Karnataka Budget 2023: ಗ್ಯಾರೆಂಟಿ ಬಜೆಟ್ ಮಂಡಿಸಿದ ಸಿದ್ದರಾಮಯ್ಯ; ಕೇಂದ್ರದ ವಿರುದ್ಧ ಟೀಕಾ ಪ್ರಹಾರ, ಇದ್ದೇ ಇದೆ ರಾಜಕಾರಣ
Jul 07, 2023 06:01 PM IST
ಸಿಎಂ ಸಿದ್ದರಾಮಯ್ಯ ಇಂದು ತಮ್ಮ 14ನೇ ಬಜೆಟ್ ಮಂಡಿಸಿದ್ದಾರೆ. ಆಯವ್ಯಯ ಕುರಿತ ಸುದ್ದಿಗೋಷ್ಠಿ, ವಿಪಕ್ಷಗಳ ಪ್ರತಿಕ್ರಿಯೆ ಸೇರಿ ಕ್ಷಣ ಕ್ಷಣದ ಮಾಹಿತಿಗಾಗಿ ಲೈವ್ ಅಪ್ಡೇಟ್ ಪೇಜ್ ಕ್ಲಿಕ್ ಮಾಡಿ.
ಬಿಜೆಪಿಯವರಿಗೆ ನೈತಿಕತೆ ಇಲ್ಲ-ಸಿಎಂ
2018ರ ಚುನಾವಣೆಯಲ್ಲಿ ಬಿಜೆಪಿಯವರು 600 ಭರವಸೆಗಳನ್ನು ನೀಡಿದ್ದರು. ಅದರಲ್ಲಿ 10 ರಷ್ಟು ಭರವಸೆಗಳನ್ನು ಈಡೇರಿಸಿಲ್ಲ. ನಮ್ಮ ಸರ್ಕಾರದ ಬಜೆಟ್ ಬಗ್ಗೆ ಮಾಡಲು ಅವರಿಗೆ ಯಾವುದೇ ನೈತಿಕತೆ ಇಲ್ಲ. ದಿನಕ್ಕೆ 10 ಗಂಟೆ ವಿದ್ಯುತ್ ಕೊಡ್ತೀವಿ ಅಂತ ಹೇಳಿದ್ರು, ಕೊಟ್ಟಿದ್ದಾರಾ ಎಂದು ಸಿಎಂ ಸಿದ್ದರಾಮಯ್ಯ ಪ್ರಶ್ನಿಸಿದ್ದಾರೆ.
ಬಡವರ ಕೈಗೆ ದುಡ್ಡು ಕೊಡುವಂತ ಬಜೆಟ್ - ಸಿಎಂ ಸಿದ್ದರಾಮಯ್ಯ
ಕರ್ನಾಟಕದ ಪ್ರಗತಿದಾಯಕ, ಬಡವರ ಕೈಗೆ ದುಡ್ದು ಕೊಡುವಂತ ಬಜೆಟ್ ಇದಾಗಿದೆ ಎಂದು ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ.
ಹೊಸ ಯೋಜನೆ ಜಾರಿಗೆ ತರುವ ಸವಾಲು - ಸಿಎಂ ಸಿದ್ದರಾಮಯ್ಯ
ಹೊಸ ಯೋಜನೆಗಳನ್ನು ಜಾರಿಗೆ ತರಬೇಕಾದರೆ ಇರುವ ಆರ್ಥಿಕತೆಯಲ್ಲಿ ನಮಗೆ ಸವಾಲಾಗಿದೆ. ಇದಕ್ಕಾಗಿ ಸಂಪನ್ಮೂಲವನ್ನು ಕ್ರೂಢೀಕರಿಸುವ ಕೆಲಸ ಮಾಡಿದ್ದೇವೆ. ಬಿಜೆಪಿಯವರು ಆರ್ಥಿಕತೆಯನ್ನು ಹಾಳು ಮಾಡಿದ್ದರು - ಸಿಎಂ ಸಿದ್ದರಾಮಯ್ಯ
ಬಿಯರ್ ಮೇಲೆ ಶೇಕಡಾ 10 ರಷ್ಟು ಸುಂಕ ಹೆಚ್ಚಿಸಿದ್ದೇವೆ; ಆದರೂ ಬೇರೆ ರಾಜ್ಯಗಳಿಗಿಂತ ಬೆಲೆಯಲ್ಲಿ ನಾವೇ ಕಡಿಮೆ ಇದ್ದೇವೆ - ಸಿಎಂ ಸಿದ್ದರಾಮಯ್ಯ
ಬಿಯರ್ ಮೇಲೆ ಶೇಕಡಾ 10 ಹಾಗೂ ಮದ್ಯದ ಮೇಲೆ ಶೇಕಡಾ 20 ರಷ್ಟು ಸುಂಕ ಹೆಚ್ಚಿಸಿದ್ದೇವೆ. ಆದರೂ ಕೂಡ ಮದ್ಯದ ಬೆಲೆಯಲ್ಲಿ ಪಕ್ಕದ ರಾಜ್ಯಗಳಿಗಿಂತ ನಾವೇ ಕಡಿಮೆ ಇದ್ದೇವೆ.
ಅಕ್ಕಿ ಸಿಗುವವರೆಗೆ ಜುಲೈ 10 ರಿಂದ 5 ಕೆಜಿ ಅಕ್ಕಿ ಬದಲಿಗೆ ಹಣ ಕೊಡ್ತೇವೆ - ಸಿಎಂ
ಮುಕ್ತ ಮಾರುಕಟ್ಟೆಯಲ್ಲಿ ಅಕ್ಕಿ ಸಿಗುವವರೆಗೆ ಜುಲೈ 10 ರಿಂದಲೇ ಫಲಾನುಭವಿಗಳಿಗೆ ಅಕ್ಕಿ ಬದಲಾಗಿ ಹಣವನ್ನು ಕೊಡುತ್ತೇವೆ. ಅಕ್ಕಿ ಸಿಕ್ಕ ತಕ್ಷಣ 5 ಪ್ಲಸ್ 5 ಹತ್ತು ಕೆಜಿ ಕೊಡ್ತೀವಿ - ಸಿಎಂ ಸಿದ್ದರಾಮಯ್ಯ
ಗೃಹಲಕ್ಷ್ಮಿ ಯೋಜನೆ ಬಗ್ಗೆ ಅತ್ತೆ-ಸೊಸೆಯ ಮಧ್ಯೆ ಹುಳಿಹಿಂಡಲು ಬಿಜೆಪಿ ಪ್ರಯತ್ನ - ಸಿಎಂ ಸಿದ್ದರಾಮಯ್ಯ
ಗೃಹಲಕ್ಷ್ಮಿ ಯೋಜನೆ ಸಂಬಂಧ ವಿರೋಧ ಪಕ್ಷದವರು ಅತ್ತೆ-ಸೊಸೆಯ ಮಧ್ಯೆ ಹುಳಿಹಿಂಡುವ ಪ್ರಯತ್ನ ಮಾಡಿದ್ದರು. ಆದರೆ ಸಾಮಾನ್ಯವಾಗಿ ಮನೆಯಲ್ಲಿ ಅತ್ತೆಯೇ ಯಜಮಾನಿಯಾಗಿರುತ್ತಾರೆ - ಸಿಎಂ ಸಿದ್ದರಾಮಯ್ಯ
ಗೃಹಲಕ್ಷ್ಮಿ ಯೋಜನೆಯಡಿ ಆಗಸ್ಟ್ 15 ಅಥವಾ 16 ರಂದು ಯಜಮಾನಿ ಖಾತೆಗೆ 2 ಸಾವಿರ ರೂಪಾಯಿ ಹಣ ಜಮೆ
ಕಾಂಗ್ರೆಸ್ ಚುನಾವಣಾ ಪ್ರಣಾಳಿಕೆಯಲ್ಲಿ ಹೇಳಿದ್ದ 76 ಕಾರ್ಯಕ್ರಮಗಳನ್ನು ಜಾರಿ ಮಾಡಲು ಇವತ್ತು ಘೋಷಣೆ ಮಾಡಿದ್ದೇವೆ. ನನ್ನ ಬಜೆಟ್‌ನಲ್ಲಿ ಇವೆಲ್ಲವೂ ಸೇರಿದ್ದು, ದುಡ್ಡು ಕೂಡ ಒದಗಿಸಿದ್ದೇವೆ. ಗೃಹಲಕ್ಷ್ಮಿ ಯೋಜನೆಯಡಿಯಲ್ಲಿ 1 ಕೋಟಿ 30 ಲಕ್ಷ ಕುಟುಂಬಗಳು ಒಳಗೊಂಡಿದ್ದು, ವಾರ್ಷಿಕವಾಗಿ 26,250 ಕೋಟಿ ರೂಪಾಯಿ ಖರ್ಚಾಗುತ್ತದೆ. ಆಗಸ್ಟ್ 15ಕ್ಕೆ ಅಥವಾ 16 ರಂದು ಮನೆಯ ಯಜಮಾನಿಯ ಖಾತೆಗೆ ಮೊದಲ ಕಂತಿನ ಹಣ ಬಿಡುಗಡೆ ಮಾಡುತ್ತೇವೆ.
ರಾಜ್ಯ ಆರ್ಥಿಕ ದಿವಾಳಿಯಾಗುತ್ತೆ ಎಂದು ಪ್ರಧಾನಿ ಮೋದಿ ಗ್ಯಾರಂಟಿಗಳನ್ನು ಟೀಕಿಸಿದ್ದರು - ಪ್ರಧಾನಿ ಮೋದಿ
ಐದು ಗ್ಯಾರಂಟಿಗಳನ್ನು ಘೋಷಣೆ ಮಾಡಿದ್ದಾಗ ಪ್ರಧಾನಿ ನರೇಂದ್ರ ಮೋದಿ ಅವರು ಗ್ಯಾರಂಟಿಗಳಿಂದ ರಾಜ್ಯ ಸರ್ಕಾರ ಆರ್ಥಿಕವಾಗಿ ದಿವಾಳಿ ಆಗುತ್ತದೆ. ಗ್ಯಾರಂಟಿಗಳನ್ನು ಜಾರಿ ಮಾಡೋಕೆ ಆಗಲ್ಲ ಎಂದಿದ್ದರು. ಗ್ಯಾರಂಟಿಗಳನ್ನು ಜಾರಿ ಮಾಡಲು ಹಣ ಒದಗಿಸುತ್ತೇವೆ. ಎಲ್ಲಾ ಐದು ಗ್ಯಾರಂಟಿಗಳನ್ನು ನೂರಕ್ಕೆ ನೂರರಷ್ಟು ಜಾರಿಗೊಳಿಸುತ್ತೇವೆ ಎಂದು ಹೇಳಿದ್ದೆ. ಕೊಟ್ಟ ಮಾತಿನಂತೆ ನಡೆದುಕೊಂಡಿದ್ದೇವೆ. ಎಲ್ಲಾ ಐದು ಗ್ಯಾರಂಟಿಗಳಿಗೂ ಹಣವನ್ನು ಬಜೆಟ್‌ನಲ್ಲಿ ಒದಿಸಿದ್ದೇವೆ. ರಾಜ್ಯದ ಆರ್ಥಿಕತೆ ದಿವಾಳಿಯಾಗಂದತೆಯೂ ಕ್ರಮ ಕೈಗೊಂಡಿದ್ದೇವೆ ಎಂದು ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ.
