Karnataka Elections: ನಮಗೆ ಅಧಿಕಾರ ಬರಲಿ, ಬಿಜೆಪಿ ರದ್ದುಗೊಳಿಸಿದ ಮುಸ್ಲಿಮರ ಶೇ. 4 ಮೀಸಲಾತಿ ವಾಪಸ್ ತರ್ತಿವಿ: ಕಾಂಗ್ರೆಸ್
Mar 27, 2023 10:37 AM IST
ಡಿಕೆ ಶಿವಕುಮಾರ್ (PTI)
ಮುಸ್ಲಿಂ ಸಮುದಾಯಕ್ಕೆ ನೀಡಲಾಗುತ್ತಿದ್ದ ಶೇಕಡಾ 4 ಮೀಸಲಾತಿಯನ್ನು ರದ್ದುಪಡಿಸಿ ಯಾವುದೇ ಪ್ರಮುಖ ಸಮುದಾಯಗಳಿಗೆ ನೀಡುವುದನ್ನು ನಾವು ಬಯಸುವುದಿಲ್ಲ ಎಂದು ಡಿಕೆ ಶಿವಕುಮಾರ್ ಹೇಳಿದ್ದಾರೆ.
ಬೆಂಗಳೂರು: ಬಿಜೆಪಿ ನೇತೃತ್ವದ ರಾಜ್ಯ ಸರಕಾರವು ಒಬಿಸಿ ಪಟ್ಟಿಯಲ್ಲಿ 2ಬಿಯಡಿಯಲ್ಲಿ ಮುಸ್ಲಿಂ ಸಮುದಾಯಕ್ಕೆ ನೀಡುತ್ತಿದ್ದ ಶೇಕಡ 4 ಮೀಸಲಾತಿ ರದ್ದುಗೊಳಿಸಿದ ನಿರ್ಧಾರವನ್ನು ಕಾಂಗ್ರೆಸ್ ಟೀಕಿಸಿದ್ದು, ಕರ್ನಾಟಕದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ರದ್ದು ಮಾಡಿರುವ ಈ ಮೀಸಲಾತಿಯನ್ನು ಪುನರ್‌ಸ್ಥಾಪಿಸುವುದಾಗಿ ಭಾನುವಾರ ಭರವಸೆ ನೀಡಿದೆ.
ಶುಕ್ರವಾರ ನಡೆದ ರಾಜ್ಯ ಸಚಿವ ಸಂಪುಟ ಸಭೆಯಲ್ಲಿ ಅಲ್ಪ ಸಂಖ್ಯಾತರಿಗೆ 2ಬಿಯಡಿ ನೀಡಲಾಗಿದ್ದ ಶೇಕಡ 4 ಮೀಸಲಾತಿಯನ್ನು ರದ್ದುಗೊಳಿಸುವ ನಿರ್ಧಾರವನ್ನು ಕರ್ನಾಟಕ ಸರಕಾರ ಮಾಡಿತ್ತು. ಅಲ್ಪ ಸಂಖ್ಯಾತರಿಗೆ ಆರ್ಥಿಕವಾಗಿ ಹಿಂದುಳಿದ ವರ್ಗ (ಇಡಬ್ಲ್ಯುಎಸ್) ದಡಿ ಮೀಸಲಾತಿ ನೀಡಲು ನಿರ್ಧರಿಸಲಾಗಿತ್ತು.
ಅಲ್ಪ ಸಂಖ್ಯಾತರಿಗೆ ಈ ಹಿಂದೆ 2ಬಿಯಡಿ ನೀಡುತ್ತಿದ್ದ ಮೀಸಲಾತಿಯನ್ನು ರದ್ದುಗೊಳಿಸಿ ಕರ್ನಾಟಕದ ಎರಡು ಪ್ರಬಲ ಸಮುದಾಯಗಳಾದ ಒಕ್ಕಲಿಗ ಮತ್ತು ಲಿಂಗಾಯಿತ ಸಮುದಾಯಕ್ಕೆ ಸೇರಿಸಲು ನಿರ್ಧರಿಸಲಾಗಿದೆ. ಒಕ್ಕಲಿಗ ಸಮುದಾಯಕ್ಕೆ ಮತ್ತು ಲಿಂಗಾಯಿತರಿಗೆ 2ಸಿ ಮತ್ತು 2ಡಿಯಡಿ ನೀಡುತ್ತಿದ್ದ ಮೀಸಲಾತಿ ಪ್ರಮಾಣವನ್ನು ಶೇಕಡ 4ರಿಂದ 6ಕ್ಕೆ ಹಾಗೂ ಶೇಕಡ 5ರಿಂದ 7ಕ್ಕೆ ಏರಿಕೆ ಮಾಡಲು ನಿರ್ಧರಿಸಲಾಗಿತ್ತು.
ಮುಸ್ಲಿಂ ಸಮುದಾಯಕ್ಕೆ ಆರ್ಥಿಕವಾಗಿ ಹಿಂದುಳಿದ ವರ್ಗಗಳಡಿ (ಇಡಬ್ಲ್ಯುಎಸ್) ಶೇಕಡ 10 ಮೀಸಲಾತಿ ನೀಡಲು ಸಂಪುಟ ಸಭೆಯಲ್ಲಿ ನಿರ್ಧರಿಸಲಾಗಿತ್ತು.
