Karnataka Covid Guidelines: ಹೊಸ ವರ್ಷಾಚರಣೆಗೆ ಎಂಟು ಸೂತ್ರಗಳ ಗಂಟು, ಕೋವಿಡ್ ತಾಂತ್ರಿಕ ಸಲಹಾ ಸಮಿತಿಯ ಶಿಫಾರಸುಗಳಲ್ಲಿ ಏನುಂಟು?
Dec 26, 2022 12:40 PM IST
Karnataka Covid Guidelines: ಹೊಸ ವರ್ಷಾಚರಣೆಗೆ ಎಂಟು ಸೂತ್ರಗಳ ಗಂಟು, ಕೋವಿಡ್ ತಾಂತ್ರಿಕ ಸಲಹಾ ಸಮಿತಿಯ ಶಿಫಾರಸುಗಳಲ್ಲಿ ಏನುಂಟು?
- ಕೊರೊನಾ ನಿರ್ವಹಣೆಗೆ ಸಂಬಂಧಪಟ್ಟಂತೆ ಕರ್ನಾಟಕ ಸರಕಾರವು ಎಚ್ಚರಿಕೆಯ ಹೆಜ್ಜೆಗಳನ್ನು ಇಡುತ್ತಿದೆ. ಇಂದು ಮಧ್ಯಾಹ್ನ ಆರೋಗ್ಯ ಸಚಿವ ಡಾ. ಕೆ ಸುಧಾಕರ್ ಮತ್ತು ಕಂದಾಯ ಸಚಿವ ಆರ್.ಅಶೋಕ್ ನೇತೃತ್ವದಲ್ಲಿ ಕೊರೊನಾ ನಿರ್ವಹಣೆ ಕುರಿತಂತೆ ಮಹತ್ವದ ಸಭೆ ನಡೆಯಲಿದೆ.
ಬೆಂಗಳೂರು: ವಿವಿಧ ದೇಶಗಳಲ್ಲಿ ಕೊರೊನಾ ಸೋಂಕು ಪ್ರಕರಣಗಳು ಗಮನಾರ್ಹವಾಗಿ ಏರಿಕೆ ಕಾಣುತ್ತಿದೆ. ಚೀನಾದಂತಹ ದೇಶಗಳಲ್ಲಿ ಐಸಿಯುಗಳಿಗೆ ದಾಖಲಾಗುವವರ ಪ್ರಮಾಣವೂ ಹೆಚ್ಚಾಗಿದೆ. ಕೊರೊನಾ ಸಂಬಂಧಿತ ಸಾವುಗಳೂ ಹೆಚ್ಚಾಗಿವೆ. ಭಾರತದಲ್ಲಿಯೂ ಹೊಸ ಪ್ರಕರಣಗಳು ಒಂದೊಂದಾಗಿ ವರದಿಯಾಗುತ್ತಿದ್ದು, ಆತಂಕವುಂಟು ಮಾಡಿದೆ.
ಕೊರೊನಾ ನಿರ್ವಹಣೆಗೆ ಸಂಬಂಧಪಟ್ಟಂತೆ ಕರ್ನಾಟಕ ಸರಕಾರವು ಎಚ್ಚರಿಕೆಯ ಹೆಜ್ಜೆಗಳನ್ನು ಇಡುತ್ತಿದೆ. ಇಂದು ಮಧ್ಯಾಹ್ನ ಆರೋಗ್ಯ ಸಚಿವ ಡಾ. ಕೆ ಸುಧಾಕರ್ ಮತ್ತು ಕಂದಾಯ ಸಚಿವ ಆರ್.ಅಶೋಕ್ ನೇತೃತ್ವದಲ್ಲಿ ಕೊರೊನಾ ನಿರ್ವಹಣೆ ಕುರಿತಂತೆ ಮಹತ್ವದ ಸಭೆ ನಡೆಸಲಿದೆ. ಹೊಸ ವರ್ಷಾಚರಣೆ ಸಂದರ್ಭದಲ್ಲಿ ಮಾರ್ಗಸೂಚಿ ಏನಿರಬೇಕು? ಯಾವ ನಿಯಂತ್ರಣ ಕ್ರಮಗಳನ್ನು ಕೈಗೊಳ್ಳಬೇಕು? ಎನ್ನುವ ನಿಟ್ಟಿನಲ್ಲಿ ಕೋವಿಡ್ ತಾಂತ್ರಿಕಾ ಸಲಹಾ ಸಮಿತಿ ಸರಕಾರಕ್ಕೆ ಎಂಟು ಸೂತ್ರಗಳನ್ನು ನೀಡಿದೆ. ಈ ಸೂತ್ರಗಳು ಸದ್ಯದಲ್ಲಿಯೇ ಮಾರ್ಗಸೂಚಿಯಾಗುವ ಸಾಧ್ಯತೆಯಿದೆ.