ಬಿಜೆಪಿ ಮಂಡಿಸಿದ್ದ ಬಜೆಟ್ ಚುನಾವಣಾ ಬಜೆಟ್ - ಸಿಎಂ ಸಿದ್ದರಾಮಯ್ಯ
ಇವತ್ತು 14ನೇ ಬಜೆಟ್ ಮಂಡಿಸಿದ್ದ ಸಿಎಂ ಸಿದ್ದರಾಮಯ್ಯ ಅವರು ವಿಧಾನಸೌಧದಲ್ಲಿ ಸುದ್ದಿಗೋಷ್ಠಿ ಉದ್ದೇಶಿ ಮಾತನಾಡುತ್ತಿದ್ದು, ಇದೇ ವರ್ಷ ಫೆಬ್ರವರಿ 17 ರಂದು ಬಿಜೆಪಿ ಮಂಡಿಸಿದ್ದ ಬಜೆಟ್ ಚುನಾವಣಾ ಬಜೆಟ್ ಎಂದು ಹೇಳಿದ್ದಾರೆ.
ಬಜೆಟ್ ಅಧಿವೇಶನ ಸೋಮವಾರಕ್ಕೆ ಮುಂದೂಡಿಕೆ
ಕರ್ನಾಟಕ ಬಜೆಟ್ ಅಧಿವೇಶನ ಸೋಮವಾರಕ್ಕೆ ಮುಂದೂಡಿದ ಸ್ಪೀಕರ್ ಯುಟಿ ಖಾದರ್
ಬೆಂಗಳೂರಿನ ಡಾ ರಾಜ್‌ಕುಮಾರ್ ಸ್ಮಾರಕ ಬಳಿ ಕನ್ನಡ ಚಿತ್ರರಂಗ ಬೆಳೆದು ಬಂದ ಇತಿಹಾಸ ದಾಖಲಿಸುವ ವಸ್ತು ಸಂಗ್ರಹಾಲಯ
ಬೆಂಗಳೂರಿನಲ್ಲಿರುವ ಡಾ. ರಾಜ್‌ಕುಮಾರ್ ಸ್ಮಾರಕದ ಬಳಿ ಕನ್ನಡ ಚಿತ್ರರಂಗ ಬೆಳೆದು ಬಂದ ಇತಿಹಾಸವನ್ನು ದಾಖಲಿಸುವ ವಸ್ತು ಸಂಗ್ರಹಾಲಯವನ್ನು ನಿರ್ಮಿಸಲಾಗುವುದು - ಸಿಎಂ
ಸಂಕಷ್ಟದಲ್ಲಿರುವ ಪತ್ರಕರ್ತರಿಗೆ ನೀಡುವ ಮಾಸಾಶನ ಮೊತ್ತ 10 ಸಾವಿರ ದಿಂದ 12 ಸಾವಿರ ರೂ.ಗೆ ಹೆಚ್ಚಳ
ಸಂಕಷ್ಟದಲ್ಲಿರುವ ಪತ್ರಕರ್ತರಿಗೆ ನೀಡಲಾಗುವ ಮಾಸಾಶನ ಮೊತ್ತವನ್ನು 10 ಸಾವಿರ ರೂ. ಗಳಿಂದ 12 ಸಾವಿರ ರೂ. ಗಳಿಗೆ ಹೆಚ್ಚಿಸಲಾಗುವುದು. ಮಾಸಾಶನ ಪಡೆಯುವ ಪತ್ರಕರ್ತರು ಮೃತಪಟ್ಟಾಗ ನೀಡಲಾಗುವ ಕುಟುಂಬ ಮಾಸಾಶನ ಮೊತ್ತವನ್ನು ಮೂರು ಸಾವಿರ ರೂ. ಗಳಿಂದ ಆರು ಸಾವಿರ ರೂ. ಗಳಿಗೆ ಹೆಚ್ಚಿಸಲಾಗುವುದು - ಸಿಎಂ ಸಿದ್ದರಾಮಯ್ಯ
ಸಾರ್ವಜನಿಕ-ಖಾಸಗಿ ಸಹಭಾಗಿತ್ವದಲ್ಲಿ ಸುಸಜ್ಜಿತ ಕ್ರೀಡಾ ವಸತಿ ನಿಲಯ ನಿರ್ಮಾಣ
ಬೆಂಗಳೂರಿನ ಶ್ರೀಕಂಠೀರವ ಕ್ರೀಡಾಂಗಣದಲ್ಲಿ ಕ್ರೀಡಾ ವಸ್ತು ಸಂಗ್ರಹಾಲಯವನ್ನು ಸ್ಥಾಪಿಸಲು ಐದು ಕೋಟಿ ರೂ. ಅನುದಾನವನ್ನು ಒದಗಿಸಲಾಗುವುದು ಮತ್ತು ಕ್ರೀಡಾಪಟುಗಳಿಗೆ ತಂಗಲು ಅನುಕೂಲವಾಗುವಂತೆ ಸುಸಜ್ಜಿತವಾದ ಕ್ರೀಡಾ ವಸತಿ ನಿಲಯವನ್ನು ಸಾರ್ವಜನಿಕ-ಖಾಸಗಿ ಸಹಭಾಗಿತ್ವದಲ್ಲಿ ನಿರ್ಮಿಸಲಾಗುವುದು. ಇದಕ್ಕಾಗಿ 10 ಕೋಟಿ ರೂ. ಅನುದಾನವನ್ನು ಒದಗಿಸಲಾಗುವುದು - ಸಿಎಂ ಸಿದ್ದರಾಮಯ್ಯ
ಶಕ್ತಿ ಯೋಜನೆಯಿಂದ ಪ್ರವಾಸಿ ತಾಣಗಳಲ್ಲಿ ಪ್ರವಾಸಿಗರ ಸಂಖ್ಯೆ ಹೆಚ್ಚಳ - ಮೂಲಭೂತ ಸೌಕರ್ಯ ಅಭಿವೃದ್ಧಿ ಮಾಡ್ತೇವೆ - ಸಿಎಂ ಸಿದ್ದರಾಮಯ್ಯ
ನಮ್ಮ ಸರ್ಕಾರ ಜಾರಿಗೆ ತಂದ ಐದು ಗ್ಯಾರಂಟಿಗಳಲ್ಲಿ ಒಂದಾದ ಶಕ್ತಿ ಯೋಜನೆಯಡಿಯಲ್ಲಿ ಎಲ್ಲಾ ಮಹಿಳೆಯರಿಗೆ ಉಚಿತ ಸಾರಿಗೆ ವ್ಯವಸ್ಥೆಯನ್ನು ಜಾರಿಗೊಳಿಸಿದ ಪರಿಣಾಮವಾಗಿ, ರಾಜ್ಯದ ಪ್ರಮುಖ ಧಾರ್ಮಿಕ ಮತ್ತು ಪಾರಂಪರಿಕ ಪ್ರವಾಸಿ ತಾಣಗಳಲ್ಲಿ ಪ್ರವಾಸಿಗರ ಸಂಖ್ಯೆ ಅತಿ ಹೆಚ್ಚಾಗಿರುವುದರಿಂದ ಅಂತಹ ಸ್ಥಳಗಳಲ್ಲಿ ಮೂಲಭೂತ ಸೌಕರ್ಯಗಳನ್ನು ಅಭಿವೃದ್ಧಿಪಡಿಸಲಾಗುವುದು - ಸಿಎಂ ಸಿದ್ದರಾಮಯ್ಯ
8,766 ಕೋಟಿ ರೂ.ಹೂಡಿಕೆಯ 9 ರೈಲ್ವೆ ಯೋಜನಾ ಕಾಮಗಾರಿಗಳಿಗೆ ಆದ್ಯತೆ - ಸಿಎಂ
ರೈಲ್ವೆ ಜಾಲದ ಸಾಂದ್ರತೆಯನ್ನು ಹೆಚ್ಚಿಸಿ, ಕರ್ನಾಟಕದ ಎಲ್ಲಾ ಭಾಗಗಳಿಗೆ ಸಂಪರ್ಕ ಕಲ್ಪಿಸುವ ಮೂಲಕ, ಪ್ರಾದೇಶಿಕ ಅಸಮತೋಲನ ಕಡಿಮೆ ಮಾಡುವುದು, ಜನಸಾಮಾನ್ಯರ ಸುಗಮ ಸಂಚಾರ ಹಾಗೂ ಸರಕು ಸಾಗಾಣಿಕೆಗೆ ಅನುವು ಮಾಡಿಕೊಡುವುದು ನಮ್ಮ ಸರ್ಕಾರದ ಆದ್ಯತೆಯಾಗಿದೆ. ಈ ನಿಟ್ಟಿನಲ್ಲಿ ಸುಮಾರು 8,766 ಕೋಟಿ ರೂ.ಗಳ ರಾಜ್ಯದ ಹೂಡಿಕೆಯೊಂದಿಗೆ, 1,110 ಕಿ.ಮೀ. ಉದ್ದದ, ಒಂಬತ್ತು ರೈಲ್ವೆ ಯೋಜನಾ ಕಾಮಗಾರಿಗಳನ್ನು ಆದ್ಯತೆಯ ಮೇಲೆ ಪೂರ್ಣಗೊಳಿಸಲು ಕ್ರಮ ವಹಿಸಲಾಗುವುದು. ಇದರ ಜೊತೆಗೆ, ರಸ್ತೆ ಮಾರ್ಗದ ವಾಹನ ದಟ್ಟಣೆಯನ್ನು ನಿವಾರಿಸಿ ಸುಗಮ ರೈಲು ಸಂಚಾರಕ್ಕಾಗಿ ಅನುಮೋದಿತ ರೈಲ್ವೆ ಮೇಲ್ಸೇತುವೆ / ಕೆಳ ಸೇತುವೆಗಳ ನಿರ್ಮಾಣದ ಸುಮಾರು 803 ಕೋಟಿ ರೂ. ವೆಚ್ಚದ ಕಾಮಗಾರಿಗಳನ್ನು ಆದ್ಯತೆಯ ಮೇಲೆ ಪೂರ್ಣಗೊಳಿಸಲು ಕ್ರಮ ವಹಿಸಲಾಗುವುದು ಎಂದು ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ.
