Basavaraj Bommai: ಕಾಂಗ್ರೆಸ್ ದೂರಿನಲ್ಲಿ ಏನೂ ಇಲ್ಲ, ಇದು ರಾಜಕೀಯ ಗಿಮಿಕ್ ಅಷ್ಟೇ; ಶಾ ವಿರುದ್ಧದ ದೂರಿಗೆ ಬೊಮ್ಮಾಯಿ ಪ್ರತಿಕ್ರಿಯೆ
Apr 27, 2023 04:01 PM IST
ಬಸವರಾಜ್ ಬೊಮ್ಮಾಯಿ
- ಕಾಂಗ್ರೆಸ್ ದೂರಿನಲ್ಲೀ ಏನೂ ಇಲ್ಲ. ಇವೆಲ್ಲವೂ ರಾಜಕೀಯ ಗಿಮಿಕ್ ಅಷ್ಟೇ ಎಂದು ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಹೇಳಿದ್ದಾರೆ.
ಕೇಂದ್ರ ಗೃಹ ಸಚಿವ ಅಮಿತ್ ಶಾ (Amit Shah) ಹೇಳಿಕೆ ವಿರುದ್ಧ ಕಾಂಗ್ರೆಸ್ ದೂರು ದಾಖಲಿಸಿದೆ. ‘ಕರ್ನಾಟಕದಲ್ಲಿ ಕಾಂಗ್ರೆಸ್ ಆಡಳಿತಕ್ಕೆ ಬಂದರೆ, ಕೋಮ ಗಲಭೆಗೆ ಅವಕಾಶ ಮಾಡಿಕೊಟ್ಟಂತಾಗಲಿದೆ’ ಎಂಬ ಶಾ ಹೇಳಿಕೆ ವಿರುದ್ಧ ಕಾಂಗ್ರೆಸ್ ಪೋಲೀಸ್ ಠಾಣೆ ಮೆಟ್ಟಿಲೇರಿದ್ದು, ಬೆಂಗಳೂರಿನ ಹೈಗ್ರೌಂಡ್ಸ್ ಪೊಲೀಸ್ ಠಾಣೆಯಲ್ಲಿ ಇಂದು (ಗುರುವಾರ, ಏಪ್ರಿಲ್ 27) ಕೇಂದ್ರ ಸಚಿವ ಶಾ ವಿರುದ್ಧ ದೂರು ನೀಡಲಾಗಿದೆ.
ಕಾಂಗ್ರೆಸ್‌ನ ಮುಖಂಡ ರಣದೀಪ್ ಸಿಂಗ್ ಸುರ್ಜೆವಾಲಾ ಹಾಗೂ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ (DK Shivakumar) ಸಮ್ಮುಖದಲ್ಲಿ ದೂರು ನೀಡಲಾಗಿದ್ದು, ಚುನಾವಣೆ ಸಂದರ್ಭದಲ್ಲಿ ಕೇಂದ್ರ ಗೃಹ ಸಚಿವರು ಈ ರೀತಿಯ ಅಸಂಬದ್ಧ ಹೇಳಿಕೆ ನೀಡಿರುವುದು ಸರಿಯಲ್ಲ ಎಂದು ಕಾಂಗ್ರೆಸ್ ಮುಖಂಡರು ಆಕ್ರೋಶ ಹೊರಹಾಕಿದ್ದಾರೆ.
ಈ ಕುರಿತು ಮಾತನಾಡಿರುವ ಡಿಕೆ ಶಿವಕುಮಾರ್, ರಾಜ್ಯದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಕೋಮು ಗಲಭೆ ಹೆಚ್ಚಾಗಲಿದೆ ಎಂದು ಅಮಿತ್ ಶಾ ಹೇಳಿಕೆ ನೀಡಿದ್ದಾರೆ. ನಮ್ಮ ರಾಜ್ಯ ಶಾಂತಿಯ ಪ್ರತೀಕ. ಹೀಗಿರುವಾಗ ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಕೋಮು ಗಲಭೆ ಸೃಷ್ಟಿಯಾಗಲಿದೆ ಎಂಬುದರ ಅರ್ಥವೇನು ಎಂದು ಪ್ರಶ್ನಿಸಿದ್ದಾರೆ. ಈ ಕೂಡಲೇ ಅವರ ವಿರುದ್ಧ ಕ್ರಮ ಕೈಗೊಳ್ಳುವಂತೆ ದೂರು ನೀಡಿದ್ದೇವೆ. ಅವರು ಬಿಜೆಪಿಯ ಸ್ಟಾರ್ ಪ್ರಚಾರಕ. ಹೀಗೆ ಹೇಳಿಕೆ ನೀಡುವುದು ಸರಿಯಲ್ಲ. ನಾವು ಸರ್ಕಾರದ ವಿರುದ್ಧ ಪೇ ಸಿಎಂ ಪ್ರತಿಭಟನೆ ನಡೆಸಿದಾಗ, ರೈತರ ಬೇಡಿಕೆ ಈಡೇರಿಕೆಗೆ ಪ್ರತಿಭಟನೆ ಮಾಡಿದಾಗ, ರಾಹುಲ್ ಗಾಂಧಿ ಬಂಧನದ ವೇಳೆ ಪ್ರತಿಭಟನೆ ಮಾಡಿದಾಗಲೂ ನಮ್ಮ ಮೇಲೆ ಕೇಸ್ ಹಾಕುತ್ತಲೇ ಬರಲಾಗುತ್ತಿದೆ. ಹೀಗಾಗಿ ಇದೀಗ ಅವರ ವಿರುದ್ಧ ನಾವು ಕೂಡಾ ದೂರು ನೀಡಿದ್ದೇವೆ ಎಂದು ಡಿಕೆಶಿ ಹೇಳಿದ್ದಾರೆ.
ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ, ಕಾಂಗ್ರೆಸ್ ದೂರಿನಲ್ಲೀ ಏನೂ ಇಲ್ಲ. ಇವೆಲ್ಲವೂ ರಾಜಕೀಯ ಗಿಮಿಕ್ ಅಷ್ಟೇ ಎಂದು ಹೇಳಿದ್ದಾರೆ.
“ಇವೆಲ್ಲವೂ ಕಾಂಗ್ರೆಸ್‌ನವರ ರಾಜಕೀಯ ಗಿಮಿಕ್. ಅವರೇ ಎಲ್ಲಾ ನಿಯಮಗಳನ್ನು ಉಲ್ಲಂಘಿಸಿ ನಡೆಯುತ್ತಿದ್ದಾರೆ. ಅವರು ಕುಕ್ಕರ್ ಹಂಚಿದ್ದಾರೆ, ಟಿವಿ ಹಂಚುತ್ತಾರೆ. ಆ ಬಳಿಕ ನಮ್ಮ ನಾಯಕರ ಮೇಲೆಯೇ ದೂರು ದಾಖಲಿಸುತ್ತಾರೆ. ಇದು ಅವರ ಗಿಮಿಕ್‌ನ ಒಂದು ಭಾಗ. ಆ ದೂರಿನಲ್ಲಿ ಏನೂ ಇಲ್ಲ,” ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರ ಮೇಲೆ ಕಾಂಗ್ರೆಸ್ ದೂರಿನ ಬಗ್ಗೆ ಸಿಎಂ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ.
ಬಿಜೆಪಿಯಿಂದ ಮಾಜಿ ಸಿಎಂ ಜಗದೀಶ್ ಶೆಟ್ಟರ್ ಬಂಡಾಯವೆದ್ದ ಬಳಿಕ ಹುಬ್ಬಳ್ಳಿ ಕ್ಷೇತ್ರವು ರಾಷ್ಟ್ರೀಯ ನಾಯಕರ ಗಮನ ಸೆಳೆದಿದೆ. ಬಿಜೆಪಿ ಹೈಕಮಾಂಡ್ ನಾಯಕರು ಹುಬ್ಬಳ್ಳಿಯತ್ತ ಬರುತ್ತಿದ್ದಾರೆ. ಈ ಬಗ್ಗೆ ಮಾಧ್ಯಮದವರ ಪ್ರಶ್ನೆಗೆ ಪ್ರತಿಕ್ರಿಯೆ ನೀಡಿದ ಸಿಎಂ, ಇದರಲ್ಲಿ ಏನೂ ವಿಶೇಷವಿಲ್ಲ. ಹುಬ್ಬಳ್ಳಿ ಹಿಂದಿನಿಂದಲೂ ರಾಜಕೀಯ ಶಕ್ತಿಕೇಂದ್ರ. ಇದು ಕೇವಲ ಉತ್ತರ ಕರ್ನಾಟಕಕ್ಕೆ ಸೀಮಿತವಲ್ಲ. ಎಲ್ಲಾ ರಾಜಿಕೀಯ ಪಕ್ಷಗಳ ನಾಯಕರು ಕೂಡಾ ಇಲ್ಲಿಗೆ ಬರುತ್ತಾರೆ. ಅದರಂತೆಯೇ ಬಿಜೆಪಿ ನಾಯಕರು ಕೂಡಾ ಬರುತ್ತಿದ್ದಾರೆ ಅಷ್ಟೇ ಎಂದು ಸಿಎಂ ಹೇಳಿದ್ದಾರೆ.
ಕಾರ್ಯಕರ್ತರೊಂದಿಗೆ ಮೋದಿ ಸಂವಾದದ ಕುರಿತು ಮಾತನಾಡಿದ ಅವರು, ಪ್ರಧಾನಿ ಮೋದಿಯವರ ಪ್ರತಿಯೊಂದು ಮಾತುಗಳು ಬಿಜೆಪಿ ಕಾರ್ಯಕರ್ತರನ್ನು ಪ್ರೇರೇಪಿಸುತ್ತವೆ. ಕರ್ನಾಟಕದಲ್ಲಿ ಬಿಜೆಪಿಯನ್ನು ಮತ್ತೆ ಅಧಿಕಾರಕ್ಕೆ ತರಲು ನಮ್ಮ ಪಕ್ಷದ ಕಾರ್ಯಕರ್ತರು ದುಪ್ಪಟ್ಟು ಶ್ರಮಿಸುತ್ತಾರೆ ಎಂದು ನನಗೆ ಖಾತ್ರಿಯಿದೆ ಎಂದಿ ತಿಳಿಸಿದರು.