Karnataka Election: ಹಳೆ ಮೈಸೂರು ಭಾಗದಲ್ಲಿ 60 ಕ್ಷೇತ್ರ; ಕಾಂಗ್ರೆಸ್, ಜೆಡಿಎಸ್ ಪ್ರಾಬಲ್ಯ ಮುರಿಯಲು ಬಿಜೆಪಿ ವಿಶೇಷ ತಂತ್ರ
Apr 07, 2023 07:30 AM IST
ಹಳೆ ಮೈಸೂರು ಪ್ರಾಂತ್ಯ
Karnataka Election: ಹಳೇ ಮೈಸೂರು ಭಾಗದಲ್ಲಿ 60 ಸ್ಥಾನಗಳಲ್ಲಿ ಕಾಂಗ್ರೆಸ್ ಮೇಲುಗೈ ಸಾಧಿಸಿದೆ. ಒಕ್ಕಲಿಗರ ಪಕ್ಷವಾಗಿ ಜೆಡಿಎಸ್ ಬಿಂಬಿಸಿಕೊಂಡಿದ್ದು, ಕರ್ನಾಟಕವನ್ನು ಗೆಲ್ಲಲು ಬಿಜೆಪಿ ಈ ಕ್ಷೇತ್ರಗಳಿಗಾಗಿ ವಿಶೇಷ ತಂತ್ರವನ್ನು ಮಾಡಬೇಕಾಗಿದೆ. ಹಳೆ ಮೈಸೂರು ಭಾಗದ ಸಮೀಕರಣ ಹೀಗಿದೆ ನೋಡಿ.
ಹಳೆ ಮೈಸೂರು ಭಾಗದಲ್ಲಿ 60 ಕ್ಷೇತ್ರಗಳಿವೆ. ಕರ್ನಾಟಕದಲ್ಲಿ ಯಾವುದೇ ಪಕ್ಷಕ್ಕೆ ಬಹುಮತ ಬೇಕು ಎಂದಾದರೆ ಈ ಕ್ಷೇತ್ರಗಳ ಚುನಾವಣೆ ಗೆಲುವು ಪ್ರಮುಖ. ಈ ಕ್ಷೇತ್ರಗಳಲ್ಲಿ ಒಕ್ಕಲಿಗ ಸಮುದಾಯದವರು ಶೇ 17ರಷ್ಟಿದ್ದು, ಇವರ ಒಲವು ಗೆದ್ದವರಿಗೆ ಗದ್ದುಗೆ ಖಚಿತ.
ಕರ್ನಾಟಕದ ಹಳೆ ಮೈಸೂರು ಪ್ರದೇಶವು ರಾಜ್ಯದಲ್ಲಿ ಚುನಾವಣಾ ತಂತ್ರದ ದೃಷ್ಟಿಯಿಂದ ಬಹಳ ಪ್ರಬಲವಾದುದು ಎಂದು ಪರಿಗಣಿಸಲಾಗಿದೆ. ಈ ಪ್ರದೇಶವು ಜಾತ್ಯತೀತ ಜನತಾ ದಳ (ಜೆಡಿಎಸ್)ದ ಸಾಂಪ್ರದಾಯಿಕ ಭದ್ರಕೋಟೆ ಎಂಬ ವಿಶೇಷ ಪ್ರಾಮುಖ್ಯತೆಯನ್ನು ಹೊಂದಿದೆ. ಸದ್ಯದ ವಿಧಾನಸಭಾ ಚುನಾವಣೆಯ ಹಿನ್ನೆಲೆಯಲ್ಲಿ ಈ ಕ್ಷೇತ್ರದಲ್ಲಿ ಕ್ಷಿಪ್ರ ರಾಜಕೀಯ ಬದಲಾವಣೆಗಳು ಕಂಡು ಬರುತ್ತಿದ್ದು, ಈ ಬಾರಿ ತೀವ್ರ ಪೈಪೋಟಿಯ ಕ್ಷೇತ್ರವಾಗಿ ಮಾರ್ಪಟ್ಟಿದೆ. ಬಿಜೆಪಿ ಮತ್ತು ಕಾಂಗ್ರೆಸ್ ಕೂಡ ಜೆಡಿಎಸ್‌ನ ಈ ಅಭೇದ್ಯ ಕೋಟೆಯನ್ನು ಕೆಡವಲು ಸಂಪೂರ್ಣ ಸಿದ್ಧವಾಗಿವೆ.
