ ಸುಂಕ ಈಗ 245 ರೂಪಾಯಿ ಇರುವಂಥದ್ದು 294 ರೂಪಾಯಿ ಆಗಲಿದೆ. ಅದೇ ರೀತಿ 500 ರೂಪಾಯಿಯಿಂದ 549 ರೂಪಾಯಿ ತನಕದ ಪೆಟ್ಟಿಗೆಯ ಸುಂಕ ಈಗ 322 ರೂಪಾಯಿ ಇದ್ದು, ಇದು 386 ರೂಪಾಯಿ ಆಗಲಿದೆ. ಈ ರೀತಿ, 18 ಸ್ತರದಲ್ಲಿ ಅಬಕಾರಿ ಸುಂಕ ಹೆಚ್ಚಳವಾಗಿದೆ.
ಮದ್ಯದ ಎಲ್ಲ 18 ಘೋಷಿತ ಬೆಲೆ ಸ್ಲಾಬ್‍ಗಳ ಮೇಲಿನ ಹೆಚ್ಚುವರಿ ಸುಂಕದ ದರಗಳನ್ನು ಹಾಲಿ ಇರುವ ದರಗಳ ಮೇಲೆ ಶೇಕಡ 20ರಷ್ಟು ಹೆಚ್ಚಿಸಲು ತೀರ್ಮಾನಿಸಲಾಗಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಘೋಷಿಸಿದ್ದಾರೆ. ಇದು ಮದ್ಯಪ್ರಿಯರಿಗೆ ಶಾಕ್ ನೀಡಿದ್ದು, ಬೆಲೆ ಏರಿಕೆಯ ಬಿಸಿ ಈಗ ಅವರಿಗೂ ತಟ್ಟಲಿದೆ.