ಎಂಟು ಸೂತ್ರಗಳೇನು?
1.ಹೊಸ ವರ್ಷದ ಸಂಭ್ರಮಾಚರಣೆ ವೇಳೆ ಮಾಸ್ಕ್ ಧರಿಸುವುದು ಕಡ್ಡಾಯವಾಗಿರಬೇಕು. ಈಗಾಗಲೇ ಮೆಟ್ರೊಗಳಲ್ಲಿ ಮಾಸ್ಕ್ ಧರಿಸುವುದು ಕಡ್ಡಾಯವಾಗಿದೆ. ಇದೇ ರೀತಿ ಹೊಸ ವರ್ಷಾಚರಣೆ ಕಾರ್ಯಕ್ರಮಗಳಲ್ಲಿ, ಹೆಚ್ಚು ಜನರು ಸೇರುವಲ್ಲಿ ಮಾಸ್ಕ್ ಧರಿಸುವುದನ್ನು ಕಡ್ಡಾಯಗೊಳಿಸಲು ಶಿಫಾರಸು ಮಾಡಲಾಗಿದೆ.
2. ಹೊರಾಂಗಣದಲ್ಲಿ ಹೊಸ ವರ್ಷಾಚರಣೆ ಕಾರ್ಯಕ್ರಮಗಳನ್ನು ಆಯೋಜಿಸುವಂತೆ ಸಲಹೆ ನೀಡಲಾಗಿದೆ. ಒಳಾಂಗಣದಲ್ಲಿ ಹೆಚ್ಚು ಇಕ್ಕಟ್ಟು ಮತ್ತು ಸಾಮಾಜಿಕ ಅಂತರ ಪಾಲನೆ ಕಷ್ಟ. ಇದೇ ರೀತಿ, ಹೊರಾಂಗಣದಲ್ಲಿ ಹೆಚ್ಚು ಜನರು ಸೇರಬಹುದು. ಒಳಾಂಗಣದಲ್ಲಿ ಹೆಚ್ಚು ಜನರು ಸೇರಿದರೆ ತೊಂದರೆಯಾಗಲಿದೆ. ಹೀಗಾಗಿ, ಹೊಸ ವರ್ಷಾಚರಣೆಯನ್ನು ಹೊರಾಂಗಣದಲ್ಲಿ ಮಾಡುವಂತೆ ಸಲಹೆ ನೀಡಲಾಗಿದೆ.
3. ರಾತ್ರಿ ಅಥವಾ ಬೆಳಗಿನ ಜಾವ ಕಾರ್ಯಕ್ರಮ ಆಯೋಜನೆ ಮಾಡಲು ಅವಕಾಶ ನೀಡದಿರುವಂತೆ ಕೋವಿಡ್ ತಾಂತ್ರಿಕಾ ಸಲಹಾ ಸಮಿತಿ ಸಲಹೆ ನೀಡಿದೆ. ಇದಕ್ಕೆ ಸ್ಪಷ್ಟ ಕಾರಣಗಳೇನು ಎನ್ನುವುದು ಗೊತ್ತಿಲ್ಲ. ಹೆಚ್ಚುವ ಚಳಿ ಅಥವಾ ಪಾರ್ಟಿ ಮೂಡ್‌ನಲ್ಲಿ ಸಾಮಾಜಿಕ ಅಂತರ, ಕೋವಿಡ್ ಸುರಕ್ಷತೆ ಪಾಲನೆ ಕಷ್ಟವಾಗುವುದು ಇದಕ್ಕೆ ಕಾರಣ ಇರಬಹುದು.
4. ಹೊಸ ವರ್ಷಾಚರಣೆ ಸಮಯದಲ್ಲಿ ಹಿರಿಯ ನಾಗರಿಕರು ಮನೆಯಲ್ಲಿರುವಂತೆ ಸಲಹೆ ನೀಡಲಾಗಿದೆ. 60 ವರ್ಷಕ್ಕಿಂತ ಮೇಲ್ಪಟ್ಟ ನಾಗರಿಕರು ಮನೆಯಲ್ಲಿರೋದು ಸೂಕ್ತ. ಆರೋಗ್ಯ ಚೆನ್ನಾಗಿದ್ರೆ ಮಾತ್ರ ಸಾರ್ವಜನಿಕ ಕಾರ್ಯಕ್ರಮಗಳಲ್ಲಿ ಭಾಗಿಯಾಗುವುದು ಉತ್ತಮ ಎಂದು ಸಲಹೆ ನೀಡಲಾಗಿದೆ.
