logo
ಕನ್ನಡ ಸುದ್ದಿ  /  ಕರ್ನಾಟಕ  /  Congress Star Campaigners: ಕಾಂಗ್ರೆಸ್‌ ಪ್ರಚಾರ ಪಟ್ಟಿಯಲ್ಲಿ ರಾಹುಲ್‌, ಶೆಟ್ಟರ್‌ಗೆ ಸ್ಥಾನ; ಸಚಿನ್ ಪೈಲಟ್‌ ಅನುಮಾನ‌

Congress Star Campaigners: ಕಾಂಗ್ರೆಸ್‌ ಪ್ರಚಾರ ಪಟ್ಟಿಯಲ್ಲಿ ರಾಹುಲ್‌, ಶೆಟ್ಟರ್‌ಗೆ ಸ್ಥಾನ; ಸಚಿನ್ ಪೈಲಟ್‌ ಅನುಮಾನ‌

Nikhil Kulkarni HT Kannada

Apr 19, 2023 07:50 PM IST

google News

ಸಂಗ್ರಹ ಚಿತ್ರ

    • ಮುಂಬರುವ ಕರ್ನಾಟಕ ವಿಧಾನಸಭಾ ಚುನಾವಣೆಯ ಸ್ಟಾರ್ ಪ್ರಚಾರಕರ ಪಟ್ಟಿಯನ್ನು ಕಾಂಗ್ರೆಸ್ ಬುಧವಾರ ಬಿಡುಗಡೆ ಮಾಡಿದೆ. ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಯುಪಿಎ ಅಧ್ಯಕ್ಷೆ ಸೋನಿಯಾ ಗಾಂಧಿ, ರಾಹುಲ್ ಗಾಂಧಿ, ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್, ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ, ಜಗದೀಶ್ ಶೆಟ್ಟರ್ ಅವರು ಕಾಂಗ್ರೆಸ್‌ ಪರ ಪ್ರಚಾರ ಮಾಡಲಿರುವ ಪ್ರಮುಖ ನಾಯಕರು.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ (AICC)

ಬೆಂಗಳೂರು: ರಾಜ್ಯದಲ್ಲಿ ವಿಧಾನಸಭೆ ಚುನಾವಣೆ ಕಾವು ದಿನದಿಂದ ದಿನಕ್ಕೆ ಜೋರಾಗುತ್ತಿದೆ. ಮೂರೂ ರಾಜಕೀಯ ಪಕ್ಷಗಳ ಪ್ರಮುಖ ನಾಯಕರು ಈಗಾಗಲೇ ತಮ್ಮ ನಾಮಪತ್ರಗಳನ್ನು ಸಲ್ಲಿಸಿದ್ದಾರೆ. ಅದೇ ರೀತಿ ಮೂರೂ ಪಕ್ಷಗಳು ತಮ್ಮ ತಮ್ಮ ಸ್ಟಾರ್‌ ಪ್ರಚಾರಕರ ಪಟ್ಟಿಯನ್ನು ಬಿಡುಗಡೆ ಮಾಡುತ್ತಿವೆ.

ವಿರೋಧ ಪಕ್ಷ ಕಾಂಗ್ರೆಸ್‌ ಕೂಡ ತನ್ನ ಪ್ರಮುಖ ಪ್ರಚಾರಕರ ಪಟ್ಟಿಯನ್ನು ಬಿಡುಗಡೆ ಮಾಡಿದ್ದು, ಪ್ರಮುಖವಾಗಿ ರಾಹುಲ್‌ ಗಾಂಧಿ, ಜಗದೀಶ್‌ ಶೆಟ್ಟರ್‌ ಸೇರಿದಂತೆ ಹಲವು ನಾಯಕರು ಸ್ಥಾನ ಪಡೆದುಕೊಂಡಿದ್ದಾರೆ. ಆದರೆ ಪಕ್ಷದ ರಾಜಸ್ಥಾನದ ನಾಯಕ ಸಚಿನ್‌ ಪೈಲಟ್‌, ಈ ಪ್ರಚಾರಕರ ಪಟ್ಟಿಯಲ್ಲಿ ಸ್ಥಾನ ಪಡೆಯದಿರುವುದು ಕುತೂಹಲ ಕೆರಳಿಸಿದೆ.

