logo
ಕನ್ನಡ ಸುದ್ದಿ  /  ಕರ್ನಾಟಕ  /  Bs Yediyurappa: ಲಿಂಗಾಯತ ಮತ ಬುಟ್ಟಿ ಎಲ್ಲಿಯೂ ಹೋಗದು; ಶೆಟ್ಟರ್‌ ನಿರ್ಗಮನ ಹೊಡೆತ ನೀಡದು ಎಂದ ಬಿಎಸ್‌ವೈ

BS Yediyurappa: ಲಿಂಗಾಯತ ಮತ ಬುಟ್ಟಿ ಎಲ್ಲಿಯೂ ಹೋಗದು; ಶೆಟ್ಟರ್‌ ನಿರ್ಗಮನ ಹೊಡೆತ ನೀಡದು ಎಂದ ಬಿಎಸ್‌ವೈ

Nikhil Kulkarni HT Kannada

Apr 19, 2023 04:05 PM IST

google News

ಬಿಎಸ್‌ ಯಡಿಯೂರಪ್ಪ (ಸಂಗ್ರಹ ಚಿತ್ರ)

    • ಈ ಬಾರಿಯ ವಿಧಾನಸಭೆ ಚುನಾವಣೆಯಲ್ಲಿ ಲಿಂಗಾಯತ ಸಮುದಾಯವು ಬಿಜೆಪಿಯಿಂದ ದೂರ ಸರಿಯಲಿದೆ ಎಂಬ ಮಾತುಗಳು ಕೇಳಿಬರುತ್ತಿವೆ. ಆದರೆ ಈ ವಾದವನ್ನು ತಿರಸ್ಕರಿಸಿರುವ ಬಿಎಸ್‌ ಯಡಿಯೂರಪ್ಪ, ಲಿಂಗಾಯತ ಸಮುಯದಾಯವು ಈ ಬಾರಿಯ ಚುನಾವಣೆಯಲ್ಲಿ ಬಿಜೆಪಿಯನ್ನು ಬೆಂಬಲಿಸುವುದು, ಶೇ.101ರಷ್ಟು ಸತ್ಯ ಎಂದು ಹೇಳಿದ್ದಾರೆ. ಈ ಕುರಿತು ಇಲ್ಲಿದೆ ಮಾಹಿತಿ..
ಬಿಎಸ್‌ ಯಡಿಯೂರಪ್ಪ (ಸಂಗ್ರಹ ಚಿತ್ರ)
ಬಿಎಸ್‌ ಯಡಿಯೂರಪ್ಪ (ಸಂಗ್ರಹ ಚಿತ್ರ) (HT_PRINT)

ಬೆಂಗಳೂರು: ಕರ್ನಾಟಕ ವಿಧಾನಸಭೆ ಚುನಾವಣೆ ಹೊಸ್ತಿಲಲ್ಲಿ, ಆಡಳಿತಾರೂಢ ಬಿಜೆಪಿ ವಿರುದ್ಧ ಲಿಂಗಾಯತ ಸಮುದಾಯಕ್ಕೆ ಅವಮಾನ ಮಾಡಿದ ಆರೋಪ ಕೇಳಿಬರುತ್ತಿದೆ. ಲಕ್ಷ್ಮಣ ಸವದಿ, ಜಗದೀಶ್‌ ಶೆಟ್ಟರ್‌ ಅವರಂತಹ ಪ್ರಬಲ ಲಿಂಗಾಯತ ನಾಯಕರು ಬಿಜೆಪಿ ತೊರೆದು ಕಾಂಗ್ರೆಸ್‌ ಸೇರಿರುವುದು, ಈ ಆರೋಪಗಳಿಗೆ ಪುಷ್ಠಿ ನೀಡುವಂತಿದೆ.

ಹೀಗಾಗಿ ಈ ಬಾರಿಯ ಚುನಾವಣೆಯಲ್ಲಿ ಲಿಂಗಾಯತ ಸಮುದಾಯ ಬಿಜೆಪಿಯಿಂದ ದೂರ ಸರಿದು, ಕಾಂಗ್ರೆಸ್‌ಗೆ ತನ್ನ ಮತಗಳನ್ನು ಮೀಸಲಿಡಬಹುದು ಎಂಬ ವಿಶ್ಲೇಷಣೆಗಳನ್ನು ಮಾಡಲಾಗುತ್ತಿದೆ. ರಾಜ್ಯದಲ್ಲಿ ಬಿಜೆಪಿ ಬಲಗೊಳ್ಳುವಲ್ಲಿ ಲಿಂಗಾಯತ ಸಮುದಾಯದ ಪಾತ್ರ ಅಧಿಕವಾಗಿದ್ದು, ಇದೀಗ ಈ ಸಮುದಾಯ ಮತ್ತೆ ಕಾಂಗ್ರೆಸ್‌ನತ್ತ ವಾಲುತ್ತಿರುವ ಲಕ್ಷಣಗಳು ಕಡುಬರುತ್ತಿವೆ.