5. ಇದೇ ರೀತಿ ಗರ್ಭಿಣಿಯರು ಮತ್ತು ಮಕ್ಕಳಿಗೆ ಹಾಲುಣಿಸುವ ತಾಯಂದಿರು ತಮ್ಮ ಆರೋಗ್ಯವನ್ನು ಗಮನದಲ್ಲಿಟ್ಟುಕೊಂಡು ಹೊಸ ವರ್ಷಾಚರಣೆ ಕಾರ್ಯಕ್ರಮದಲ್ಲಿ ಭಾಗವಹಿಸಬೇಕು. ಆರೋಗ್ಯ ಉತ್ತಮವಾಗಿಲ್ಲವಾದರೆ ಕಾರ್ಯಕ್ರಮದಲ್ಲಿ ಭಾಗಿಯಾಗಲು ಅವಕಾಶ ನೀಡಬಾರದು ಎಂದು ಸಲಹೆ ನೀಡಲಾಗಿದೆ.
6. ಹೊಸ ವರ್ಷಾಚರಣೆ ಕಾರ್ಯಕ್ರಮಕ್ಕೆ ಬರುವ ಎಲ್ಲರಿಗೂ ಥರ್ಮಲ್ ಸ್ಕ್ರೀನಿಂಗ್ ಮಾಡಬೇಕು, ಮಾಸ್ಕ್ ಧಾರಣೆ, ಸ್ಯಾನಿಟೈಜರ್ ಬಳಕೆ ಸೇರಿದಂತೆ ಕೊರೊನಾ ನಿಯಮಗಳನ್ನು ಕಡ್ಡಾಯವಾಗಿ ಪಾಲಿಸಬೇಕು ಎಂದು ಸಲಹೆ ನೀಡಲಾಗಿದೆ.
7. ಹೊಸ ವರ್ಷಾಚರಣೆ ಸಂದರ್ಭದಲ್ಲಿ ಕೊರೊನಾ ಚಿಕಿತ್ಸೆ ಕುರಿತು ತರಬೇತಿ ಪಡೆದ ಸಿಬ್ಬಂದಿಗಳು ಸ್ಥಳದಲ್ಲಿ ಇರಬೇಕು. ಅಂಬ್ಯುಲೆನ್ಸ್ ವ್ಯವಸ್ಥೆ ಇರಬೇಕು ಎಂದು ಸಲಹೆ ನೀಡಲಾಗಿದೆ.
8. ಹೊಸ ವರ್ಷಾಚರಣೆ ಕಾರ್ಯಕ್ರಮದ ಪ್ರವೇಶ ದ್ವಾರದಲ್ಲಿ ಸ್ಯಾನಿಟೈಸರ್ ಇಡಬೇಕು. ಎಲ್ಲರೂ ಸ್ಯಾನಿಟೈಜರ್ ಬಳಸುವಂತೆ ನೋಡಿಕೊಳ್ಳಬೇಕು. ಕಾರ್ಯಕ್ರಮಕ್ಕೆ ಯಾರೆಲ್ಲ ಬಂದಿದ್ದಾರೆ ಎನ್ನುವ ಮಾಹಿತಿ ದಾಖಲೀಕರಣಕ್ಕಾಗಿ ಎಲ್ಲರ ಹೆಸರು, ವಿಳಾಸ ಮತ್ತು ಮೊಬೈಲ್ ನಂಬರ್ ಮುನ್ನೆಚ್ಚರಿಕೆ ಕ್ರಮವಾಗಿ ಸಂಗ್ರಹಿಸಬೇಕು. ಮುಂದೆ ಯಾರಿಗಾದರೂ ಕೊರೊನಾ ಬಂದರೆ ಆಗ ಅವರ ಟ್ರಾವೆಲ್ ಹಿಸ್ಟರಿ ಟ್ರ್ಯಾಕ್ ಮಾಡಲು ಮತ್ತು ಉಳಿದವರು ಸುರಕ್ಷತೆ ಪಾಲನೆ ಮಾಡಲು ಇದರಿಂದ ನೆರವಾಗಲಿದೆ.