ಮುಖ್ಯಮಂತ್ರಿ ಸ್ಥಾನಕ್ಕೆ ಮೂವರು ಅಭ್ಯರ್ಥಿಗಳನ್ನು ಹೊಂದಿರುವ ಈ ಪ್ರದೇಶವು ಅಧಿಕಾರದ ಶಿಖರವನ್ನು ಏರಲು ಹೆಬ್ಬಾಗಿಲು ಎಂದೇ ಪರಿಗಣಿಸಲಾಗಿದೆ. ಹಳೇ ಮೈಸೂರು ಭಾಗದ ಕೋಲಾರ, ಚಿಕ್ಕಬಳ್ಳಾಪುರ, ಬೆಂಗಳೂರು ಗ್ರಾಮಾಂತರ, ತುಮಕೂರು, ರಾಮನಗರ, ಮಂಡ್ಯ, ಮೈಸೂರು, ಚಾಮರಾಜನಗರ ಮತ್ತು ಹಾಸನ ಜಿಲ್ಲೆಗಳ ಒಟ್ಟು 52 ಸ್ಥಾನಗಳು ಬಿಜೆಪಿ, ಕಾಂಗ್ರೆಸ್ ಮತ್ತು ಜೆಡಿಎಸ್‌ಗೆ ನಿರ್ಣಾಯಕವಾಗಿವೆ. ಮತ್ತೊಂದೆಡೆ, ಒಕ್ಕಲಿಗ ಪ್ರಾಬಲ್ಯವಿರುವ ಹಳೇ ಮೈಸೂರಿನಲ್ಲಿ ಯಾವುದೇ ಪಕ್ಷ ಗೆದ್ದರೂ ಕರ್ನಾಟಕವನ್ನು ಗೆದ್ದು ಅಧಿಕಾರ ಹಿಡಿಯಬಹುದು ಎಂದು ರಾಜಕೀಯ ತಜ್ಞರು ಅಭಿಪ್ರಾಯಪಟ್ಟಿದ್ದಾರೆ.
ಕಾಂಗ್ರೆಸ್ ಮೇಲುಗೈ ಸಾಧಿಸಿದೆ
ಹಳೆ ಮೈಸೂರು ಪ್ರದೇಶವು ಸುಮಾರು 60 ಕ್ಷೇತ್ರಗಳನ್ನು ಹೊಂದಿದ್ದು, ಕರ್ನಾಟಕದಲ್ಲಿ ಯಾವುದೇ ಪಕ್ಷ ಚುನಾವಣೆ ಗೆಲ್ಲಲು ಇದು ಪ್ರಮುಖ ಕ್ಷೇತ್ರವಾಗಿದೆ. ಇದು ಮೊದಲಿನಿಂದಲೂ ಕಾಂಗ್ರೆಸ್‌ನ ಮೂಲ ಭದ್ರಕೋಟೆ. ಇತ್ತೀಚಿನ ದಶಕದಲ್ಲಿ ಜೆಡಿಎಸ್ ತನ್ನ ಹಿಡಿತವನ್ನು ಬಲಪಡಿಸಿಕೊಂಡಿದೆ. ಅಷ್ಟೇ ಅಲ್ಲ, ಇಲ್ಲಿ ಗಮನಾರ್ಹ ಛಾಪು ಮೂಡಿಸಿದೆ. ಒಕ್ಕಲಿಗ ಸಮುದಾಯವು ಈ ಪ್ರದೇಶದಲ್ಲಿ ಸುಮಾರು 17 ಪ್ರತಿಶತ ಮತದಾರರನ್ನು ಹೊಂದಿದೆ. ಅವರದೇ ಪಕ್ಷ ಎಂಬಂತೆ ಜೆಡಿಎಸ್ ಬೆಳೆದಿದೆ. ಆದರೆ ಈ ಕ್ಷೇತ್ರಗಳಲ್ಲಿ ಎಸ್‌ಸಿ-ಎಸ್‌ಟಿ ಪ್ರಾಬಲ್ಯವೂ ಇದೆ ಎಂಬುದನ್ನು ತಳ್ಳಿಹಾಕುವಂತೆ ಇಲ್ಲ.
