logo
ಕನ್ನಡ ಸುದ್ದಿ  /  ಕರ್ನಾಟಕ  /  Praveen Sood: ಕರ್ನಾಟಕ ಪೊಲೀಸ್ ಮಹಾ ನಿರ್ದೇಶಕರಾದ ಪ್ರವೀಣ್ ಸೂದ್ ಸಿಬಿಐಗೆ ಬಾಸ್; ಸೂದ್ ಅವರ ಪರಿಚಯ ಇಲ್ಲಿದೆ

Praveen Sood: ಕರ್ನಾಟಕ ಪೊಲೀಸ್ ಮಹಾ ನಿರ್ದೇಶಕರಾದ ಪ್ರವೀಣ್ ಸೂದ್ ಸಿಬಿಐಗೆ ಬಾಸ್; ಸೂದ್ ಅವರ ಪರಿಚಯ ಇಲ್ಲಿದೆ

Raghavendra M Y HT Kannada

May 16, 2023 02:23 PM IST

google News

ರಾಜ್ಯ ಡಿಜಿಪಿ ಪ್ರವೀಣ್ ಸೂದ್ ಅವರು ಸಿಬಿಐ ನಿರ್ದೇಶಕರಾಗಿ ನೇಮಕವಾಗಿದ್ದಾರೆ.

  • ರಾಜ್ಯ ಪೊಲೀಸ್ ಮಹಾ ನಿರ್ದೇಶಕರಾಗಿರುವ ಪ್ರವೀಣ್ ಸೂದ್ ಅವರು ಸಿಬಿಐ ನಿರ್ದೇಶಕರಾಗಿ ನೇಮಕವಾಗಿದ್ದಾರೆ. ರಾಜ್ಯ ವಿಧಾನಸಭೆ ಚುನಾವಣೆಗೆ ಸೂಕ್ತ ಭದ್ರತೆ, ಕೋವಿಡ್ ನಿಯಂತ್ರಣ ಸೇರಿದಂತೆ ಹಲವು ಮಹತ್ವದ ಕ್ರಮಗಳನ್ನು ಕೈಗೊಂಡಿದ್ದ ಸೂದ್ ಅವರ ಪರಿಚಯ ಇಲ್ಲಿದೆ.

ರಾಜ್ಯ ಡಿಜಿಪಿ ಪ್ರವೀಣ್ ಸೂದ್ ಅವರು ಸಿಬಿಐ ನಿರ್ದೇಶಕರಾಗಿ ನೇಮಕವಾಗಿದ್ದಾರೆ.
ರಾಜ್ಯ ಡಿಜಿಪಿ ಪ್ರವೀಣ್ ಸೂದ್ ಅವರು ಸಿಬಿಐ ನಿರ್ದೇಶಕರಾಗಿ ನೇಮಕವಾಗಿದ್ದಾರೆ.

ಬೆಂಗಳೂರು: ಕರ್ನಾಟಕ ರಾಜ್ಯ ಪೊಲೀಸ್ ಮಹಾನಿರ್ದೇಶಕರಾದ (Karnataka Director General of Police) ಪ್ರವೀಣ್ ಸೂದ್ (Praveen Sood) ಅವರು ಸಿಬಿಐ ನಿರ್ದೇಶಕರಾಗಿ (CBI Director) ನೇಮಕವಾಗಿದ್ದಾರೆ.

ರಾಜ್ಯದ ಡಿಜಿಪಿ ಆದ ಬಳಿಕ ಪೊಲೀಸ್ ಇಲಾಖೆಯಲ್ಲಿ ಹಲವು ಬದಲಾವಣೆಗಳನ್ನು ತಂದಿದ್ದ ಪ್ರವೀಣ್ ಸೂದ್ ಅವರು ಯಾರು ಎಂಬುದರ ವ್ಯಕ್ತ ಪರಿಚಯ ಇಲ್ಲಿ ನೀಡಲಾಗಿದೆ.

1986ರ ಭಾರತೀಯ ಪೊಲೀಸ್ ಸೇನೆ-ಐಪಿಎಸ್‌ ಬ್ಯಾಚ್‌ನ ಅಧಿಕಾರಿಯಾಗಿರುವ ಪ್ರವೀಣ್ ಸೂದ್ ಅವರು ಮೂಲತಃ ಹಿಮಾಚಲ ಪ್ರದೇಶದವರು. ದೆಹಲಿಯ ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ (ಐಐಟಿ), ಬೆಂಗಳೂರಿನ ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಮ್ಯಾನೇಜ್‌ಮೆಂಟ್ (ಐಐಎಂ) ಹಾಗೂ ನ್ಯೂಯಾರ್ಕ್‌ನ ಸಿರಾಕ್ಯೂಸ್ ವಿಶ್ವವಿದ್ಯಾಲಯದ ಹಳೆಯ ವಿದ್ಯಾರ್ಥಿಯಾಗಿದ್ದಾರೆ.