ಮುಂಬರುವ ಕರ್ನಾಟಕ ವಿಧಾನಸಭಾ ಚುನಾವಣೆಯ ಸ್ಟಾರ್ ಪ್ರಚಾರಕರ ಪಟ್ಟಿಯನ್ನು ಕಾಂಗ್ರೆಸ್ ಬುಧವಾರ ಬಿಡುಗಡೆ ಮಾಡಿದೆ. ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಯುಪಿಎ ಅಧ್ಯಕ್ಷೆ ಸೋನಿಯಾ ಗಾಂಧಿ, ರಾಹುಲ್ ಗಾಂಧಿ, ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್, ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ, ಮಾಜಿ ಮುಖ್ಯಮಂತ್ರಿ ಮತ್ತು ಇತ್ತೀಚಿಗಷ್ಟೇ ಕಾಂಗ್ರೆಸ್‌ ಸೇರಿರುವ ಜಗದೀಶ್ ಶೆಟ್ಟರ್ ಅವರು ಕಾಂಗ್ರೆಸ್‌ ಪರ ಪ್ರಚಾರ ಮಾಡಲಿರುವ ಪ್ರಮುಖ ನಾಯಕರು.

ಈ ಪಟ್ಟಿಯಲ್ಲಿ ಕೆಸಿ ವೇಣುಗೋಪಾಲ್, ಶಶಿ ತರೂರ್, ರಣದೀಪ್ ಸಿಂಗ್ ಸುರ್ಜೆವಾಲಾ, ಜೈರಾಮ್ ರಮೇಶ್, ಪಿ ಚಿದಂಬರಂ ಜೊತೆಗೆ ರಾಜಸ್ಥಾನ ಸಿಎಂ ಅಶೋಕ್ ಗೆಹ್ಲೋಟ್, ಛತ್ತೀಸ್‌ಗಢ ಸಿಎಂ ಭೂಪೇಶ್ ಬಾಘೆಲ್, ಹಿಮಾಚಲ ಪ್ರದೇಶ ಸಿಎಂ, ಸುಖ್ವಿಂದರ್ ಸಿಂಗ್ ಸುಕ್ಕು ಮತ್ತು ಮಹಾರಾಷ್ಟ್ರ ಮಾಜಿ ಸಿಎಂ ಪೃಥ್ವಿರಾಜ್ ಚವಾಣ್ ಅವರ ಹೆಸರುಗಳೂ ಸೇರಿವೆ. ಆದರೆ, ರಾಜಸ್ಥಾನದ ಮಾಜಿ ಉಪಮುಖ್ಯಮಂತ್ರಿ ಮತ್ತು ಪಕ್ಷದ ನಾಯಕ ಸಚಿನ್ ಪೈಲಟ್ ಅವರ ಹೆಸರು ಪಟ್ಟಿಯಲ್ಲಿ ಇಲ್ಲ.

ರಾಜಸ್ಥಾನದಲ್ಲಿ ಪದೇ ಪದೇ ಬಂಡಾಯದ ಬಾವುಟ ಹಾರಿಸುತ್ತಿರುವ ಸಚಿನ್‌ ಪೈಲಟ್‌, ತಮ್ಮದೇ ಸರ್ಕಾರದ ವಿರುದ್ಧ ಇತ್ತೀಚಿಗೆ ಪ್ರತಿಭಟನೆ ನಡೆಸಿ ಹೈಕಮಾಂಡ್‌ ಕೆಂಗೆಣ್ಣಿಗೆ ಗುರಿಯಾಗಿದ್ದಾರೆ. ಮುಖ್ಯಮಂತ್ರಿ ಅಶೋಕ್‌ ಗೆಹ್ಲೋಟ್‌ ಅವರೊಂದಿಗಿನ ಅವರ ಭಿನ್ನಾಭಿಪ್ರಾಯ, ಹೈಕಮಾಂಡ್‌ಗೆ ಆಗಾಗ್ಗೆ ತಲೆನೋವು ತರುತ್ತಿದೆ. ಸಚಿನ್‌ ಪೈಲಟ್‌ ಅವರನ್ನು ನಿಯಂತ್ರಿಸುವ ಬಗೆ ಹೇಗೆಂದು ಕಾಂಗ್ರೆಸ್‌ ತೆಲೆಕೆಡಿಸಿಕೊಂಡಿದೆ. ಕರ್ನಾಟಕ ವಿಧಾನಸಭೆ ಚುನಾವಣೆಯಲ್ಲಿ, ಸಚಿನ್‌ ಪೈಲಟ್‌ ಅವರು ಸ್ಟಾರ್‌ ಪ್ರಚಾರಕರ ಪಟ್ಟಿಯಲ್ಲಿ ಇಲ್ಲದಿರುವುದಕ್ಕೆ ಇದೂ ಒಂದು ಕಾರಣ ಎನ್ನಲಾಗಿದೆ.

