logo
ಕನ್ನಡ ಸುದ್ದಿ  /  ಕರ್ನಾಟಕ  /  Karnataka Budget 2023: ಬೆಂಗಳೂರಿನ ಮೂಲಭೂತ ಸೌಕರ್ಯ ಸಮಸ್ಯೆಗಳನ್ನು ಬಗೆಹರಿಸಲು ಹೆಚ್ಚಿದ ಒತ್ತಡ; ಬಜೆಟ್‌ನಲ್ಲಿ ಶ್ರೀಸಾಮನ್ಯರ ನಿರೀಕ್ಷೆ

Karnataka Budget 2023: ಬೆಂಗಳೂರಿನ ಮೂಲಭೂತ ಸೌಕರ್ಯ ಸಮಸ್ಯೆಗಳನ್ನು ಬಗೆಹರಿಸಲು ಹೆಚ್ಚಿದ ಒತ್ತಡ; ಬಜೆಟ್‌ನಲ್ಲಿ ಶ್ರೀಸಾಮನ್ಯರ ನಿರೀಕ್ಷೆ

HT Kannada Desk HT Kannada

Jul 05, 2023 05:09 PM IST

google News

ಬೆಂಗಳೂರಿನ ಶ್ರೀಸಾಮಾನ್ಯರಿಗೆ ಬಜೆಟ್‌ ಮೇಲಿರುವ ನಿರೀಕ್ಷೆಗಳು

    • Budget 2023: ಇನ್ನು ಮೂರು ದಿನಗಳಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ತಮ್ಮ ದಾಖಲೆಯ 14ನೇ ಬಜೆಟ್ ಮಂಡಿಸಲಿದ್ದಾರೆ. ನಾಲ್ಕು ತಿಂಗಳ ಅವಧಿಯಲ್ಲಿ ಮಂಡನೆಯಾಗುತ್ತಿರುವ ಇದು ಎರಡನೇ ಬಜೆಟ್. ಹಾಗಾಗಿ ಇಡೀ ರಾಜ್ಯ ಮತ್ತು ವಿಶೇಷವಾಗಿ ಬೆಂಗಳೂರು ಈ ಆಯವ್ಯಯ ಕುರಿತು ಮಹತ್ವದ ನಿರೀಕ್ಷೆಗಳನ್ನು ಇಟ್ಟುಕೊಂಡಿದೆ
ಬೆಂಗಳೂರಿನ ಶ್ರೀಸಾಮಾನ್ಯರಿಗೆ ಬಜೆಟ್‌ ಮೇಲಿರುವ ನಿರೀಕ್ಷೆಗಳು
ಬೆಂಗಳೂರಿನ ಶ್ರೀಸಾಮಾನ್ಯರಿಗೆ ಬಜೆಟ್‌ ಮೇಲಿರುವ ನಿರೀಕ್ಷೆಗಳು

ಬೆಂಗಳೂರು: ರಾಜ್ಯ ಮತ್ತು ದೇಶದ ಅಭಿವೃದ್ಧಿಗೆ ಬೆಂಗಳೂರಿನ ಕೊಡುಗೆ ಅನನ್ಯ. ಆರ್ಥಿಕ ಚಟುವಟಿಕೆಗಳು ವರ್ಷದಿಂದ ವರ್ಷಕ್ಕೆ ಹೆಚ್ಚುತ್ತಿರುವುದರ ಜತೆಗೆ ಮೂಲಭೂತ ಸಮಸ್ಯೆಗಳೂ ಹೆಚ್ಚುತ್ತಿವೆ. ಆದರೆ ಈ ಸಮಸ್ಯೆಗಳನ್ನು ಬಗೆಹರಿಸುವಲ್ಲಿ ಸರಕಾರಗಳು ವಿಫಲವಾಗುತ್ತಿದ್ದು, ಜನಸಂಖ್ಯೆ ಹೆಚ್ಚಳದಂತಹ ಸಬೂಬುಗಳನ್ನು ನೀಡುತ್ತಾ ತನ್ನ ಹುಳುಕುಗಳನ್ನು ಮುಚ್ಚಿ ಹಾಕುತ್ತಾ ಬಂದಿವೆ.

