Karnataka Elections: ಕರ್ನಾಟಕದಲ್ಲಿ ಇಂದು ಮತದಾನ; ವಿಧಾನಸಭಾ ಚುನಾವಣೆಯಲ್ಲಿ ಗಮನಿಸೆಳೆಯುತ್ತಿರುವ 10 ಕ್ಷೇತ್ರಗಳಿವು
May 10, 2023 06:30 AM IST
ಮತದಾನಕ್ಕಾಗಿ ಇವಿಎಂಗಳನ್ನು ಜೋಡಿಸಿದ ಅಧಿಕಾರಿಗಳು (ಸಾಂದರ್ಭಿಕ ಚಿತ್ರ)
Karnataka Elections: ರಾಜ್ಯ ವಿಧಾನಸಭೆಯ ಮತದಾನ ದಿನ ಇಂದು. 52 ಲಕ್ಷಕ್ಕೂ ಹೆಚ್ಚು ಮತದಾರರು 2,613 ಮತದಾರರ ಪೈಕಿ 224 ಸ್ಥಾನಗಳನ್ನು ಪ್ರತಿನಿಧಿಸುವವರು ಯಾರು ಎಂಬುದನ್ನು ನಿರ್ಧರಿಸಲಿದ್ದಾರೆ. ಈ ಸನ್ನಿವೇಶದಲ್ಲಿ ಗಮನಿಸೆಳೆದಿರುವ 10 ಕ್ಷೇತ್ರಗಳ ಕಿರು ಅವಲೋಕನ ಇಲ್ಲಿದೆ.
ಕರ್ನಾಟಕ ವಿಧಾನಸಭಾ ಚುನಾವಣೆ (Karnataka Assembly Election)ಯ ಮತದಾನ ಬುಧವಾರ (ಮೇ 10) ನಿಗದಿಯಾಗಿದೆ. ಆಡಳಿತಾರೂಢ ಬಿಜೆಪಿ ಮತ್ತೆ ಅಧಿಕಾರ ಚುಕ್ಕಾಣಿ ಹಿಡಿದು ಮುಂದುವರಿಯುವ ಭರವಸೆಯಲ್ಲಿದೆ. ವಿಪಕ್ಷ ಕಾಂಗ್ರೆಸ್ ಕೂಡ ಅಧಿಕಾರ ಚುಕ್ಕಾಣಿ ವಶಕ್ಕೆ ಪಡೆದು ಮುಂದಿನ ಐದು ವರ್ಷ ಆಡಳಿತ ನಡೆಸುವ ಭರವಸೆಯಲ್ಲಿದೆ. ರಾಜ್ಯದಲ್ಲಿ 52 ಲಕ್ಷಕ್ಕೂ ಹೆಚ್ಚು ಅರ್ಹ ಮತದಾರರು ವಿಧಾನಸಭೆಯ 224 ಕ್ಷೇತ್ರಗಳಿಗೆ ಸ್ಪರ್ಧಿಸುತ್ತಿರುವ 2,613 ಅಭ್ಯರ್ಥಿಗಳ ಪೈಕಿ 224 ಅಭ್ಯರ್ಥಿಗಳನ್ನು ಆಯ್ಕೆ ಮಾಡಲು ಸಜ್ಜಾಗಿದ್ದಾರೆ. ಈ ಸನ್ನಿವೇಶದಲ್ಲಿ ಗಮನಸೆಳೆದಿರುವ 10 ವಿಧಾನ ಸಭಾ ಕ್ಷೇತ್ರಗಳು ಇಲ್ಲಿವೆ.
