Karnataka Election 2023: ಕುಣಿಗಲ್ ಕ್ಷೇತ್ರದಲ್ಲಿ ಒಕ್ಕಲಿಗ ಅಭ್ಯರ್ಥಿಗಳದ್ದೇ ಪಾರುಪತ್ಯ; ಕಣದಲ್ಲಿ ವೈದ್ಯರು, ಬ್ಯಾಂಕ್ ರಾಜ್ಯಾಧ್ಯಕ್ಷರು
Apr 26, 2023 02:58 PM IST
ಈ ಬಾರಿ ಕುಣಿಗಲ್ ವಿಧಾನಸಭೆ ಕ್ಷೇತ್ರದಿಂದ ಸ್ಪರ್ಧಿಸುತ್ತಿರುವ ಅಭ್ಯರ್ಥಿಗಳು
- ಕುಣಿಗಲ್ ವಿಧಾನಸಭಾ ಕ್ಷೇತ್ರದಲ್ಲಿ ಸ್ಪರ್ಧೆಗಿಳಿದಿರುವ ಪ್ರಮುಖ ಮೂರು ಪಕ್ಷಗಳ ಅಭ್ಯರ್ಥಿಗಳು ಒಕ್ಕಲಿಗ ಸಮುದಾಯಕ್ಕೆ ಸೇರಿದವರಾಗಿದ್ದಾರೆ. ಕಾಂಗ್ರೆಸ್ ಅಭ್ಯರ್ಥಿ ಶಾಸಕ ಡಾ. ರಂಗನಾಥ್, ಬಿಜೆಪಿ ಅಭ್ಯರ್ಥಿ ಡಿ. ಕೃಷ್ಣಕುಮಾರ್, ಜೆಡಿಎಸ್ ಅಭ್ಯರ್ಥಿ ಡಾ. ರವಿ, ಪಕ್ಷೇತರ ಅಭ್ಯರ್ಥಿ-ಮಾಜಿ ಶಾಸಕ ಬಿ.ಬಿ. ರಾಮಸ್ವಾಮಿ ಗೌಡ ಕೂಡಾ ಒಕ್ಕಲಿಗ ಸಮುದಾಯಕ್ಕೆ ಸೇರಿದ್ದಾರೆ.
ತುಮಕೂರು: ಎಲ್ಲಾ ಕ್ಷೇತ್ರಗಳಲ್ಲೂ ಅಭ್ಯರ್ಥಿಗಳು ಬಿರುಸಿನ ಪ್ರಚಾರ ಕೈಗೊಂಡಿದ್ದಾರೆ. ಪ್ರತಿ ಪಕ್ಷಗಳೂ ಸ್ಟಾರ್ ಪ್ರಚಾರಕರನ್ನು ಕರೆಸಿ ತಮ್ಮ ಪಕ್ಷದ ಪರ ಕ್ಯಾಂಪೇನ್ ಆರಂಭಿಸಿದ್ದಾರೆ. ಈ ಬಾರಿ ಅನೇಕ ಹೊಸ ಅಭ್ಯರ್ಥಿಗಳು ಚುನಾವಣಾ ಅಖಾಡಕ್ಕೆ ಇಳಿದಿದ್ದಾರೆ. ಹಾಗೇ ತುಮಕೂರು ಜಿಲ್ಲೆಯ ಕುಣಿಗಲ್ ವಿಧಾನಸಭೆ ಕ್ಷೇತ್ರ ಈ ಬಾರಿ ಕೆಲವು ವಿಶೇಷತೆಗಳಿಗೆ ಸಾಕ್ಷಿಯಾಗಿದೆ.
ಅಪ್ಪ-ಮಗ, ತಜ್ಞ ವೈದ್ಯರು, ಬ್ಯಾಂಕ್ ರಾಜ್ಯಾಧ್ಯಕ್ಷರು ಈ ಬಾರಿ ಚುನಾಣೆಯಲ್ಲಿ ಅದೃಷ್ಟ ಪರೀಕ್ಷೆಗೆ ಮುಂದಾಗಿದ್ದಾರೆ.