ರಕ್ಷಣಾ ಕಾರ್ಯಗಳಿಗೆ ನೆರವಾಗಲು ಹೊಸ ಏರ್‌ಸ್ಟ್ರಿಪ್‌ಗಳ ಅಭಿವೃದ್ಧಿ
ಪ್ರವಾಸೋದ್ಯಮ ಮತ್ತು ಉದ್ಯಮ ವಲಯಗಳನ್ನು ಉತ್ತೇಜಿಸಲು ಹಾಗೂ ವಿಪತ್ತು ನಿರ್ವಹಣೆಯ ಸಮಯದಲ್ಲಿ ರಕ್ಷಣಾ ಕಾರ್ಯಗಳಿಗೆ ನೆರವಾಗುವ ಉದ್ದೇಶದಿಂದ ಧರ್ಮಸ್ಥಳ, ಕೊಡಗು ಮತ್ತು ಚಿಕ್ಕಮಗಳೂರಿನಲ್ಲಿ ಹೊಸ ಏರ್‌ಸ್ಟ್ರಿಪ್‌ಗಳನ್ನು (Airstrip) ಅಭಿವೃದ್ಧಿಪಡಿಸಲು ಕ್ರಮ ಕೈಗೊಳ್ಳಲಾಗುವುದು - ಸಿಎಂ ಸಿದ್ದರಾಮಯ್ಯ
ಇದೇ ವರ್ಷ ವಿಜಯಪುರ ವಿಮಾನ ನಿಲ್ದಾಣ ಕಾರ್ಯಾಚರಣೆ ಆರಂಭ
ವಿಜಯಪುರ ವಿಮಾನ ನಿಲ್ದಾಣದ ಸಿವಿಲ್ ಕಾಮಗಾರಿಗಳನ್ನು ಪೂರ್ಣಗೊಳಿಸಿ ವಿಮಾನ ನಿಲ್ದಾಣದ ಕಾರ್ಯಾಚರಣೆಯನ್ನು ಪ್ರಸಕ್ತ ಸಾಲಿನಲ್ಲಿಯೇ ಪ್ರಾರಂಭಿಸಲಾಗುವುದು - ಸಿಎಂ ಸಿದ್ದರಾಮಯ್ಯ
1 ರಿಂದ 10ನೇ ತರಗತಿ ವರಗಿನ ವಿದ್ಯಾರ್ಥಿಗಳಿಗೆ ವಾರದಲ್ಲಿ 2 ದಿನ ಪೌಷ್ಠಿಕ ಆಹಾರಕ್ಕೆ 280 ಕೋಟಿ ರೂ.ಅನುದಾನ - ಸಿಎಂ ಸಿದ್ದರಾಮಯ್ಯ
1 ರಿಂದ 10ನೇ ತರಗತಿ ವರಗಿನ ವಿದ್ಯಾರ್ಥಿಗಳಿಗೆ ವಾರದಲ್ಲಿ 2 ದಿನ ಪೌಷ್ಠಿಕ ಆಹಾರಕ್ಕೆ 280 ಕೋಟಿ ರೂ.ಅನುದಾನ ನೀಡಲಾಗುತ್ತದೆ. ಶಾಲೆ, ಕಾಲೇಜುಗಳ ಕೊಠಡಿಗಳ ನಿರ್ಮಾಣ, ದುರಸ್ಥಿಗೆ ಹಾಗೂ ಶೌಚಾಲಯ ಘಟಕ ನಿರ್ಮಾಣಕ್ಕೆ 850 ಕೋಟಿ ರೂಪಾಯಿ ಅನುದಾನ. ಬೆಂಗಳೂರಿನ ಎಸ್‌ಕೆಎಸ್‌ಜೆಟಿಐ ಇಂಜಿನಿಯರಿಂಗ್ ಕಾಲೇಜಿನಲ್ಲಿರುವ ಜವಳಿ ತಂತ್ರಜ್ಞಾನ ವಿಭಾಗವನ್ನು ಸ್ಮಾರ್ಟ್ ಅಂಡ್ ಟೆಕ್ನಿಕಲ್ ಟೆಕ್ಸ್‌ಟೈಲ್ ಸೆಂಟರ್ ಆಗಿ ಉನ್ನತೀಕರಣಕ್ಕೆ ಕ್ರಮ - ಸಿಎಂ ಸಿದ್ದರಾಮಯ್ಯ
ಪ್ರತಿ ಕುಟುಂಬದ ಯಜಮಾನಿಗೆ ಮಾಸಿಕ 2000 ರೂಪಾಯಿ ನೆರವು ನೇರ ವರ್ಗಾವಣೆ - ಸಿಎಂ ಸಿದ್ದರಾಮಯ್ಯ
ಗೃಹಲಕ್ಷ್ಮಿ ಯೋಜನೆಯಡಿಯಲ್ಲಿ ಪ್ರತಿ ಮನೆಯ ಯಜಮಾನಿಗೆ ಪ್ರತಿ ತಿಂಗಳು 2,000 ರೂಪಾಯಿ ನೇರವಾಗಿ ಖಾತೆಗೆ ವರ್ಗಾವಣೆ ಮಾಡಲಾಗುತ್ತದೆ. ಈ ಯೋಜನೆಗೆ ಪ್ರತಿ ವರ್ಷ 30,000 ಕೋಟಿ ರೂಪಾಯಿ ವೆಚ್ಚವಾಗುವ ಸಾಧ್ಯತೆ ಇದೆ - ಸಿಎಂ ಸಿದ್ದರಾಮಯ್ಯ
ವಾರ್ಷಿಕ 13,910 ಕೋಟಿ ರೂಪಾಯಿ ವೆಚ್ಚದಲ್ಲಿ ಗೃಹಜ್ಯೋತಿ ಯೋಜನೆ ಜಾರಿ
ಗೃಹಜ್ಯೋತಿ ಯೋಜನೆಯಿಂದ ರಾಜ್ಯದ 2 ಕೋಟಿಗಿಂತ ಅಧಿಕ ಗೃಹ ಬಳಕೆದಾರರಿಗೆ ಅನುಕೂಲವಾಗಲಿದೆ. ಇದು ಪ್ರತಿ ಕುಟುಂಬಕ್ಕೆ ಪ್ರತಿಯೊಬ್ಬ ವ್ಯಕ್ತಿಗೆ ಇಂಧನ ಖಾತರಿ ನೀಡುವ ಯೋಜನೆಯಾಗಿದೆ - ಸಿಎಂ ಸಿದ್ದರಾಮಯ್ಯ
2023ರಲ್ಲಿ ಪದವಿ ಪಡೆದ 6 ತಿಂಗಳವರೆಗೂ ಉದ್ಯೋಗ ಲಬಿಸದ ಯುವಜನರಿಗೆ 2 ವರ್ಷ ಅಥವಾ ಉದ್ಯೋಗ ಸಿಗುವವರೆಗೆ ನಿರುದ್ಯೋತ ಭತ್ಯ
ನಾಡಿನ ಯುವ ಜನತೆಗೆ ಆರ್ಥಿಕ ನೆರವು ನೀಡಿ ಆತ್ಮವಿಶ್ವಾಸ ತುಂಬಿ ಬದುಕಿನಲಲ್ಿಲ ನೆಲೆ ಕಂಡುಕೊಳ್ಳಲು ಸಹಾಯ. ಸುಮಾರು 3.7 ಲಕ್ಷ ಯುವಜನರಿಗೆ ಈ ಯೋಜನೆಯಿಂದ ಲಾಭ - ಸಿಎಂ ಸಿದ್ದರಾಮಯ್ಯ
ಹಸಿವು ಮುಕ್ತ ಕರ್ನಾಟಕ್ಕೆ ಸರ್ಕಾರ ಪಣ - ಸಿಎಂ ಸಿದ್ದರಾಮಯ್ಯ
ಅನ್ನಭಾಗ್ಯ ಯೋಜನೆಯಡಿಯಲ್ಲಿ ಅರ್ಹ ಫಲಾನುಭವಿಗಳಿಗೆ 5 ಕೆಜಿ ಹೆಚ್ಚುವರಿ ಆಹಾರ ಧ್ಯಾನಗಳ ವಿತರಣೆ ಮಾಡಲಾಗುತ್ತದೆ - ಸಿಎಂ ಸಿದ್ದರಾಮಯ್ಯ
ಸರ್ಕಾರಿ ಬಸ್‌ಗಳಲ್ಲಿ ರಾಜ್ಯದ ಮಹಿಳೆಯರು ಉಚಿತ ಪ್ರಯಾಣ - ವಾರ್ಷಿಕ ಅಂದಾಜು 4 ಸಾವಿರ ಕೋಟಿ ವೆಚ್ಚ
ರಾಜ್ಯದ ಶಕ್ತಿ ಯೋಜನೆಗೆ ವಾರ್ಷಿಕ ಅಂದಾಜು 4 ಸಾವಿರ ಕೋಟಿ ವೆಚ್ಚ. ಸರ್ಕಾರಿ ಬಸ್‌ಗಳಲ್ಲಿ ರಾಜ್ಯದ ಮಹಿಳೆಯರು ಮತ್ತು ಲಿಂಗತ್ವ ಅಲ್ಪಸಂಖ್ಯಾತರು ಉಚಿತ ಪ್ರಯಾಣಿಸುವ ಶಕ್ತಿ ಯೋಜನೆ. ಪ್ರತಿ ದಿನ 50 ರಿಂದ 60 ಲಕ್ಷ ಮಹಿಳೆಯರು ಸೌಲಭ್ಯ ಪಡೆಯುತ್ತಿದ್ದಾರೆ - ಸಿಎಂ ಸಿದ್ದರಾಮಯ್ಯ
ಬೆಂಗಳೂರು ನಗರವನ್ನು ಅಂತಾರಾಷ್ಟ್ರೀಯ ಮಟ್ಟಕ್ಕೇರಿಸುವ ಗುರಿ
ಬೆಂಗಳೂರನ್ನು ಅಂತಾರಾಷ್ಟ್ರೀಯ ಮಟ್ಟಕ್ಕೆ ಏರಿಸಲು ಬ್ರಾಂಡ್ ಬೆಂಗಳೂರು ಪರಿಕಲ್ಪನೆ ಜಾರಿ. ನಗರದ ಸಂಚಾರ ವ್ಯವಸ್ಥೆ, ಪರಿಸರ, ಘನತ್ಯಾಜ್ಯ ನಿರ್ವಹಣೆ, ಸಾರ್ವಜನಿಕ ಸ್ಥಳಗಳ ಸದ್ಬಳಕೆ, ಸಾರ್ವಜನಿಕರ ಆರೋಗ್ಯ, ಪ್ರಾಣಿಗಳ ಆರೋಗ್ಯ, ಜನಸ್ನೇಹಿ ಇ-ಆಡಳಿತ, ನೀರಿನ ಭದ್ರತೆ ಹಾಗೂ ಪ್ರವಾಹ ನಿರ್ವಹಣೆಯ ಸವಾಲು ಎದುರಿಸಲು ಕ್ರಮ
100 ಕೋಟಿ ರೂ.ವೆಚ್ಚದಲ್ಲಿ ಕೃಷಿ ಭಾಗ್ಯ ಯೋಜನೆ ಮತ್ತೆ ಜಾರಿ
ಕೃಷಿ ಭಾಗ್ಯ ಯೋಜನೆ 100 ಕೋಟಿ ರೂಪಾಯಿಗಳ ವೆಚ್ಚದಲ್ಲಿ ಮರು ಜಾರಿ - ಸಿಎಂ ಸಿದ್ದರಾಮಯ್ಯ
ಶೂನ್ಯ ಬಡ್ಡಿದರದಲ್ಲಿ ನೀಡುವ ಅಲ್ಪಾವಧಿ ಸಾಲದ ಮಿತಿ 3 ಲಕ್ಷದಿಂದ 5 ಲಕ್ಷಕ್ಕೆ ಹೆಚ್ಚಳ
30 ಲಕ್ಷಕ್ಕೂ ಅಧಿಕ ರೈತರಿಗೆ 25,000 ಕೋಟಿ ರೂ.ಸಾಲ ವಿತರಣೆ ಗುರಿ - ಸಿಎಂ ಸಿದ್ದರಾಮಯ್ಯ
ಮೀನುಗಾರ ಮಹಿಳೆಯರಿಗೆ ಬ್ಯಾಂಕುಗಳಲ್ಲಿ ಬಡ್ಡಿ ರಹಿತ ಸಾಲದ ಮಿತಿ 3 ಲಕ್ಷಕ್ಕೆ ಹೆಚ್ಚಳ
ಮೀನುಗಾರ ಮಹಿಳೆಯರಿಗೆ ಬ್ಯಾಂಕುಗಳಲ್ಲಿ ಬಡ್ಡಿ ರಹಿತ ಸಾಲದ ಮಿತಿ 3 ಲಕ್ಷಕ್ಕೆ ಹೆಚ್ಚಳ ನಿರ್ಧರಿಸಲಾಗಿದೆ - ಸಿಎಂ ಸಿದ್ದರಾಮಯ್ಯ
ರಾಜ್ಯದ ನೀರಾವರಿಗೆ 770 ಕೋಟಿ ರೂ.ವೆಚ್ಚದಲ್ಲಿ 899 ಕೆರೆ ತುಂಬಿಸಲು ಕ್ರಮ
ರಾಜ್ಯದ ನೀರಾವರಿಗೆ 770 ಕೋಟಿ ವೆಚ್ಚದಲ್ಲಿ 899 ಕೆರೆ ತುಂಬಿಸಲು 19 ಯೋಜನೆಗಳನ್ನು ಪೂರ್ಣಗೊಳಿಸಲು ಕ್ರಮ
100 ಕೋಟಿ ರೂ.ವೆಚ್ಚದಲ್ಲಿ ಶಾಲಾ ಕಾಲೇಜುಗಳ ಹಳೆಯ ಕಟ್ಟಡಗಳು, ಮಳೆಯಿಂದ ಶಿಥಿಲಗೊಂಡಿರುವ ಕೊಠಡಿಗಳ ದುರಸ್ತಿ
ಹಳೆಯ ಶಾಲಾ ಕಾಲೇಜು ಕಟ್ಟಡಗಳು ಹಾಗೂ ಮಳೆಯಿಂದಾಗಿ ಶಿಥಿಲಗೊಂಡಿರುವ 3,833 ಶಾಲೆಗಳು ಹಾಗೂ 724 ಪದವಿ ಪೂರ್ವ ಕಾಲೇಜು ಕೊಠಡಿಗಳನ್ನು 100 ಕೋಟಿ ರೂ.ಗಳ ವೆಚ್ಚದಲ್ಲಿ ದುರಸ್ತಿಗೊಳಿಸುವ ಮೂಲಕ ಬಳಕೆಗೆ ಯೋಗ್ಯಗೊಳಿಸಲಾಗುವುದು.
