logo
ಕನ್ನಡ ಸುದ್ದಿ  /  ಕರ್ನಾಟಕ  /  ಓಲಾ, ಊಬರ್, ರಾಪಿಡೋಗೆ ಆತಂಕ, ಬೈಕ್ ಟ್ಯಾಕ್ಸಿ ಸೇವೆ ಸ್ಥಗಿತಗೊಳಿಸುವ ಆದೇಶಕ್ಕೆ ತಡೆ ನೀಡಲು ಹೈಕೋರ್ಟ್‌ ನಕಾರ

ಓಲಾ, ಊಬರ್, ರಾಪಿಡೋಗೆ ಆತಂಕ, ಬೈಕ್ ಟ್ಯಾಕ್ಸಿ ಸೇವೆ ಸ್ಥಗಿತಗೊಳಿಸುವ ಆದೇಶಕ್ಕೆ ತಡೆ ನೀಡಲು ಹೈಕೋರ್ಟ್‌ ನಕಾರ

Praveen Chandra B HT Kannada

Published Jun 14, 2025 09:50 AM IST

google News

ಬೈಕ್ ಟ್ಯಾಕ್ಸಿ ಸೇವೆ ಸ್ಥಗಿತಗೊಳಿಸುವ ಆದೇಶಕ್ಕೆ ತಡೆ ನೀಡಲು ಹೈಕೋರ್ಟ್‌ ನಕಾರ

  • ಬೈಕ್ ಟ್ಯಾಕ್ಸಿಗಳನ್ನು ನಿಯಂತ್ರಿಸಲು ಸಮಗ್ರ ನೀತಿಯನ್ನು ಹೊರಡಿಸುವವರೆಗೆ ರಾಜ್ಯದಲ್ಲಿ ಬೈಕ್ ಟ್ಯಾಕ್ಸಿ ಕಾರ್ಯಾಚರಣೆಯನ್ನು ಸ್ಥಗಿತಗೊಳಿಸುವಂತೆ ಏಕಸದಸ್ಯ ಪೀಠ ನೀಡಿದ್ದ ಆದೇಶವನ್ನು ತಡೆಹಿಡಿಯಲು ರಾಜ್ಯ ಹೈಕೋರ್ಟ್‌ ವಿಭಾಗೀಯ ಪೀಠ ನಿರಾಕರಿಸಿದೆ. ಈ ಆದೇಶದಿಂದ ಬೈಕ್‌ ಟ್ಯಾಕ್ಸಿ ಸೇವೆ ಒದಗಿಸುತ್ತಿದ್ದ ಕಂಪನಿಗಳಿಗೆ ಹಿನ್ನಡೆಯಾಗಿದೆ. (ವರದಿ: ಎಚ್.ಮಾರುತಿ)
ಬೈಕ್ ಟ್ಯಾಕ್ಸಿ ಸೇವೆ ಸ್ಥಗಿತಗೊಳಿಸುವ ಆದೇಶಕ್ಕೆ ತಡೆ ನೀಡಲು ಹೈಕೋರ್ಟ್‌ ನಕಾರ
ಬೈಕ್ ಟ್ಯಾಕ್ಸಿ ಸೇವೆ ಸ್ಥಗಿತಗೊಳಿಸುವ ಆದೇಶಕ್ಕೆ ತಡೆ ನೀಡಲು ಹೈಕೋರ್ಟ್‌ ನಕಾರ (HT Print)

ಬೆಂಗಳೂರು: ಬೈಕ್ ಟ್ಯಾಕ್ಸಿಗಳನ್ನು ನಿಯಂತ್ರಿಸಲು ಸಮಗ್ರ ನೀತಿಯನ್ನು ಹೊರಡಿಸುವವರೆಗೆ ರಾಜ್ಯದಲ್ಲಿ ಬೈಕ್ ಟ್ಯಾಕ್ಸಿ ಕಾರ್ಯಾಚರಣೆಯನ್ನು ಸ್ಥಗಿತಗೊಳಿಸುವಂತೆ ಏಕಸದಸ್ಯ ಪೀಠ ನೀಡಿದ್ದ ಆದೇಶವನ್ನು ತಡೆಹಿಡಿಯಲು ರಾಜ್ಯ ಹೈಕೋರ್ಟ್‌ ವಿಭಾಗೀಯ ಪೀಠ ನಿರಾಕರಿಸಿದೆ. ಈ ಆದೇಶದಿಂದ ಬೈಕ್‌ ಟ್ಯಾಕ್ಸಿ ಸೇವೆ ಒದಗಿಸುತ್ತಿದ್ದ ಕಂಪನಿಗಳಿಗೆ ಹಿನ್ನಡೆಯಾಗಿದೆ.

