Karnataka Assembly Session:ಇಂದಿನಿಂದ ಬಜೆಟ್ ಅಧಿವೇಶನ, ರಾಜ್ಯಪಾಲ ಥಾವರ್ ಚಂದ್ ಭಾಷಣ, ಅಧಿವೇಶನದ 10 ಅಂಶಗಳು
Feb 10, 2023 09:34 AM IST
Karnataka Assembly Session:ಇಂದಿನಿಂದ ಬಜೆಟ್ ಅಧಿವೇಶನ, ರಾಜ್ಯಪಾಲ ಥಾವರ್ ಚಂದ್ ಭಾಷಣ
- ಹದಿನೈದನೇ ವಿಧಾನಸಭೆಯ ಅಧಿವೇಶನ ಇಂದು ಆರಂಭಗೊಳ್ಳಲಿದ್ದು, ವಿಧಾನಸಭೆಯ ಜಂಟಿ ಅಧಿವೇಶನವನ್ನು ಉದ್ದೇಶಿಸಿ ರಾಜ್ಯಪಾಲ ಥಾವರ್‌ಚಂದ್ ಗೆಹ್ಲೂಟ್ ಅವರು ಭಾಷಣ ಮಾಡಲಿದ್ದಾರೆ.
ಬೆಂಗಳೂರು: ಹದಿನೈದನೇ ವಿಧಾನಸಭೆಯ ಅಧಿವೇಶನ ಇಂದು ಆರಂಭಗೊಳ್ಳಲಿದ್ದು, ವಿಧಾನಸಭೆಯ ಜಂಟಿ ಅಧಿವೇಶನವನ್ನು ಉದ್ದೇಶಿಸಿ ರಾಜ್ಯಪಾಲ ಥಾವರ್‌ಚಂದ್ ಗೆಹ್ಲೂಟ್ ಅವರು ಭಾಷಣ ಮಾಡಲಿದ್ದಾರೆ. ಬೆಳಗ್ಗೆ ಹನ್ನೊಂದು ಗಂಟೆಗೆ ರಾಜ್ಯಪಾಲರು ವಿಧಾನಸೌಧಕ್ಕೆ ಆಗಮಿಸಲಿದ್ದಾರೆ. ಈಗ ರಾಜ್ಯಪಾಲರನ್ನು ಸ್ವಾಗತಿಸಲು ತಯಾರಿಗಳನ್ನು ಮಾಡಿಕೊಳ್ಳಲಾಗುತ್ತಿದೆ.
ಮೂರು ಪಕ್ಷಗಳ ಶಾಸಕರು ಚುನಾವಣಾ ಸಂಬಂಧಿತ ಕೆಲಸಗಳಲ್ಲಿ ನಿರತರಾಗಿದ್ದು, ಈ ಹಿನ್ನೆಲೆಯಲ್ಲಿ ಅಧಿವೇಶನ ನೀರಸವಾಗಿರುವ ನಿರೀಕ್ಷೆಯಿದೆ. ಪಂಚರತ್ನ ಯಾತ್ರೆಯಲ್ಲಿ ನಿರತರಾಗಿರುವ ಜೆಡಿಎಸ್ ಮುಖಂಡ, ಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾಮಿ ಅವರು ಅಧಿವೇಶನದಲ್ಲಿ ಪಾಲ್ಗೊಳ್ಳುವ ಸಾಧ್ಯತೆ ಕಡಿಮೆ ಇದೆ ಎನ್ನಲಾಗಿದೆ. ದಕ್ಷಿಣ ಕರ್ನಾಟಕ ಭಾಗದಲ್ಲಿ ಯಾತ್ರೆಯ ನೇತೃತ್ವ ವಹಿಸಿರುವ ರಾಜ್ಯ ಕಾಂಗ್ರೆಸ್ ಅಧ್ಯಕ್ಷ ಡಿಕೆ ಶಿವಕುಮಾರ್ ಕೂಡ ಆರಂಭದಲ್ಲಿ ಅಧಿವೇಶನದಲ್ಲಿ ಪಾಲ್ಗೊಳ್ಳುವ ಸಾಧ್ಯತೆಗಳಿಲ್ಲ. ಸಿಎಂ ಬೊಮ್ಮಾಯಿ ಮತ್ತು ಬಿಜೆಪಿಯ ಹಿರಿಯ ನಾಯಕರು ಚುನಾವಣಾ ಕೆಲಸದಲ್ಲಿ ಬ್ಯುಸಿಯಾಗಿದ್ದಾರೆ. ಸೋಮವಾರ ಪ್ರಧಾನಿ ಮೋದಿ ಬೆಂಗಳೂರಿಗೆ ಆಗಮಿಸಲಿದ್ದು, ಏರೋ ಇಂಡಿಯಾಕ್ಕೆ ಚಾಲನೆ ನೀಡಲಿದ್ದಾರೆ. ಹೀಗಾಗಿ, ಕಲಾಪದಲ್ಲಿ ಎಷ್ಟು ಜನರು ಪಾಲ್ಗೊಳ್ಳುತ್ತಾರೆ ಎನ್ನುವುದನ್ನು ಕಾದು ನೋಡಬೇಕಿದೆ.