ಹೊಸ ಸರಕಾರ ಬೆಂಗಳೂರಿನ ಅಭಿವೃದ್ಧಿಯನ್ನು ಕಡೆಗಣ ಸುವುದಿಲ್ಲ ಎಂಬ ನಿರೀಕ್ಷೆ ಶ್ರೀ ಸಾಮಾನ್ಯರು ಮತ್ತು ನಗರ ತಜ್ಞರ ಅಭಿಪ್ರಾಯವಾಗಿದೆ. ಬೆಂಗಳೂರಿನ ಬೇಕು ಬೇಡಗಳನ್ನು ಕುರಿತು ಸರಕಾರ ಮೊದಲು ಅಧ್ಯಯನ ನಡೆಸಬೇಕು. ಬೆಂಗಳೂರಿನ ಸುತ್ತ ಮುತ್ತಲಿನ ಜಿಲ್ಲಾ ಮತ್ತು ತಾಲೂಕು ಕೇಂದ್ರಗಳನ್ನು ಅಭಿವೃದ್ಧಿಪಡಿಸಿದರೆ ಬೆಂಗಳೂರಿನ ಅರ್ಧದಷ್ಟು ಸಮಸ್ಯೆಗಳು ತಾನೇ ತಾನಾಗಿಯೇ ಕಡಿಮೆಯಾಗುತ್ತವೆ.

ಬೆಂಗಳೂರನ್ನು ಅತಿಯಾಗಿ ಕಾಡುವ ಸಮಸ್ಯೆಗಳಲ್ಲಿ ಸಂಚಾರ ದಟ್ಟಣೆ ಅಗ್ರ ಸ್ಥಾನದಲ್ಲಿದೆ. ಈಗ ಅಸ್ತಿತ್ವದಲ್ಲಿರುವ ರಿಂಗ್ ರಸ್ತೆಗಳನ್ನೂ ಮೀರಿ ಬೆಂಗಳೂರು ಬೆಳೆದಿದೆ. ಹೊಸದಾಗಿ ಎಲಿವೇಟೆಡ್ ರಸ್ತೆಗಳು ಮತ್ತು ಫೆರಿಫೆರಲ್ ರಿಂಗ್ ರಸ್ತೆಗಳನ್ನು ಕುರಿತು ಪ್ರತಿ ಸರಕಾರ ಮಾತನಾಡುತ್ತಲೇ ಇದೆಯೇ ಹೊರತು ಕಾರ್ಯಗತಗೊಳಿಸಲು ಮನಸ್ಸು ಮಾಡಿಲ್ಲ. ಈ ರಸ್ತೆಗಳ ಅಭಿವೃದ್ದಿಗೆ ಆದ್ಯತೆ ಕೊಡಬೇಕಿದೆ.

ಕೇಂದ್ರ ಸರಕಾರದ ಸಹಭಾಗಿತ್ವದಲ್ಲಿ ಸ್ಯಾಟಲೈಟ್ ಟೌನ್ ರಿಂಗ್ ರಸ್ತೆಗಳನ್ನು ಅಭಿವೃದ್ಧಿಪಡಿಸಲು ಈ ಹಿಂದೆ ಪ್ರಸ್ತಾಪ ಮಾಡಲಾಗಿತ್ತು. ಈಗ ಇಂತಹ ಯೋಜನೆಯನ್ನು ಕೈಗೆತ್ತಿಕೊಳ್ಳಬೇಕಿದೆ. ನಮ್ಮ ಮೆಟ್ರೋ ಜಾಲವನ್ನು ಸಮರೋಪಾದಿಯಲ್ಲಿ ವಿಸ್ತರಿಸಬೇಕಿದೆ. ಮೂರನೇ ಹಂತದ 44.65 ಕಿ.ಮೀ ಉದ್ದದ ಮೆಟ್ರೋ ರೈಲು ಕಾಮಗಾರಿಗೆ 16,328 ಕೋಟಿ ರೂ.ಗಳ ಸಮಗ್ರ ಯೋಜನಾ ವರದಿಯನ್ನು ಕೇಂದ್ರಕ್ಕೆ ಸಲ್ಲಿಸಲಾಗಿದ್ದು, ಸಹಭಾಗಿತ್ವದಲ್ಲಿ ಕೈಗೆತ್ತಿಕಳ್ಳುವ ಬಗ್ಗೆ ಚಿಂತನೆ ನಡೆಸಬೇಕು. ಜತೆ ಜತೆಗೆ ಸಬ್ ಅರ್ಬನ್ ಅಥವಾ ಬೆಂಗಳೂರು ಉಪ ನಗರ ರೈಲ್ವೇ ಯೋಜನೆಯನ್ನು ಜಾರಿಗೊಳಿಸಲು ಸರಕಾರ ಆದ್ಯತೆ ನೀಡಬೇಕು. ಅಂದುಕೊಂಡಂತೆ ನಡೆದಿದ್ದರೆ 2024-25 ಹೊತ್ತಿಗೆ ಪೂರ್ಣಗೊಳ್ಳಬೇಕಿತ್ತು. ಆದರೆ ಇನ್ನೂ ಕಾರ್ಯಾರಂಭ ಮಾಡಿಲ್ಲ.

