ಪ್ರಸಕ್ತ ಹಣಕಾಸು ವರ್ಷದಲ್ಲಿ ಕರ್ನಾಟಕ ಆರ್ಥಿಕ ಸಾಧನೆ; ಮೊದಲ 7 ತಿಂಗಳಲ್ಲೇ 103689 ಕೋಟಿ ಸಂಗ್ರಹ
Nov 01, 2024 01:30 PM IST
ಪ್ರಸಕ್ತ ಹಣಕಾಸು ವರ್ಷದಲ್ಲಿ ಕರ್ನಾಟಕ ಆರ್ಥಿಕ ಸಾಧನೆ; ಮೊದಲ 7 ತಿಂಗಳಲ್ಲೇ 103689 ಕೋಟಿ ಸಂಗ್ರಹ
- Karnataka fiscal performance: ಕರ್ನಾಟಕ ರಾಜ್ಯದಲ್ಲಿ ಪ್ರಸಕ್ತ ಹಣಕಾಸು ವರ್ಷದಲ್ಲಿ (2024-2025) ಉತ್ತಮ ಆರ್ಥಿಕ ಸಾಧನೆ ಮಾಡಿದ್ದು, ಮೊದಲ 7 ತಿಂಗಳಲ್ಲೇ 103689 ಕೋಟಿ ಸಂಗ್ರಹ ಮಾಡಿದೆ.
ಬೆಂಗಳೂರು: 2024-25ರ ಮೊದಲ 7 ತಿಂಗಳಲ್ಲಿ ಕರ್ನಾಟಕವು ಅತ್ಯುತ್ತಮ ಹಣಕಾಸಿನ ಕಾರ್ಯಕ್ಷಮತೆ ಸಾಧಿಸಿದ್ದು, 1,03,689 ಕೋಟಿ ರೂಪಾಯಿಗಳ ಆದಾಯವನ್ನು ಗಳಿಸಿದೆ. ರಾಜ್ಯದಲ್ಲಿ ಐದು ಗ್ಯಾರಂಟಿಗಳಿಂದ ಸರ್ಕಾರ ದಿವಾಳಿ ಎದ್ದಿದೆ ಎನ್ನುವ ಪ್ರತಿಪಕ್ಷಗಳ ಆರೋಪಗಳ ನಡುವೆಯೂ ಅಮೋಘ ಸಾಧನೆ ಮಾಡುವ ಮೂಲಕ ಗಮನ ಸೆಳೆದಿದೆ. ಐದು ಪ್ರಮುಖ ಕಂದಾಯ ಇಲಾಖೆಗಳಲ್ಲಿ ವಾರ್ಷಿಕ ಗುರಿಯಾದ 1,96,525 ಕೋಟಿ ರೂಪಾಯಿಗಳಲ್ಲಿ ಏಳು ತಿಂಗಳಲ್ಲಿ ಶೇ 53 ರಷ್ಟು ಸಾಧಿಸಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಆ ಇಲಾಖೆಗಳು ವಾಣಿಜ್ಯ ತೆರಿಗೆ, ಅಬಕಾರಿ, ಗಣಿಗಾರಿಕೆ, ಮುದ್ರಾಂಕ ಮತ್ತು ನೋಂದಣಿ ಮತ್ತು ಸಾರಿಗೆ.
ವರ್ಷದಿಂದ ವರ್ಷಕ್ಕೆ ಶೇಕಡಾ 11.2ರಷ್ಟು ಬೆಳವಣಿಗೆ ದರ ಇದೆ. ಈ ಸಾಧನೆಯು ಆರ್ಥಿಕ ಬೆಳವಣಿಗೆ ಹೆಚ್ಚಳ, ಗ್ರಾಹಕರ ಬೇಡಿಕೆ, ಕೊಳ್ಳುವ, ಉತ್ತಮ ಆಡಳಿತ ಮತ್ತು ವ್ಯಾಪಾರ ಸ್ನೇಹಿ ವಾತಾವರಣ ಸೃಷ್ಟಿಸುವುದು ಸರ್ಕಾರದ ಗುರಿ ಪ್ರತಿಬಿಂಬಿಸುತ್ತದೆ. 2024-25ರ ಮೊದಲ ತ್ರೈಮಾಸಿಕದಲ್ಲಿ ವಿದೇಶಿ ನೇರ ಹೂಡಿಕೆ (FDI) ಕರ್ನಾಟಕವು ಗುಜರಾತ್ ಅನ್ನು ಹಿಂದಿಕ್ಕಿ ಎರಡನೇ ಸ್ಥಾನಕ್ಕೇರಿದೆ. 2023-2024ರಲ್ಲಿ ಕರ್ನಾಟಕ ಮೂರನೇ ಸ್ಥಾನದಲ್ಲಿತ್ತು. ಇದೀಗ ಎರಡನೇ ಸ್ಥಾನಕ್ಕೇರುವ ಮೂಲಕ ಜಾಗತಿಕವಾಗಿ ಹೂಡಿಕೆ ಸ್ನೇಹಿ ರಾಜ್ಯವಾಗಿ ಗುರುತಿಸಿಕೊಂಡಿದೆ.
