logo
ಕನ್ನಡ ಸುದ್ದಿ  /  ಕರ್ನಾಟಕ  /  Karnataka Budget: ಬಜೆಟ್‌ ಮಂಡನೆ ವೇಳೆ ಸಿಎಂ ಸಿದ್ದರಾಮಯ್ಯ ಹೇಳಿದ ಕುವೆಂಪು ಅವರ 'ಯಾವ ಕಾಲದ ಶಾಸ್ತ್ರವೇನು ಹೇಳಿದರೇನು' ಕವನದ ಅರ್ಥವೇನು?

Karnataka Budget: ಬಜೆಟ್‌ ಮಂಡನೆ ವೇಳೆ ಸಿಎಂ ಸಿದ್ದರಾಮಯ್ಯ ಹೇಳಿದ ಕುವೆಂಪು ಅವರ 'ಯಾವ ಕಾಲದ ಶಾಸ್ತ್ರವೇನು ಹೇಳಿದರೇನು' ಕವನದ ಅರ್ಥವೇನು?

Rakshitha Sowmya HT Kannada

Jul 07, 2023 01:08 PM IST

google News

ಬಜೆಟ್‌ ಮಂಡನೆ ವೇಳೆ ಕುವೆಂಪು ಅವರ ಕವನದ ಸಾಲುಗಳನ್ನು ಉಲ್ಲೇಖಿಸಿದ ಸಿಎಂ ಸಿದ್ದರಾಮಯ್ಯ

  • ಮುಖ್ಯಮಂತ್ರಿ ಸಿದ್ದರಾಮಯ್ಯ‌ ಇಂದು (ಜುಲೈ 7) 14 ನೇ ಬಜೆಟ್‌ ಮಂಡಿಸುತ್ತಿದ್ದಾರೆ. ಬಜೆಟ್‌ ಮಂಡನೆ ಆರಂಭದಲ್ಲಿ ಸಿದ್ದರಾಮಯ್ಯ ಉಲ್ಲೇಖಿಸಿದ ರಾಷ್ಟ್ರಕವಿ ಕುವೆಂಪು ಅವರ 'ಯಾವ ಕಾಲದ ಶಾಸ್ತ್ರವೇನು ಹೇಳಿದರೇನು ' ಎಂಬ ಸಾಲುಗಳು ಬಹಳ ಗಮನ ಸೆಳೆದಿದೆ. ಈ ಸಾಲುಗಳ ಅರ್ಥವೇನು, ಮಹತ್ವ ಏನು? ಇಲ್ಲದೆ ಒಂದಿಷ್ಟು ಮಾಹಿತಿ.

ಬಜೆಟ್‌ ಮಂಡನೆ ವೇಳೆ ಕುವೆಂಪು ಅವರ ಕವನದ ಸಾಲುಗಳನ್ನು ಉಲ್ಲೇಖಿಸಿದ ಸಿಎಂ ಸಿದ್ದರಾಮಯ್ಯ
ಬಜೆಟ್‌ ಮಂಡನೆ ವೇಳೆ ಕುವೆಂಪು ಅವರ ಕವನದ ಸಾಲುಗಳನ್ನು ಉಲ್ಲೇಖಿಸಿದ ಸಿಎಂ ಸಿದ್ದರಾಮಯ್ಯ (PC: Facebook)

1944ರಲ್ಲಿ ಪ್ರಕಟವಾದ ಕುವೆಂಪು ಅವರ 'ಕೋಗಿಲೆ ಮತ್ತು ಸೋವಿಯತ್‌ ರಷ್ಯಾ' ಎಂಬ ಕವನ ಸಂಕಲನದಲ್ಲಿ'ಯಾವ ಕಾಲದ ಶಾಸ್ತ್ರವೇನು ಹೇಳಿದರೇನು?' ಎಂಬ ಕವನ ಇದೆ.

ಕವನದ ಪೂರ್ತಿ ಸಾಲುಗಳು

ಯಾವ ಕಾಲದ ಶಾಸ್ತ್ರವೇನು ಹೇಳಿದರೇನು?

ಎದೆಯ ದನಿಗೂ ಮಿಗಿಲು ಶಾಸ್ತ್ರವಿಹುದೇನು?

ಎಂದೋ ಮನು ಬರೆದಿಟ್ಟುದಿಂದೆಮಗೆ ಕಟ್ಟೇನು?

ನಿನ್ನೆದೆಯ ದನಿಯೆ ಋಷಿ ! ಮನು ನಿನಗೆ ನೀನು !

ನೀರಡಿಸಿ ಬಂದ ಸೋದರಗೆ ನೀರನು ಕೊಡಲು

ಮನುಧರ್ಮಶಾಸ್ತ್ರವೆನಗೊರೆಯಬೇಕೇನು ?

ನೊಂದವನ ಕಂಬನಿಯನೊರಸಿ ಸಂತೈಸುವೊಡೆ

ಶಾಸ್ತ್ರ ಪ್ರಮಾಣವದಕಿರಲೆ ಬೇಕೇನು ?

ಪಂಚಮರ ಶಿಶುವೊಂದು ಕೆರೆಯಲ್ಲಿ ಮುಳುಗುತಿರೆ

ದಡದಲ್ಲಿ ಮೀಯುತ್ತಾ ನಿಂತಿರುವ ನಾನು

ಮುಟ್ಟಿದರೆ ಬ್ರಹ್ಮತ್ವ ಕೆಟ್ಟು ಹೋಗುವುದೆಂದು

ಸುಮ್ಮನಿದ್ದರೆ ಶಾಸ್ತ್ರ ಸಮ್ಮತವದೇನು?

