Karnataka Election Result: ಹಳೆ ಮೈಸೂರು ಭಾಗದಲ್ಲಿ ಬಿಜೆಪಿ ಎಡವಿದ್ದೆಲ್ಲಿ?; ಇಲ್ಲಿದೆ ಸಮಗ್ರ ಒಳನೋಟ
May 13, 2023 04:14 PM IST
ಪ್ರಾತಿನಿಧಿಕ ಚಿತ್ರ
- ಹಳೆ ಮೈಸೂರು ಭಾಗ, ವಿಶೇಷವಾಗಿ ಮೈಸೂರು ನಗರ ಮೊದಲಿನಿಂದಲೂ ಬಿಜೆಪಿಯ ಭದ್ರಕೋಟೆಯೇನಲ್ಲ. ಇಲ್ಲಿನ ಕೃಷ್ಣರಾಜ ಕ್ಷೇತ್ರ ಹೊರತುಪಡಿಸಿ ಮತ್ತೆಲ್ಲೂ ಬಿಜೆಪಿಯ ಭದ್ರ ಬುನಾದಿ ಇಲ್ಲ. ಅದಾಗ್ಯೂ ಕಳೆದ ಬಾರಿ ನಡೆದ ವಿಧಾನಸಭಾ ಚುನಾವಣೆಯಲ್ಲಿ ಚಾಮರಾಜ, ಕೃಷ್ಣರಾಜ ಕ್ಷೇತ್ರಗಳಲ್ಲಿ ಬಿಜೆಪಿ ಗೆಲುವು ಸಾಧಿಸಿತ್ತು. ಆದರೆ ಈ ಬಾರಿ ಅವರ ಲೆಕ್ಕಾಚಾರ ಉಲ್ಟಾ ಆಗಿದೆ.
ಮೈಸೂರು: ತಿಂಗಳಿಗೆ ಎರಡು-ಮೂರು ಬಾರಿ ರೋಡ್ ಶೋ, ಆಗಿಂದಾಗ್ಗೆ ಭಾಷಣಗಳು, ಕನ್ನಡದ ಟ್ವೀಟ್‌ಗಳು, ಕನ್ನಡಿಗರನ್ನು ಓಲೈಸಲು ಪ್ರಧಾನಿ ನರೇಂದ್ರ ಮೋದಿ ಅವರು ಮಾಡಿದ್ದೇನು, ಮಾಡದಿದ್ದೇನು? ಎಲ್ಲವನ್ನೂ ಮಾಡಿದರೂ ಕೊನೆಗೆ ಇಡೀ ಕರ್ನಾಟಕದಲ್ಲಿ ಅವರ ಯೋಜನೆ ವರ್ಕ್ ಔಟ್ ಆಗಲಿಲ್ಲ. ವಿಶೇಷವಾಗಿ ಮೈಸೂರು ಭಾಗದಲ್ಲಿ ಬಿಜೆಪಿ ನೆಲಕಚ್ಚಿದೆ. ಎಷ್ಟೇ ಪ್ರಯತ್ನಗಳು ನಡೆದರೂ ಹೊಸ ಪ್ರಯೋಗಗಳು, ಅನವಶ್ಯಕ ನಡೆಗಳಿಂದ ಬಿಜೆಪಿ ಹಿನ್ನೆಡೆ ಅನುಭವಿಸಬೇಕಾಗಿ ಬಂದಿದೆ.