ಪ್ರಕರಣದ ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ ವಿ. ಕಾಮೇಶ್ವರ ರಾವ್ ಮತ್ತು ನ್ಯಾಯಮೂರ್ತಿ ಶ್ರೀನಿವಾಸ್ ಹರೀಶ್ ಕುಮಾರ್ ಅವರ ಪೀಠ, ಜೂನ್‌ 20ರೊಳಗೆ ತಮ್ಮ ಅಭಿಪ್ರಯಾಗಳನ್ನು ತಿಳಿಸುವಂತೆ ಓಲಾ ಮತ್ತು ಉಬರ್‌ ಮತ್ತು ರಾಜ್ಯ ಸರ್ಕಾರಕ್ಕೆ ಸೂಚಿಸಿ ಜೂನ್ 24 ರಂದು ಪ್ರಕರಣವನ್ನು ವಿಚಾರಣೆ ನಡೆಸುವುದಾಗಿ ತಿಳಿಸಿದೆ.

ಬೈಕ್ ಟ್ಯಾಕ್ಸಿಗೆ ಅನುಮತಿ ನೀಡದಿರಲು ರಾಜ್ಯ ಸರ್ಕಾರ ನಿರ್ಧಾರ ಕೈಗೊಂಡಿರುವ ಹಿನ್ನೆಲೆಯಲ್ಲಿ ಏಕಸದಸ್ಯ ಪೀಠದ ನಿರ್ದೇಶನವನ್ನು ತಡೆಹಿಡಿಯಲು ದ್ವಿಸದಸ್ಯ ಪೀಠ ನಿರಾಕರಿಸಿದೆ. ಈ ವಿಷಯವು ಬೈಕ್ ಟ್ಯಾಕ್ಸಿ ಚಾಲಕರ ಜೀವನೋಪಾಯ ಮತ್ತು ಸಾರ್ವಜನಿಕ ಹಿತಾಸಕ್ತಿಗೆ ಸಂಬಂಧಿಸಿದೆ ಎಂದು ನ್ಯಾಯಾಲಯ ಅಭಿಪ್ರಾಯಪಟ್ಟಿದೆ.

ಏಪ್ರಿಲ್ 2 ರಂದು ನ್ಯಾಯಮೂರ್ತಿ ಬಿ. ಶ್ಯಾಮ್ ಪ್ರಸಾದ್ ಅವರ ಪೀಠವು, ಕರ್ನಾಟಕದಲ್ಲಿ ಎಲ್ಲಾ ಬೈಕ್ ಟ್ಯಾಕ್ಸಿ ಸೇವೆಗಳನ್ನು ಆರು ವಾರಗಳ ಒಳಗಾಗಿ ಸ್ಥಗಿತಗೊಳಿಸಲು ಆದೇಶ ಹೊರಡಿಸಿತ್ತು. ಸರ್ಕಾರವು ನೀತಿ ಬದಲಾವಣೆ ಮಾಡಲು ನಿರ್ಧರಿಸದ ಹೊರತು ಮತ್ತು ಬೈಕ್ ಟ್ಯಾಕ್ಸಿಗಳಿಗೆ ಅನುಮತಿ ನೀಡಲು ನಿಯಮಗಳು ಮತ್ತು ಮಾರ್ಗಸೂಚಿಗಳನ್ನು ರೂಪಿಸದ ಹೊರತು, ಅಂತಹ ವಾಹನಗಳನ್ನು ಓಡಿಸಲು ಸಾಧ್ಯವಿಲ್ಲ ಎಂದು ನ್ಯಾಯಾಲಯ ತಿಳಿಸಿತ್ತು.

ಕರ್ನಾಟಕದಲ್ಲಿ ಬೈಕ್ ಕಾರ್ಯಾಚರಣೆಗಳನ್ನು ಸ್ಥಗಿತಗೊಳಿಸಬೇಕಾದ ಆರು ವಾರಗಳ ಗಡುವು ಮೇ ತಿಂಗಳಲ್ಲಿ ಮುಕ್ತಾಯಗೊಳ್ಳಬೇಕಿತ್ತು. ಆದರೂ, ರಾಪಿಡೊ, ಓಲಾ ಮತ್ತು ಉಬರ್ ಸೇರಿದಂತೆ ಬಾಧಿತ ಬೈಕ್ ಟ್ಯಾಕ್ಸಿ ನಿರ್ವಾಹಕರು ಈ ಗಡುವನ್ನು ವಿಸ್ತರಿಸುವಂತೆ ನ್ಯಾಯಾಲಯಕ್ಕೆ ಮನವಿ ಮಾಡಿಕೊಂಡಿದ್ದರು. ಈ ಮನವಿಯನ್ನು ಪರಿಗಣಸಿದ್ದ ನ್ಯಾಯಮೂರ್ತಿಗಳು ಅಂತಿಮವಾಗಿ ಬೈಕ್ ಟ್ಯಾಕ್ಸಿ ಕಾರ್ಯಾಚರಣೆಗಳನ್ನು ಮುಕ್ತಾಯಗೊಳಿಸುವ ಗಡುವನ್ನು ಜೂನ್ 15 ರವರೆಗೆ ವಿಸ್ತರಿಸಿದ್ದರು.