ಶಿಗ್ಗಾಂವ್: ಹಾವೇರಿ ಜಿಲ್ಲೆಯಲ್ಲಿರುವ ವಿಧಾನಸಭಾ ಕ್ಷೇತ್ರ. ಬಿಜೆಪಿಯ ಭದ್ರಕೋಟೆ. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ಸ್ವಕ್ಷೇತ್ರ. ಇಲ್ಲಿ ಅವರು ಸತತ ನಾಲ್ಕನೇ ಸಲ ಆಯ್ಕೆ ಬಯಸಿ ಚುನಾವಣಾ ಕಣದಲ್ಲಿದ್ದಾರೆ. ಇವರಿಗೆ ಎದುರಾಳಿಯಾಗಿ ಕಾಂಗ್ರೆಸ್ ಪಕ್ಷ ಆರಂಭದಲ್ಲಿ ಯಾಸಿರ್ ಅಹ್ಮದ್ ಖಾನ್ ಪಠಾಣ್ ಅವರನ್ನು ಕಣಕ್ಕೆ ಇಳಿಸಿತ್ತು. ತರುವಾಯ, ಅವರ ಬದಲು ಮೊಹಮ್ಮದ್ ಯೂಸುಫ್ ಸವನೂರತ್ ಅವರನ್ನು ಕೊನೇಘಳಿಗೆಯಲ್ಲಿ ಕಣಕ್ಕೆ ಇಳಿಸಿದೆ. ಹಿಂದೊಂದು ಕಾಲದಲ್ಲಿ ಇದು ಕಾಂಗ್ರೆಸ್ ಪಕ್ಷದ ಭದ್ರಕೋಟೆ ಆಗಿತ್ತು. 1999ರಿಂದೀಚೆಗೆ ಇದು ಕಾಂಗ್ರೆಸ್ ಪಕ್ಷದ ಕೈ ತಪ್ಪಿ ಹೋಗಿದೆ. ಇಲ್ಲಿ 1999ರಲ್ಲಿ ಜೆಡಿಎಸ್ ಮತ್ತು 2004ರಲ್ಲಿ ಸ್ವತಂತ್ರ ಅಭ್ಯರ್ಥಿಗಳು ವಿಜೇತರಾಗಿದ್ದರು.
ಹುಬ್ಬಳ್ಳಿ - ಧಾರವಾಡ ಸೆಂಟ್ರಲ್: ಮಾಜಿ ಮುಖ್ಯಮಂತ್ರಿ, ಲಿಂಗಾಯತ ನಾಯಕ ಜಗದೀಶ ಶೆಟ್ಟರ್ ಟಿಕೆಟ್ ಸಿಗಲಿಲ್ಲ, ಪಕ್ಷದ ವರಿಷ್ಠರು ತಮ್ಮನ್ನು ಸರಿಯಾಗಿ ನಡೆಸಿಕೊಳ್ಳಲಿಲ್ಲ ಎಂದು ಬಿಜೆಪಿ ತೊರೆದು ಕಾಂಗ್ರೆಸ್ ಸೇರಿದರು. ಈಗ ಕಾಂಗ್ರೆಸ್ ಪಕ್ಷದಿಂದ ಸ್ಪರ್ಧಿಸುತ್ತಿರುವ ಕಾರಣ ಈ ಕ್ಷೇತ್ರ ಗಮನಸೆಳೆದಿದೆ. ಇಲ್ಲಿ ಇವರ ವಿರುದ್ಧ ಮಹೇಶ್ ಟೆಂಗಿನ ಕಾಯಿ ಅವರನ್ನು ಬಿಜೆಪಿ ಕಣಕ್ಕೆ ಇಳಿಸಿದೆ. 1994ರಿಂದೀಚೆಗೆ ಈ ಕ್ಷೇತ್ರ ಬಿಜೆಪಿ ವಶದಲ್ಲಿದೆ.
ವರುಣಾ: ಚಾಮರಾಜನಗರ ಜಿಲ್ಲೆಯ ಕ್ಷೇತ್ರ ಇದು. ಕಾಂಗ್ರೆಸ್ ನಾಯಕ, ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಸ್ವಕ್ಷೇತ್ರ. 2008ರ ಚುನಾವಣೆಯಲ್ಲಿ ಮೊದಲ ಬಾರಿಗೆ ಈ ಕ್ಷೇತ್ರದಲ್ಲಿ ಗೆಲುವು ಕಂಡ ಸಿದ್ದರಾಮಯ್ಯ, 2013ರ ಚುನಾವಣೆಯಲ್ಲೂ ಗೆದ್ದರು. ಅದಾಗಿ 2018ರ ಚುನಾವಣೆಯಲ್ಲಿ ಪುತ್ರ ಡಾ.ಯತೀಂದ್ರ ಅವರನ್ನು ಇಲ್ಲಿ ಕಣಕ್ಕೆ ಇಳಿಸಿದ್ದರು. ಈ ಸಲ ಸೇಫ್ ಆಗಿ ಗೆಲ್ಲುವುದಕ್ಕಾಗಿ ವರುಣಾದಿಂದ ಸ್ಪರ್ಧಿಸಿದ್ದಾರೆ. ಮಗ ಯತೀಂದ್ರ ಈ ಚುನಾವಣೆಗೆ ಇಳಿದಿಲ್ಲ. ಕಳೆದ ಚುನಾವಣೆಯಲ್ಲಿ ಯತೀಂದ್ರ 58,620 ಮತಗಳ ಅಂತರದ ಗೆಲುವು ದಾಖಲಿಸಿದ್ದರು.