ರಾಜ್ಯದ ಡಿಜಿಪಿ ಆಗುವುದಕ್ಕೂ ಮುನ್ನ ಅಂದರೆ 1989ರಲ್ಲಿ ಮೈಸೂರು ಎಎಸ್ಪಿಯಾಗಿ ಸೇವೆ ಸಲ್ಲಿಸಿದ್ದಾರೆ. ಆ ಬಳಿಕ 2004 ಮತ್ತು 2007ರಲ್ಲಿ ಮೈಸೂರು ಪೊಲೀಸ್ ಕಮಿಷನರ್ ಆಗಿದ್ದರು. ಬಳ್ಳಾರಿ, ರಾಯಚೂರು ಎಸ್ಪಿಯಾಗಿ ಕೆಲಸ ಮಾಡಿದ್ದಾರೆ. 1999ರಲ್ಲಿ ಮಾರಿಷಸ್ ದೇಶದ ಪೊಲೀಸ್ ಸಲಹೆಗಾರರಾಗಿ ಮೂರು ವರ್ಷ ಸೇವೆಯ ಮೂಲಕ ಹೆಚ್ಚಿನ ಅನುಭವವನ್ನು ಪಡೆದಿದ್ದಾರೆ.

2020ರ ಜನವರಿಯಲ್ಲಿ ನೀಲಮಣಿ ಎನ್ ರಾಜು ಅವರು ನಿವೃತ್ತಿಯಾದ ಹಿನ್ನೆಲೆಯಲ್ಲಿ ಡಿಜಿ ಐಜಿಪಿಯಾಗಿ ಪ್ರವೀಣ್ ಸೂದ್ ಅವರನ್ನು ಹಿರಿತನದ ಆಧಾರದ ಮೇಲೆ ರಾಜ್ಯ ಸರ್ಕಾರ ನೇಮಕ ಮಾಡಿತ್ತು.

ಉನ್ನತ ಪೊಲೀಸ್ ಹುದ್ದೆಗೇರಿದ ಬಳಿಕ ಪೊಲೀಸ್ ಠಾಣೆಗಳಲ್ಲಿ ಅಧಿಕಾರಿಗಳು, ಸಿಬ್ಬಂದಿ ಹುಟ್ಟುಹಬ್ಬ ಆಚರಣೆ ಮಾಡುವಂತಿಲ್ಲ, ಸಾಂದರ್ಭಿಕ ರಜೆ 15 ರಿಂದ 10ಕ್ಕೆ ಇಳಿಕೆ, ಕೋವಿಡ್ ನಿರ್ವಹಣೆ, ಸರ್ಕಾರಿ ಹಣ ದುರ್ಬಳಕೆ ತಡೆಗಟ್ಟಲು ಮಾರ್ಗಸೂಚಿ, ಗಾಡ್ ಆಫ್ ಹಾನರ್ ಪದ್ದತಿ ಬೇಡ ಎಂಬುದು ಸೇರಿದಂತೆ ಹಲವು ಮಹತ್ವದ ಕ್ರಮಗಳನ್ನು ಕೈಗೊಂಡಿದ್ದಾರೆ.

ಇತ್ತೀಚೆಗೆ ಮುಕ್ತಾಯವಾದ ರಾಜ್ಯ ವಿಧಾನಸಭೆ ಚುನಾವಣೆಯಲ್ಲಿ ಸಣ್ಣ ಪುಟ್ಟ ಹೊರತುಪಡಿಸಿ ಬಹುತೇಕ ಯಾವುದೇ ರೀತಿಯ ಅಹಿತಕರ ಘಟನೆಗಳು ನಡೆಯದಂತೆ ಸೂಕ್ತ ಭದ್ರತೆ ಕಲ್ಪಿಸುವಲ್ಲಿ ಸೂದ್ ಅವರು ಯಶಸ್ವಿಯಾಗಿದ್ದಾರೆ.