ಕಾಂಗ್ರೆಸ್
ಕುಣಿಗಲ್ ವಿಧಾನಸಭೆ ಹಾಲಿ ಶಾಸಕ ಡಾ. ರಂಗನಾಥ್ ಮತ್ತೊಮ್ಮೆ ಕಾಂಗ್ರೆಸ್ ಪಕ್ಷದಿಂದ ಕಣಕ್ಕೆ ಇಳಿದಿದ್ದಾರೆ, ಡಾ. ರಂಗನಾಥ್ ಬಗ್ಗೆ ಹೇಳುವುದಾದರೆ ಇವರು ಬೆಂಗಳೂರಿನ ಕೆಂಪೇಗೌಡ ವೈದ್ಯಕೀಯ ವಿದ್ಯಾಲಯದಲ್ಲಿ 1989 ರಿಂದ 1996 ರವರೆಗೂ ಎಂಬಿಬಿಎಸ್ ವ್ಯಾಸಂಗ ಮಾಡಿದ್ದಾರೆ. ನಂತರ ಮೈಸೂರಿನ ಜೆಎಸ್‌ಎಸ್ ವೈದ್ಯಕೀಯ ವಿದ್ಯಾಲಯದಲ್ಲಿ 1998 ರಿಂದ 2001 ರವೆಗೂ ಎಂಎಸ್ ಅರ್ಥೋ ವ್ಯಾಸಂಗ ಮಾಡಿ ಮೂಳೆ ತಜ್ಞರಾಗಿದ್ದಾರೆ. ರಂಗನಾಥ್, ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಅವರ ಸಂಬಂಧಿ ಆಗಬೇಕು.
ಜೆಡಿಎಸ್
ಜೆಡಿಎಸ್ ಪಕ್ಷದ ಅಭ್ಯರ್ಥಿ ಡಾ.ಬಿ.ಎನ್.ರವಿ ಬೆಂಗಳೂರು ವೈದ್ಯಕೀಯ ವಿವಿಯಲ್ಲಿ 19996 ರಲ್ಲಿ ಎಂಬಿಬಿಎಸ್, 1999 ರಲ್ಲಿ ಡಿಎನ್‌ಡಿ ಹಾಗೂ 2004 ರಲ್ಲಿ ರಾಜೀವ್‌ಗಾಂಧಿ ವೈದ್ಯಕೀಯ ವಿಶ್ವ ವಿದ್ಯಾಲಯದಲ್ಲಿ ಎಂ.ಡಿ ಪದವಿ ಗಳಿಸಿದ್ದಾರೆ. ಇಬ್ಬರು ನುರಿತ ತಜ್ಞ ವೈದ್ಯರು ಒಂದೇ ತಾಲೂಕಿನಲ್ಲಿ ಚುನಾವಣೆಗೆ ಸ್ಪರ್ಧಿಸುತ್ತಿರುವುದು ಬಹುಶ: ರಾಜ್ಯದಲ್ಲೇ ಇದೇ ಮೊದಲು ಎನ್ನಬಹುದಾಗಿದೆ.
ಬಿಜೆಪಿ
ಡಿ.ಕೃಷ್ಣಕುಮಾರ್ ರಾಜ್ಯ ಪ್ರಾಥಮಿಕ ಭೂ ಅಭಿವೃದ್ದಿ ಬ್ಯಾಂಕ್‌ನ ರಾಜ್ಯಾಧ್ಯಕ್ಷರಾಗಿದ್ದು ಬಿಜೆಪಿಯಿಂದ ಕಣಕ್ಕೆ ಇಳಿದಿದ್ದಾರೆ. ಕೃಷ್ಣಕುಮಾರ್, ಜೆಡಿಎಸ್ ಅಭ್ಯರ್ಥಿ ಡಾ.ಬಿ.ಎನ್. ರವಿ ಅವರಿಗೆ ಸಂಬಂಧದಲ್ಲಿ ಚಿಕ್ಕಪ್ಪ , ವರಸೆಯಲ್ಲಿ ಅಪ್ಪ- ಮಗ ಆಗಬೇಕು. ಇಬ್ಬರೂ ಬೇರೆ ಬೇರೆ ಪಕ್ಷದಿಂದ ಅದೃಷ್ಟ ಪರೀಕ್ಷೆಗೆ ಇಳಿದಿರುವುದು ಗಮನ ಸೆಳೆದಿದೆ.
ಪಕ್ಷೇತರ ಅಭ್ಯರ್ಥಿಗಳು
2008ರಲ್ಲಿ ಕಾಂಗ್ರೆಸ್ ಶಾಸಕರಾಗಿ ಆಯ್ಕೆಯಾಗಿದ್ದ ಮಾಜಿ ಶಾಸಕ ಬಿ.ಬಿ. ರಾಮಸ್ವಾಮಿಗೌಡ ಪಕ್ಷೇತರ ಅಭ್ಯರ್ಥಿಯಾಗಿ ಕಣದಲ್ಲಿದ್ದಾರೆ.