ರಾಜ್ಯ ಸರಕಾರದ ಈ ಕ್ರಮವನ್ನು ಕರ್ನಾಟಕ ಕಾಂಗ್ರೆಸ್ ಅಧ್ಯಕ್ಷ ಡಿಕೆ ಶಿವಕುಮಾರ್ "ಅಸಂವಿಧಾನಿಕ" ಎಂದು ಬಣ್ಣಿಸಿದ್ದಾರೆ. “ಅವರು (ಸರ್ಕಾರ) ಮೀಸಲಾತಿಯನ್ನು ಆಸ್ತಿಯಂತೆ ಹಂಚಬಹುದು ಎಂದು ಭಾವಿಸುತ್ತಾರೆ. ಇದು ಆಸ್ತಿ ಅಲ್ಲ. ಇದು (ಅಲ್ಪಸಂಖ್ಯಾತರ) ಹಕ್ಕು, ”ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.
“ಮುಸ್ಲಿಂ ಸಮುದಾಯಕ್ಕೆ ನೀಡಲಾಗುತ್ತಿದ್ದ ಶೇಕಡಾ 4 ಮೀಸಲಾತಿಯನ್ನು ರದ್ದುಪಡಿಸಿ ಯಾವುದೇ ಪ್ರಮುಖ ಸಮುದಾಯಗಳಿಗೆ ನೀಡುವುದನ್ನು ನಾವು ಬಯಸುವುದಿಲ್ಲ. ಅವರು (ಅಲ್ಪಸಂಖ್ಯಾತ ಸಮುದಾಯದ ಸದಸ್ಯರು) ನಮ್ಮ ಸಹೋದರರು ಮತ್ತು ಕುಟುಂಬದ ಸದಸ್ಯರು, ”ಎಂದು ಅವರು ಹೇಳಿದ್ದಾರೆ.
ಎಲ್ಲಾ ಒಕ್ಕಲಿಗರು ಮತ್ತು ವೀರಶೈವ-ಲಿಂಗಾಯತರು ಈ ಪ್ರಸ್ತಾಪವನ್ನು ತಿರಸ್ಕರಿಸುತ್ತಿದ್ದಾರೆ ಎಂದು ಶಿವಕುಮಾರ್ ಅಭಿಪ್ರಾಯಪಟ್ಟಿದ್ದಾರೆ.
"ಮುಂದಿನ 45 ದಿನಗಳಲ್ಲಿ ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬರಲಿದೆ ಎಂಬ ವಿಶ್ವಾಸವನ್ನು ಡಿಕೆಶಿ ವ್ಯಕ್ತಪಡಿಸಿದ್ದಾರೆ. " ಅಧಿಕಾರಕ್ಕೆ ಬಂದ ಬಳಿಕ ನಾವು ಇದನ್ನೆಲ್ಲ ರದ್ದುಗೊಳಿಸುತ್ತೇವೆ" ಎಂದು ಅವರು ಹೇಳಿದ್ದಾರೆ.
"ಆಧಾರರಹಿತವಾಗಿ ಮುಸ್ಲಿಮರನ್ನು ಒಬಿಸಿ ಪಟ್ಟಿಯಿಂದ ತೆಗೆದು ಹಾಕಲಾಗಿದೆ. ಚುನಾವಣೆಯಲ್ಲಿ ಸೋಲು ಅನುಭವಿಸುವ ಭಯದಿಂದ ಭಾವನಾತ್ಮಕ ವಿಚಾರಗಳನ್ನು ಕೆದಕಲು ಬಸವರಾಜ ಬೊಮ್ಮಾಯಿ ಸರ್ಕಾರವು ಪ್ರಯತ್ನಿಸುತ್ತಿದೆ" ಎಂದು ಡಿಕೆಶಿ ಆರೋಪಿಸಿದ್ದಾರೆ.
ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಸಚಿವ ಸಂಪುಟದ ಮೊದಲ ಸಭೆಯು ಕೋಟಾವನ್ನು ಮರುಸ್ಥಾಪಿಸುವ ನಿರ್ಧಾರವನ್ನು ತೆಗೆದುಕೊಳ್ಳುತ್ತದೆ ಎಂದು ಪಕ್ಷದ ಅಧ್ಯಕ್ಷನಾಗಿ ನಾನು ಡಿಕೆ ಶಿವಕುಮಾರ್ ಈ ಮೂಲಕ ಘೋಷಿಸುತ್ತಿದ್ದೇನೆ ಎಂದರು.
"ಅಲ್ಪ ಸಂಖ್ಯಾತರಿಗೆ ಯಾವುದೇ ಸಮಸ್ಯೆಯಾಗಬಾರದು ಎಂಬ ವಿವೇಚನೆಯಿಂದ ... ಮೀಸಲಾತಿಯನ್ನು ಯಾರಾದರೂ ಪ್ರಶ್ನಿಸಿದರೆ, ನಾವು ಪೂರ್ವಭಾವಿ ನಿರ್ಧಾರ ತೆಗೆದುಕೊಳ್ಳಲು ನಿರ್ಧರಿಸಿದ್ದೇವೆ. ವಾಸ್ತವವಾಗಿ ಅಲ್ಪ ಸಂಖ್ಯಾತರಿಗೆ ಯಾವುದೇ ತೊಂದರೆಯಾಗದಂತೆ ಅವರು ಇಡಬ್ಲ್ಯುಎಸ್ ಗುಂಪಿಗೆ ಹೋಗುತ್ತಾರೆ. ಅಲ್ಲಿ ಅವರು ಶೇಕಡಾ 4 ರಷ್ಟು ಇದ್ದ ಮೀಸಲಾತಿಯನ್ನು ಶೇಕಡ 10ಕ್ಕೆ ಹೆಚ್ಚಿಸಲಾಗುತ್ತಿದೆ" ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಮ್ಮ ಸರಕಾರದ ಕ್ರಮವನ್ನು ಸಮರ್ಥಿಸಿಕೊಂಡಿದ್ದಾರೆ.