ರಾಜ್ಯದ ವಿಶ್ವವಿದ್ಯಾಲಯಗಳಲ್ಲಿ Ph.D. ಸೀಟುಗಳನ್ನು ಭರ್ತಿ ಮಾಡುವ ವಿಧಾನದಲ್ಲಿ ಏಕರೂಪತೆ ಜಾರಿ - ಸಿಎಂ ಸಿದ್ದರಾಮಯ್ಯ
ರಾಜ್ಯದ ಎಲ್ಲಾ ವಿಶ್ವವಿದ್ಯಾಲಯಗಳಲ್ಲಿ Ph.D. ಸೀಟುಗಳನ್ನು ಭರ್ತಿ ಮಾಡುವ ವಿಧಾನದಲ್ಲಿ ಏಕರೂಪತೆಯನ್ನು ತರಲಾಗುವುದು. ಎಲ್ಲಾ ಸರ್ಕಾರಿ ವಿಶ್ವವಿದ್ಯಾಲಯಗಳ Ph.D. ಸೀಟುಗಳಿಗೆ ಮತ್ತು ಖಾಸಗಿ ವಿಶ್ವವಿದ್ಯಾಲಯಗಳ ಶೇ.40 ಸೀಟುಗಳಿಗೆ ಕೌನ್ಸೆಲಿಂಗ್ ನಡೆಸಲಾಗುವುದು - ಸಿಎಂ ಸಿದ್ದರಾಮಯ್ಯ
ರಾಜ್ಯದ ಸರ್ಕಾರಿ ಶಾಲಾ-ಕಾಲೇಜುಗಳ ಕೊಠಡಿಗಳ ನಿರ್ಮಾಣಕ್ಕೆ 550 ಕೋಟಿ
ರಾಜ್ಯದ ಸರ್ಕಾರಿ ಶಾಲಾ ಕಾಲೇಜುಗಳಲ್ಲಿ ಉತ್ತಮ ಸೌಲಭ್ಯಗಳನ್ನು ನೀಡಲು ಶಾಲಾ ಕೊಠಡಿಗಳಿಗೆ 310 ಕೋಟಿ ರೂ.ಗಳು ಹಾಗೂ ಪದವಿ ಪೂರ್ವ ಕಾಲೇಜು ಕೊಠಡಿಗಳಿಗೆ 240 ಕೋಟಿ ರೂ. ಸೇರಿದಂತೆ ಒಟ್ಟು 550 ಕೋಟಿ ರೂ.ಗಳ ವೆಚ್ಚದಲ್ಲಿ 8,311 ಕೊಠಡಿಗಳ ನಿರ್ಮಾಣ ಕಾಮಗಾರಿಗಳನ್ನು ಶೀಘ್ರದಲ್ಲಿಯೇ ಪೂರ್ಣಗೊಳಿಸಲಾಗುವುದು - ಸಿಎಂ ಸಿದ್ದರಾಮಯ್ಯ
ಬೆಂಗಳೂರಿನ ತ್ಯಾಜ್ಯ ನೀರು ಸಂಸ್ಕರಣ ಘಟಕಗಳನ್ನು ಮೇಲ್ದರ್ಜೆಗೇರಿಸಲು 1,411 ಕೋಟಿ ರೂ.
ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿನ 20 ತ್ಯಾಜ್ಯ ನೀರು ಸಂಸ್ಕರಣಾ ಘಟಕಗಳನ್ನು ಮೇಲ್ದರ್ಜೆಗೇರಿಸಲು 1,411 ಕೋಟಿ ರೂಪ.
ಪೊಲೀಸ್ ಸಿಬ್ಬಂದಿಗೆ ಸುಸಜ್ಜಿತ ವಸತಿ ಗೃಹ ನಿರ್ಮಾಣಕ್ಕೆ 450 ಕೋಟಿ ರೂ ಅನುದಾನ
ಪೊಲೀಸ್ ಸಿಬ್ಬಂದಿಗೆ ಸುಸಜ್ಜಿತ ವಸತಿ ಗೃಹವನ್ನು ಒದಗಿಸಲು ಆದ್ಯತೆ.
ಪ್ರಸಕ್ತ ವರ್ಷ 2,125 ವಸತಿಗೃಹ ನಿರ್ಮಾಣ ಕಾರ್ಯ ಪೂರ್ಣಗೊಳಿಸಲು
450 ಕೋಟಿ ರೂಪಾಯಿ ಅನುದಾನ
3,27,747 ಕೋಟಿ ರೂಪಾಯಿ ಬಜೆಟ್ ಗಾತ್ರ - 3,269 ಕೋಟಿ ರೂ.ಆಯವ್ಯಯದ ಕೊರತೆ
ಒಟ್ಟು ಬಜೆಟ್ ಗಾತ್ರ ವೆಚ್ಚ 3,27,747 ಕೋಟಿ ರೂ, ಜಮೆ- 3,24,478 ಕೋಟಿ ರೂ, ಒಟ್ಟು 3,269 ಕೋಟಿ ರೂ ಕೊರತೆ ಬಜೆಟ್
ಮದ್ಯದ ದರ ಶೇ.20ರಷ್ಟು ಹೆಚ್ಚಳ
ಮದ್ಯದ ದರ ಶೇ.20ರಷ್ಟು ಹೆಚ್ಚಳ ಮಾಡಿದ್ದು, ಪ್ರತಿ ಸಗಟು ಲೀಟರ್ ಗೆ 179 ರಿಂದ 215 ರೂ.ಗಳಿಗೆ ಏರಿಕೆ. ಲೀಟರ್ ಗೆ 36 ರೂ ಹೆಚ್ಚಳವಾಗಲಿದೆ.
ಬೆಂಗಳೂರು ಅಭಿವೃದ್ಧಿಗೆ 45,000 ಕೋಟಿ ರೂ.ಘೋಷಣೆ
ಬೆಂಗಳೂರಿಗೆ ಬಂಪರ್ ಕೊಡುಗೆ ಘೋಷಿಸಿರುವ ಸಿಎಂ ಸಿದ್ದರಾಮಯ್ಯ ಅವರು ರಸ್ತೆ, ತ್ಯಾಜ್ಯ ಸಂಸ್ಕರಣೆ, ಮೇಲ್ಸೇತುವೆ ಸೇರಿ ವಿವಿಧ ಅಭಿವೃದ್ಧಿ ಯೋಜನೆಗಳಿಗಾಗಿ 45,000 ಕೋಟಿ ರೂಪಾಯಿ ಘೋಷಿಸಿದ್ದಾರೆ.
ಕೇಂದ್ರದ ಎಪಿಎಂಸಿ ಕಾಯ್ದೆ ವಾಪಸ್‌ಗೆ ನಿರ್ಧಾರ
ಕೇಂದ್ರದ ಎಪಿಎಂಸಿ ಕಾಯ್ದನ್ನು ವಾಪಸ್ ಪಡೆಯಲು ರಾಜ್ಯ ಸರ್ಕಾರ ನಿರ್ಧಾರ
ಬಿಜೆಪಿ ಸರ್ಕಾರ ವಿದ್ಯುಚ್ಛಕ್ತಿ ವಲಯವನ್ನು ತೀವ್ರ ಸಂಕಷ್ಟಕ್ಕೆ ನೂಕಿದೆ - ಸಿಎಂ
ರಾಜ್ಯದ ಆರ್ಥಿಕತೆಯ ಬೆನ್ನೆಲುಬಾದ ವಿದ್ಯುಚ್ಛಕ್ತಿ ವಲಯವನ್ನು ಮುತುವರ್ಜಿಯಿಂದ ನಿರ್ವಹಿಸಿ ಸದೃಢಗೊಳಿಸುವ ಬದಲು ಹಿಂದಿನ ಸರ್ಕಾರವು ವಿದ್ಯುಚ್ಛಕ್ತಿ ವಲಯವನ್ನು ತೀವ್ರ ಸಂಕಷ್ಟಕ್ಕೆ ನೂಕಿದೆ. ದಿನಾಂಕ: 31.03.2018ರ ಅಂತ್ಯಕ್ಕೆ ವಿದ್ಯುತ್ ಉತ್ಪಾದಕ, ಪ್ರಸರಣ ಮತ್ತು ಸರಬರಾಜು ಕಂಪನಿಗಳ ಒಟ್ಟಾರೆ ಸಾಲದ ಬಾಕಿ ಮೊತ್ತವು 51,087 ಕೋಟಿ ರೂ.ಗಳಿದ್ದು, ಹಿಂದಿನ ಸರ್ಕಾರವು ದಿನಾಂಕ: 31.03.2023 ರ ಅಂತ್ಯಕ್ಕೆ ಒಟ್ಟು 91,911 ಕೋಟಿ ರೂ.ಗಳ ಸಾಲದ ಬಾಕಿ ಉಳಿಸಿರುತ್ತದೆ. ಜೊತೆಗೆ ವಿದ್ಯುತ್ ಸರಬರಾಜು ಕಂಪನಿಗಳ ಸಂಚಿತ ನಷ್ಟ (Cumulative loss) ದಿನಾಂಕ: 31.03.2018ರ ಅಂತ್ಯಕ್ಕೆ 4,725 ಕೋಟಿ ರೂ.ಗಳಿದ್ದು, ದಿನಾಂಕ: 31.03.2023ರ ಅಂತ್ಯಕ್ಕೆ 17,056 ಕೋಟಿ ರೂ.ಗಳಿಗೆ ಹೆಚ್ಚಾಗಿದ್ದು, ಹಿಂದಿನ ಸರ್ಕಾರದ ದುರಾಡಳಿತಕ್ಕೆ ಇದು ನಿದರ್ಶನವಾಗಿದೆ.
