Uttara Kannada Assembly: ಹಾಲಿ ಶಾಸಕರ ಜತೆ ಸೆಣಸಾಟ, ಉತ್ತರ ಕನ್ನಡ ಜಿಲ್ಲೆಯ ಆರು ಕ್ಷೇತ್ರಗಳ ಸಮಗ್ರ ನೋಟ
May 02, 2023 07:00 AM IST
Uttara Kannada Assembly: ಹಾಲಿ ಶಾಸಕರ ಜತೆ ಸೆಣಸಾಟ, ಉತ್ತರ ಕನ್ನಡ ಜಿಲ್ಲೆಯ ಆರು ಕ್ಷೇತ್ರಗಳ ಸಮಗ್ರ ನೋಟ
- ಕರ್ನಾಟಕದ ವಿಧಾನಸಭಾ ಕ್ಷೇತ್ರಗಳ (Karnataka Election) ಮಾಹಿತಿ ಮಾಲಿಕೆಯ ಮುಂದುವರೆದ ಭಾಗವಾಗಿ ಇಲ್ಲಿ ಉತ್ತರ ಕನ್ನಡ ಜಿಲ್ಲೆಯ ಆರು ವಿಧಾನಸಭಾ ಕ್ಷೇತ್ರಗಳ ಪರಿಚಯವನ್ನು ಇಲ್ಲಿ ನೀಡಲಾಗಿದೆ. ಕುಮಟಾ (Kumta), ಭಟ್ಕಳ (Bhatkal), ಶಿರಸಿ (Sirsi), ಯಲ್ಲಾಪುರ (yellapur), ಹಳಿಯಾಳ (haliyal) ಮತ್ತು ಕಾರಾವರ (Karwar) ಕ್ಷೇತ್ರಗಳ ಸಮಗ್ರ ಪರಿಚಯ ಇಲ್ಲಿದೆ.
ಕಾರವಾರ: ಸ್ಪೀಕರ್ ಕಾಗೇರಿ, ಹಿರಿಯ ಕಾಂಗ್ರೆಸಿಗ ಆರ್.ವಿ.ದೇಶಪಾಂಡೆಯಂಥ ಘಟಾನುಗಟಿಗಳನ್ನು ವಿಧಾನಸಭೆಗೆ ಕಳುಹಿಸಿದ ಉತ್ತರ ಕನ್ನಡದಲ್ಲಿ ಈ ಬಾರಿಯೂ ಎಲ್ಲ ಹಾಲಿ ಶಾಸಕರು ಕಣದಲ್ಲಿದ್ದಾರೆ. ಅವರನ್ನು ಸೋಲಿಸಲು ವಿರೋಧಿ ಪಡೆ ಸಜ್ಜಾಗಿ ನಿಂತಿದೆ.
ಕ್ಷೇತ್ರಗಳ ವಿಶ್ಲೇಷಣೆ: ಹರೀಶ ಮಾಂಬಾಡಿ ಮಂಗಳೂರು
ಉತ್ತರ ಕನ್ನಡ ಜಿಲ್ಲೆಯಲ್ಲಿ ಕಳೆದ ಬಾರಿ ಬಿಜೆಪಿ ಪ್ರಾಬಲ್ಯ ಮೆರೆದಿತ್ತು. ಕುಮಟಾ – ದಿನಕರ ಶೆಟ್ಟಿ (ಬಿಜೆಪಿ), ಭಟ್ಕಳ – ಸುನಿಲ್ ನಾಯ್ಕ್ (ಬಿಜೆಪಿ), ಶಿರಸಿ – ಕಾಗೇರಿ (ಬಿಜೆಪಿ), ಯಲ್ಲಾಪುರ: ಶಿವರಾಮ ಹೆಬ್ಬಾರ (ಬಿಜೆಪಿ), ಕಾರವಾರ – ರೂಪಾಲಿ ನಾಯ್ಕ (ಬಿಜೆಪಿ), ಹಳಿಯಾಳ – ಆರ್.ವಿ.ದೇಶಪಾಂಡೆ (ಕಾಂಗ್ರೆಸ್) ಹೀಗೆ 5 ಬಿಜೆಪಿ, 1 ಕಾಂಗ್ರೆಸ್ ಕಳೆದ ಬಾರಿ ಗೆದ್ದಿತ್ತು. ಇವರಲ್ಲಿ ಶಿವರಾಮ ಹೆಬ್ಬಾರ ಮೊದಲು ಕಾಂಗ್ರೆಸ್ ನಿಂದ ಗೆದ್ದು ಮತ್ತೆ ಬಿಜೆಪಿ ಸೇರಿ ಮರುಚುನಾವಣೆಯಲ್ಲಿ ಬಿಜೆಪಿಯಿಂದ ಗೆದ್ದಿದ್ದರು.