ನಂತರ, ಏಪ್ರಿಲ್ 2 ರ ತೀರ್ಪನ್ನು ಪ್ರಶ್ನಿಸಿ ಜೂನ್ 11 ರಂದು ಎಎನ್ ಐ ಟೆಕ್ನಾಲಜೀಸ್ (ಓಲಾ ಮಾಲೀಕತ್ವ) ಮತ್ತು ಜೂನ್ 2 ರಂದು ಉಬರ್ ಮೇಲ್ಮನವಿಯನ್ನು ಸಲ್ಲಿಸಿದ್ದವು.

ಮೇಲ್ಮನವಿದಾರರ ಪರವಾಗಿ ವಾದಿಸಿದ ಹಿರಿಯ ವಕೀಲ ಧ್ಯಾನ್ ಚಿನ್ನಪ್ಪ ಏಕ ಸದಸ್ಯ ಪೀಠದ ಆದೇಶವನ್ನು ತಡೆಹಿಡಿಯುವಂತೆ ವಿಭಾಗೀಯ ಪೀಠವನ್ನು ಒತ್ತಾಯಿಸಿ 1988 ರ ಮೋಟಾರು ವಾಹನ

ಕಾಯ್ದೆಯ ಪ್ರಕಾರ ಈಗಾಗಲೇ ಅಸ್ತಿತ್ವದಲ್ಲಿರುವ ಚೌಕಟ್ಟಿನ ಅಡಿಯಲ್ಲಿ ಬೈಕ್ ಟ್ಯಾಕ್ಸಿಗಳು ಕಾರ್ಯನಿರ್ವಹಿಸಬಹುದು ಎಂದು ಅವರು ವಾದಿಸಿದ್ದರು.

ಹೈಕೋರ್ಟ್‌ ಬೈಕ್‌ ಟ್ಯಾಕ್ಸಿ ನಿಷೇಧವನ್ನು ಮೇ14ರಿಂದ ಜೂನ್‌ 15 ರವರೆಗೆ ನಾಲ್ಕು ವಾರಗಳ ಅವಧಿಗೆ ವಿಸ್ತರಿಸಿತ್ತು.

ಈ ಹಿಂದೆ ನಡೆದ ಕಲಾಪದಲ್ಲಿ ರಾಪಿಡೋ ರಾಜ್ಯಾದ್ಯಂತ 6 ಲಕ್ಷ ಜನರಿಗೆ ನೇರ ಉದ್ಯೋಗ ಕಲ್ಪಿಸಲಾಗಿದೆ. ಕಳೆದ ಹಲವು ವರ್ಷಗಳಿಂದ ದ್ವಿಚಕ್ರ ವಾಹನ ಚಾಲಕರಿಗೆ 700 ಕೋಡಟಿ ರೂ ವಿತರಣೆ ಮಾಡಲಾಗಿದ್ದು, ಸುಮಾರು 100 ಕೊಟಿ ರೂ.ಗಳಷ್ಟು ಜಿಎಸ್‌ ಟಿ ಪಾವತಿಸಲಾಗಿದೆ ಎಂದು ವಾದಿಸಿತ್ತು. ಶೇ. 75 ರಷ್ಟು ಬೈಕ್‌ ಟ್ಯಾಕ್ಸಿ ಸೇವೆಯನ್ನು ಒದಗಿಸುತ್ತಿದ್ದು, ಪ್ರತಿಯೊಬ್ಬ ಸವಾರನೂ ಮಾಸಿಕ ರೂ. 35,000 ಸಂಪಾದನೆ ಮಾಡುತ್ತಿದ್ದಾನೆ. ಮೋಟಾರು ವಾಹನ ಕಾಯಿದೆ-1988 ರ ಪ್ರಕಾರ ಬೈಕ್‌ ಟ್ಯಾಕ್ಸಿ ಸೇವೆ ಕಾನೂನು ಬದ್ಧವಾಗಿದೆ ಎಂದೂ ವಾದಿಸಿತ್ತು. (ವರದಿ: ಎಚ್.ಮಾರುತಿ)

    ಹಂಚಿಕೊಳ್ಳಲು ಲೇಖನಗಳು