ಇದೇ ಮೇ 25ಕ್ಕೆ ಹಾಲಿ ಸಿಬಿಐ ನಿರ್ದೇಶಕರಾದ ಸುಬೋಧ್ ಕುಮಾರ್ ಜೈಸ್ವಾಲ್ ಅವರ ಅಧಿಕಾರಾವಧಿ ಪೂರ್ಣಗೊಳ್ಳಲಿರುವ ಹಿನ್ನೆಯಲ್ಲಿ ಇವರ ಸ್ಥಾನಕ್ಕೆ ಪ್ರವೀಣ್ ಸೂದ್ ಅವರು ಬರಲಿದ್ದಾರೆ. ಅಧಿಕಾರವಹಿಸಿಕೊಂಡ ದಿನಾಂಕದಿಂದ ಎರಡು ವರ್ಷಗಳವರೆಗೆ ಕೇಂದ್ರೀಯ ತನಿಖಾ ದಳ-ಸಿಬಿಐ ನಿರ್ದೇಶಕರಾಗಿ ಸೇವೆ ಆರಂಭಿಸಲಿದ್ದಾರೆ.

ಕೇಂದ್ರ ಸಿಬ್ಬಂದಿ ಮತ್ತು ತರಬೇತಿ ಇಲಾಖೆ ಈ ಬಗ್ಗೆ ಕಳೆದ ಶನಿವಾರ ಆದೇಶ ಹೊರಡಿಸಿದ್ದು, ಪ್ರವೀಣ್ ಸೂದ್, ಐಪಿಎಸ್ (ಕೆಎಲ್: 86) ಅವರನ್ನು ಎರಡು ವರ್ಷಗಳ ಅವಧಿಗೆ ಸಿಬಿಐ ನಿರ್ದೇಶಕರಾಗಿ ನೇಮಕ ಮಾಡಲು ಸಕ್ಷಮ ಪ್ರಾಧಿಕಾರದ ಅನುಮೋದನೆಯನ್ನು ಈ ಮೂಲಕ ತಿಳಿಸಲಾಗಿದೆ ಎಂದು ಹೇಳಿತ್ತು.

ಪ್ರಧಾನಿ ನರೇಂದ್ರ ಮೋದಿ, ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಮೂರ್ತಿ ಡಿವೈ ಚಂದ್ರಚೂಡ್, ಲೋಕಸಭೆಯ ವಿರೋಧ ಪಕ್ಷದ ನಾಯಕ ಅಧೀರ್ ರಂಜನ್ ಚೌಧರಿ ಅವರನ್ನೊಳಗೊಂಡ ತ್ರಿಸದಸ್ಯ ನೇಮಕಾತಿ ಸಮಿತಿ ಶನಿವಾರ ಸಿಬಿಐ ನಿರ್ದೇಶಕ ಸ್ಥಾನಕ್ಕೆ ಪ್ರವೀಣ್ ಸೂದ್ ಅವರ ಹೆಸರನ್ನು ಅಂತಿಗೊಳಿಸಿತ್ತು.

ನಾಲಾಯಕ್, ಬಿಜೆಪಿ ಏಜೆಂಟ್ ಎಂದಿದ್ದ ಡಿಕೆ ಶಿವಕುಮಾರ್

ಕಳೆದ ಮಾರ್ಚ್‌ನಲ್ಲಿ ಡಿಜಿಪಿ ಪ್ರವೀಣ್ ಸೂದ್‌ ಅವರನ್ನು ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ನಿಂದಿಸಿದ್ದರು. ನಾಲಾಯಕ್, ಬಿಜೆಪಿ ಏಜೆಂಟ್ ಎಂದು ಕರೆದಿದ್ದರು. ಪ್ರವೀಣ್ ಸೂದ್ ಬಿಜೆಪಿ ಸರ್ಕಾರದ ಪರ ವಹಿಸುತ್ತಿದ್ದಾರೆ ಎಂಬ ಆರೋಪವನ್ನೂ ಮಾಡಿದ್ದರು.

ಕಾಂಗ್ರೆಸ್ ಅಧಿಕಾರಕ್ಕೆ ಬಂದ ಬಳಿಕ ಪ್ರವೀಣ್ ಸೂದ್ ಅವರ ವಿರುದ್ಧ ಕ್ರಮ ಕೈಗೊಳ್ಳುತ್ತೇವೆ ಎಂದು ಡಿಕೆಶಿ ಹೇಳಿದ್ದರು. ಆದರೆ ಇದೀಗ ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ರಚನೆಯಾಗುವುದಕ್ಕೂ ಮೊದಲೇ ಡಿಜಿಪಿ ಪ್ರವೀಣ್ ಸೂದ್ ಅವರನ್ನು ಸಿಬಿಐ ನಿರ್ದೇಶಕರನ್ನಾಗಿ ನೇಮಕ ಮಾಡಲಾಗಿದೆ. ಮೇ 25 ರಂದು ಅವರು ಅಧಿಕಾರ ಸ್ವೀಕರಿಸಿಲಿದ್ದಾರೆ.

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