ಉತ್ತರ ಕನ್ನಡದ ಎಲ್ಲ ಆರು ಕ್ಷೇತ್ರಗಳ ಪರಿಚಯ ಇಲ್ಲಿದೆ.
ಕ್ಷೇತ್ರ: ಕುಮಟಾ
ಪ್ರಮುಖ ಅಭ್ಯರ್ಥಿಗಳು: ದಿನಕರ ಶೆಟ್ಟಿ (ಬಿಜೆಪಿ), ನಿವೇದಿತ್ ಆಳ್ವ (ಕಾಂಗ್ರೆಸ್), ಸೂರಜ್ ನಾಯ್ಕ್ (ಜೆಡಿಎಸ್)
ಈ ಬಾರಿ ಮಾಜಿ ಶಾಸಕಿ ಶಾರದಾ ಶೆಟ್ಟಿಯವರಿಗೆ ಕಾಂಗ್ರೆಸ್ ಟಿಕೇಟ್ ಕೈತಪ್ಪಿದ್ದು, ಮಾರ್ಗರೇಟ್ ಆಳ್ವಾ ಅವರ ಪುತ್ರ ನಿವೇದಿತ್ ಆಳ್ವಾ ಅವರಿಗೆ ಪಕ್ಷ ಟಿಕೆಟ್ ನೀಡಿದೆ. ಆಳ್ವಾರಿಗೆ ಟಿಕೆಟ್ ನೀಡುವ ವಿಚಾರದಲ್ಲಿ ಕುಮಟಾ ಕಾಂಗ್ರೆಸ್‌ನಲ್ಲಿ ಸಾಕಷ್ಟು ವಿರೋಧ ಕೇಳಿಬಂದಿದ್ದು, ಸ್ಥಳೀಯರಿಗೆ ಟಿಕೆಟ್ ನೀಡಲು ಆಗ್ರಹವಾಗಿತ್ತು. ಕೊನೆಗೂ ಟಿಕೆಟ್ ವಂಚಿತ ಶಾರದಾ ಶೆಟ್ಟಿಯವರು ಪಕ್ಷೇತರರಾಗಿ ಕಣಕ್ಕೆ ಇಳಿದರು. ಆದರೆ ಅವರ ಮುನಿಸನ್ನು ಹೈಕಮಾಂಡ್ ಶಮನ ಮಾಡಿತು. ನಾಮಪತ್ರ ವಾಪಸ್ ಪಡೆದರು.
ಕ್ಷೇತ್ರ : ಭಟ್ಕಳ
ಪ್ರಮುಖ ಅಭ್ಯರ್ಥಿಗಳು: ಸುನೀಲ್ ನಾಯ್ಕ್ (ಬಿಜೆಪಿ), ಮಂಕಾಳು ವೈದ್ಯ (ಕಾಂಗ್ರೆಸ್), ನಾಗೇಂದ್ರ ನಾಯ್ಕ (ಜೆಡಿಎಸ್)
ಮುಸ್ಲಿಮ್ ಸಮುದಾಯದ ಪ್ರಾಬಲ್ಯವಿರುವ ಕ್ಷೇತ್ರವಾದರೂ ಈ ಬಾರಿ ಕ್ಷೇತ್ರದಲ್ಲಿ ಮುಸ್ಲಿಮ್ ಅಭ್ಯರ್ಥಿ ಚುನಾವಣಾ ಕಣದಲ್ಲಿ ಇಲ್ಲ. ಕಳೆದ ಬಾರಿ ಪರೇಶ್ ಮೇಸ್ತಾ ಸಾವು ಪ್ರಕರಣ ಬಿಜೆಪಿ ಪಾಲಿಗೆ ಪ್ಲಸ್ ಆಗಿ, ಬಿಜೆಪಿ ಶಾಸಕ ಆಯ್ಕೆಯಾಗಿ ಬರಲು ದೊಡ್ಡ ಮಟ್ಟದಲ್ಲಿ ಕಾರಣವಾಗಿತ್ತು. ಸುನೀಲ್ ನಾಯ್ಕ್ ಪ್ರಬಲ ನಾಮಧಾರಿ ಸಮುದಾಯಕ್ಕೆ ಸೇರಿದ್ರೆ, ಮಾಂಕಾಳು ವೈದ್ಯ ಪ್ರಬಲ ಮೊಗವೀರ ಸಮುದಾಯಕ್ಕೆ ಸೇರಿದವರಾಗಿದ್ದಾರೆ.
