Karnataka Election 2023: ಡಿಕೆಶಿ ರಕ್ತ ಯಾರಿಗೂ ಪ್ರಯೋಜನವಿಲ್ಲ, 150 ಸ್ಥಾನ ಯಾರಿಗೆ ಕೊಡಬೇಕೆಂದು ಜನರೇ ತೀರ್ಮಾನಿಸುತ್ತಾರೆ; ಸಿಎಂ
Apr 27, 2023 12:31 PM IST
ಡಿಕೆಶಿ ರಕ್ತ ಯಾರಿಗೂ ಪ್ರಯೋಜನವಿಲ್ಲ, 150 ಸ್ಥಾನ ಯಾರಿಗೆ ಕೊಡಬೇಕೆಂದು ಜನರೇ ತೀರ್ಮಾನಿಸುತ್ತಾರೆ; ಸಿಎಂ
- ಈ ಸಲ ನಮ್ಮದೇ ಸರ್ಕಾರ, ಬೇಕಿದ್ದರೆ ಅದನ್ನು ರಕ್ತದಲ್ಲಿ ಬರೆದುಕೊಡುವೆ ಎಂದು ಹೇಳಿಕೆ ನೀಡಿದ್ದ ಡಿಕೆಶಿ ಅವರ ಹೇಳಿಕೆಗೆ ಸಿಎಂ ತಿರುಗೇಟು ನೀಡಿದ್ದಾರೆ. ಅದನ್ನು ಜನರೇ ನಿರ್ಧರಿಸುತ್ತಾರೆ ಎಂದಿದ್ದಾರೆ.
ಹುಬ್ಬಳ್ಳಿ: ಈ ಸಲ ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರವೇ ಅಧಿಕಾರಕ್ಕೆ ಬರುವುದು. ಇನ್ನು ಹದಿನೈದು ದಿನಗಳಲ್ಲಿ ನಾವೇ ಅಧಿಕಾರ ಹಿಡಿಯಲಿದ್ದೇವೆ. ಬೇಕಿದ್ರೆ ನಾನು ಅದನ್ನು ನನ್ನ ರಕ್ತದಲ್ಲಿ ಬರೆದುಕೊಡುವೆ ಎಂಬ ಡಿ.ಕೆ. ಶಿವಕುಮಾರ್ ಹೇಳಿಕೆಗೆ ಸಂಬಂಧಿಸಿದಂತೆ ಸಿಎಂ ಪ್ರತಿಕ್ರಿಯೆ ನೀಡಿದ್ದು, ಡಿಕೆಶಿ ಅವರ ರಕ್ತ ಯಾರಿಗೂ ಪ್ರಯೋಜನವಿಲ್ಲ ಎಂದು ಲೇವಡಿ ಮಾಡಿದ್ದಾರೆ.
ಹುಬ್ಬಳ್ಳಿಯಲ್ಲಿ ಕಾರ್ಯಕರ್ತರು ಮತ್ತು ಮತದಾರರ ಸಮ್ಮುಖದಲ್ಲಿ ಮೋದಿ ವರ್ಚುವಲ್ ಕಾರ್ಯಾಗಾರ ಮುಗಿದ ಬಳಿಕ ಮಾತನಾಡಿದ ಸಿಎಂ ಬಸವರಾಜ್ ಬೊಮ್ಮಾಯಿ, ಡಿಕೆಶಿ ಅವರ ಆಸೆಯನ್ನು ನಾವು ನೆರವೇರಿಸುತ್ತೇವೆ. ಇನ್ನೂ ಎರಡು ಮೂರು ದಿನದಲ್ಲಿ ರಾಜ್ಯದ ಚುನಾವಣಾ ಚಿತ್ರಣ ಬದಲಾಗಲಿದೆ. ಚುನಾವಣೆಯಲ್ಲಿ ಜನರಿಗೆ ಮೋಸ ಮಾಡುವ ಕಾಂಗ್ರೆಸ್ ತಂತ್ರವೂ ನೆಲಕ್ಕಚ್ಚಲಿದೆ ಎಂದಿದ್ದಾರೆ.
ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ರಕ್ತದಲ್ಲಿ ಬರೆದುಕೊಡುವ ಹೇಳಿಕೆಗೆ ಸಂಬಂಧಿಸಿದಂತೆ ಪ್ರತಿಕ್ರಿಯೆ ನೀಡಿದ ಸಿಎಂ, 150 ಸ್ಥಾನ ಯಾರಿಗೆ ಕೊಡಬೇಕು ಎಂದು ಜನ ತೀರ್ಮಾನ ಮಾಡುತ್ತಾರೆ. ಡಿಕೆಶಿ ಅವರ ರಕ್ತ ಯಾರಿಗೂ ಪ್ರಯೋಜನ ಆಗುವುದಿಲ್ಲ. ನಮಗೆ ಜನರ ಮೇಲೆ ವಿಶ್ವಾಸ ಇದೆ ಎಂದಿದ್ದಾರೆ.
