ಶಾಸಕ ಸತೀಶ್ ಸೈಲ್ ಶಿಕ್ಷೆ ಅಮಾನತ್ತಿಗೆ ಷರತ್ತು ವಿಧಿಸಲು ಸಿಬಿಐ ಆಗ್ರಹ: ಭೋವಿ ನಿಗಮದ ಹಗರಣ, ಸಿಬಿಐಗೇಕಿಲ್ಲ- ಕರ್ನಾಟಕ ಹೈಕೋರ್ಟ್ ಪ್ರಶ್ನೆ
Dec 20, 2024 06:35 AM IST
ಶಾಸಕ ಸತೀಶ್ ಸೈಲ್ ಶಿಕ್ಷೆ ಅಮಾನತ್ತಿಗೆ ಷರತ್ತು ವಿಧಿಸಲು ಸಿಬಿಐ ಆಗ್ರಹಿಸಿದೆ. ಇನ್ನೊಂದು ಕೇಸ್‌ನಲ್ಲಿ ಭೋವಿ ನಿಗಮದ ಹಗರಣ, ಸಿಬಿಐಗೇಕಿಲ್ಲ ಎಂದು ಕರ್ನಾಟಕ ಹೈಕೋರ್ಟ್ ಪ್ರಶ್ನೆ ಮಾಡಿದೆ. (ಕಡತ ಚಿತ್ರ)
Karnataka High Court: ಕಾಂಗ್ರೆಸ್ ಶಾಸಕ ಸತೀಶ್ ಸೈಲ್ ಶಿಕ್ಷೆ ಅಮಾನತ್ತಿಗೆ ಷರತ್ತು ವಿಧಿಸಬೇಕು ಎಂದು ಕೋರ್ಟ್ ಅನ್ನು ಸಿಬಿಐ ಆಗ್ರಹಿಸಿದೆ. ಪ್ರತ್ಯೇಕ ಕೇಸ್‌ನಲ್ಲಿ ಭೋವಿ ಅಭಿವೃದ್ಧಿ ನಿಗಮದ ಹಗರಣ, ಸಿಬಿಐಗೆ ಏಕೆ ಒಪ್ಪಿಸಬಾರದು ಎಂದು ಕರ್ನಾಟಕ ಹೈಕೋರ್ಟ್ ಪ್ರಶ್ನೆ ಮಾಡಿದೆ. (ವರದಿ- ಎಚ್. ಮಾರುತಿ, ಬೆಂಗಳೂರು)
Karnataka High Court: ಬೇಲಿಕೇರಿ ಬಂದರಿನಿಂದ ಅಕ್ರಮವಾಗಿ ಅದಿರು ಸಾಗಣೆ ಮತ್ತು ಮಾರಾಟ ಮಾಡಿದ ಪ್ರಕರಣದಲ್ಲಿ ಮುಖ್ಯ ಅಪರಾಧಿಯಾಗಿರುವ ಕಾರವಾರ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಶಾಸಕ ಸತೀಶ್ ಸೈಲ್‌ಗೆ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯ ವಿಧಿಸಿರುವ ಕಠಿಣ ಜೈಲು ಶಿಕ್ಷೆಯನ್ನು ತಾತ್ಕಾಲಿಕವಾಗಿ ತಡೆಹಿಡಿಯುವುದೇ ಆದರೆ, ಸುಪ್ರೀಂ ಕೋರ್ಟ್ ತೀರ್ಪಿನ ಅನ್ವಯ ಷರತ್ತುಗಳನ್ನು ವಿಧಿಸಬೇಕು ಎಂದು ಸಿಬಿಐ ಹೈಕೋರ್ಟ್ ನಲ್ಲಿ ಪ್ರತಿಪಾದಿಸಿದೆ.
ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಬಿಐ ವಿಶೇಷ ನ್ಯಾಯಾಲಯ ವಿಧಿಸಿರುವ ಶಿಕ್ಷೆಯನ್ನು ತಡೆಹಿಡಿಯಬೇಕು ಎಂದು ಕೋರಿ ಶಾಸಕ ಸತೀಶ್ ಸೈಲ್ ರ್ಜಿ ಸಲ್ಲಿಸಿದ್ದರು. ಈ ಅರ್ಜಿಯ ವಿಚಾರಣೆಯನ್ನು ನ್ಯಾಯಮೂರ್ತಿ ಎಂ.ನಾಗಪ್ರಸನ್ನ ಅವರಿದ್ದ ಏಕಸದಸ್ಯ ನ್ಯಾಯಪೀಠ ವಿಚಾರಣೆ ನಡೆಸಿತು.