ಹಳೆ ಮೈಸೂರು ಭಾಗ, ವಿಶೇಷವಾಗಿ ಮೈಸೂರು ನಗರ ಮೊದಲಿನಿಂದಲೂ ಬಿಜೆಪಿಯ ಭದ್ರಕೋಟೆಯೇನಲ್ಲ. ಇಲ್ಲಿನ ಕೃಷ್ಣರಾಜ ಕ್ಷೇತ್ರ ಹೊರತುಪಡಿಸಿ ಮತ್ತೆಲ್ಲೂ ಬಿಜೆಪಿಯ ಭದ್ರ ಬುನಾದಿ ಇಲ್ಲ. ಅದಾಗ್ಯೂ ಕಳೆದ ಬಾರಿ ನಡೆದ ವಿಧಾನಸಭಾ ಚುನಾವಣೆಯಲ್ಲಿ ಚಾಮರಾಜ, ಕೃಷ್ಣರಾಜ ಕ್ಷೇತ್ರಗಳಲ್ಲಿ ಬಿಜೆಪಿ ಗೆಲುವು ಸಾಧಿಸಿತ್ತು. ಆದರೆ ಈ ಬಾರಿ ಅವರ ಲೆಕ್ಕಾಚಾರ ಉಲ್ಟಾ ಆಗಿದೆ. ನರಸಿಂಹರಾಜ, ಚಾಮುಂಡೇಶ್ವರಿ ಕ್ಷೇತ್ರಗಳಲ್ಲಿ ಎಂದಿನಂತೆ ಕಾಂಗ್ರೆಸ್ ಹಾಗೂ ಜೆಡಿಎಸ್ ಗೆದ್ದು ಬೀಗಿದೆ. ಚಾಮರಾಜ ಕ್ಷೇತ್ರದಲ್ಲಿ ಉದಾಸೀನಕ್ಕೆ ಬಿಜೆಪಿ ಬಲಿಯಾದರೆ, ಕೃಷ್ಣರಾಜ ಕ್ಷೇತ್ರದಲ್ಲಿ ಮಾತ್ರ ಗೆದ್ದು ಸ್ವಲ್ಪ ಮಟ್ಟಕ್ಕೆ ಅಸ್ತಿತ್ವ ಉಳಿಸಿಕೊಂಡಿದೆ. ವರುಣಾದಲ್ಲಿ ಪ್ರತಿಷ್ಠೆಯಿಂದ ಮಾಡಿದ ಪ್ರಯೋಗ ಬಿಜೆಪಿಗೆ ಮುಳುವಾಗಿದೆ.
ವರುಣಾ: ಕಳೆದ ಬಾರಿ ಚಾಮುಂಡೇಶ್ವರಿ ಕ್ಷೇತ್ರದಲ್ಲಿ ಸೋತಿದ್ದ ಸಿದ್ದರಾಮಯ್ಯ ಅವರು ಈ ಬಾರಿ ತಮ್ಮ ಮಗನನ್ನು ಬದಿಗೊತ್ತಿ ವರುಣಾದಿಂದ ಸ್ಪರ್ಧಿಸುವ ನಿರ್ಧಾರ ಮಾಡಿದರು. ಆದರೆ ಬಿಜೆಪಿ ಕೇವಲ ಜಾತಿ ಲೆಕ್ಕಾಚಾರ ಮಾಡಿ ದೂರದ ಬೆಂಗಳೂರಿನ ಗೋವಿಂದರಾಜನಗರದಿಂದ ವಿ.ಸೋಮಣ್ಣ ಅವರನ್ನು ಸಿದ್ದರಾಮಯ್ಯ ವಿರುದ್ಧ ಕಣಕ್ಕಿಳಿಸಿತು. ಸೋಮಣ್ಣ ಕೆಲಕಾಲ ಮೈಸೂರು ಜಿಲ್ಲಾ ಉಸ್ತುವಾರಿ ಸಚಿವರಾಗಿದ್ದ ಮಾತ್ರಕ್ಕೆ ಮಾಜಿ ಸಿಎಂ ಒಬ್ಬರ ಹುಟ್ಟೂರು ಹಾಗೂ ತವರು ಕ್ಷೇತ್ರದಲ್ಲಿ ಅವರ ವಿರುದ್ಧವೇ ಜಯ ಸಾಧಿಸುವುದು ಅಷ್ಟು ಸುಲಭವೇ? ಇದನ್ನು ಯೋಚಿಸದ ಬಿಜೆಪಿ ಪ್ರಯೋಗದ ನಡೆ ಇಟ್ಟು ಎಡವಿದೆ. ವರುಣಾ ಜನರು ತಮ್ಮ ಊರಿನ ಮಗನನ್ನು, ಮಾಜಿ ಸಿಎಂ ಅನ್ನು ಗೆಲ್ಲಿಸಿದ್ದಾರೆ. ಇತ್ತ ಸೋಮಣ್ಣ ಸ್ಪರ್ಧಿಸಿದ್ದ ಎರಡೂ ಕ್ಷೇತ್ರಗಳಲ್ಲಿ ಸೋತಿದ್ದಾರೆ.