ಕೇಂದ್ರದಿಂದ ಅನುದಾನ ಪಡೆಯುವಲ್ಲಿ ಹಿಂದಿನ ಸರ್ಕಾರವು ಅಸಮರ್ಥವಾಗಿತ್ತು - ಸಿಎಂ ಸಿದ್ದರಾಮಯ್ಯ
2019-20ಕ್ಕೆ ಹೋಲಿಸಿದರೆ 2020-21ರಲ್ಲಿ ನಮ್ಮ ರಾಜ್ಯದ ತೆರಿಗೆ ಪಾಲು ಕಡಿಮೆಯಾದ್ದರಿಂದ 15ನೇ ಹಣಕಾಸು ಆಯೋಗವು 2020-21ಕ್ಕೆ ಅನ್ವಯವಾಗುವಂತೆ ನಮ್ಮ ರಾಜ್ಯಕ್ಕೆ 5,495 ಕೋಟಿ ರೂ.ಗಳ ವಿಶೇಷ ಅನುದಾನವನ್ನು ನೀಡುವಂತೆ ಮಧ್ಯಂತರ ವರದಿಯಲ್ಲಿ ಶಿಫಾರಸ್ಸು ಮಾಡಿರುತ್ತದೆ.
ಆದರೆ, ಕೇಂದ್ರ ಸರ್ಕಾರವು, ಹಣಕಾಸು ಆಯೋಗವು ಶಿಫಾರಸ್ಸು ಮಾಡಿದ ಈ ವಿಶೇಷ ಅನುದಾನವನ್ನು ನಮ್ಮ ರಾಜ್ಯಕ್ಕೆ ನೀಡಿರುವುದಿಲ್ಲ. ಅಲ್ಲದೆ, 15ನೇ ಹಣಕಾಸು ಆಯೋಗವು ತನ್ನ ಅಂತಿಮ ವರದಿಯಲ್ಲಿ ರಾಜ್ಯ ಕೇಂದ್ರಿತ ಕಾಮಗಾರಿಗಳ/ಯೋಜನೆಗಳಿಗೆ ಅನುದಾನವನ್ನು ಶಿಫಾರಸ್ಸು ಮಾಡಿರುತ್ತದೆ. ನಮ್ಮ ರಾಜ್ಯಕ್ಕೆ 3,000 ಕೋಟಿ ರೂ.ಗಳ ಅನುದಾನವನ್ನು ಕೆರೆಗಳ ಸಮಗ್ರ ಅಭಿವೃದ್ಧಿಗಾಗಿ ಮತ್ತು 3,000 ಕೋಟಿ ರೂ.ಗಳನ್ನು ಬೆಂಗಳೂರು ನಗರದ ಪೆರಿಫೆರಲ್ ರಿಂಗ್ ರಸ್ತೆಗಾಗಿ ಎಂದು ರಾಜ್ಯ-ಕೇಂದ್ರಿತ ಅನುದಾನವನ್ನು ಶಿಫಾರಸ್ಸು ಮಾಡಿರುತ್ತದೆ. ಆದರೆ, ಕೇಂದ್ರ ಸರ್ಕಾರವು ಈ ಅನುದಾನವನ್ನು ನಮ್ಮ ರಾಜ್ಯಕ್ಕೆ ನೀಡಿರುವುದಿಲ್ಲ.
ಕೇಂದ್ರದ ವಿತ್ತ ಮಂತ್ರಿಯವರು ನಮ್ಮ ರಾಜ್ಯದಿಂದಲೇ ಆಯ್ಕೆಯಾಗಿದ್ದರೂ, ನಮ್ಮದು ಡಬಲ್ ಇಂಜಿನ್ ಎಂದು ಹೇಳಿಕೊಳ್ಳುವ ಸರ್ಕಾರವಿದ್ದರೂ ಸಹ, ಕೇಂದ್ರದಿಂದ ಈ ಅನುದಾನವನ್ನು ಪಡೆಯುವಲ್ಲಿ ಹಿಂದಿನ ಸರ್ಕಾರವು ಅಸಮರ್ಥವಾಗಿರುತ್ತದೆ.
ರಾಜ್ಯದ ಅರ್ಥವ್ಯವಸ್ಥೆಯು ಹಿಂದಿನ ಸರ್ಕಾರದ ಅವಧಿಯಲ್ಲಿ ಹದಗೆಟ್ಟಿತ್ತು - ಸಿಎಂ ಸಿದ್ದರಾಮಯ್ಯ
ರಾಜ್ಯದ ಅರ್ಥವ್ಯವಸ್ಥೆಯು ಹಿಂದಿನ ಸರ್ಕಾರದ ಅವಧಿಯಲ್ಲಿ ಹದಗೆಟ್ಟಿರುತ್ತದೆ. ಕೇಂದ್ರ ಸಾಂಖ್ಯಿಕ ಕಛೇರಿಯು ಬಿಡುಗಡೆ ಮಾಡಿರುವ ಮುಂಗಡ ಅಂದಾಜುಗಳ ಪ್ರಕಾರ ರಾಜ್ಯದ ಜಿ.ಎಸ್.ಡಿ.ಪಿ ಯು 2022-23ರಲ್ಲಿ ಶೇ. 7.9 ರಷ್ಟು ಬೆಳವಣಿಗೆ ದಾಖಲಿಸಿದೆ. 2021-22 ರಲ್ಲಿ ರಾಜ್ಯದ ಜಿ.ಎಸ್.ಡಿ.ಪಿ ಬೆಳವಣಿಗೆಯು ಶೇ.11 ರಷ್ಟು ದಾಖಲಾಗಿತ್ತು. 2022-23ರ ವಲಯವಾರು ಬೆಳವಣಿಗೆಯನ್ನು ಗಮನಿಸಿದರೆ, ಕೃಷಿ, ಕೈಗಾರಿಕೆ ಮತ್ತು ಸೇವಾ ವಲಯಗಳಲ್ಲಿನ ಬೆಳವಣಿಗೆಯು ಶೇ. 5.5, 5.1 ಮತ್ತು 9.2 ರಷ್ಟು ಬೆಳವಣಿಗೆಯನ್ನು ದಾಖಲಿಸಿರುತ್ತದೆ - ಸಿಎಂ ಸಿದ್ದರಾಮಯ್ಯ
ಐದು ಗ್ಯಾರಂಟಿಗಳನ್ನು ಜಾರಿ ಮಾಡ್ತೇವೆ - ಸಿಎಂ ಸಿದ್ದರಾಮಯ್ಯ
ಚುನಾವಣೆ ಸಂದರ್ಭದಲ್ಲಿ ಕಾಂಗ್ರೆಸ್ ಪಕ್ಷವು ಕರ್ನಾಟಕದ ಜನತೆಗೆ 5 ಗ್ಯಾರಂಟಿಗಳ ಭರವಸೆ ನೀಡಿದೆ. ಅಧಿಕಾರಕ್ಕೆ ಬಂದ ಕೂಡಲೇ ನಮ್ಮ ಸರ್ಕಾರ ಈ ಗ್ಯಾರಂಟಿ ಯೋಜನೆಗಳ ಜಾರಿಗೆ ತಾತ್ವಿಕ ಅನುಮೋದನೆ ನೀಡಿತು. ಈಗಾಗಲೇ ನಾವು ಮಹಿಳೆಯರಿಗೆ ಉಚಿತ ಸಾರಿಗೆ ಸೌಲಭ್ಯ ನೀಡುವ ಮೂಲಕ ಅವರ ಕನಸುಗಳಿಗೆ ರೆಕ್ಕೆ ಮೂಡಿಸುವ ಶಕ್ತಿ ಯೋಜನೆಯನ್ನು ಜಾರಿಗೊಳಿಸಿದ್ದೇವೆ. ಈಗಾಗಲೇ ಗೃಹಜ್ಯೋತಿ ಯೋಜನೆಗೆ ನೋಂದಣಿ ಪ್ರಕ್ರಿಯೆ ಪ್ರಾರಂಭಿಸಲಾಗಿದ್ದು,
ಗೃಹಲಕ್ಷ್ಮಿ ಯೋಜನೆಯ ನೋಂದಣಿ ಪ್ರಕ್ರಿಯೆಯನ್ನು ಶೀಘ್ರವೇ ಪ್ರಾರಂಭಿಸಲಾಗುವುದು. ಗೃಹಜ್ಯೋತಿ ಯೋಜನೆಯನ್ನು ಜುಲೈ ತಿಂಗಳಿನಿಂದ ಹಾಗೂ ಗೃಹಲಕ್ಷ್ಮಿ ಯೋಜನೆಯನ್ನು ಆಗಸ್ಟ್ ತಿಂಗಳಿನಲ್ಲಿ ಜಾರಿಗೆ ತರುತ್ತೇವೆ. ಯುವನಿಧಿ ಯೋಜನೆಯು 2023ರಲ್ಲಿ ಪದವಿ ಪಡೆದ ಯುವಜನರಿಗಾಗಿ ಜಾರಿಗೆ ಬರಲಿದೆ. ಅನ್ನಭಾಗ್ಯದಡಿ ಪ್ರತಿ ಫಲಾನುಭವಿಗೆ ಕೇಂದ್ರ ಸರ್ಕಾರದಿಂದ ಒದಗಿಸುತ್ತಿರುವ ಐದು ಕೆ.ಜಿ ಅಕ್ಕಿಯ ಜೊತೆಗೆ ರಾಜ್ಯ ಸರ್ಕಾರದಿಂದ ಒದಗಿಸುವ ಹೆಚ್ಚುವರಿ ಐದು ಕೆ.ಜಿ. ಸೇರಿದಂತೆ ಒಟ್ಟಾರೆ 10 ಕೆ.ಜಿ ಆಹಾರ ಧಾನ್ಯವನ್ನು ಪ್ರತಿ ತಿಂಗಳು ವಿತರಿಸಲು ನಾವು ಬದ್ಧರಾಗಿದ್ದೇವೆ.
ಕರ್ನಾಟಕದ ಕಾಫಿ ಬ್ರ್ಯಾಂಡಿಂಗ್ ಮಾಡಲು ಕ್ರಮ
ಚಿಕ್ಕಮಗಳೂರು ಕೊಡಗಿನ ಕಾಫಿ ಎಕೋ ಟೂರಿಸಂ ಉತ್ತೇಜಿಸಲು ಕರ್ನಾಟಕದ ಕಾಫಿ ಬ್ರಾಂಡಿಂಗ್ ಮಾಡಲು ಕ್ರಮ
5 ಗ್ಯಾರೆಂಟಿಗಳ ಜಾರಿಗೆ 52,000 ಕೋಟಿ ಅನುದಾನ
ನಮ್ಮ ಮೆಟ್ರೋಗೆ 30,000 ಕೋಟಿ, ಆಹಾರ ಇಲಾಖೆಗೆ 10,400 ಕೋಟಿ, ಇಂದಿರಾ ಕ್ಯಾಂಟೀನ್‌ಗೆ 100 ಕೋಟಿ, 5 ಗ್ಯಾರೆಂಟಿ ಯೋಜನೆಗಳ ಜಾರಿಗೆ 52,000 ಕೋಟಿ ಅನುದಾನವನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಬಜೆಟ್‌ನಲ್ಲಿ ಘೋಷಿಸಿದ್ದಾರೆ.