ಹತ್ತು ಅಂಶಗಳು
- ಇದು ವರ್ಷದ ಮೊದಲ ಅಧಿವೇಶನವಾಗಿದ್ದು, ಇಂದು ರಾಜ್ಯಪಾಲರ ಭಾಷಣ ಮಾತ್ರ ಇರಲಿದೆ. ರಾಜ್ಯಪಾಲರ ಭಾಷಣದ ಬಳಿಕ ಸಂತಾಪ ಸೂಚನೆ ನಡೆಯಲಿದೆ. ಬಳಿಕ ಕಲಾಪವನ್ನು ಸ್ಪೀಕರ್ ಮುಂದೂಡಲಿದ್ದಾರೆ. ಸೋಮವಾರದಿಂದ ಕಲಾಪಗಳು ನಡೆಯಲಿವೆ.
- ಜಂಟಿ ಅಧಿವೇಶನಕ್ಕೆ ಆಗಮಿಸಿ ಉಭಯ ಸದನಗಳನ್ನು ಉದ್ದೇಶಿಸಿ ಮಾತನಾಡುವಂತೆ ರಾಜ್ಯಪಾಲರಿಗೆ ಈಗಾಗಲೇ ಆಹ್ವಾನ ನೀಡಲಾಗಿದೆ. ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ ಹಾಗೂ ವಿಧಾನಪರಿಷತ್ ಸಭಾಪತಿ ಬಸವರಾಜ ಹೊರಟ್ಟಿ ಅವರು ರಾಜ್ಯಪಾಲರಿಗೆ ಆಹ್ವಾನ ನೀಡಿದ್ದಾರೆ.
- ಅಧಿವೇಶನ ಆರಂಭದ ಮೊದಲ ವಾರ ರಾಜ್ಯಪಾಲರ ಭಾಷಣದ ಮೇಲಿನ ಚರ್ಚೆ ನಡೆಯಲಿದೆ. ಜತೆಗೆ ವಂದನಾ ನಿರ್ಣಯ ನಡೆಯಲಿದೆ.
- ಫೆಬ್ರವರಿ 17 ರಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಬಜೆಟ್ ಮಂಡಿಸಲಿದ್ದಾರೆ. ಬಳಿಕ ನಾಲ್ಕು ದಿನ ಬಜೆಟ್ ಮೇಲಿನ ಚರ್ಚೆ ನಡೆಯಲಿದೆ.
- ತಾವು ಮುಂದಿನ ಬಾರಿ ಚುನಾವಣೆಗೆ ಸ್ಪರ್ಧಿಸುವುದಿಲ್ಲ ಎಂದು ಮಾಜಿ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಘೋಷಿಸಿದ್ದಾರೆ. ಹೀಗಾಗಿ, ಬಿಎಸ್ ಯಡಿಯೂರಪ್ಪ ಅವರಿಗೆ ಶಾಸಕರಾಗಿ ಭಾಗವಹಿಸುವ ಕೊನೆಯ ಅಧಿವೇಶನವಾಗಿದೆ.