ಚಾಮುಂಡೇಶ್ವರಿ: ಚಾಮುಂಡೇಶ್ವರಿ ಕ್ಷೇತ್ರ ಯಾವುದೇ ಪಕ್ಷದ ಭದ್ರಕೋಟೆ ಎನ್ನುವುದಕ್ಕಿಂತ ಜಿ.ಟಿ.ದೇವೇಗೌಡ ಅವರ ಭದ್ರಕೋಟೆ. ಕಳೆದ ಬಾರಿ ಹಾಲಿ ಮುಖ್ಯಮಂತ್ರಿಯನ್ನೇ ಅವರ ತವರು ಕ್ಷೇತ್ರದಲ್ಲಿ ಸೋಲಿಸಿದ್ದ ಜಿ.ಟಿ.ದೇವೇಗೌಡರಿಗೆ ಇದೇನು ಕಷ್ಟದ ಕೆಲಸವಾಗಿರಲಿಲ್ಲ. ಮಾಜಿ ಶಾಸಕ ವಾಸು ಅವರ ಪುತ್ರ ಅವರ ಕವೀಶ್ ಗೌಡ ಹಾಗೂ ಕಾಂಗ್ರೆಸ್ ಮುಖಂಡ ಮಾವಿನಹಳ್ಳಿ ಸಿದ್ದೇಗೌಡರ ವಿರುದ್ಧ ಜಿ.ಟಿ.ಡಿ. ಸುಲಭವಾಗಿ ಗೆದ್ದುಕೊಂಡರು. ಇದು ನಿರೀಕ್ಷಿತ ಫಲಿತಾಂಶವೇ ಹೌದು.
ಚಾಮರಾಜ: ಚಾಮರಾಜ ಕ್ಷೇತ್ರದಲ್ಲಿ ಐದು ವರ್ಷಗಳ ಕಾಲವೂ ಹೆಚ್ಚೇನೂ ಕೆಲಸ ಮಾಡದ ಬಿಜೆಪಿ ಶಾಸಕ ಎಲ್.ನಾಗೇಂದ್ರಗೆ ಮತ್ತೆ ಬಿಜೆಪಿ ಟಿಕೆಟ್ ನೀಡಿತು. ಇತ್ತ ಕಳೆದ ಕೆಲವು ವರ್ಷಗಳಿಂದ ಛಲಬಿಡದೆ ವಿವಿಧ ಪಕ್ಷಗಳಿಂದ ಸ್ಪರ್ಧಿಸುತ್ತಿದ್ದ ಹರೀಶ್ ಗೌಡ ಕಾಂಗ್ರೆಸ್‌ನಿಂದ ಸ್ಪರ್ಧಿಸಿದರು. ಎಲ್.ನಾಗೇಂದ್ರ ಅವರ ಉದಾಸೀನ, ಚಾಮರಾಜ ಕ್ಷೇತ್ರಕ್ಕೆ ಮತ್ತೊಬ್ಬ ಸಮರ್ಥ ಅಭ್ಯರ್ಥಿಯನ್ನು ಹುಡುಕದೆ ಬಿಜೆಪಿ ಮಾಡಿದ ಉದಾಸೀನ..ಈ ಕಾರಣಗಳಿಂದ ಬಿಜೆಪಿ ಸೋಲನ್ನು ಒಪ್ಪಿಕೊಳ್ಳಲೇಬೇಕಾಯಿತು. ಕಾಂಗ್ರೆಸ್ ಅಭ್ಯರ್ಥಿ ಹರೀಶ್ ಗೌಡ ಚಾಮರಾಜ ಕ್ಷೇತ್ರದಲ್ಲಿ ಗೆಲುವು ಸಾಧಿಸಿದರು.