ಆರ್ಥಿಕ ಸಮೃದ್ಧಿಯ ಆಶಯದೊಂದಿಗೆ ಸಮಾಜ ನಿರ್ಮಾಣ ಸಾಮಾನ್ಯ ಕನ್ನಡಿಗರ ಬದುಕಿನ ಹಾದಿ - ಸಿಎಂ ಸಿದ್ದರಾಮಯ್ಯ
ಈ ಬಾರಿ ಕರ್ನಾಟಕದ ಜನತೆ ತಮ್ಮ ಮನದಿಂಗಿತವನ್ನು ಗಟ್ಟಿಯಾಗಿ, ಸಂತೋಷದಿಂದ, ಪ್ರಾಮಾಣಿಕವಾಗಿ ಹೇಳಿದ್ದಾರೆ. ಈ ನಾಡಿನ ಜನತೆ ಗಟ್ಟಿ ದನಿಯಲ್ಲಿ ಮಹತ್ವಪೂರ್ಣ ಸಂದೇಶವನ್ನು ಇಡೀ ದೇಶಕ್ಕೆ ಸ್ಪಷ್ಟವಾಗಿ ನೀಡಿದ್ದಾರೆ. ದುಡಿಮೆಯ ಗೌರವ ಎತ್ತಿ ಹಿಡಿಯುವ ತುಡಿತ, ಎಲ್ಲರ ಒಳಿತಿಗೆ ದುಡಿಯುವ ಕನಸು, ಮುಕ್ತ ವಾತಾವರಣದಲ್ಲಿ ಬದುಕುವ ಭರವಸೆ, ಸಾಮಾಜಿಕ ನ್ಯಾಯ ಹಾಗೂ ಸಮತೆ, ಸಮಾನತೆಯ ಮೇಲಿನ ಹಕ್ಕಿನ ಪ್ರತಿಪಾದನೆಯು ಕನ್ನಡಿಗರ ಅಪೇಕ್ಷೆಗಳ ಅಭಿವ್ಯಕ್ತಿಯಾಗಿದೆ. ಕುಟುಂಬ ಪೋಷಣೆ, ಸಾಮಾಜಿಕ ಸಾಮರಸ್ಯ ಹಾಗೂ ಆರ್ಥಿಕ ಸಮೃದ್ಧಿಯ ಆಶಯದೊಂದಿಗೆ ಸಮಾಜ ನಿರ್ಮಾಣ ಸಾಮಾನ್ಯ ಕನ್ನಡಿಗರ ಬದುಕಿನ ಹಾದಿಯಾಗಿದೆ.
ಯಾವ ಕಾಲದ ಶಾಸ್ತ್ರವೇನು ಹೇಳಿದರೇನು
ನನ್ನ ಹಿಂದಿನ ಎಲ್ಲ ಆಯವ್ಯಯಗಳಲ್ಲಿ ʻಸರ್ವರಿಗೂ ಸಮಪಾಲು, ಸರ್ವರಿಗೂ ಸಮಬಾಳುʼ ಎಂಬ ಮೂಲಮಂತ್ರದ, ಕರ್ನಾಟಕ ಮಾದರಿಯ ಆಡಳಿತವನ್ನು ನೀಡುವ ಪ್ರಯತ್ನ ಮಾಡುತ್ತಾ ಬಂದಿದ್ದೆ. ಪ್ರಸ್ತುತ ಮಂಡಿಸುತ್ತಿರುವ ಆಯವ್ಯಯ ಪತ್ರದಲ್ಲಿ ಈ ಮಾದರಿಯನ್ನು ಇನ್ನಷ್ಟು ಆಳವಾಗಿಸುವ, ವಿಸ್ತಾರವಾಗಿಸುವ ಪ್ರಯತ್ನವಿದೆ.
ʻಯಾವ ಕಾಲದ ಶಾಸ್ತ್ರವೇನು ಹೇಳಿದರೇನು,
ಎದೆಯ ದನಿಗೂ ಮಿಗಿಲು ಶಾಸ್ತ್ರವಿಹುದೇನು?ʼ
- ರಾಷ್ಟ್ರಕವಿ ಕುವೆಂಪು
ಮುಖ್ಯಮಂತ್ರಿಯಾಗಿದ್ದ ಅವಧಿಯಲ್ಲಿ ಆರು ಆಯವ್ಯಯ ಪತ್ರಗಳನ್ನು ಮಂಡಿಸಿದ್ದೆ
ಇದು ನಾನು ಮಂಡಿಸುತ್ತಿರುವ ಹದಿನಾಲ್ಕನೆಯ ಆಯವ್ಯಯ ಪತ್ರ. ಮುಖ್ಯಮಂತ್ರಿಯಾಗಿ, ವಿತ್ತೀಯ ಹೊಣೆಯನ್ನು ಹೊತ್ತು ಮಂಡಿಸುತ್ತಿರುವ ಏಳನೆಯ ಬಜೆಟ್. ಈ ಹಿಂದೆ ಮುಖ್ಯಮಂತ್ರಿಯಾಗಿದ್ದ ಅವಧಿಯಲ್ಲಿ ಆರು ಆಯವ್ಯಯ ಪತ್ರಗಳನ್ನು ಮಂಡಿಸಿದ್ದೆ. ನನ್ನ ಇಷ್ಟೂ ಆಯವ್ಯಯ ಪತ್ರಗಳ ಹಿಂದೆ ಯಾವ ಕಲ್ಯಾಣ ರಾಜ್ಯದ ಕನಸನ್ನು ಸಾಕಾರಗೊಳಿಸಲು ಈ ನಾಡಿನ ಶ್ರೇಷ್ಠ ಮನಸ್ಸುಗಳು ಬಯಸಿದ್ದವೋ ಅದನ್ನು ಈಡೇರಿಸಲೇಬೇಕೆನ್ನುವ ಉದ್ದೇಶ, ಬದ್ಧತೆಗಳು ಸ್ಪಷ್ಟವಾಗಿವೆ. ನಮ್ಮ ಪಕ್ಷದ ಧ್ಯೇಯೋದ್ದೇಶವೂ ಸಹ ಇದುವೇ ಆಗಿದೆ.
ಜಿಎಟ್‌ಟಿ ವ್ಯವಸ್ಥೆ ವಿರುದ್ಧ ಮತ್ತೆ ಸಿದ್ದರಾಮಯ್ಯ ಟೀಕೆ
ಜಿಎಸ್‌ಟಿಯ ಶೇ 90ರಷ್ಟು ಮೊತ್ತವು ಬಡವರಿಂದ ಬರುತ್ತದೆ. ಆದರೆ ಆರ್ಥಿಕ ವ್ಯವಸ್ಥೆಯ ಹೆಚ್ಚಿನ ಲಾಭವು ಮೇಲ್ವರ್ಗದವರಿಗೆ ತಲುಪುತ್ತಿದೆ. ಬಡವರ ಅಭ್ಯುದಯಕ್ಕೆ ನಮ್ಮ ಗ್ಯಾರೆಂಟಿ ಯೋಜನೆಗಳು ನೆರವಾಗುತ್ತವೆ. -ಸಿಎಂ ಸಿದ್ದರಾಮಯ್ಯ
ಗ್ಯಾರಂಟಿ ಯೋಜನೆಗಳು ಬಿಟ್ಟಿ ಯೋಜನೆಗಳ ಅಲ್ಲ
ಗ್ಯಾರಂಟಿ ಯೋಜನೆಗಳು ಯಾವುವು ಬಿಟ್ಟಿ ಯೋಜನೆಗಳ ಅಲ್ಲ - ಸಿಎಂ ಸಿದ್ದರಾಮಯ್ಯ
ಮದ್ಯದ ಪ್ರಿಯರಿಗೆ ಶಾಕ್
ಬಿಯರ್ ಮೇಲಿನ ಅಬಕಾರಿ ಸುಂಕ ಶೇಕಡಾ 10 ರಷ್ಟು ಹೆಚ್ಚಳ
ಕರ್ನಾಟಕ ಮಾದರಿ ನನ್ನದು: ಸರ್ವರಿಗೂ ಸಮಪಾಲು, ಸಮಬಾಳು
'ಯಾವ ಕಾಲದ ಶಾಸ್ತ್ರ ಏನು ಹೇಳಿದರೇನು' ಎಂದು ರಾಷ್ಟ್ರಕವಿ ಕುವೆಂಪು ಹೇಳಿದ್ದಾರೆ. ಕರ್ನಾಟಕದ ಜನರು ತಮ್ಮ ಇಂಗಿತ ತಿಳಿಸಿದ್ದಾರೆ. ಕರ್ನಾಟಕ ಮಾದರಿಯ ಆಡಳಿತವನ್ನು ನಾನು ತೋರಿಸುತ್ತೇನೆ. ಸರ್ವರಿಗೂ ಸಮಪಾಲು, ಸಮಬಾಳು ನನ್ನ ಆಶಯ. -ಸಿಎಂ ಸಿದ್ದರಾಮಯ್ಯ
ಅಭಿವೃದ್ಧಿ ಮತ್ತು ಸಾಮಾಜಿಕ ನ್ಯಾಯಕ್ಕೆ ಒತ್ತು: ಸಿದ್ದರಾಮಯ್ಯ
ಅಭಿವೃದ್ಧಿ ಹಾಗೂ ಸಾಮಾಜಿಕ ನ್ಯಾಯವನ್ನು ಒಟ್ಟೊಟ್ಟಿಗೆ ಕೊಂಡೊಯ್ಯುವಲ್ಲಿ ಕರ್ನಾಟಕ ಹೆಸರುವಾಸಿ. ಬಸವಣ್ಣನವರ ಪರಂಪರೆಯನ್ನು ನಾನು ಮುಂದುವರಿಸುತ್ತಿದ್ದೇನೆ. ಇದು ನನ್ನ ಬಜೆಟ್. ಸಿಎಂ ಆಗಿ ಮಂಡಿಸುತ್ತಿರುವ 7ನೇ ಬಜೆಟ್. ನನ್ನ ಇಷ್ಟೂ ಬಜೆಟ್‌ಗಳಲ್ಲಿ ಕಲ್ಯಾಣ ರಾಜ್ಯದ ಕನಸು ಸಾಕಾರಗೊಳಿಸುವ ಆಶಯ ಇತ್ತು. - ಸಿಎಂ ಸಿದ್ದರಾಮಯ್ಯ
14ನೇ ಬಜೆಟ್ ಮಂಡಿಸುತ್ತಿರುವ ಸಿಎಂ ಸಿದ್ದರಾಮಯ್ಯ
ವಿಧಾನಸೌಧದಲ್ಲಿ ಬಜೆಟ್ ಕಲಾಪ ಆರಂಭವಾಗಿದ್ದು, ಸಿಎಂ ಸಿದ್ದರಾಮಯ್ಯ ಅವರು ದಾಖಲೆಯ 14ನೇ ಬಜೆಟ್ ಮಂಡಿಸುತ್ತಿದ್ದಾರೆ.
ಸಂತೋಷದಿಂದ ಸೂಟ್ ಹಾಕಿದ್ದೇನೆ - ಸ್ಪೀಕರ್ ಯುಟಿ ಖಾದರ್
ಜನ ಪರ ಬಜೆಟ್ ಮಂಡನೆ ಮಾಡುವುದರಿಂದ ಸಂತೋಷದಿಂದ ಸೂಟ್ ಹಾಕಿದ್ದೇನೆ ಎಂದ ಸ್ಪೀಕರ್ ಯುಟಿ ಖಾದರ್. ಇದಕ್ಕೆ ಎದ್ದು ನಿಂತ ಮಾಜಿ ಸಿಎಂ ಬಸವರಾಜ ಬೊಮ್ಮಾಯಿ ಅವರು, ನೀವು ಬಜೆಟ್ ಮಂಡಿಸುವಂತಿದ್ದೀರಿ ಎಂದಿದ್ದಾರೆ.
