Praveen Sood: ಕರ್ನಾಟಕ ಪೊಲೀಸ್ ಮಹಾನಿರ್ದೇಶಕರಾದ ಪ್ರವೀಣ್ ಸೂದ್ ಮುಂದಿನ ಸಿಬಿಐ ನಿರ್ದೇಶಕರಾಗಿ ನೇಮಕ
May 14, 2023 04:08 PM IST
ಕರ್ನಾಟಕ ಪೊಲೀಸ್ ಮಹಾನಿರ್ದೇಶಕ ಪ್ರವೀಣ್ ಸೂದ್ ಅವರು ಸಿಬಿಐ ನಿರ್ದೇಶಕರಾಗಿ ನೇಮಕವಾಗಿದ್ದಾರೆ.
ರಾಜ್ಯ ಪೊಲೀಸ್ ಮಹಾನಿರ್ದೇಶಕರಾದ ಪ್ರವೀಣ್ ಸೂದ್ ಅವರನ್ನು ಮುಂದಿನ ಸಿಬಿಐ ನಿರ್ದೇಶಕರಾಗಿ ನೇಮಕ ಮಾಡಲಾಗಿದೆ.
ನವದೆಹಲಿ: ಕರ್ನಾಟಕ ಪೊಲೀಸ್ ಮಹಾನಿರ್ದೇಶಕರಾದ (Karnataka Director General of Police) ಪ್ರವೀಣ್ ಸೂದ್ (Praveen Sood) ಅವರನ್ನು ಮುಂದಿನ ಸಿಬಿಐ ನಿರ್ದೇಶಕರನ್ನಾಗಿ (CBI Director) ನೇಮಕ ಮಾಡಿ ಎಂದು ಕೇಂದ್ರ ಸಿಬ್ಬಂದಿ ಮತ್ತು ತರಬೇತಿ ಇಲಾಖೆ ಆದೇಶ ಹೊರಡಿಸಿದೆ.
ಪ್ರವೀಣ್ ಸೂದ್ ಅವರು ಕರ್ನಾಟಕ ಕೇಡರ್‌ನ 1986ರ ಬ್ಯಾಚ್‌ನ ಐಪಿಎಸ್ ಅಧಿಕಾರಿಯಾಗಿದ್ದಾರೆ. ಮೇ 25ಕ್ಕೆ ಹಾಲಿ ಸಿಬಿಐ ನಿರ್ದೇಶಕರಾದ ಸುಬೋಧ್ ಕುಮಾರ್ ಜೈಸ್ವಾಲ್ ಅವರ ಅಧಿಕಾರಾವಧಿ ಪೂರ್ಣಗೊಳ್ಳಲಿರುವ ಹಿನ್ನೆಯಲ್ಲಿ ಇವರ ಸ್ಥಾನಕ್ಕೆ ಸೂದ್ ಅವರು ಬರಲಿದ್ದಾರೆ.
ಸೂದ್ ಅವರು ಅಧಿಕಾರವಹಿಸಿಕೊಂಡ ದಿನಾಂಕದಿಂದ ಎರಡು ವರ್ಷಗಳವರೆಗೆ ಕೇಂದ್ರೀಯ ತನಿಖಾ ದಳ-ಸಿಬಿಐ ನಿರ್ದೇಶಕರಾಗಿ ಸೇವೆ ಸಲ್ಲಿಸಲಿದ್ದಾರೆ.
ಕೇಂದ್ರ ಸಿಬ್ಬಂದಿ ಮತ್ತು ತರಬೇತಿ ಇಲಾಖೆ ಈ ಬಗ್ಗೆ ಆದೇಶ ಹೊರಡಿಸಿದ್ದು, ಪ್ರವೀಣ್ ಸೂದ್, ಐಪಿಎಸ್ (ಕೆಎಲ್: 86) ಅವರನ್ನು ಎರಡು ವರ್ಷಗಳ ಅವಧಿಗೆ ಸಿಬಿಐ ನಿರ್ದೇಶಕರಾಗಿ ನೇಮಕ ಮಾಡಲು ಸಕ್ಷಮ ಪ್ರಾಧಿಕಾರದ ಅನುಮೋದನೆಯನ್ನು ಈ ಮೂಲಕ ತಿಳಿಸಲಾಗಿದೆ ಎಂದು ಹೇಳಿದೆ.