ತ್ಯಾಜ್ಯ ನಿರ್ವಹಣೆ ಮತ್ತೊಂದು ಸಮಸ್ಯೆ. ತ್ಯಾಜ್ಯ ಸಂಸ್ಕರಣೆಗಾಗಿ ಪ್ರತಿಯೊಂದು ವಾರ್ಡ್‍ನಲ್ಲಿ ಸಂಸ್ಕರಣಾ ಘಟಕವನ್ನು ಸ್ಥಾಪಿಸುವುದಾಗಿ ಹೇಳಲಾಗುತ್ತಿದ್ದರೂ ಅದು ಅಸಾಧ್ಯವಾದ ಮಾತು. ನಗರದೊಳಗಿನ ನೂರು ವಾರ್ಡ್‍ಗಳಲ್ಲಿ ಸ್ಥಳಾವಕಾಶವೇ ಲಭ್ಯವಿಲ್ಲ. ಬೆಂಗಳೂರಿನಲ್ಲಿ ಮಳೆ ಬಂದರೆ ಹತ್ತಾರು ಪ್ರದೇಶಗಳು ಜಲಾವೃತವಾಗುತ್ತವೆ. ಈ ವರ್ಷ 200 ಕಿ.ಮೀ. ಒಳಚರಂಡಿ ವ್ಯವಸ್ಥೆಯನ್ನು ಸರಿಪಡಿಸಿದರೆ ಈ ಸಮಸ್ಯೆ ಕಡಿಮೆ ಮಾಡಬಹುದು ಎನ್ನುವುದು ತಜ್ಞರ ಅಭಿಪ್ರಾಯ.

ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಗೆ 110 ಗ್ರಾಮಗಳು ಸೇರ್ಪಡೆಗೊಂಡು ದಶಕವೇ ಉರುಳಿದ್ದರೂ ಅಭಿವೃದ್ಧಿ ಮರೀಚಿಕೆಯಾಗಿದೆ. ಈ ಹಳ್ಳಿಗಳನ್ನು ಅಭಿವೃದ್ಧಿಪಡಿಸಿದರೆ ಬೆಂಗಳೂರಿನ ಮೇಲಿನ ಒತ್ತಡವನ್ನು ಕಡಿಮೆ ಮಾಡಬಹುದಾಗಿದೆ. ಬೆಂಗಳೂರಿಗೆ ಪ್ರತ್ಯೇಕ ಆರೋಗ್ಯ ವ್ಯವಸ್ಥೆ ರೂಪಿಸಬೇಕು ಎನ್ನುವುದು ಬೆಂಗಳೂರಿನ ನಾಗರೀಕರ ವರ್ಷಗಳ ಬೇಡಿಕೆ. ಈ ವ್ಯವಸ್ಥೆಯಡಿಯಲ್ಲಿ ಬೆಂಗಳೂರಿನ ಎಲ್ಲ ಆಸ್ಪತ್ರೆಗಳನ್ನು ಒಂದೇ ವ್ಯವಸ್ಥೆಯಡಿಯಲ್ಲಿ ತಂದು ಆರೋಗ್ಯ ವ್ಯವಸ್ಥೆಯನ್ನು ಸುಧಾರಿಸಬೇಕು ಎನ್ನುವ ಬೇಡಿಕೆಯತ್ತ ಸರಕಾರ ಚಿತ್ತ ಹರಿಸಬೇಕು.