ಕ್ಷೇತ್ರ: ಶಿರಸಿ
ಪ್ರಮುಖ ಅಭ್ಯರ್ಥಿಗಳು: ವಿಶ್ವೇರ ಹೆಗಡೆ ಕಾಗೇರಿ (ಬಿಜೆಪಿ), ಭೀಮಣ್ಣ ನಾಯ್ಕ (ಕಾಂಗ್ರೆಸ್), ಉಪೇಂದ್ರ ಪೈ (ಜೆಡಿಎಸ್)
ಮಾಜಿ ಮುಖ್ಯಮಂತ್ರಿ ರಾಮಕೃಷ್ಣ ಹೆಗಡೆಯವರು 1957 ರಿಂದ 1967 ರ ವರೆಗೆ ಪ್ರತಿನಿಧಿಸಿದ ಕ್ಷೇತ್ರ ಶಿರಸಿ. ಪ್ರಸ್ತುತ ಬಿಜೆಪಿಯ ಅಭ್ಯರ್ಥಿ ಕಾಗೇರಿಯವರು ಶಿರಸಿ ವಿಧಾನಸಭಾ ಕ್ಷೇತ್ರದಿಂದ 3 ಬಾರಿ, ಅಂಕೋಲಾ ವಿಧಾನಸಭಾ ಕ್ಷೇತ್ರದಿಂದ 3 ಬಾರಿ ಶಾಸಕರಾಗಿ ಆಯ್ಕೆಯಾಗಿದ್ದಾರೆ. ಕಾಂಗ್ರೆಸ್ ಅಭ್ಯರ್ಥಿ ಭೀಮಣ್ಣ ನಾಯ್ಕ್ ಅವರು ವಿಧಾನಸಭೆ ಹಾಗೂ ವಿಧಾನಪರಿಷತ್ ಸೇರಿ ಒಟ್ಟು 5 ಚುನಾವಣೆಯಲ್ಲಿ ಸೋತಿದ್ದಾರೆ.
ಕ್ಷೇತ್ರ : ಯಲ್ಲಾಪುರ
ಪ್ರಮುಖ ಅಭ್ಯರ್ಥಿಗಳು: ಶಿವರಾಮ್ ಹೆಬ್ಬಾರ (ಬಿಜೆಪಿ), ವಿ.ಎಸ್. ಪಾಟೀಲ (ಕಾಂಗ್ರೆಸ್), ನಾಗೇಶ ನಾಯ್ಕ (ಜೆಡಿಎಸ್)
ಅಂದು ವಿ.ಎಸ್. ಪಾಟೀಲ್ ವಿರುದ್ಧ ಸೋತಿದ್ದ ಶಿವರಾಮ್ ಹೆಬ್ಬಾರ್ ಇಂದು ಬಿಜೆಪಿ ಹುರಿಯಾಳಾಗಿದ್ದಾರೆ. 2008ವರೆಗೂ ಮುಂಡಗೋಡ ತಾಲೂಕು ಹಳಿಯಾಳ ವಿಧಾನಸಭಾ ಕ್ಷೇತ್ರದಲ್ಲಿತ್ತು. ಈ ಕ್ಷೇತ್ರದಿಂದ ಸತತವಾಗಿ ಆಯ್ಕೆಯಾಗುತ್ತಿದ್ದ ಕಾಂಗ್ರೆಸ್ ನ ಹಿರಿಯ ಮುಖಂಡ ಆರ್.ವಿ ದೇಶಪಾಂಡೆಯವರ ಪ್ರಾಬಲ್ಯ ಇಂದಿಗೂ ಮುಂಡಗೋಡ ತಾಲೂಕಿನಲ್ಲಿ ಕಾಣಬಹುದು 2018ರಲ್ಲಿ ಕಾಂಗ್ರೆಸ್‌ನಲ್ಲಿದ್ದು, ವಿ.ಎಸ್.ಪಾಟೀಲ್ ವಿರುದ್ಧ ಗೆದ್ದಿದ್ದ ಶಿವರಾಮ ಹೆಬ್ಬಾರ್, ಆಪರೇಷನ್ ಕಮಲದ ಮೂಲಕ ಬಿಜೆಪಿಗೆ ಬಂದಿದ್ದರು. 