ನಿವೃತ್ತ ಪೊಲೀಸ್ ಮುಖ್ಯ ಪೇದೆ ತಿರುಮಲೇಗೌಡ ಎರಡನೇ ಬಾರಿಗೆ ಸ್ವತಂತ್ರ ಅಭ್ಯರ್ಥಿಯಾಗಿ ಕಣದಲ್ಲಿ ಉಳಿದಿರುವುದು ಮತ್ತೊಂದು ವಿಶೇಷವಾಗಿದೆ. ಇವರು 2019ರ ಚುನಾವಣೆಯಲ್ಲೂ ಸ್ಪರ್ಧಿಸಿ ಠೇವಣಿ ಕಳೆದುಕೊಂಡಿದ್ದರು.
ಆಮ್ ಆದ್ಮಿ ಪಕ್ಷ
ಇವರನ್ನು ಹೊರತುಪಡಿಸಿ ಆಮ್ ಆದ್ಮಿ ಪಕ್ಷದ ಅಭ್ಯರ್ಥಿ ಎಚ್. ಎ. ಜಯರಾಮಯ್ಯ ಚುನಾವಣೆಗೆ ಸ್ಪರ್ಧಿಸುತ್ತಿದ್ದಾರೆ.
ಕೆಆರ್‌ಎಸ್ ಪಕ್ಷ
ಭ್ರಷ್ಟಾಚಾರ ನಿಯಂತ್ರಣಕ್ಕೆ ಸಂಬಂಧಿಸಿದಂತೆ ದನಿಯೆತ್ತಿ ಹೋರಾಟದ ಮೂಲಕ ಗುರುತಿಸಿಕೊಂಡಿರುವ ಕೆಆರ್‌ಎಸ್ ಪಕ್ಷದ ರಘು ಕೂಡಾ ಲಕ್ ಟೆಸ್ಟ್‌ಗೆ ಮುಂದಾಗಿದ್ದಾರೆ.
ರಾಷ್ಟ್ರೀಯ ಜನಹಿತ ಪಕ್ಷ
ರಾಷ್ಟ್ರೀಯ ಜನಹಿತ ಪಕ್ಷದ ಮೂಲಕ ರಮೇಶ್, ಮೊದಲ ಬಾರಿಗೆ ಎಲೆಕ್ಷನ್‌ನಲ್ಲಿ ಸ್ಪರ್ಧಿಸುತ್ತಿದ್ದಾರೆ.
ಒಕ್ಕಲಿಗ ಅಭ್ಯರ್ಥಿಗಳದ್ದೇ ಪಾರುಪತ್ಯ
ಈ ಬಾರಿ ಕುಣಿಗಲ್ ವಿಧಾನಸಭಾ ಕ್ಷೇತ್ರದಲ್ಲಿ ಸ್ಪರ್ಧೆಗಿಳಿದಿರುವ ಪ್ರಮುಖ ಮೂರು ಪಕ್ಷಗಳ ಅಭ್ಯರ್ಥಿಗಳು ಒಕ್ಕಲಿಗ ಸಮುದಾಯಕ್ಕೆ ಸೇರಿದವರಾಗಿದ್ದಾರೆ. ಕಾಂಗ್ರೆಸ್ ಅಭ್ಯರ್ಥಿ ಶಾಸಕ ಡಾ. ರಂಗನಾಥ್, ಬಿಜೆಪಿ ಅಭ್ಯರ್ಥಿ ಡಿ. ಕೃಷ್ಣಕುಮಾರ್ ಹಾಗೂ ಜೆಡಿಎಸ್ ಅಭ್ಯರ್ಥಿ ಡಾ. ರವಿ, ಕಾಂಗ್ರೆಸ್ ಟಿಕೆಟ್ ಸಿಗದೆ ರೆಬಲ್ ಆಗಿ ಪಕ್ಷೇತರ ಅಭ್ಯರ್ಥಿಯಾಗಿ ಅಖಾಡದಲ್ಲಿ ಇಳಿದಿರುವ ಮಾಜಿ ಶಾಸಕ ಬಿ.ಬಿ. ರಾಮಸ್ವಾಮಿ ಗೌಡ ಕೂಡಾ ಒಕ್ಕಲಿಗ ಸಮುದಾಯಕ್ಕೆ ಸೇರಿದ್ದಾರೆ. ಒಟ್ಟಿನಲ್ಲಿ ಪ್ರಬಲ ಒಕ್ಕಲಿಗ ಅಭ್ಯರ್ಥಿಗಳ ಮಧ್ಯೆ ಬಿಗ್ ಫೈಟ್ ಏರ್ಪಡಲಿದ್ದು, ಅಂತಿಮವಾಗಿ ಮತದಾರರ ಒಲವು ಯಾರತ್ತ ಇರಲಿದೆ ಎಂಬುದು ಮೇ 13 ರಂದು ತಿಳಿಯಲಿದೆ.