ರಾಜ್ಯದಲ್ಲಿ ಲಿಂಗಾಯತ ಸಮುದಾಯವು ಬಿಜೆಪಿ ಪರ ನಿಲ್ಲುವಂತೆ ಮಾಡುವಲ್ಲಿ, ಮಾಜಿ ಮುಖ್ಯಮಂತ್ರಿ ಬಿಎಸ್‌ ಯಡಿಯೂರಪ್ಪ ಅವರ ಪಾತ್ರ ಅತ್ಯಂತ ಮಹತ್ವದ್ದು. ಆದರೆ ಬಿಎಸ್‌ವೈ ಇದೀಗ ಚುನಾವಣಾ ರಾಜಕೀಯದಿಂದ ನಿವೃತ್ತಿ ಹೊಂದಿದ್ದು, ಬಿಎಸ್‌ವೈ ಅವರಿಗೆ ಪರ್ಯಾಯವಾಗಿ ಬಿಜೆಪಿಗೆ ಲಿಂಗಾಯತ ಸಮುದಾಯದ ಮತಗಳನ್ನು ತಂದುಕೊಡುವ ಶಕ್ತಿ ಇರುವ ನಾಯಕರು ಪಕ್ಷದಲ್ಲಿ ಕಂಡುಬರುತ್ತಿಲ್ಲ ಎನ್ನಲಾಗಿದೆ.

ಈ ಹಿನ್ನೆಲೆಯಲ್ಲಿ ಈ ಬಾರಿಯ ವಿಧಾನಸಭೆ ಚುನಾವಣೆಯಲ್ಲಿ ಲಿಂಗಾಯತ ಸಮುದಾಯವು ಬಿಜೆಪಿಯಿಂದ ದೂರ ಸರಿಯಲಿದೆ ಎಂಬ ಮಾತುಗಳು ಕೇಳಿಬರುತ್ತಿವೆ. ಆದರೆ ಈ ವಾದವನ್ನು ತಿರಸ್ಕರಿಸಿರುವ ಬಿಎಸ್‌ ಯಡಿಯೂರಪ್ಪ, ಲಿಂಗಾಯತ ಸಮುಯದಾಯವು ಈ ಬಾರಿಯ ಚುನಾವಣೆಯಲ್ಲಿ ಬಿಜೆಪಿಯನ್ನು ಬೆಂಬಲಿಸುವುದು, ಶೇ.101ರಷ್ಟು ಸತ್ಯ ಎಂದು ಹೇಳಿದ್ದಾರೆ.

ಎನ್‌ಡಿಟಿವಿಯೊಂದಿಗೆ ಮಾತನಾಡಿರುವ ಬಿಎಸ್‌ವೈ, ಲಿಂಗಾಯತ ಮತಗಳು ಕಾಂಗ್ರೆಸ್‌ಗೆ ಹೋಗಲಿವೆ ಎಂಬ ವಿಶ್ಲೇಷಣೆಯೇ ತಪ್ಪು ಎಂದು ಹೇಳಿದ್ದಾರೆ. ಲಿಂಗಾಯತರು ಮೊದಲಿನಂತೆ ಬಿಜೆಪಿಯನ್ನು ಬೆಂಬಲಿಸುತ್ತಾರೆಯೇ ಎಂಬ ಪ್ರಶ್ನೆಗೆ, ಶೇ. 101ರಷ್ಟು ಎಂದು ಬಿಎಸ್‌ವೈ ಭರವಸೆಯ ಮಾತುಗಳನ್ನಾಡಿದ್ದಾರೆ.

"ಪಕ್ಷದ ಬಗ್ಗೆ ಸಮುದಾಯದಲ್ಲಿ ಯಾವುದೇ ತಪ್ಪು ತಿಳುವಳಿಕೆ ಇದ್ದಲ್ಲಿ, ನಾವು ಅವರಿಗೆ ಮನವರಿಕೆ ಮಾಡಿಕೊಡುತ್ತೇವೆ. ಈ ಬಾರಿಯ ಪಟ್ಟಿಯಲ್ಲಿ ಹಲವು ಲಿಂಗಾಯತ ನಾಯಕರಿಗೆ ನಾವು ಟಿಕೆಟ್‌ ನೀಡಿದ್ದೇವೆ. ಹೊಸ ನಾಯಕರನ್ನು ಬೆಳೆಸುವ ಉದ್ದೇಶದಿಂದ ಕೆಲವರಿಗೆ ಟಿಕೆಟ್‌ ತಪ್ಪಿರಬಹುದು. ಆದರೆ ಇದರಿಂದ ಇಡೀ ಲಿಂಗಾಯತ ಸಮುದಾಯ ಅಸಮಾಧಾನಗೊಂಡಿದೆ ಎಂದು ಹೇಳುವುದು ತಪ್ಪು.." ಎಂದು ಬಿಎಸ್‌ ಯಡಿಯೂರಪ್ಪ ಹೇಳಿದ್ದಾರೆ.