ಕಾಂಗ್ರೆಸ್ ಬಗ್ಗೆ ಹೇಳುವುದಾದರೆ, ಒಂದು ಕಾಲದಲ್ಲಿ ಅದು ಇಡೀ ಪ್ರದೇಶದಲ್ಲಿ ಪ್ರಾಬಲ್ಯ ಸಾಧಿಸುತ್ತಿತ್ತು. ಕಾಂಗ್ರೆಸ್‌ಗೆ ಇಲ್ಲಿಂದ ಉತ್ತಮ ಸ್ಥಾನ ಸಿಗುತ್ತಿತ್ತು. ಆದರೆ ಕಳೆದ ಕೆಲವು ಚುನಾವಣೆಗಳಲ್ಲಿ ಪಕ್ಷದ ಆಸೆಗೆ ತಕ್ಕಂತೆ ಸ್ಥಾನಗಳು ಸಿಗಲಿಲ್ಲ. 2018 ರ ಚುನಾವಣೆಯ ಬಗ್ಗೆ ಮಾತನಾಡುವುದಾದರೆ, ಹಳೇ ಮೈಸೂರು ಪ್ರದೇಶದಲ್ಲಿ ಕಾಂಗ್ರೆಸ್ 20 ಸ್ಥಾನಗಳನ್ನು ಪಡೆದುಕೊಂಡಿದೆ. ಇದು 2013 ಕ್ಕಿಂತ 6 ಸ್ಥಾನ ಕಡಿಮೆ. ಆದರೆ, ಕಾಂಗ್ರೆಸ್ ರಾಜ್ಯಾಧ್ಯಕ್ಷ ಡಿ.ಕೆ.ಶಿವಕುಮಾರ್ ಕೂಡ ಇಲ್ಲಿನ ಬಹುಸಂಖ್ಯಾತ ಸಮುದಾಯ ಒಕ್ಕಲಿಗರಾದ ಕಾರಣ ಇಲ್ಲಿ ಕಾಂಗ್ರೆಸ್ ಇನ್ನೂ ಹಲವು ನಿರೀಕ್ಷೆಗಳನ್ನು ಇಟ್ಟುಕೊಂಡಿದೆ. ಆದ್ದರಿಂದ ಇಲ್ಲಿ ಪಕ್ಷ ಮತ್ತೆ ಮೇಲುಗೈ ಸಾಧಿಸುವ ನಿರೀಕ್ಷೆ ಇದೆ.
ಬಿಜೆಪಿಗೆ ಸಿಕ್ಕಿದೆ ಟ್ರಂಪ್ ಕಾರ್ಡ್
ಸದ್ಯದ ವಿಧಾನ ಸಭಾ ಚುನಾವಣೆಯಲ್ಲಿ ಮೂರೂ ಪಕ್ಷಗಳಲ್ಲಿ ತ್ರಿಕೋನ ಸ್ಪರ್ಧೆ ಏರ್ಪಡುವ ಸಾಧ್ಯತೆ ಇದೆ. ಬಿಜೆಪಿಯಲ್ಲಿ ಒಕ್ಕಲಿಗ ಸಮುದಾಯದ ಯಾವುದೇ ದೊಡ್ಡ ಮುಖ ಇಲ್ಲ. ಹೀಗಾಗಿ ಈ ಕ್ಷೇತ್ರಗಳಲ್ಲಿ ಸಾಧನೆ ಮಾಡಲು ಸಾಧ್ಯವಾಗಿಲ್ಲ. ಕಳೆದ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಇಲ್ಲಿಂದ ಒಂದಷ್ಟು ಸ್ಥಾನಗಳನ್ನು ಹೆಚ್ಚಿಸಿಕೊಂಡಿದ್ದರೂ ಜೆಡಿಎಸ್ ಮತ್ತು ಕಾಂಗ್ರೆಸ್‌ಗೆ ಹೋಲಿಸಿದರೆ ಹಿನ್ನಡೆಯಾಗಿತ್ತು. ಈಗ ಈ ಬಾರಿ ಬಿಜೆಪಿ ಹಳೆಯ ತಪ್ಪುಗಳನ್ನು ಪುನರಾವರ್ತಿಸಲು ಬಯಸುತ್ತಿಲ್ಲ. ಆದ್ದರಿಂದ ಅನೇಕ ಸ್ಥಳೀಯ ನಾಯಕರನ್ನು ಪಕ್ಷಕ್ಕೆ ಸೇರಿಸಿಕೊಳ್ಳಲಾಗಿದೆ. ಇದರಲ್ಲಿ ಶನಿವಾರ (ಏಪ್ರಿಲ್ 1) ನವದೆಹಲಿಯಲ್ಲಿ ಬಿಜೆಪಿಗೆ ಸೇರ್ಪಡೆಗೊಂಡ ಕರ್ನಾಟಕದ ನಾಲ್ಕು ಬಾರಿಯ ಶಾಸಕ ಎಟಿ ರಾಮಸ್ವಾಮಿ ಹೆಸರೂ ಇದೆ. ಕ್ಲೀನ್ ಇಮೇಜ್ ಹೊಂದಿರುವ 71 ವರ್ಷದ ರಾಜಕಾರಣಿ ಹಾಸನ ವ್ಯಾಪ್ತಿಯಲ್ಲಿ ಕಾಂಗ್ರೆಸ್ ಪಕ್ಷವನ್ನು ಪ್ರತಿನಿಧಿಸಿದ್ದರು. ಬಿಜೆಪಿಗೆ ಇವರೇ ಟ್ರಂಪ್ ಕಾರ್ಡ್ ಆಗಬಹುದು. ಈ ಕ್ಷೇತ್ರಗಳ ಒಕ್ಕಲಿಗ ಸಮುದಾಯಕ್ಕೆ ಸೇರಿದ ರಾಮಸ್ವಾಮಿ ಅವರ ರಾಜಕೀಯ ಹಿಡಿತವೂ ಇಲ್ಲಿ ಬಲವಾಗಿದೆ ಎಂದು ಹೇಳಲಾಗುತ್ತಿದೆ.