ವಿಚಾರಣೆ ಸಂದರ್ಭದಲ್ಲಿ ಸಿಬಿಐ ಪರ ವಕೀಲ ಪಿ.ಪ್ರಸನ್ನ ಕುಮಾರ್ ಸಂಪೂರ್ಣವಾಗಿ ಶಿಕ್ಷೆಯನ್ನು ತಡೆಹಿಡಿಯುವುದು ಸರಿಯಲ್ಲ. ಆದರೆ ಸುಪ್ರೀಂ ಕೋರ್ಟ್ ತೀರ್ಪಿನ ಅನುಸಾರ ಅಪರಾಧಿಗೆ ಷರತ್ತುಗಳನ್ನು ವಿಧಿಸಿ ಶಿಕ್ಷೆಯನ್ನು ತಡೆಹಿಡಿಯುವ ಸಂಬಂಧ ಪರಿಶೀಲನೆ ನಡೆಸಬಹುದು ಎಂದು ಮನವಿ ಮಾಡಿದರು. ಈ ವಾದವನ್ನು ಆಲಿಸಿದ ನ್ಯಾಯಮೂರ್ತಿಗಳು ಈ ತಿಂಗಳ 23 ರೊಳಗೆ ಆದೇಶ ಮಾಡುವುದಾಗಿ ತಿಳಿಸಿ ವಿಚಾರಣೆಯನ್ನು ಮುಂದೂಡಿದರು. ಅರ್ಜಿದಾರರ ಪರ ಹಿರಿಯ ವಕೀಲ ಸಿ.ವಿ. ನಾಗೇಶ್ ವಾದ ಮಂಡಿಸಿದರು.
ಭೋವಿ ಅಭಿವೃದ್ಧಿ ನಿಗಮದ ಹಗರಣ, ಸಿಬಿಐಗೆ ಏಕೆ ಒಪ್ಪಿಸಬಾರದು? ಹೈಕೋರ್ಟ್ ಪ್ರಶ್ನೆ
ಕರ್ನಾಟಕ ಭೋವಿ ಅಭಿವೃದ್ಧಿ ನಿಗಮದಲ್ಲಿ ನಡೆದಿರುವ ಕೋಟ್ಯಂತರ ರೂ.ಅವ್ಯವಹಾರ ನಡೆದಿದ್ದು, ಈ ಹಗರಣವನ್ನು ಸಿಬಿಐಗೆ ಏಕೆ ವಹಿಸಬಾರದು ಎಂದು ಹೈಕೋರ್ಟ್ ರಾಜ್ಯ ಸರ್ಕಾರವನ್ನು ಪ್ರಶ್ನಿಸಿದೆ. ಅಲ್ಲದೆ ಈ ಅವ್ಯವಹಾರದ ಆರೋಪಕ್ಕೆ ಸಂಬಂಧಿಸಿದ ಹಗರಣದಲ್ಲಿ ಭಾಗಿಯಾಗಿದ್ದಾರೆ ಎನ್ನಲಾದ ಪ್ರಮುಖ ಆರೋಪಿಗಳನ್ನು ಬಂಧನ ಮಾಡದೇ ಇರುವುದಕ್ಕೆ ಆಕ್ಷೇಪ ವ್ಯಕ್ತಪಡಿಸಿದೆ.
ಬೆಂಗಳೂರಿನ ಸಿದ್ದಾಪುರ ಪೊಲೀಸ್ ಠಾಣೆಯಲ್ಲಿ ದಾಖಲಾಗಿರುವ ತಮ್ಮ ವಿರುದ್ಧದ ಪ್ರಕರಣಕ್ಕೆ ಸಂಬಂಧಿಸಿದಂತೆ 4ನೇ ಹೆಚ್ಚುವರಿ ಎಸಿಎಂಎಂ ನ್ಯಾಯಾಲಯದಲ್ಲಿ ನಡೆಯುತ್ತಿರುವ ವಿಚಾರಣೆ ರದ್ದುಪಡಿಸುವಂತೆ ಕೋರಿ ನ್ಯೂ ಡ್ರೀಮ್ಸ್ ಎಂಟರ್‌ಪ್ರೈಸಸ್ ಮಾಲೀಕರಾದ ಎಂ.ಯಶಸ್ವಿನಿ ಅವರು ಸಲ್ಲಿಸಿದ್ದ ಕ್ರಿಮಿನಲ್ ಅರ್ಜಿಯನ್ನು ನ್ಯಾಯಮೂರ್ತಿ ಎಂ. ನಾಗಪ್ರಸನ್ನ ಅವರಿದ್ದ ಏಕಸದಸ್ಯ ನ್ಯಾಯಪೀಠ ವಿಚಾರಣೆ ನಡೆಸಿತು.