ಶೆಟ್ಟರ್ ಸೇರಿದಂತೆ 7 ಅಭ್ಯರ್ಥಿಗಳ ನಾಲ್ಕನೇ ಪಟ್ಟಿಯನ್ನು ಕಾಂಗ್ರೆಸ್ ಮಂಗಳವಾರ ಬಿಡುಗಡೆ ಮಾಡಿದ್ದು, ಹುಬ್ಬಳ್ಳಿ-ಧಾರವಾಡ-ಕೇಂದ್ರ ಕ್ಷೇತ್ರದಿಂದ ಶೆಟ್ಟರ್‌ ಅವರನ್ನು ಕಣಕ್ಕಿಳಿಸಲಾಗಿದೆ. ಶಿಗ್ಗಾಂವಿ ವಿಧಾನಸಭಾ ಕ್ಷೇತ್ರದಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ವಿರುದ್ಧ ಮೊಹಮ್ಮದ್ ಯೂಸುಫ್ ಸವಣೂರ ಅವರನ್ನು ಕಣಕ್ಕಿಳಿಸಿದೆ. ಪ್ರಸ್ತುತ ಬಿಜೆಪಿ ಪ್ರಧಾನ ಕಾರ್ಯದರ್ಶಿ ಸಿಟಿ ರವಿ ಪ್ರತಿನಿಧಿಸುತ್ತಿರುವ ಚಿಕ್ಕಮಗಳೂರು ವಿಧಾನಸಭಾ ಕ್ಷೇತ್ರದಿಂದ ಕಾಂಗ್ರೆಸ್‌ನಿಂದ ಎಚ್‌ಡಿ ತಮ್ಮಯ್ಯ ಸ್ಪರ್ಧಿಸುತ್ತಿದ್ದಾರೆ.

224 ಸದಸ್ಯ ಬಲದ ವಿಧಾನಸಭೆಗೆ ಕಾಂಗ್ರೆಸ್ ಇದುವರೆಗೆ 216 ಅಭ್ಯರ್ಥಿಗಳನ್ನು ಘೋಷಿಸಿದೆ. ಚುನಾವಣಾ ಆಯೋಗವು ಚುನಾವಣಾ ವೇಳಾಪಟ್ಟಿಯನ್ನು ಪ್ರಕಟಿಸುವ ಮೊದಲು ಕರ್ನಾಟಕ ಕಾಂಗ್ರೆಸ್ 124 ಅಭ್ಯರ್ಥಿಗಳ ಮೊದಲ ಪಟ್ಟಿಯನ್ನು ಪ್ರಕಟಿಸಿತ್ತು. ಕರ್ನಾಟಕದಲ್ಲಿ ಮೇ 10ರಂದು ಒಂದೇ ಹಂತದ ಮತದಾನ ನಡೆಯಲಿದ್ದು, ಮೇ 13 ರಂದು ಫಲಿತಾಂಶ ಪ್ರಕಟವಾಗಲಿದೆ. 224 ಸದಸ್ಯ ಬಲದ ಕರ್ನಾಟಕ ವಿಧಾನಸಭೆಯ ಅವಧಿ ಮೇ 24ರಂದು ಕೊನೆಗೊಳ್ಳಲಿದೆ.

ಒಟ್ಟಿನಲ್ಲಿ ಕಾಂಗ್ರೆಸ್‌ ಸ್ಟಾರ್‌ ಪ್ರಚಾರಕರ ಪಟ್ಟಿ ಗಮನ ಸೆಳೆಯುವಂತಿದ್ದು, ಸಚಿನ್‌ ಪೈಲಟ್‌ ಅವರಿಗೆ ಈ ಪಟ್ಟಿಯಲ್ಲಿ ಸ್ಥಾನ ದೊರೆಯದೇ ಇರುವುದು ಗಮನ ಸೆಳೆದಿದೆ.

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