ಮೈಸೂರಿನಲ್ಲಿ ಮಾತನಾಡಿದ್ದ ಡಿಕೆಶಿ
ಮುಂದಿನ ಕೇವಲ 15 ದಿನಗಳಲ್ಲಿ ರಾಜ್ಯದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬರಲಿದೆ. ಬೇಕಿದ್ದರೆ ರಕ್ತದಲ್ಲಿ ಬರೆದುಕೊಡಲಿದ್ದೇನೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಮೈಸೂರಿನಲ್ಲಿ ಬುಧವಾರ ಹೇಳಿಕೆ ನೀಡಿದ್ದರು. ರಾಜ್ಯದಲ್ಲಿ ಕಾಂಗ್ರೆಸ್ 150 ಸ್ಥಾನ ಪಡೆದರೆ, ಬಿಜೆಪಿ 40 ಸ್ಥಾನಗಳಿಗೆ ಕುಸಿಯಲಿದೆ ಎಂದು ಡಿಕೆಶಿ ಬಿಜೆಪಿಗೆ ಟಾಂಗ್ ಕೊಟ್ಟಿದ್ದರು. ಈಗ ಆ ಮಾತಿಗೆ ಸಿಎಂ ಪ್ರತಿಕ್ರಿಯಿಸಿದ್ದಾರೆ.
ಅಮಿತ್ ಶಾ ವಿರುದ್ಧ ಕೈ ದೂರು
ಕರ್ನಾಟಕದಲ್ಲಿ ಕಾಂಗ್ರೆಸ್ ಆಡಳಿತಕ್ಕೆ ಬಂದರೆ, ಕೋಮ ಗಲಭೆಗೆ ಅವಕಾಶ ಮಾಡಿಕೊಟ್ಟಂತಾಗಲಿದೆ ಎಂಬ ಕೇಂದ್ರ ಗೃಹ ಸಚಿವ ಅಮಿತ್ ಶಾ ಹೇಳಿಕೆಗೆ ಕಾಂಗ್ರೆಸ್ ಕಿಡಿ ಕಾರಿದ್ದು, ಕೇಂದ್ರ ಸಚಿವರ ವಿರುದ್ಧ ದೂರು ನೀಡಿದೆ.
ಕಾಂಗ್ರೆಸ್‌ನ ಮುಖಂಡ ರಣದೀಪ್ ಸಿಂಗ್ ಸುರ್ಜೆವಾಲಾ, ಡಿ.ಕೆ ಶಿವಕುಮಾರ್ ಸಮ್ಮುಖದಲ್ಲಿ ಬೆಂಗಳೂರಿನ ಹೈಗ್ರೌಂಡ್ಸ್ ಪೊಲೀಸ್ ಠಾಣೆಯಲ್ಲಿ ಗುರುವಾರ ಕೇಂದ್ರ ಸಚಿವ ಅಮಿತ್ ಶಾ ವಿರುದ್ಧ ದೂರು ನೀಡಿ, ಚುನಾವಣೆ ಸಂದರ್ಭದಲ್ಲಿ ಕೇಂದ್ರ ಗೃಹ ಸಚಿವರಾದಂಥವರು ಈ ರೀತಿಯ ಕೆಟ್ಟ ಹೇಳಿಕೆ ನೀಡುವುದು ಸರಿಯಲ್ಲ ಎಂದು ಕಾಂಗ್ರೆಸ್ ಮುಖಂಡರು ಅಸಮಾಧಾನ ಹೊರಹಾಕಿದ್ದಾರೆ.
ಈ ಕುರಿತು ಮಾತನಾಡಿರುವ ಡಿ.ಕೆ ಶಿವಕುಮಾರ್, ರಾಜ್ಯದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಕೋಮು ಗಲಭೆ ಹೆಚ್ಚಾಗಲಿದೆ ಎಂದು ಅಮಿತ್ ಶಾ ಹೇಳಿಕೆ ನೀಡಿದ್ದಾರೆ. ನಮ್ಮ ರಾಜ್ಯ ಶಾಂತಿಯ ಪ್ರತೀಕ. ಹೀಗಿರುವಾಗ ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಕೋಮು ಗಲಭೆ ಸೃಷ್ಟಿಯಾಗಲಿದೆ ಎಂದಿದ್ದಾರೆ. ಇದರ ಅರ್ಥ ಏನು? ಈ ಮೂಲಕ ವಿಷದ ರಾಜಕಾರಣ ಮಾಡುತ್ತಿದ್ದಾರೆ. ಈ ಕೂಡಲೇ ಅವರ ವಿರುದ್ಧ ಕ್ರಮ ಕೈಗೊಳ್ಳುವಂತೆ ದೂರು ನೀಡಿದ್ದೇವೆ ಎಂದಿದ್ದಾರೆ.
"ಬಿಜೆಪಿಯ ಸ್ಟಾರ್ ಕ್ಯಾಂಪೇನರ್ ಅವರು. ಹೀಗೆ ಹೇಳಿಕೆ ನೀಡುವುದು ಸರಿಯಲ್ಲ. ನಾವು ಸರ್ಕಾರದ ವಿರುದ್ಧ ಪೇ ಸಿಎಂ ಪ್ರತಿಭಟನೆ ಸಂದರ್ಭದಲ್ಲಿ, ರೈತರ ಬೇಡಿಕೆ ಈಡೇರಿಕೆಗೆ ಪ್ರತಿಭಟನೆ ಮಾಡಿದಾಗ, ರಾಹುಲ್ ಗಾಂಧಿ ಬಂಧನದ ವೇಳೆಯೂ ಪ್ರತಿಭಟನೆ ಮಾಡಿದ್ದೇವು. ಪ್ರತಿ ಸಲವೂ ನಮ್ಮ ಮೇಲೆ ಕೇಸ್ ಹಾಕುತ್ತಲೇ ಬರಲಾಗುತ್ತಿದೆ. ಇದೀಗ ಅವರ ವಿರುದ್ಧ ನಾವೂ ದೂರು ನೀಡಿದ್ದೇವೆ" ಎಂದಿದ್ದಾರೆ ಡಿ.ಕೆ ಶಿವಕುಮಾರ್.