ವಿಚಾರಣೆಯಲ್ಲಿ ಏನಾಯಿತು
ವಿಚಾರಣೆ ಸಂದರ್ಭದಲ್ಲಿ ಅರ್ಜಿದಾರರ ಪರ ವಾದ ಮಂಡಿಸಿದ ವಕೀಲ ಜೀವನ್, ರಾಜ್ಯ ಸರ್ಕಾರ ನಡೆಸುತ್ತಿರುವ ತನಿಖೆಯು ಪೂರ್ವಾಗ್ರಹ ಪೀಡಿತ ಭಾವನೆಯಿಂದ ಕೂಡಿದೆ. ಎಫ್‌ಐಆರ್ ದಾಖಲಾಗಿ 20 ತಿಂಗಳು ಕಳೆದರೂ ಈವರೆಗೆ ಪ್ರಕರಣದ 1, 2, 3 ಮತ್ತು 5ನೇ ಅರೋಪಿಗಳನ್ನು ವಿಚಾರಣೆಗೆ ಆಹ್ವಾನಿಸಿಲ್ಲ. ಆರೋಪಿಗಳು ಜಾಮೀನನ್ನೂ ಪಡೆದಿಲ್ಲ. ವಸ್ತುಸ್ಥಿತಿ ಹೀಗಿದ್ದರೂ ಪೊಲೀಸರು ಅವರನ್ನು ಬಂಧಿಸಿಲ್ಲ ಎಂದು ಆಕ್ಷೇಪ ವ್ಯಕ್ತಪಡಿಸಿದರು.
ಈ ವಾದಕ್ಕೆ ಪ್ರತಿವಾದ ಮಂಡಿಸಿದ ರಾಜ್ಯ ಹೆಚ್ಚುವರಿ ಪ್ರಾಸಿಕ್ಯೂಟರ್ ಬಿ.ಎನ್.ಜಗದೀಶ್, ತನಿಖಾಧಿಕಾರಿಗಳು ಓರ್ವ ಆರೋಪಿಯನ್ನು ಬಂಧಿಸಿದ್ದರು. ಆದರೆ, ಅವರಿಗೆ ವಿಚಾರಣಾ ನ್ಯಾಯಾಲಯ ಜಾಮೀನು ನೀಡಿದ ಕಾರಣ ಬಿಡುಗಡೆ ಮಾಡಲಾಗಿದೆ ಎಂದು ನ್ಯಾಯಾಲಯದ ಗಮನಕ್ಕೆ ತಂದರು. ಇದಕ್ಕೆ ತೀವ್ರ ಅಸಮಾಧಾನ ವ್ಯಕ್ತಪಡಿಸಿದ ನ್ಯಾಯಮೂರ್ತಿಗಳು, ಉಳಿದ ಆರೋಪಿಗಳನ್ನು ಏಕೆ ಬಿಟ್ಟಿದ್ದೀರಿ? ಜಾಮೀನು ಪಡೆಯದಿದ್ದರೂ ಅವರನ್ನು ಏಕೆ ಬಂಧಿಸಿಲ್ಲ? ಇಷ್ಟು ದೊಡ್ಡ ಹಗರಣ ನಡೆದಿದೆ ಎಂಬ ಆರೋಪ ಇದ್ದಾಗಲೂ ತನಿಖೆ ಯಾಕೆ ಬಸವನ ಹುಳದಂತೆ ತೆವಳುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು .
ಭೋವಿ ನಿಗಮದಲ್ಲಿ ರೂ. 100 ಕೋಟಿಗೂ ಹೆಚ್ಚಿನ ಮೊತ್ತದ ಹಗರಣ ನಡೆದಿದೆ. ತಪ್ಪಿತಸ್ಥರು ಒಂದೂವರೆ ವರ್ಷದಿಂದ ಸುರಕ್ಷಿತವಾಗಿದ್ದಾರೆ. ಸರ್ಕಾರ ಆರೋಪಿಗಳನ್ನು ರಕ್ಷಿಸಲು ಪ್ರಯತ್ನಿಸುತ್ತಿರುವಂತೆ ಎದ್ದು ಕಾಣಿಸುತ್ತಿದೆ. ವಕೀಲೆ ಜೀವಾ ಆತ್ಮಹತ್ಯೆಗೆ ಪ್ರಚೋದನೆ ನೀಡಿದ ಆರೋಪ ಎದುರಿಸುತ್ತಿರುವ ಪೊಲೀಸ್ ಅಧಿಕಾರಿಯನ್ನು ಇದುವರೆಗೂ ಬಂಧಿಸಿಲ್ಲ. ರಾಜ್ಯ ಸರ್ಕಾರ ನಡೆಸುವ ತನಿಖೆ ಈ ರೀತಿ ಇರುತ್ತದೆಯೇ ಎಂದು ಸರ್ಕಾರವನ್ನು ತರಾಟೆಗೆ ತೆಗೆದುಕೊಂಡರು. ಅಂತಿಮವಾಗಿ ನ್ಯಾಯಮೂರ್ತಿಗಳು ಸಿಬಿಐಗೆ ವಹಿಸಲು ಇದಕ್ಕಿಂತ ಅರ್ಹ ಪ್ರಕರಣ ಮತ್ತೊಂದಿಲ್ಲ ಎಂದು ಮೌಖಿಕ ಅಭಿಪ್ರಾಯ ವ್ಯಕ್ತಪಡಿಸಿ ವಿಚಾರಣೆಯನ್ನು ಮುಂದೂಡಿದರು.
(ವರದಿ- ಎಚ್. ಮಾರುತಿ, ಬೆಂಗಳೂರು)