ಅಂತು ಮನು ತಾನು ಹೇಳಿರಲಾರನಯ್ಯಯ್ಯೋ !

ಹೇಳಿದ್ದರವನೂ ಶಾಸ್ತ್ರದೊಳೆ ಸುತ್ತಿ,

ಸ್ವರ್ಗ ಹೋಗಲಿ, ಮತ್ತೆ ನರಕ ಬಂದರು ಬರಲಿ,

ಎದೆಯ ಧೈರ್ಯವ ಮಾಡಿ ಬಿಸುಡಾಚೆಗೆತ್ತಿ !

ಸ್ವರ್ಗ ಹೋಗುವುದಿಲ್ಲ, ನರಕ ಬರುವುದು ಇಲ್ಲ;

ಸ್ವರ್ಗ ನರಕಗಳೇನು ಶಾಸ್ತ್ರಸ್ಥವಲ್ಲ.

ಎದೆಯ ದನಿ ಧರ್ಮನಿಧಿ! ಕರ್ತವ್ಯವದುವೆ ವಿಧಿ !

ನಂಬದನು; ಅದನುಳಿದು ಋಷಿಯು ಬೇರಿಲ್ಲ !

ಹಿಂದಿನಾ ಋಷಿಗಳೂ ಮಾನವರೆ ನಮ್ಮಂತೆ,

ಅವರ ಶಾಸ್ತ್ರವು ಅವರ ಕಾಲಕ್ಕೆ ಮಾತ್ರ;

ಕಾಲಕ್ಕೆ ತಕ್ಕಂತೆ, ದೇಶಕ್ಕೆ ತಕ್ಕಂತೆ

ನಮ್ಮ ಹೃದಯವೇ ನಮಗೆ ಶ್ರೀಧರ್ಮಸೂತ್ರ !

ಕವನದ ಅರ್ಥ

  • ಮನು ಶಾಸ್ತ್ರವೇ ಆಗಿರಲಿ ಬೇರೆ ಯಾವುದೇ ಶಾಸ್ತ್ರವಿರಲಿ ನಮ್ಮ ಮನಸ್ಸಿನ ಮಾತಿಗೆ ಮಿಗಿಲಾದ ಯಾವುದೇ ಶಾಸ್ತ್ರವಿಲ್ಲ. ಮಾನವೀಯತೆ ಬಹಳ ಮುಖ್ಯ, ಶಾಸ್ತ್ರದ ಹೆಸರಿನಲ್ಲಿ ನಡೆಯುವ ಮೌಢ್ಯತೆ ನಿಲ್ಲಬೇಕು.
  • ಬಾಯಾರಿಕೆ ಎಂದು ಬಂದವರಿಗೆ ಒಂದಿಷ್ಟು ನೀರು ಕೊಡಲು, ಕಷ್ಟದಲ್ಲಿರುವವರಿಗೆ ಸಹಾಯ ಮಾಡಲು ಮನು ಶಾಸ್ತ್ರದ ವಿನ ಅಪ್ಪಣೆ ಏಕೆ ಬೇಕು? ಮಗುವೊಂದು ನೀರಿನಲ್ಲಿ ಮುಳುಗುವಾಗ ಹತ್ತಿರದಲ್ಲೇ ಇದ್ದ ಅಸ್ಪೃಶ್ಯನೊಬ್ಬ ಧರ್ಮ ಶಾಸ್ತ್ರವನ್ನು ನೋಡುತ್ತಾ ಆ ಮಗುವನ್ನು ಮುಟ್ಟಿದರೆ ತಪ್ಪು ಎಂದು ಅದನ್ನು ಉಳಿಸದೆ ಇದ್ದರೆ ಆದೀತೇ? ಕಷ್ಟದ ಸಮಯದಲ್ಲಿ, ಒಬ್ಬರ ಪ್ರಾಣ ಹೋಗುವ ಸಮಯದಲ್ಲೂ ಧರ್ಮದ ಪರಿಪಾಲನೆ ಅಗತ್ಯವೇ?
  • ಮಾನವೀಯತೆಗೆ ವಿರುದ್ಧವಾದ ಅಂತಹ ಶಾಸ್ತ್ರ , ಗ್ರಂಥಗಳು ಓದಲು ಅರ್ಹವಲ್ಲ. ಅದರ ಬದಲಿಗೆ ಅದನ್ನು ಸುತ್ತಿ ಬಿಸಾಡಲು ಮಾತ್ರ ಯೋಗ್ಯ. ಋಷಿಗಳು ಕೂಡಾ ನಮ್ಮಂತೆ ಮನುಷ್ಯರು. ಅವರ ಶಾಸ್ತ್ರ ಆ ಕಾಲಕ್ಕೆ ಮಾತ್ರ ಅನ್ವಯ, ಆಯಾ ಕಾಲಕ್ಕೆ ತಕ್ಕಂತೆ , ಆಯಾ ಸಮಯ ಸಂದರ್ಭ, ಪರಿಸ್ಥಿಗೆ ತಕ್ಕಂತೆ ನಮ್ಮ ಮನಸ್ಸು ಹೇಳಿದಂತೆ ನಡೆದುಕೊಳ್ಳಬೇಕು.
  • ನಮ್ಮ ಮನಸ್ಸಿನ ಮಾತೇ ನಮಗೆ ಶ್ರೀಧರ್ಮಸೂತ್ರ ಎನ್ನುವುದು ಈ ಕವನದ ಅರ್ಥವಾಗಿದೆ.

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