ಈ ಸಲ ಈ ಕ್ಷೇತ್ರದಲ್ಲಿ ಸಿದ್ದರಾಮಯ್ಯಗೆ ಸ್ಪರ್ಧೆ ಒಡ್ಡುವ ಸಲುವಾಗಿ ಬಿಜೆಪಿ ಇಲ್ಲಿಂದ ಮಾಜಿ ಸಚಿವ ವಿ.ಸೋಮಣ್ಣ ಅವರನ್ನು ಕಣಕ್ಕೆ ಇಳಿಸಿದೆ. ಪ್ರಭಾವಿ ಲಿಂಗಾಯತ ನಾಯಕ ಇವರು. ಕ್ಷೇತ್ರದಲ್ಲಿ ಲಿಂಗಾಯತ ಮತದಾರರು 60,000 ಇದ್ದು, ಎಸ್‌ಸಿ ಎಸ್‌ಟಿ ಸಮುದಾಯದ 51000 ಮತಗಳಿವೆ. ಕುರುಬರ ಮತಗಳ ಸಂಖ್ಯೆ 20000 ದಷ್ಟಿದೆ. ಹೀಗಾಗಿ ಸಿದ್ದರಾಮಯ್ಯಗೆ ಈ ಸಲ ಪ್ರಬಲ ಪೈಪೋಟಿ ಎದುರಾಗಿದೆ.
ಕನಕಪುರ: ಬೆಂಗಳೂರಿನ ಹೊರವಲಯದಲ್ಲಿರುವ ಕನಕಪುರ ಕಾಂಗ್ರೆಸ್‌ನ ಭದ್ರಕೋಟೆ. ರಾಜ್ಯ ಕಾಂಗ್ರೆಸ್ ಅಧ್ಯಕ್ಷ ಡಿಕೆ ಶಿವಕುಮಾರ್, ಒಕ್ಕಲಿಗ ಸಮುದಾಯದ ನಾಯಕ ಸತತ ಮೂರು ಬಾರಿ ಇಲ್ಲಿ ಗೆದ್ದಿದ್ದಾರೆ. 2018ರಲ್ಲಿ ಜೆಡಿಎಸ್‌ನ ನಾರಾಯಣಗೌಡ ಅವರನ್ನು 79,908 ಮತಗಳ ಅಂತರದಿಂದ ಸೋಲಿಸಿದ್ದರು. ಈ ಸಲ ಇಲ್ಲಿ ಡಿಕೆ ಶಿವಕುಮಾರ್ ವಿರುದ್ಧ ಕಂದಾಯ ಸಚಿವ ಆರ್ ಅಶೋಕ ಅವರನ್ನು ಬಿಜೆಪಿ ಕಣಕ್ಕೆ ಇಳಿಸಿದೆ. ಆರು ಸಲ ಶಾಸಕರಾಗಿರುವ ಆರ್. ಅಶೋಕ ಕೂಡ ಒಕ್ಕಲಿಗ ನಾಯಕ. ಈ ಕ್ಷೇತ್ರದಲ್ಲಿ 80,000ಕ್ಕೂ ಹೆಚ್ಚು ಒಕ್ಕಲಿಗ ಸಮುದಾಯದವರ ಮತಗಳಿವೆ.