"ನನ್ನ ಪ್ರಕಾರ ಪ್ರಧಾನಮಂತ್ರಿ ನರೇಂದ್ರ ಮೋದಿ ಮತ್ತು ಕೇಂದ್ರ ಗೃಹ ಸಚಿವ ಅಮಿತ್‌ ಶಾ ಅವರ ನಾಯಕತ್ವವು, ಈ ಬಾರಿ ಕರ್ನಾಟಕದಲ್ಲಿ ಬಿಜೆಪಿ ಗೆಲ್ಲುವುದನ್ನು ಖಚಿತಪಡಿಸುತ್ತದೆ. ನಾವು ಸಂಪೂರ್ಣ ಬಹುಮತವನ್ನು ಪಡೆದು ಸರ್ಕಾರ ರಚಿಸಲಿದ್ದೇವೆ.." ಎಂದು ಮಾಜಿ ಮುಖ್ಯಮಂತ್ರಿ ಭವಿಷ್ಯ ನುಡಿದಿದ್ದಾರೆ.

"ರಾಜ್ಯ ಬಿಜೆಪಿ ಸರ್ಕಾರದ ವಿರುದ್ಧ ಪ್ರತಿಪಕ್ಷಗಳು ಮಾಡುತ್ತಿರುವ ಕಮಿಷನ್‌ ಮತ್ತು ಭ್ರಷ್ಟಾಚಾರದ ಆರೋಪಗಳು ಸತ್ಯಕ್ಕೆ ದೂರವಾದವು. ಸರ್ಕಾರದ ಅಭಿವೃದ್ಧಿ ಕಾರ್ಯಗಳು ಮತ್ತು ಜನಪ್ರಿಯತೆಯನ್ನು ಸಹಿಸದ ವಿಪಕ್ಷಗಳು, ಇಲ್ಲಸಲ್ಲದ ಆರೋಪ ಮಾಡುತ್ತಾ ಕಾಲಹರಣ ಮಾಡುತ್ತಿವೆ.." ಎಂದು ಬಿಎಸ್‌ ಯಡಿಯೂರಪ್ಪ ಇದೇ ವೇಳೆ ಗುಡುಗಿದರು.

ಇನ್ನು ತಮ್ಮ ಸ್ವಕ್ಷೇತ್ರ ಶಿಕಾರಿಪುರ ಕ್ಷೇತ್ರದಲ್ಲಿ ತಮ್ಮ ಪುತ್ರ ಬಿವೈ ವಿಜಯೇಂದ್ರ ಅವರ ಗೆಲುವು ನಿಶ್ಚಿತ ಎಂದ ಬಿಎಸ್‌ವೈ, ವಿಜಯೇಂದ್ರ ಕನಿಷ್ಠ 55 ಸಾವಿರಕ್ಕೂ ಹೆಚ್ಚು ಮತಗಳ ಅಂತರದಿಂದ ಗೆಲ್ಲುತ್ತಾರೆ ಎಂದು ಭರವಸೆ ವ್ಯಕ್ತಪಡಿಸಿದ್ದಾರೆ. ನಾನು ಸ್ವಯಂಪ್ರೇರಿತನಾಗಿ ಚುನಾವಣಾ ರಾಜಕೀಯದಿಂದ ನಿವೃತ್ತಿ ಹೊಂದಿದ್ದು, ನನ್ನ ಮೇಲೆ ಯಾರ ಒತ್ತಡವೂ ಇರಲಿಲ್ಲ ಎಂದು ಇದೇ ವೇಳೆ ಬಿಎಸ್‌ವೈ ಸ್ಪಷ್ಟಪಡಿಸಿದ್ದಾರೆ.

ಲಕ್ಷ್ಮಣ ಸವದಿ ಮತ್ತು ಜಗದೀಶ್‌ ಶೆಟ್ಟರ್‌ ಬಿಜೆಪಿ ತೊರೆಯುವ ಮೂಲಕ ಪಕ್ಷಕ್ಕೆ ದ್ರೋಹ ಮಾಡಿದ್ದಾರೆ. ನಾಡಿನ ಜನ ಅವರನ್ನು ಈ ಪ್ರಮಾದಕ್ಕಾಗಿ ಎಂದಿಗೂ ಸಹಿಸುವುದಿಲ್ಲ. ಅಲ್ಲದೇ ಈ ನಾಯಕರ ಪಕ್ಷಾಂತರದಿಂದ ಲಿಂಗಾಯತ ಸಮುದಾಯ ಬಿಜೆಪಿಯಿಂದ ದೂರ ಸರಿಯಲಿದೆ ಎಂಬುದು ಕೇವಲ ಊಹಾಪೋಹ ಎಂದು ಬಿಎಸ್‌ ಯಡಿಯೂರಪ್ಪ ಹೇಳಿದರು.

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