2019ರಲ್ಲಿ ಬೈ ಎಲೆಕ್ಷನ್‌ನಲ್ಲಿ ಬಿಜೆಪಿ ಅಭ್ಯರ್ಥಿಯಾಗಿ ಶಿವರಾಮ ಹೆಬ್ಬಾರ್ ಗೆದ್ದಿದ್ದು, ಬಳಿಕ ಕಾರ್ಮಿಕ ಸಚಿವರಾಗಿ ಮುಂದುವರಿದಿದ್ದರು ವಿ.ಎಸ್. ಪಾಟೀಲ್, ಮೂಲ ಬಿಜೆಪಿಗರು ಹಾಗೂ ಶಿವರಾಮ ಹೆಬ್ಬಾರ್ ನಡುವಿನ ಅಸಮಾಧಾನ ವಿ.ಎಸ್.ಪಾಟೀಲ್ ಪಕ್ಷಬಿಟ್ಟು ಕಾಂಗ್ರೆಸ್ ಸೇರುವಂತೆ ಮಾಡಿತ್ತು. ಇಂದು ಬಿಜೆಪಿಯ ಅಭ್ಯರ್ಥಿ ಶಿವರಾಮ ಹೆಬ್ಬಾರ್ ವಿರುದ್ಧ ಕಾಂಗ್ರೆಸ್ ಅಭ್ಯರ್ಥಿಯಾಗಿ ವಿ.ಎಸ್.ಪಾಟೀಲ್ ನಿಂತಿದ್ದಾರೆ
ಕ್ಷೇತ್ರ : ಹಳಿಯಾಳ
ಪ್ರಮುಖ ಅಭ್ಯರ್ಥಿಗಳು: ಆರ್.ವಿ.ದೇಶಪಾಂಡೆ (ಕಾಂಗ್ರೆಸ್), ಸುನಿಲ್ ಹೆಗಡೆ (ಬಿಜೆಪಿ), ಎಸ್.ಎಲ್.ಘೋಟ್ನೇಕರ (ಜೆಡಿಎಸ್)
ಈ ಕ್ಷೇತ್ರದಿಂದ ಕಾಂಗ್ರೆಸ್ ನ ಹಿರಿಯ ಮುಖಂಡ ಆರ್.ವಿ. ದೇಶಪಾಂಡೆಯವರು 1983 ರಿಂದ ಸತತ ಎಂಟು ಬಾರಿ ಗೆಲುವು ಸಾಧಿಸಿದ್ದಾರೆ. 2008ರ ಸಾರ್ವತ್ರಿಕ ಚುನಾವಣೆಯಲ್ಲಿ ಜೆ.ಡಿ.ಎಸ್ ನಿಂದ ಸ್ಪರ್ಧಿಸಿದ್ದ ಸುನೀಲ್ ಹೆಗಡೆ ವಿರುದ್ಧ ಒಂದು ಬಾರಿ ಸೋಲನ್ನು ಅನುಭವಿಸಿದ್ದರು. ಇಂದು ಸುನೀಲ್ ಹೆಗಡೆ ಬಿಜೆಪಿಯ ಹುರಿಯಾಳಾಗಿದ್ದು, ದೇಶ್‌ಪಾಂಡೆಯ ವಿರುದ್ಧ ಕಣಕ್ಕಿಳಿದಿದ್ದಾರೆ. ಸುಮಾರು ಮೂರು ದಶಕದಿಂದ ದೇಶಪಾಂಡೆಯವರ ಬಲಗೈ ಬಂಟನಂತಿದ್ದ ಮಾಜಿ ವಿಧಾನ ಪರಿಷತ್ ಸದಸ್ಯ ಎಸ್.ಎಲ್ ಘೋಟ್ನೇಕರ್ ಜೆಡಿಎಸ್ ನಿಂದ ಅದೃಷ್ಟ ಪರೀಕ್ಷೆಗೆ ಇಳಿದಿದ್ದಾರೆ. ಈ ಬಾರಿಯ ಟಿಕೆಟ್ ತನಗೆ ನೀಡುವಂತೆ ಘೋಟ್ನೇಕರ್ ಕೇಳಿದ ವಿಚಾರವೇ ದೇಶ್‌ಪಾಂಡೆ ಹಾಗೂ ಘೋಟ್ನೇಕರ್ ಬಿರುಕು ಮೂಡಲು ಕಾರಣವಾಗಿತ್ತು
ಕ್ಷೇತ್ರ : ಕಾರವಾರ