ಕೃಷ್ಣರಾಜ: ಕೃಷ್ಣರಾಜ ಕ್ಷೇತ್ರ ಆರಂಭದಿಂದಲೂ ಬಹಳಷ್ಟು ಕುತೂಹಲ ಕೆರಳಿಸಿದ್ದ ಕ್ಷೇತ್ರ. ರಾಮದಾಸ್ ಅವರಿಗೆ ಟಿಕೆಟ್ ಸಿಗುತ್ತದೋ ಇಲ್ಲವೋ ಎಂಬ ಡೋಲಾಯಮಾನದಲ್ಲೇ ಇದ್ದರು ಕ್ಷೇತ್ರದ ಮತದಾರರು. ಆದರೆ ಬಿಜೆಪಿ ಕೊನೆ ಕ್ಷಣದಲ್ಲಿ ಶ್ರೀವತ್ಸ ಅವರನ್ನು ಕಣಕ್ಕಿಳಿಸಿತು. ಕೃಷ್ಣರಾಜ ಮೊದಲಿನಿಂದಲೂ ಬ್ರಾಹ್ಮಣರ ಹಾಗೂ ಬಿಜೆಪಿಯ ಭದ್ರಕೋಟೆ. ಕಾರ್ಯಕರ್ತರು, ಮತದಾರರ ಶ್ರಮದಿಂದ ಬಿಜೆಪಿ ಅಭ್ಯರ್ಥಿ ಶ್ರೀವತ್ಸ ಗೆಲುವು ಸಾಧಿಸಿದ್ದಾರೆ. ಇತ್ತ ಟಿಕೆಟ್ ಕೈತಪ್ಪಿದ್ದರೂ ಪಕ್ಷದ ವಿರುದ್ಧ ರಾಮದಾಸ್ ಬಂಡಾಯ ಏಳದೇ ಉಳಿದಿದ್ದೂ ಸಹ ಬಿಜೆಪಿಗೆ ದೊಡ್ಡ ಪ್ಲಸ್ ಪಾಯಿಂಟ್ ಆಯಿತು.
ನರಸಿಂಹರಾಜ: ನರಸಿಂಹರಾಜ ಕ್ಷೇತ್ರ ಆ ಕಾಲದಿಂದಲೂ ಕಾಂಗ್ರೆಸ್ ಭದ್ರಕೋಟೆ. ಅಲ್ಲಿ ಕಾಂಗ್ರೆಸ್ ಎಂದಿನಂತೆ ಬೇರೆ ಯಾವ ಯೋಚನೆಯನ್ನೂ ಮಾಡದೆ ತನ್ವೀರ್ ಸೇಠ್ ಅವರನ್ನು ಕಣಕ್ಕಿಳಿಸಿತು. ಬಿಜೆಪಿ ಹೊಸದೇನನ್ನೂ ಯೋಚಿಸಿದೆ ಸಂದೇಶ್ ಸ್ವಾಮಿಯ ಅವರನ್ನು ಕಣಕ್ಕಿಳಿಸಿ ಸುಮ್ಮನಾಯಿತು. ನಿರೀಕ್ಷೆಯಂತೆ ಇಲ್ಲೂ ಕಾಂಗ್ರೆಸ್ ಜಯ ಸಾಧಿಸಿದೆ.
ಅತ್ತ ಸೂಕ್ತ ಪೂರ್ವತಯಾರಿ ಇಲ್ಲದೆ ಕೇವಲ ಪ್ರಧಾನಮಂತ್ರಿಗಳು, ಚಿತ್ರತಾರೆಯರ ರೋಡ್ ಶೋ ಮೇಲೆ ಅವಲಂಬಿಸಿ ಚುನಾವಣೆ ಎದುರಿಸಿದ ಬಿಜೆಪಿ ಮೈಸೂರಿನಲ್ಲಿ ನೆಲಕಚ್ಚಿದೆ. ಇತ್ತ ಚಾಕಚಕ್ಯತೆಯಿಂದ ಕ್ಷೇತ್ರದ ಜನರ ನಾಡಿಮಿಡಿತವನ್ನು ಅರಿತು ಕೆಲಸ ಮಾಡಿ ನಿರ್ಧಾರಗಳನ್ನು ಕೈಗೊಂಡ ಕಾಂಗ್ರೆಸ್ ಗೆಲುವಿನ ನಗೆ ಬೀರಿದೆ. ಹೊಸ ಪ್ರಯೋಗಗಳಿಂದ ಗೆಲುವು ನಿರೀಕ್ಷಿಸಿದ್ದ ಬಿಜೆಪಿ ಪಾಠ ಕಲಿತಿದೆ.
ವರದಿ: ಧಾತ್ರಿ ಭಾರಾಧ್ವಜ್