ಬೆಂಗಳೂರು ಕಾಂಕ್ರಿಟ್ ಕಾಡಾಗುತ್ತಿರುವುದು ದುರ್ದೈವದ ಸಂಗತಿ. ಈ ಆರೋಪವನ್ನು ಕಡಿಮೆ ಮಾಡುವ ನಿಟ್ಟಿನಲ್ಲಿ ಬಿಬಿಎಂಪಿ ವ್ಯಾಪ್ತಿಯಲ್ಲಿ 25 ಲಕ್ಷ ಸಸಿಗಳನ್ನು ನೆಡುವ ಅಭಿಯಾನ ನಡೆಸಬೇಕು. ಈ ಮೂಲಕ ಹಸಿರು ನಗರ ಎಂಬ ಹೆಸರನ್ನು ಮತ್ತೆ ತಂದುಕೊಡಲು ಪ್ರಯತ್ನ ನಡೆಸಬೇಕು. ಈ ಬೇಡಿಕೆಯನ್ನು ಸರಕಾರ ಲಘುವಾಗಿ ಪರಿಗಣ ಸಬಾರದು.

ಬೆಂಗಳೂರಿನ ಸರಕಾರದ ಆಸ್ತಿಗಳನ್ನು ಗುಳುಂ ಮಾಡುವುದಕ್ಕೆ ಕಡಿವಾಣ ಹಾಕಲು ಆಧುನಿಕ ತಂತ್ರಜ್ಞಾನವನ್ನು ಬಳಸಿಕೊಂಡು ಜಿಪಿಎಸ್ ಅಳವಡಿಸಲು ಬೆಂಗಳೂರಿನ ಪ್ರಜ್ಞಾವಂತ ನಾಗರೀಕರು ಆಗ್ರಹಪಡಿಸುತ್ತಿದ್ದಾರೆ. ಈ ಯೋಜನೆ ಸರಕಾರಕ್ಕೆ ಹೊರೆಯಾಗುವುದಿಲ್ಲ. ಆದರೆ ಮನಸ್ಸು ಮಾಡಬೇಕು ಅಷ್ಟೇ.

ಎಲ್ಲ ಸಮಸ್ಯೆಗಳಿನ್ನು ಒಂದೇ ಬಾರಿಗೆ ಬಗೆಹರಿಸುವುದು ಸುಲಭವಲ್ಲ. ಸಾಧ್ಯವೂ ಇಲ್ಲ. ಹಾಗಾಗಿ ಆದ್ಯತೆಯ ಮೇರೆಗೆ ಬೆಂಗಳೂರಿನ ಸಮಸ್ಯೆ ಮತ್ತು ಬೇಡಿಕೆಗಳನ್ನು ಬಗೆಹರಿಸಲು ಒತ್ತು ನೀಡಬೇಕು. ಐದು ಗ್ಯಾರಂಟಿಗಳನ್ನು ಈಡೇರಿಸಲು ಅಭಿವೃದ್ಧಿಯ ಬಜೆಟ್ ಹಣವನ್ನು ಬಳಸಿಕೊಳ್ಳುವುದನ್ನು ಒಪ್ಪಲು ಸಾಧ್ಯವಿಲ್ಲ. ಸರಕಾರ ಅಂತಹ ಪ್ರಯತ್ನವನ್ನು ಮಾಡಬಾರದು. ರಾಜ್ಯ ಮತ್ತು ಬೆಂಗಳೂರಿನ ಅಭಿವೃದ್ಧಿಗೆ ಕೊಡಬೇಕಾದುದನ್ನು ಕೊಟ್ಟು ಉಚಿತ ಯೋಜನೆಗಳನ್ನು ಪೂರೈಸಲು ಹಣ ಹೊಂದಿಸಿಕೊಳ್ಳಲು ಅನ್ಯ ಮಾರ್ಗಗಳನ್ನು ಹುಡುಕಿಕೊಳ್ಳಬೇಕು. ಒಂದು ವೇಳೆ ಅಭಿವೃದ್ಧಿ ಕುಂಠಿತವಾದರೆ ಕಾಂಗ್ರೆಸ್ ಸರಕಾರ ಭಾರಿ ಬೆಲೆ ತೆರಬೇಕಾದೀತು ಎನ್ನುವುದನ್ನು ಮರೆಯಬಾರದು.

ವರದಿ: ಎಚ್. ಮಾರುತಿ

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