ಪ್ರಮುಖ ಅಭ್ಯರ್ಥಿಗಳು: ರೂಪಾಲಿ ನಾಯ್ಕ್ (ಬಿಜೆಪಿ), ಸತೀಶ್ ಸೈಲ್ (ಕಾಂಗ್ರೆಸ್), ಚೈತ್ರಾ ಕೊಠಾರ್ ಕರ್ (ಜೆಡಿಎಸ್)
ಕರ್ನಾಟಕ ಹಾಗೂ ಗೋವಾದಲ್ಲಿ ಬಾರ್ಡರ್‌ನಲ್ಲಿ ಕಾರವಾರ ವಿಶಿಷ್ಟ ಪ್ರದೇಶವಾಗಿದ್ದು, ಇಲ್ಲಿ ಮಹಾರಾಷ್ಟ್ರ, ಗೋವಾ ಪ್ರೇರಿತ ಸಂಸ್ಕೃತಿ ಕಾಣಬಹುದು ಕ್ಷೇತ್ರದಲ್ಲಿ ಒಂದು ಬಾರಿ ಸೋಲು ಕಂಡವರು ಮತ್ತೆ ಗೆದ್ದುಬಂದ ಇತಿಹಾಸವೇ ಇಲ್ಲದ್ದರಿಂದ ಅಭ್ಯರ್ಥಿಗಳು ಗೆಲ್ಲಲು ಶತಪ್ರಯತ್ನ ನಡೆಸ್ತಿದ್ದಾರೆ ಬಂಗಾರಪ್ಪ ಪಕ್ಷದಲ್ಲಿದ್ದ ದಿವಂಗತ ವಸಂತ್ ಆಸ್ನೋಟಿಕರ್ ಬಳಿಕ ಕಾಂಗ್ರೆಸ್ ಸೇರಿದ್ದರು. ಅವರ ಕಂಟ್ರೋಲ್‌ನಲ್ಲಿದ್ದ ಕ್ಷೇತ್ರ, ನಂತರ ಅವರ ಪುತ್ರ ಆನಂದ್ ಆಸ್ನೋಟಿಕರ್ ಕಾಂಗ್ರೆಸ್‌ನಿಂದ ಗೆಲ್ಲಲು ಕಾರಣವಾಗಿತ್ತು. ಆಪರೇಷನ್ ಕಮಲದ ಸಂದರ್ಭ ಬಿಜೆಪಿಗೆ ಬಂದಿದ್ದ ಆನಂದ್ ಮತ್ತೆ ಬಿಜೆಪಿಯಿಂದ ಗೆದ್ದು ಸಚಿವರಾಗಿದ್ದರು. ನಂತರ ನಡೆದ ಚುನಾವಣೆಯಲ್ಲಿ ಪಕ್ಷೇತರವಾಗಿ ಸ್ಪರ್ಧಿಸಿದ್ದ ಸತೀಶ್ ಸೈಲ್ ವಿರುದ್ಧ ಸೋತ ಆನಂದ್ ಬಿಜೆಪಿ ಬಿಟ್ಟು ಜೆಡಿಎಸ್ ಸೇರಿದ್ದರು. ಸತೀಶ್ ಸೈಲ್ ಕಾಂಗ್ರೆಸ್ ಸೇರಿದ್ದರು. 2018ರಲ್ಲಿ ಬಿಜೆಪಿಯಿಂದ ಕಣಕ್ಕಿಳಿದ ರೂಪಾಲಿ ನಾಯ್ಕ್, ಕಾಂಗ್ರೆಸ್‌ನ ಸತೀಶ್ ಸೈಲ್ ಹಾಗೂ ಜೆಡಿಎಸ್‌ನ ಆನಂದ್ ಆಸ್ನೋಟಿಕರ್ ಅವರನ್ನು ಸೋಲಿಸಿ ಶಾಸಕರಾದರು. ಈ ಬಾರಿ ಚುನಾವಣೆ ಬದ್ಧ ವೈರಿಗಳಾದ ರೂಪಾಲಿ ನಾಯ್ಕ್ ಹಾಗೂ ಸತೀಶ್ ಸೈಲ್ ನಡುವೆ ನಡೆಯುತ್ತಿದ್ದು, ಬಿಜೆಪಿ ಹಾಗೂ ಕಾಂಗ್ರೆಸ್ ಕದ ತಟ್ಟಿದ್ದ ಆನಂದ್ ಆಸ್ನೋಟಿಕರ್ ಕಣದಿಂದಲೇ ದೂರ ಸರಿದಿದ್ದಾರೆ.