2.2 ಬಿಲಿಯನ್ ಡಾಲರ್ ಹೂಡಿಕೆ
ಮೊದಲ ತ್ರೈಮಾಸಿಕದಲ್ಲಿ ರಾಜ್ಯವು ಒಟ್ಟು 2.2 ಬಿಲಿಯನ್ ಡಾಲರ್ ಹೂಡಿಕೆಯನ್ನು ಆಕರ್ಷಿಸಿದೆ. ಇದು ಪ್ರಗತಿಪರ ಆರ್ಥಿಕ ನೀತಿಗಳಲ್ಲಿ ಹೆಚ್ಚುತ್ತಿರುವ ಹೂಡಿಕೆದಾರರ ವಿಶ್ವಾಸವನ್ನು ಪ್ರತಿಬಿಂಬಿಸುತ್ತದೆ. ನೋಂದಣಿ ಮತ್ತು ಮುದ್ರಾಂಕ, ಅಬಕಾರಿ ಸುಂಕ ಮತ್ತು ಬಳಕೆದಾರ ಶುಲ್ಕ, ಪರಿಷ್ಕರಿಸುವ ಮೂಲಕ ಸರ್ಕಾರ ದಿಟ್ಟ ಸುಧಾರಣೆಗಳನ್ನು ಜಾರಿಗೆ ತಂದಿದೆ. ಹೆಚ್ಚುವರಿಯಾಗಿ, ಗಣಿಗಾರಿಕೆ ವಲಯವು ದೀರ್ಘಕಾಲದ ಅಂತರ ಇಲಾಖೆ ಸವಾಲುಗಳನ್ನು ನಿವಾರಿಸಿ ತನ್ನ ಆದಾಯದ ಗುರಿಗಳನ್ನು ಮೀರಿದೆ.
ಆಡಳಿತದಲ್ಲಿ ಹೆಚ್ಚಿದ ದಕ್ಷತೆಯು ಬಜೆಟ್ ಬಳಕೆಯನ್ನು ಹೆಚ್ಚಿಸಲು ರಾಜ್ಯಕ್ಕೆ ಅನುವು ಮಾಡಿಕೊಟ್ಟಿದೆ. ಅಕ್ಟೋಬರ್ 2024ರ ವೇಳೆಗೆ ಬಜೆಟ್ ಅಂದಾಜಿನ (ಬಿಇ) ಶೇಕಡಾ 46ರಷ್ಟು ಖರ್ಚು ಮಾಡಲಾಗಿದೆ. ಹಿಂದಿನ ಹಣಕಾಸು ಅವಧಿಯಲ್ಲಿ ಶೇಕಡಾ 42ರಷ್ಟು ಬಳಕೆ ಮಾಡಲಾಗಿತ್ತು . ಬಂಡವಾಳ ವೆಚ್ಚವು ಬಿಇ ಶೇಕಡಾ 29ಕ್ಕೆ ಏರಿದೆ. ಇದು ಕಳೆದ ವರ್ಷ ಶೇಕಡಾ 24.7 ರಷ್ಟಿತ್ತು. ಮೂಲಸೌಕರ್ಯ ಅಭಿವೃದ್ಧಿಗೆ ಸರ್ಕಾರದ ಬದ್ಧತೆಯನ್ನ ಇದು ಪ್ರದರ್ಶಿಸುತ್ತದೆ. 52,009 ಕೋಟಿ ರೂಪಾಯಿಗಳ ಬಜೆಟ್ನಲ್ಲಿ ಈಗಾಗಲೇ 24,235 ಕೋಟಿ ರೂಪಾಯಿಗಳನ್ನು ಗ್ಯಾರಂಟಿ ಯೋಜನೆಗಳಿಗೆ ಹಂಚಿಕೆ ಮಾಡುವ ಮೂಲಕ ಟೀಕಾಕಾರರನ್ನು ಪ್ರಶ್ನೆಗಳನ್ನು ಮೌನಗೊಳಿಸಿದೆ.
GSDP ಶೇಕಡಾ 14ಕ್ಕೆ ಉಳಿಸಿಕೊಳ್ಳುವ ಗುರಿ
ಕರ್ನಾಟಕ ಆರ್ಥಿಕ ಬೆಳವಣಿಗೆಯ ದರವನ್ನು (GSDP) ಶೇಕಡಾ 14ಕ್ಕೆ ಉಳಿಸಿಕೊಳ್ಳುವ ಗುರಿ ಹೊಂದಿದೆ. ಅದಕ್ಕಾಗಿ ಪ್ರಸಕ್ತ ಹಣಕಾಸು ವರ್ಷದಲ್ಲಿ ಜಿಎಸ್ಡಿಪಿಯ ಶೇಕಡಾ 2 ಕ್ಕಿಂತ ಮೇಲೆಯೇ ಹೆಚ್ಚಿನ ಬಂಡವಾಳ ವೆಚ್ಚವನ್ನು ಕಾಯ್ದುಕೊಳ್ಳಲು ಚಿಂತಿಸಿದೆ. ಸರ್ಕಾರ ಪ್ರಮುಖ ಯೋಜನೆಗಳನ್ನು ಕಾರ್ಯಗತಗೊಳಿಸಲು ವಿಶ್ವ ಬ್ಯಾಂಕ್ ಮತ್ತು ಏಷ್ಯಾ ಅಭಿವೃದ್ಧಿ ಬ್ಯಾಂಕ್ ಸೇರಿದಂತೆ ವಿವಿಧ ವಾಣಿಜ್ಯ ಸಂಸ್ಥೆಗಳೊಂದಿಗೆ ಚರ್ಚೆ ನಡೆಸುತ್ತಿದೆ. ಅಂತಾರಾಷ್ಟ್ರೀಯ ಹಣಕಾಸು ಸಂಸ್ಥೆಗಳೊಂದಿಗೆ 16,750 ಕೋಟಿ ರೂಪಾಯಿ ಹೂಡಿಕೆಯ ಯೋಜನೆಗಳನ್ನು ಕೈಗೊಳ್ಳುತ್ತಿದೆ. ಬೆಂಗಳೂರು ನಗರದ ಮೂಲ ಸೌಕರ್ಯದ 1,31,500 ಕೋಟಿ ಯೋಜನೆಗಳನ್ನು ಕೈಗೊಳ್ಳುತ್ತಿವೆ.