ಕರ್ನಾಟಕ ಜನರ ಮೇಲೆ ಸಾಲ ಹೊರಿಸುವಂತ ಬಜೆಟ್ - ಆರ್ ಅಶೋಕ್
ಸಿದ್ದರಾಮಯ್ಯ ಅವರ ಬಜೆಟ್ ಕರ್ನಾಟಕ ರಾಜ್ಯದ ಜನರ ಮೇಲೆ ಸಾಲ ಹೊರಿಸುವಂತ ಬಜೆಟ್. ಈಗಾಗಲೇ ಜನ ಸಾಲದಲ್ಲಿ ಇದ್ದಾರೆ. ಕಾಂಗ್ರೆಸ್ ಗ್ಯಾರಂಟಿಗಳು ಯಾವುದನ್ನು ಇನ್ನೂ ಕೊಟ್ಟಿಲ್ಲ ಎಂದು ಬಿಜೆಪಿ ಶಾಸಕ ಆರ್ ಅಶೋಕ್ ಹೇಳಿದ್ದಾರೆ.
ಬಿಜೆಪಿ ಚುನಾವಣೆ ವೇಳೆ ನೀಡಿದ್ದ ಪ್ರಣಾಳಿಕೆಯ 608 ಭರವಸೆಗಳಲ್ಲಿ ಶೇ 95 ರಷ್ಟನ್ನು ಈಡೇರಿಸಲೇ ಇಲ್ಲ - ಸಿಎಂ ಸಿದ್ದರಾಮಯ್ಯ
ನಾವು 2013 ಚುನಾವಣೆ ವೇಳೆ ನೋಡಿದ್ದ ಭರವಸೆಗಳನ್ನು ಸರ್ಕಾರ ನಡೆಸಿದ ಐದು ವರ್ಷಗಳಲ್ಲಿ ಈಡೇರಿಸಿ "ನುಡಿದಂತೆ ನಡೆದ ಸರ್ಕಾರ" ಎನ್ನುವ ಹೆಗ್ಗಳಿಕೆ ಗಳಿಸಿದ್ದೇವೆ. ಬಿಜೆಪಿ 2018 ರ ಚುನಾವಣೆ ವೇಳೆ ತನ್ನ ಪ್ರಣಾಳಿಕೆಯಲ್ಲಿ ನೀಡಿದ್ದ 608 ಭರವಸೆಗಳಲ್ಲಿ ಶೇ 95 ರಷ್ಟನ್ನು ಈಡೇರಿಸಲೇ ಇಲ್ಲ. ಹೀಗಾಗಿ ಬಿಜೆಪಿಗೆ ನಮ್ಮ ಕಡೆ ಬೊಟ್ಟು ಮಾಡುವ ನೈತಿಕತೆಯೇ ಇಲ್ಲ. ಹೀಗಾಗಿ ಅಧಿವೇಶನದಲ್ಲಿ ಸುಳ್ಳುಗಳಿಗೆ ಅವರು ಜೋತು ಬೀಳುತ್ತಾರೆ. ನೀವು ಸರಿಯಾಗಿ ಖಚಿತವಾದ ಧ್ವನಿಯಲ್ಲಿ ಸತ್ಯವನ್ನು ಮಾತನಾಡಿ ಎಂದು ಸಿಎಂ ಸಿದ್ದರಾಮಯ್ಯ ಅವರು ಸಿಎಲ್‌ಪಿ ಸಭೆಯಲ್ಲಿ ಹೇಳಿದ್ದಾರೆ.
ಬಿಜೆಪಿಯೇ ನಮ್ಮ ಕಾರ್ಯಕ್ರಮ ಪ್ರಚಾರ ಮಾಡುತ್ತಿದೆ: ಡಿಕೆ ಶಿವಕುಮಾರ್
ಕರ್ನಾಟಕದಲ್ಲಿ ಈ ವರ್ಷವೇ ಎಲ್ಲ 5 ಯೋಜನೆಗಳನ್ನೂ ಜಾರಿ ಮಾಡುತ್ತೇವೆ. ಎಲ್ಲ ಪಕ್ಷ, ಜಾತಿ, ಧರ್ಮದವರಿಗೂ ಈ ಯೋಜನೆಯ ಫಲ ಸಿಗಬೇಕು. ಬಿಜೆಪಿಯವರು ನಮ್ಮ ಆಚಾರ-ವಿಚಾರ ಪ್ರಚಾರ ಮಾಡುತ್ತಿದ್ದಾರೆ. ಅವರಿಗೆ ನಾನು ಅಭಿನಂದನೆ ಸಲ್ಲಿಸುತ್ತೇನೆ ಎಂದು ಡಿಕೆ ಶಿವಕುಮಾರ್ ತಿಳಿಸಿದ್ದಾರೆ.
ನನ್ನ ಮತ್ತು ನನ್ನ ಸರ್ಕಾರದ ಮೇಲೆ ನಿಮ್ಮೆಲ್ಲರ ಆಶೀರ್ವಾದ ಇರಲಿ- ಸಿಎಂ ಸಿದ್ದರಾಮಯ್ಯ
ನನ್ನ ಪ್ರೀತಿಯ ಕನ್ನಡಿಗ ಬಂಧುಗಳೇ, ಜನತೆಯೇ ನನ್ನ ಪಾಲಿನ ಜನಾರ್ಧನರು. ಇನ್ನು ಕೆಲವೇ ಹೊತ್ತಿನಲ್ಲಿ ನನ್ನ ಹದಿನಾಲ್ಕನೇ ಬಜೆಟ್ ಮಂಡಿಸಲಿದ್ದೇನೆ. ನನ್ನ ಮತ್ತು ನನ್ನ ಸರ್ಕಾರದ ಮೇಲೆ ನಿಮ್ಮೆಲ್ಲರ ಆಶೀರ್ವಾದ ಇರಲಿ.
ನನ್ನ ಹಿಂದಿನ ಎಲ್ಲ ಬಜೆಟ್ ಗಳಲ್ಲಿ ‘ಸರ್ವರಿಗೂ ಸಮಪಾಲು, ಸಮಬಾಳು’ ಎಂಬ ಮೂಲಮಂತ್ರದ ‘ಕರ್ನಾಟಕ ಮಾದರಿ’ಯ ಆಡಳಿತವನ್ನು ನೀಡುವ ಪ್ರಯತ್ನ ಮಾಡುತ್ತಾ ಬಂದಿದ್ದೆ. ಪ್ರಸ್ತುತ ಮಂಡಿಸುತ್ತಿರುವ ಆಯವ್ಯಯ ಪತ್ರದಲ್ಲಿ ಈ ಮಾದರಿಯನ್ನು ಇನ್ನಷ್ಟು ಆಳವಾಗಿಸುವ, ವಿಸ್ತಾರವಾಗಿಸುವ ಪ್ರಯತ್ನ ಮಾಡುತ್ತೇನೆ.
ರಾಜಕೀಯ ಪ್ರೇರಿತ ಟೀಕೆ-ಟಿಪ್ಪಣಿಗಳಿಗೆ ಕಿವಿಗೊಡಬೇಡಿ. ನುಡಿದಂತೆಯೇ ನಡೆದಿದ್ದೇನೆ, ಮುಂದೆಯೂ ನಡೆಯುತ್ತೇನೆ. ನಿಮ್ಮ ನಂಬಿಕೆ-ವಿಶ್ವಾಸಗಳನ್ನು ಹುಸಿಗೊಳಿಸುವುದಿಲ್ಲ. ಇದು ನಾನು ನೀಡುವ ಅತ್ಯುನ್ನತ ಗ್ಯಾರಂಟಿ ಎಂದು ಟ್ವೀಟ್ ಮಾಡಿದ್ದಾರೆ.
ಉತ್ತಮ ಬಜೆಟ್ ಖಚಿತ; ಖಂಡ್ರೆ
ಬೆಂಗಳೂರು: ಬಜೆಟ್ ನಲ್ಲಿ 5 ಗ್ಯಾರಂಟಿಗಳ ಜಾರಿ ಮಾಡುತ್ತೇವೆ. ಜನರಿಗೆ ಕೊಟ್ಟ ಭರವಸೆ ಈಡೇರಿಸುತ್ತೇವೆ ಎಂದು ಅರಣ್ಯ ಸಚಿವ ಈಶ್ವರ ಖಂಡ್ರೆ ಹೇಳಿದರು.
ಶಾಸಕಾಂಗ ಸಭೆಯ ನಂತರ ಸುದ್ದಿಗಾರರ ಜತೆ ಮಾತನಾಡಿದ ಅವರು, ಜನಪರ ಆಯವ್ಯಯ ಮಂಡನೆಯಾಗಲಿದೆ. ಸಿದ್ಧರಾಮಯ್ಯ ಉತ್ತಮ ಬಜೆಟ್ ಮಂಡಿಸುತ್ತಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಪಂಚೆ, ಶಲ್ಯ ಧರಿಸಿ ಬಜೆಟ್ ಮಂಡನೆಗೆ ಹೊರಟ ಸಿಎಂ ಸಿದ್ದರಾಮಯ್ಯ
ಬೆಂಗಳೂರು: ಬಜೆಟ್ ಮಂಡನೆಗೆಂದು ಸಿದ್ದರಾಮಯ್ಯ ತಮ್ಮ ನಿವಾಸದಿಂದ ಹೊರಟಾಗ ಸಹಜವಾಗಿಯೇ ಎಲ್ಲರ ಕಣ್ಣು ಅವರು ಧರಿಸಿದ್ದ ಬಟ್ಟೆಗಳ ಮೇಲೆಯೂ ಬಿತ್ತು. ಹೊಸ ಮೈಸೂರು ಪಂಚೆ, ಶಲ್ಯ ಧರಿಸಿ ತೆರಳಿದ ಸಿದ್ದರಾಮಯ್ಯ ಅವರ ಬಟ್ಟೆಗಳ ಅಚ್ಚಬಿಳುಪು ಹೊಳೆಯುತ್ತಿತ್ತು
ಪರಿಷತ್‌ಗೆ ನೂತನವಾಗಿ ಆಯ್ಕೆಯಾದ ಶೆಟ್ಟರ್, ಬೋಸರಾಜ್, ತಿಪ್ಪಣ್ಣರನ್ನು ಸ್ವಾಗತಿಸಿದ ಸಿಎಂ, ಡಿಸಿಎಂ
ನೂತನವಾಗಿ ವಿಧಾನ ಪರಿಷತ್ ಗೆ ಆಯ್ಕೆಯಾದ ಜಗದೀಶ್ ಶೆಟ್ಟರ್, ಬೋಸ್ ರಾಜ್ ಹಾಗೂ ತಿಪ್ಪಣ್ಣ ಕಮಕನೂರು ಅವರನ್ನು ಕಾಂಗ್ರೆಸ್ ಶಾಸಕಾಂಗ ಪಕ್ಷದ ಸಭೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರು ಸ್ವಾಗತಿಸಿ ಅಭಿನಂದಿಸಿದರು.