- ಎಲ್ಲರೂ ಕಡ್ಡಾಯವಾಗಿ ಅಧಿವೇಶನಕ್ಕೆ ಹಾಜರಾಗಬೇಕು ಎಂದು ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ ತಿಳಿಸಿದ್ದಾರೆ. ಚುನಾವಣಾ ವರ್ಷವಾಗಿರುವುದರಿಂದ ಕ್ಷೇತ್ರಗಳಲ್ಲಿ ಒತ್ತಡವಿದ್ದರೂ ನಿರ್ಲಕ್ಷಿಸದೆ ಕಡ್ಡಾಯವಾಗಿ ಅಧಿವೇಶನದಲ್ಲಿ ಭಾಗಿಯಾಗಬೇಕು ಎಂದು ಅವರು ಮನವಿ ಮಾಡಿದ್ದಾರೆ.
- ಇದು ಹದಿನೈದನೇ ವಿಧಾನಸಭೆಯ ಹದಿನೈದನೇ ಅಧಿವೇಶನವಾಗಿದೆ. ಇಂದು ರಾಜ್ಯಪಾಲರು ವೈಭವದ ಮೆಟ್ಟಿಲುಗಳ ಮೂಲಕ ಪ್ರವೇಶಿಸಿ ಜಂಟಿ ಅಧಿವೇಶನದ ಭಾಷಣ ಮಾಡಲಿದ್ದಾರೆ.
- ಕನ್ನಡ ಭಾಷಾ ಸಮಗ್ರ ಅಭಿವೃದ್ಧಿ ವಿಧೇಯಕ, ಖಾಸಗಿ ವಿಶ್ವವಿದ್ಯಾಲಯದ ಆರು ವಿಧೇಯಕಗಳು ಈ ಅಧಿವೇಶನದಲ್ಲಿ ಮಂಡನೆಯಾಗುವ ಸಾಧ್ಯತೆ ಇದೆ.
- ಅಧಿವೇಶನದ ಹಿನ್ನಲೆಯಲ್ಲಿ ವಿಧಾನಸೌಧದ ಸುತ್ತ ಬಿಗಿ ಬಂದೋಬಸ್ತ್ ಮಾಡಲಾಗಿದ್ದು, ವಿಧಾನಸೌಧದಿಂದ 2 ಕಿಮೀ ಸುತ್ತಲಿನ ವ್ಯಾಪ್ತಿಯಲ್ಲಿ ನಿಷೇಧಾಜ್ಞೆ ಜಾರಿಗೆ ತರಲಾಗಿದೆ. ಈ ಪ್ರದೇಶದಲ್ಲಿ 5ಕ್ಕಿಂತ ಹೆಚ್ಚು ಜನರು ಗುಂಪು ಸೇರುವಂತಿಲ್ಲ. ಮೆರವಣಿಗೆ, ಪ್ರತಿಭಟನೆ, ಸಭೆಗಳನ್ನು ಆಯೋಜಿಸುವಂತಿಲ್ಲ ಎಂದು ಬೆಂಗಳೂರು ನಗರ ಪೊಲೀಸ್ ಆಯುಕ್ತರು ಸೂಚಿಸಿದ್ದಾರೆ.
- ಫೆಬ್ರವರಿ 13, 14, 15 ಹಾಗೂ 16 ರಂದು ನಡೆಯಲಿರುವ ಕಾರ್ಯಕಲಾಪಗಳು. ರಾಜ್ಯಪಾಲರ ಭಾಷಣದ ಮೇಲೆ ನಡೆಯಲಿರುವ ಚರ್ಚೆಯಾಗಿರುತ್ತದೆ. ಫೆಬ್ರವರಿ 20, 21, 22, 23 ಹಾಗೂ 24 ಬಜೆಟ್ ಮೇಲಿನ ಚರ್ಚೆಗಳು ನಡೆಯಲಿವೆ. ಫೆಬ್ರವರಿ 24ರಂದೇ ಅಧಿವೇಶನ ಕೊನೆಗೊಳ್ಳುವ ನಿರೀಕ್ಷೆಯಿದೆ.