ಮತ್ತೊಮ್ಮೆ ಕಿಂಗ್ ಮೇಕರ್ ಆಗಬೇಕು ಜೆಡಿಎಸ್
ಕಾಂಗ್ರೆಸ್ ಮತ್ತು ಬಿಜೆಪಿ ಒಡೆಯಲು ಬಯಸುವ ಕೋಟೆ. ಇಲ್ಲಿ ರಾಜ ಎಂದೇ ಬಿಂಬಿತವಾಗಿರುವ ಜೆಡಿಎಸ್ ಗೆ ಇಲ್ಲಿನ ಸಮುದಾಯದ ಮೇಲೆ ಹೆಚ್ಚಿನ ಹಿಡಿತವಿದ್ದಂತಿದೆ. ಏಕೆಂದರೆ 1983ರಿಂದಲೂ ಈ ಬಹುಸಂಖ್ಯಾತ ಸಮಾಜದ ಮೇಲೆ ಮಾಜಿ ಪ್ರಧಾನಿ ಹಾಗೂ ರಾಜ್ಯದ ಮಾಜಿ ಮುಖ್ಯಮಂತ್ರಿ ಎಚ್.ಡಿ.ದೇವೇಗೌಡರ ಪ್ರಭಾವ ಬೇರೆಯದೇ ಆಗಿದೆ. ಏಕೆಂದರೆ ರಾಜ್ಯದಲ್ಲಿ ಲಿಂಗಾಯತ ಸಮುದಾಯದ ನಂತರ ಯಾರಿಗಾದರೂ ಹೆಚ್ಚು ಮತಗಳಿದ್ದರೆ ಅದು ಒಕ್ಕಲಿಗರದ್ದೇ ಎಂದು ದೇವೇಗೌಡರಿಗೆ ಗೊತ್ತು. ದೇವೇಗೌಡರು ಸ್ವತಃ ಈ ಜಾತಿಗೆ ಸೇರಿದವರು. ಈ ಪ್ರದೇಶದಲ್ಲಿ ಒಳಸುಳಿ ಕರಗತವಾಗಿದೆ ಅವರಿಗೆ. 2004ರಲ್ಲಿ ಇಲ್ಲಿಂದ ಒಟ್ಟು 46 ಸ್ಥಾನಗಳನ್ನು ಗೆಲ್ಲುವ ಮೂಲಕ ಜೆಡಿಎಸ್ ಈ ಭಾಗದಲ್ಲಿ ವಿಭಿನ್ನ ಛಾಪು ಮೂಡಿಸಿತ್ತು. ಇದರೊಂದಿಗೆ ಈ ಬಾರಿಯ ಚುನಾವಣೆಯಲ್ಲೂ ಜೆಡಿಎಸ್ ಪ್ರಮುಖ ಪಾತ್ರ ವಹಿಸಲಿದ್ದು, ಮತ್ತೊಮ್ಮೆ ಕಿಂಗ್ ಮೇಕರ್ ಆಗಿ ರಾಜ್ಯದ ಅಧಿಕಾರದ ಮೇಲೆ ಅಧಿಕಾರ ಸ್ಥಾಪಿಸಲು ಪ್ರಯತ್ನಿಸಲಿದೆ.