ಬಜೆಟ್ ನಂತರ ಜನ ಸಂತಸಗೊಳ್ಳಲಿದ್ದಾರೆ - ಸಚಿವ ಎಚ್‌ಕೆ ಪಾಟೀಲ್
ಜನರಿಗೆ ನಿರೀಕ್ಷೆಗಳಿರುವುದು ಸಹಜ. ನಮ್ಮ ಮೇಲೆ ಸಾಕಷ್ಟು ವಿಶ್ವಾಸವನ್ನು ಇಟ್ಟುಕೊಂಡಿದ್ದಾರೆ. ಕರ್ನಾಟಕ ಮತ್ತು ಭಾರತದಲ್ಲಿ ಕಾಂಗ್ರೆಸ್ ಪಕ್ಷ ವಿಶ್ವಾಸಾರ್ಹತೆಯನ್ನು ಹೊಂದಿದ್ದು, ನಾವು ಜನರ ನಿರೀಕ್ಷೆಗೆ ತಕ್ಕಂತೆ ಯೋಜನೆಗಳನ್ನು ಕೊಡುತ್ತೇವೆ. ಬಜೆಟ್ ನಂತರ ಜನ ಸಂತಸಗೊಳ್ಳಲಿದ್ದಾರೆ ಸಚಿವ ಎಚ್‌ಕೆ ಪಾಟೀಲ್ ಹೇಳಿದ್ದಾರೆ.
ಸಂಜೆ 4 ಗಂಟೆಗೆ ಸಿಎಂ ಸಿದ್ದರಾಮಯ್ಯ ಸುದ್ದಿಗೋಷ್ಠಿ
ಬಜೆಟ್ ಮಂಡನೆ ಬಳಿಕ ಸಂಜೆ 4 ಗಂಟೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ವಿಧಾನಸೌಧದಲ್ಲಿ ಸುದ್ದಿಗೋಷ್ಠಿ ನಡೆಸಲಿದ್ದಾರೆ. ಆಯವ್ಯಯದಲ್ಲಿನ ಪ್ರಮುಖ ಯೋಜನೆಗಳು, ಕಾಂಗ್ರೆಸ್ ಗ್ಯಾರಂಟಿಗಳು ಸೇರಿ ಹಲವು ವಿಚಾರಗಳ ಬಗ್ಗೆ ಮಾತನಾಡಲಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಎಲ್ಲಾ ಗ್ಯಾರಂಟಿಗಳನ್ನು ಜಾರಿ ಮಾಡುತ್ತೇವೆ-ಸಚಿವ ಕೆಜೆ ಜಾರ್ಜ್
ಚುನಾವಣೆಗೂ ಮುನ್ನ ನೀಡಿದ್ದ ಕಾಂಗ್ರೆಸ್‌ನ ಗ್ಯಾರಂಟಿಗಳು ಸೇರಿ ಎಲ್ಲಾ ಭರವಸೆಗಳನ್ನು ಜಾರಿ ಮಾಡುತ್ತೇವೆ. ಜನರಿಗೆ ಬಜೆಟ್ ಮೇಲೆ ಭಾರಿ ನಿರೀಕ್ಷೆಗಳಿವೆ ಎಂದು ಇಂಧನ ಸಚಿವ ಕೆಜೆ ಜಾರ್ಜ್ ಹೇಳಿದ್ದಾರೆ.
ಮುಖ್ಯಮಂತ್ರಿಯಾಗಿ 7ನೇ ಬಜೆಟ್ ಮಂಡಿಸಲಿರುವ ಸಿದ್ದರಾಮಯ್ಯ
ಸಿದ್ದರಾಮಯ್ಯ ಅವರು ಮುಖ್ಯಮಂತ್ರಿಯಾಗಿ ಮಂಡಿಸುತ್ತಿರುವ 7ನೇ ಬಜೆಟ್ ಇದಾಗಿದೆ. ಈ ಬಾರಿಯ ಬಜೆಟ್ ಗಾತ್ರ 3,35,000 ಕೋಟಿ ಇರಲಿದ್ದು, ಹಿಂದಿನ ಆಯವ್ಯಯಗಿಂತ 25 ಸಾವಿರ ಕೋಟಿ ಹೆಚ್ಚಾಗಲಿದೆ. ಚುನಾವಣೆ ಸಮಯದಲ್ಲಿ ಕಾಂಗ್ರೆಸ್ ಘೋಷಣೆ ಮಾಡಿದ್ದ ಐದು ಗ್ಯಾರಂಟಿಗಳ ಜಾರಿಗೆ ವಾರ್ಷಿಕವಾಗಿ 59,000 ದಿಂದ 60,000 ಕೋಟಿ ರೂಪಾಯಿ ಬೇಕಾಗಿದೆ.
ಪೂರ್ಣ ಪ್ರಮಾಣ ಬಜೆಟ್ ಅಲ್ಲ, ಪೂರಕ ಬಜೆಟ್
2023ರ ಫೆಬ್ರವರಿ 17 ರಂದು ಬಿಜೆಪಿ ಸರ್ಕಾರದಲ್ಲಿ ಅಂದಿನ ಸಿಎಂ ಆಗಿದ್ದ ಬಸವರಾಜ ಬೊಮ್ಮಾಯಿ ಅವರು 2023-24ನೇ ಸಾಲಿನ ಬಜೆಟ್ ಮಂಡಿಸಿದ್ದರು. ಇದೀಗ ಹೊಸ ಕಾಂಗ್ರೆಸ್ ಸರ್ಕಾರದ ಸಿಎ ಸಿದ್ದರಾಮಯ್ಯ ಅವರು ಆರ್ಥಿಕ ವರ್ಷದ ಪೂರಕ ಬಜೆಟ್ ಮಂಡಿಸಲಿದೆ.
ಸಿಎಂ ಸಿದ್ದರಾಮಯ್ಯ ಮಂಡಿಸಿದ್ದ ಮೊದಲ ಬಜೆಟ್ ಗಾತ್ರ 12,616 ಕೋಟಿ ರೂ.
ಸಿಎಂ ಸಿದ್ದರಾಮಯ್ಯ ಅವರು ಮಂಡಿಸಿದ ಮೊದಲ ಆಯವ್ಯಯದ ಗಾತ್ರ 12,616 ಕೋಟಿ ರೂಪಾಯಿ ಆಗಿತ್ತು. 13ನೇ ಆಯವ್ಯಯದ ಗಾತ್ರ 2,09,181 ಕೋಟಿ ಆಗಿತ್ತು. ಈ ಬಾರಿಯ 14ನೇ ಆಯವ್ಯಯದ ಗಾತ್ರ 3,35,000 ಕೋಟಿ ಆಗಬಹುದು ಎಂದು ಸ್ವತಃ ಮುಖ್ಯಮಂತ್ರಿಗಳೇ ಅಂದಾಜಿಸಿದ್ದಾರೆ.
ಶಾಸಕಾಂಗ ಸಭೆಯಲ್ಲಿ ಸಿಎಂ ಸಿದ್ದರಾಮಯ್ಯ ಭಾಗಿ
ವಿಧಾನಸೌಧದ ಸಮ್ಮೇಳನ ಸಭಾಂಗಣದಲ್ಲಿ ನಡೆಯುತ್ತಿರುವ ಕಾಂಗ್ರೆಸ್ ಶಾಸಕಾಂಗ ಪಕ್ಷದ (ಸಿಎಲ್‌ಪಿ) ಸಭೆಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಭಾಗವಹಿಸಿದ್ದಾರೆ. ಕುಮಾರಕೃಪಾ ರಸ್ತೆಯಲ್ಲಿ ನಿವಾಸದಿಂದ ವಿಧಾನಸೌಧಕ್ಕೆ ಸಿಎಂ ಆಗಮಿಸಿದ್ದಾರೆ.
ಕಾಂಗ್ರೆಸ್ ಶಾಸಕಾಂಗ ಪಕ್ಷದ ಸಭೆ ಆರಂಭ
ಬಜೆಟ್ ಮಂಡನೆಗೂ ಮುನ್ನ ಕಾಂಗ್ರೆಸ್ ಶಾಸಕಾಂಗ ಪಕ್ಷದ ಸಭೆ ಆರಂಭವಾಗಿದೆ. ವಿಧಾನಸೌಧದ ಸಮ್ಮೇಳನ ಸಂಭಾಂಗಣದಲ್ಲಿ ಸಭೆ ನಡೆಯುತ್ತಿದ್ದು, ಸಚಿವರು ಹಾಗೂ ಶಾಸಕರು ಭಾಗವಹಿಸಿದ್ದಾರೆ.
ಬೆಂಗಳೂರಿಗೆ ಭರಪೂರ ಅನುದಾನ ನಿರೀಕ್ಷೆ
ಸಿಎಂ ಸಿದ್ದರಾಮಯ್ಯ ಅವರ ಇಂದಿನ ಬಜೆಟ್‌ನಲ್ಲಿ ಬೆಂಗಳೂರಿಗೆ ಭರಪೂರ ಅನುದಾನ ನಿರೀಕ್ಷೆ ಮಾಡಲಾಗಿದ. 3 ಹೊಸ ಮೆಟ್ರೋ ಮಾರ್ಗ ಹಾಗೂ ಸಬ್‌ಅರ್ಬನ್ ರೈಲಿಗೆ ಅನುದಾನ ನೀಡುವ ಸಾಧ್ಯತೆ ಇದೆ.
ಹೊಸ ಫ್ಲೈಓವರ್‌ಗಳ ಘೋಷಣೆ ಸಾಧ್ಯತೆ
ರಾಜಧಾನಿ ಬೆಂಗಳೂರಿನಲ್ಲಿ ಸಂಚಾರ ದಟ್ಟಣೆ ನಿವಾರಣೆಗಾಗಿ ಹೊಸ ಫ್ಲೈಓವರ್‌ಗಳು ಸೇರಿದಂತೆ ಹಲವು ಯೋಜನೆಗಳನ್ನು ಘೋಷಿಸುವ ಸಾಧ್ಯತೆ ಇದೆ.
ಇಂದಿರಾ ಕ್ಯಾಂಟೀನ್‌ಗೆ ಅನುದಾನ ನಿರೀಕ್ಷೆ
ಹೊಸ ಯೋಜನೆಗಳನ್ನು ಘೋಷಿಸುವ ಬದಲು ಕಾಂಗ್ರೆಸ್ ಗ್ಯಾರಂಟಿಗಳು ಹಾಗೂ ಹಿಂದಿನ ಇಂದಿರಾ ಕ್ಯಾಂಟೀನ್ ಸೇರಿ ಹಲವು ಯೋಜನೆಗಳಿಗೆ ಸಿಎಂ ಸಿದ್ದರಾಮಯ್ಯ ಅನುದಾನ ನೀಡುವ ನಿರೀಕ್ಷೆ ಇದೆ.
ಇಂದು ಮಧ್ಯಾಹ್ನ 12 ಗಂಟೆಗೆ ಸಿಎಂ ಸಿದ್ದರಾಮಯ್ಯ ಬಜೆಟ್ ಮಂಡನೆ
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಇಂದು ದಾಖಲೆಯ 14ನೇ ಬಜೆಟ್ ಮಂಡಿಸಲಿದ್ದಾರೆ. ಮಧ್ಯಾಹ್ನ 12 ಗಂಟೆಗೆ ವಿಧಾನಸೌಧದಲ್ಲಿ ಆಯವ್ಯಯವನ್ನು ಮಂಡಿಸಲಿದ್ದಾರೆ.