ಶಿಕಾರಿಪುರ: ಶಿವಮೊಗ್ಗ ಜಿಲ್ಲೆಯಲ್ಲಿರುವ ಕ್ಷೇತ್ರ ಇದು. ಶಿಕಾರಿಪುರ ಬಿಜೆಪಿಯ ಭದ್ರಕೋಟೆ. ಮಾಜಿ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಅವರು ಇಲ್ಲಿಂದ 1983ರಿಂದೀಚೆಗೆ 8 ಸಲ ಗೆಲುವು ಕಂಡಿದ್ದಾರೆ. ಈ ಸಲ ಇಲ್ಲಿಂದ ಅವರ ಪುತ್ರ ಬಿವೈ ವಿಜಯೇಂದ್ರ ಸ್ಪರ್ಧಿಸುತ್ತಿದ್ದಾರೆ. ಇಲ್ಲಿ ಕಾಂಗ್ರೆಸ್ ಪಕ್ಷ ಗೋಣಿ ಮಾಲತೇಶ್ ಅವರನ್ನು ಕಣಕ್ಕೆ ಇಳಿಸಿದೆ. ಯಡಿಯೂರಪ್ಪ ಇಲ್ಲಿ ಸಮಾಜವಾದಿ ಪಕ್ಷದಿಂದ ಸ್ಪರ್ಧಿಸಿದ್ದ ಎಸ್. ಬಂಗಾರಪ್ಪ ವಿರುದ್ಧ 45,927 ಮತಗಳ ಅಂತರದ ಗೆಲುವು ದಾಖಲಿಸಿದ್ದು ಇತಿಹಾಸ. ಇಲ್ಲಿ ಲಿಂಗಾಯತ ಮತದಾರರು 57,000, ಲಂಬಾಣಿ 26,000, ಮುಸ್ಲಿಮರು 21,000, ಕುರುಬರು 19,000, ವಾಲ್ಮೀಕಿ ಸಮುದಾಯದವರು 15,000 ಮತ್ತು ಈಡಿಗರು 12,000 ಇದ್ದಾರೆ.
ಚನ್ನಪಟ್ಟಣ: ರಾಮನಗರ ಜಿಲ್ಲೆಯ ಒಕ್ಕಲಿಗ ಪ್ರಾಬಲ್ಯದ ಕ್ಷೇತ್ರಗಳ ಪೈಕಿ ಚನ್ನಪಟ್ಟಣವೂ ಒಂದು. ಹಳೇಮೈಸೂರು ಭಾಗದಲ್ಲಿ ಜೆಡಿಎಸ್‌ನ ಭದ್ರಕೋಟೆಗಳಲ್ಲಿ ಇದು ಒಂದು. ಮಾಜಿ ಮುಖ್ಯಮಂತ್ರಿ ಎಚ್‌ಡಿ ಕುಮಾರಸ್ವಾಮಿ ಈ ಕ್ಷೇತ್ರದಲ್ಲಿ ಮರುಆಯ್ಕೆ ಬಯಸಿದ್ದಾರೆ. ಬಿಜೆಪಿ ಅಭ್ಯರ್ಥಿ ಸಿಪಿ ಯೋಗೇಶ್ವರ ಅವರು ಮತ್ತೊಮ್ಮೆ ಇಲ್ಲಿ ಸ್ಪರ್ಧಿಸುತ್ತಿದ್ದಾರೆ. 2013ರ ಚುನಾವಣೆಯಲ್ಲಿ ಸಿಪಿ ಯೋಗೇಶ್ವರ ಅವರು ಕುಮಾರಸ್ವಾಮಿ ಅವರ ಪತ್ನಿ ಅನಿತಾ ಕುಮಾರಸ್ವಾಮಿ ಅವರನ್ನು 7,000ಕ್ಕೂ ಹೆಚ್ಚು ಮತಗಳ ಅಂತರದಲ್ಲಿ ಸೋಲಿಸಿದ್ದರು. 2018ರಲ್ಲಿ ಕುಮಾರಸ್ವಾಮಿಯವರು ಯೋಗೇಶ್ವರ ಅವರನ್ನು 21,350 ಮತಗಳ ಅಂತರದಲ್ಲಿ ಸೋಲಿಸಿದರು. ಕಾಂಗ್ರೆಸ್ ಪಕ್ಷವು ಇಲ್ಲಿ ಗಂಗಾಧರ್ ಎಸ್ ಎಂಬುವವರನ್ನು ಅಭ್ಯರ್ಥಿಯನ್ನಾಗಿ ಕಣಕ್ಕೆ ಇಳಿಸಿದೆ. ಯೋಗೇಶ್ವರ ಅವರು ಕೂಡ ಕುಮಾರಸ್ವಾಮಿ ಅವರಂತೆ ಒಕ್ಕಲಿಗ ನಾಯಕರೇ ಆಗಿದ್ದಾರೆ.