ಸಿಬಿಐ ನಿರ್ದೇಶಕರಾದ ಸುಬೋಧ್ ಕುಮಾರ್ ಜೈಸ್ವಾಲ್, ಐಪಿಎಸ್ (ಎಂಹೆಚ್:85) ಇವರ ಅಧಿಕಾರದ ಅವಧಿ ಪೂರ್ಣಗೊಂಡ ನಂತರ ಪ್ರವೀಣ್ ಸೂದ್ ಅವರು ಅಧಿಕಾರ ವಹಿಸಿಕೊಳ್ಳಲಿದ್ದಾರೆ.
ಪ್ರಧಾನಿ ನರೇಂದ್ರ ಮೋದಿ, ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಮೂರ್ತಿ ಡಿವೈ ಚಂದ್ರಚೂಡ್, ಲೋಕಸಭೆಯ ವಿರೋಧ ಪಕ್ಷದ ನಾಯಕ ಅಧೀರ್ ರಂಜನ್ ಚೌಧರಿ ಅವರನ್ನೊಳಗೊಂಡ ತ್ರಿಸದಸ್ಯ ನೇಮಕಾತಿ ಸಮಿತಿ ಶನಿವಾರ ಸಿಬಿಐ ನಿರ್ದೇಶಕ ಸ್ಥಾನಕ್ಕೆ ಪ್ರವೀಣ್ ಸೂದ್ ಅವರ ಹೆಸರನ್ನು ಅಂತಿಗೊಳಿಸಿತ್ತು.
2020ರ ಜನವರಿಯಲ್ಲಿ ನೀಲಮಣಿ ಎನ್ ರಾಜು ಅವರು ನಿವೃತ್ತಿಯಾದ ಹಿನ್ನೆಲೆಯಲ್ಲಿ ರಾಜ್ಯದ ಡಿಜಿ ಐಜಿಪಿಯಾಗಿ ಪ್ರವೀಣ್ ಸೂದ್ ಅವರನ್ನು ರಾಜ್ಯ ಸರ್ಕಾರ ನೇಮಕ ಮಾಡಿತ್ತು.
ಇದಕ್ಕೂ ಹಿಂದೆ 1989ರಲ್ಲಿ ಮೈಸೂರು ಎಎಸ್ಪಿಯಾಗಿ ನೇಮವಾಗಿದ್ದರು. ಆ ಬಳಿಕ ಬಳ್ಳಾರಿ, ರಾಯಚೂರು ಎಸ್ಪಿಯಾಗಿ ಕೆಲಸ ಮಾಡಿದ್ದರು. 1999ರಲ್ಲಿ ಮಾರಿಷಸ್ ದೇಶದ ಪೊಲೀಸ್ ಸಲಹೆಗಾರರಾಗಿ ಮೂರು ವರ್ಷ ಸೇವೆಯನ್ನು ಸಲ್ಲಿಸಿದ್ದಾರೆ.
ರಾಜ್ಯದ ಡಿಜಿಪಿ ಆದ ಬಳಿಕ ಪೊಲೀಸ್ ಠಾಣೆಗಳಲ್ಲಿ ಅಧಿಕಾರಿಗಳು, ಸಿಬ್ಬಂದಿ ಹುಟ್ಟುಹಬ್ಬ ಆಚರಣೆ ಮಾಡುವಂತಿಲ್ಲ, ಸಾಂದರ್ಭಿಕ ರಜೆ 15 ರಿಂದ 10ಕ್ಕೆ ಇಳಿಕೆ, ಕೋವಿಡ್ ನಿರ್ವಹಣೆ, ಸರ್ಕಾರಿ ಹಣ ದುರ್ಬಳಕೆ ತಡೆಗಟ್ಟಲು ಮಾರ್ಗಸೂಚಿ, ಗಾಡ್ ಆಫ್ ಹಾನರ್ ಪದ್ದತಿ ಬೇಡ ಎಂಬುದು ಸೇರಿದಂತೆ ಹಲವು ಮಹತ್ವದ ಕ್ರಮಗಳನ್ನು ಕೈಗೊಂಡಿದ್ದಾರೆ.
ವಿಭಾಗ