ರಾಮನಗರ: ಇದು ಬೆಂಗಳೂರು ಗ್ರಾಮೀಣ ಲೋಕಸಭೆ ಕ್ಷೇತ್ರದ ಭಾಗ. ಇದು ಗೌಡ ಕುಟುಂಬದ ಭದ್ರಕೋಟೆ ಎಂದು ಪರಿಗಣಿಸಲ್ಪಟ್ಟಿದೆ. ಮಾಜಿ ಪ್ರಧಾನಿ ಎಚ್‌ಡಿ ದೇವೇಗೌಡ, ಎಚ್‌ಡಿ ಕುಮಾರಸ್ವಾಮಿ ಮತ್ತು ಅವರ ಪತ್ನಿ ಅನಿತಾ ಈ ಕ್ಷೇತ್ರವನ್ನು ಪ್ರತಿನಿಧಿಸಿದವರು. ಈ ಸಲ ಕುಮಾರಸ್ವಾಮಿ - ಅನಿತಾ ದಂಪತಿ ಪುತ್ರ ನಿಖಿಲ್ ಈ ಕ್ಷೇತ್ರದಲ್ಲಿ ಚುನಾವಣೆಗೆ ಸ್ಪರ್ಧಿಸುತ್ತಿದ್ದಾರೆ. ಹೀಗಾಗಿ ಅನಿತಾ ಕುಮಾರಸ್ವಾಮಿ ಈ ಸಲ ಇಲ್ಲಿಂದ ಸ್ಪರ್ಧಿಸಿಲ್ಲ. ಈ ಕ್ಷೇತ್ರದಲ್ಲಿ ಬಿಜೆಪಿಯು ಗೌತಮ್ ಗೌಡರನ್ನು ಕಣಕ್ಕೆ ಇಳಿಸಿದೆ. ಕಳೆದ ಲೋಕಸಭೆ ಚುನಾವಣೆಯಲ್ಲಿ ಮಂಡ್ಯದಲ್ಲಿ ಸ್ಪರ್ಧಿಸಿದ್ದ ನಿಖಿಲ್, ಪಕ್ಷೇತರ ಅಭ್ಯರ್ಥಿ ಸುಮಲತಾ ಅಂಬರೀಶ್ ವಿರುದ್ಧ ಸೋಲು ಕಂಡಿದ್ದರು.
ಹಾಸನ: ಜೆಡಿಎಸ್ ಭದ್ರ ಕೋಟೆ ಈ ಕ್ಷೇತ್ರ. ಆದಾಗ್ಯೂ, ಇಲ್ಲಿ ಬಿಜೆಪಿಯ ಪ್ರೀತಂ ಗೌಡ ಕಳೆದ ಬಾರಿ ಗೆಲುವು ಕಂಡಿದ್ದರು. ಈ ಸಲ ಮತ್ತೆ ಜನಾದೇಶ ಅಪೇಕ್ಷಿಸಿ ಸ್ಪರ್ಧಾಕಣಕ್ಕೆ ಇಳಿದಿದ್ದಾರೆ. 1999ರಿಂದೇಚೆಗೆ ಮೊದಲ ಬಾರಿಗೆ ಕಳೆದ ಚುನಾವಣೆಯಲ್ಲಿ ಇಲ್ಲಿ ಬಿಜೆಪಿ ಗೆದ್ದಿರುವುದು. 2018ರ ಚುನಾವಣೆಯಲ್ಲಿ ಬಿಜೆಪಿಯ ಪ್ರೀತಂ ಗೌಡ ಅವರು ಜೆಡಿಎಸ್‌ನ ಎಚ್‌ಎಸ್ ಪ್ರಕಾಶ್ ವಿರುದ್ಧ 13,000 ಮತಗಳ ಅಂತರದ ಗೆಲುವು ದಾಖಲಿಸಿದ್ದರು. ಈ ಸಲ ಜೆಡಿಎಸ್ ಇಲ್ಲಿ ಸ್ವರೂಪ್ ಅವರನ್ನು ಕಣಕ್ಕೆ ಇಳಿಸಿದೆ. ರೇವಣ್ಣ ಅವರ ಪತ್ನಿ ಭವಾನಿ ಅವರಿಗೆ ಹಾಸನ ಕ್ಷೇತ್ರದಿಂದ ಸ್ಪರ್ಧಿಸುವ ಇರಾದೆ ಬಹಳಷ್ಟಿತ್ತು. ಆದರೆ ಅದು ಈಡೇರಿಲ್ಲ. ಇಲ್ಲಿ ಕಾಂಗ್ರೆಸ್‌ನಿಂದ ಬನವಾಸೆ ರಂಗಸ್ವಾಮಿ ಸ್ಪರ್ಧಿಸುತ್ತಿದ್ದಾರೆ.
ಚಿತ್ತಾಪುರ: ಕಲಬುರಗಿ ಜಿಲ್ಲೆಯ ಚಿತ್ತಾಪುರದಿಂದ ಮೂರನೇ ಬಾರಿಗೆ ಪ್ರಿಯಾಂಕ್ ಖರ್ಗೆ ಸ್ಪರ್ಧಿಸುತ್ತಿದ್ದಾರೆ. ಸತತ ಎರಡು ಸಲ ಇಲ್ಲಿಂದ ಶಾಸಕರಾಗಿರುವ ಪ್ರಿಯಾಂಕ್ ಖರ್ಗೆ, ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರ ಪುತ್ರ. ಇದು ಕಾಂಗ್ರೆಸ್ ಪಕ್ಷದ ಭದ್ರಕೋಟೆ. ಇಲ್ಲಿ 2018ರಲ್ಲಿ ಪ್ರಿಯಾಂಕ್ ಖರ್ಗೆ 4,393 ಮತಗಳ ಅಂತರದ ಗೆಲುವು ದಾಖಲಿಸಿದ್ದರು. ಬಿಜೆಪಿ ಇಲ್ಲಿ ಉದ್ಯಮಿ ಮಣಿಕಂಠ ರಾಥೋಡ್ ಅವರನ್ನು ಕಣಕ್ಕೆ ಇಳಿಸಿದೆ. 41 ಕ್ರಿಮಿನಲ್ ಕೇಸ್‌ಗಳನ್ನು ಇವರು ಎದುರಿಸುತ್ತಿದ್ದಾರೆ.
ಪುತ್ತೂರು: ದಕ್ಷಿಣ ಕನ್ನಡ ಜಿಲ್ಲೆಯ ಬಿಜೆಪಿಯ ಭದ್ರಕೋಟೆ ಈ ಕ್ಷೇತ್ರ. ಇಲ್ಲಿ ಕಳೆದ ಬಾರಿ ಬಿಜೆಪಿಯ ಸಂಜೀವ ಮಠಂದೂರು ಶಾಸಕರಾಗಿದ್ದರು. ಈ ಕ್ಷೇತ್ರವನ್ನು ಬಿಜೆಪಿ ನಾಯಕತ್ವ ಹಿಂದುತ್ವದ ಪ್ರಯೋಗ ಶಾಲೆ ಎಂದು ಪರಿಗಣಿಸಿದೆ. ಇಲ್ಲಿ ಈ ಸಲ ಬಿಜೆಪಿಯಿಂದ ದಕ್ಷಿಣ ಕನ್ನಡ ಜಿಲ್ಲಾ ಪಂಚಾಯಿತಿಯ ಮಾಜಿ ಅಧ್ಯಕ್ಷೆ ಆಶಾ ತಿಮ್ಮಪ್ಪ ಗೌಡ ಸ್ಪರ್ಧಿಸುತ್ತಿದ್ದಾರೆ. ಪ್ರತಿಸ್ಪರ್ಧಿಯಾಗಿ ಕಾಂಗ್ರೆಸ್‌ನಿಂದ ಕಣಕ್ಕೆ ಇಳಿದಿರುವ ಅಶೋಕ್ ಕುಮಾರ್ ರೈ ಅವರು ತಿಂಗಳುಗಳ ಹಿಂದೆ ಬಿಜೆಪಿಯಲ್ಲಿದ್ದವರು. ಇವರ ನಡುವೆ ಹಿಂದುತ್ವದ ವಿಚಾರ ಇಟ್ಟುಕೊಂಡು ಕಾರ್ಯಕರ್ತರ ಫೇಸ್ ಆಗಿ ಕಣಕ್ಕೆ ಇಳಿದವರು ಅರುಣ್ ಕುಮಾರ್ ಪುತ್ತಿಲ. ಈ ಸ್ಪರ್ಧೆಯ ಕಾರಣ ಪುತ್ತೂರು ರಾಜ್ಯ ಮಟ್ಟದ ಗಮನಸೆಳೆದಿದೆ.