HighCourt: ವ್ಯಕ್ತಿಗೆ ಜೈಲುಶಿಕ್ಷೆ ಪ್ರಕರಣದಲ್ಲಿ ತನಿಖೆಗೆ ಅಸಹಕಾರ; ಫೇಸ್‌ಬುಕ್ ಬಂದ್ ಮಾಡುವ ಎಚ್ಚರಿಕೆ ನೀಡಿದ ಕರ್ನಾಟಕ ಹೈಕೋರ್ಟ್
Jun 15, 2023 07:36 AM IST
ಕರ್ನಾಟಕ ಹೈಕೋರ್ಟ್
ನಕಲಿ ಫೇಸ್‌ಬುಕ್ ಖಾತೆಯಲ್ಲಿ ಅವಹೇಳನಕಾರಿ ಪೋಸ್ಟ್ ಆರೋಪ ಸಂಬಂಧ ಮಂಗಳೂರು ಮೂಲದ ವ್ಯಕ್ತಿ ಸೌದಿ ಅರೇಬಿಯಾದಲ್ಲಿ ಜೈಲು ಶಿಕ್ಷೆಗೆ ಗುರಿಯಾಗಿದ್ದಾರೆ. ಪ್ರಕರಣದ ಅರ್ಜಿ ವಿಚಾರಣೆ ನಡೆಸಿರುವ ಕರ್ನಾಟಕ ಹೈಕೋರ್ಟ್ ಫೇಸ್‌ಬುಕ್ ಬಂದ್ ಮಾಡುವ ಎಚ್ಚರಿಕೆ ನೀಡಿದೆ.
ಬೆಂಗಳೂರು: ನಕಲಿ ಫೇಸ್‌ಬುಕ್ ಖಾತೆಯಲ್ಲಿ ಅವಹೇಳನಕಾರಿ ಪೋಸ್ಟ್ ಸಂಬಂಧ ಮಂಗಳೂರು ಮೂಲದ ವ್ಯಕ್ತಿ ಸೌದಿ ಅರೇಬಿಯಾದಲ್ಲಿ ಜೈಲು ಶಿಕ್ಷೆ ಅನುಭವಿಸುತ್ತಿರುವ ಪ್ರಕರಣದಲ್ಲಿ ಕರ್ನಾಟಕ ಹೈಕೋರ್ಟ್ ಫೇಸ್‌ಬುಕ್ ವಿರುದ್ಧ ಫುಲ್ ಗರಂ ಆಗಿದ್ದು, ತನಿಖೆಗೆ ಸಹಕಾರ ನೀಡದಿದ್ದರೆ ಭಾರತದಲ್ಲಿ ಫೇಸ್‌ಬುಕ್ ಬಂದ್ ಮಾಡಬೇಕಾಗುತ್ತೆ ಎಂದು ಎಚ್ಚರಿಕೆ ನೀಡಿದೆ.
ಮಂಗಳೂರಿನ ಬಿಕರನಕಟ್ಟೆ ಮೂಲದ ಶೈಲೇಶ್ ಕುಮಾರ್ ಅವರು ಪೌರತ್ವ ತಿದ್ದುಪಡಿ ಕಾಯ್ದೆ(ಸಿಎಎ) ಹಾಗೂ ರಾಷ್ಟ್ರೀಯ ನೋಂದಣಿ ಕಾಯ್ದೆ(ಎನ್‌ಸಿಆರ್) ಬೆಂಬಲಿಸಿ ಫೇಸ್‌ಬುಕ್‌ನಲ್ಲಿ ಪೋಸ್ಟ್ ಮಾಡಿದ್ದರು. ಆ ಬಳಿಕ ಇವರಿಗೆ ಬೆದರಿಕೆ ಬಂದ ಹಿನ್ನೆಲೆಯಲ್ಲಿ ಎಫ್‌ಬಿ ಖಾತೆಯನ್ನು ರದ್ದುಪಡಿಸಿ ಸುಮ್ಮನಾಗಿದ್ದರು.
ಆದರೆ 2020ರಲ್ಲಿ ಶೈಲೇಶ್ ಕುಮಾರ್ ಹೆಸರಿನಲ್ಲಿ ಫೇಸ್‌ಬುಕ್ ನಕಲಿ ಖಾತೆ ತೆರೆದು ಸೌದಿ ಅರೇಬಿಯಾದ ದೊರೆ ಹಾಗೂ ಅಲ್ಲಿನ ಧರ್ಮದ ಹೆಸರಿನಲ್ಲಿ ಅವಹೇಳನಕಾರಿ ಪೋಸ್ಟ್ ಮಾಡಲಾಗಿತ್ತು. ಈ ಪ್ರಕರಣದಲ್ಲಿ ಶೈಲೇಶ್‌ನನ್ನು ಸೌದಿ ಪೊಲೀಸರು ಬಂಧಿಸಿದ್ದರು.
ಈ ಸಂಬಂಧ ಶೈಲೇಶ್ ಪತ್ನಿ ಕವಿತಾ ಮಂಗಳೂರು ಪೊಲೀಸರಿಗೆ ದೂರು ನೀಡಿದ್ದರು. ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಿದ್ದ ಮಂಗಳೂರು ಪೊಲೀಸರು ಶೈಲೇಶ್ ಹೆಸರಿನಲ್ಲಿ ನಕಲಿ ಖಾತೆ ತೆರೆದವರ ಮಾಹಿತಿ ನೀಡುವಂತೆ ಫೇಸ್‌ಬುಕ್ ಸಂಸ್ಥೆಗೆ ಕೋರಿದ್ದರು. ಅದರೆ ಪೊಲೀಸರು ಮನವಿಗೆ ಫೇಸ್‌ಬುಕ್ ಸ್ಪಂದಿಸಿರಲಿಲ್ಲ. ಹೀಗಾಗಿ ಶೈಲೇಶ್ ಪತ್ನಿ ಕವಿತಾ 2021ರಲ್ಲಿ ಹೈಕೋರ್ಟ್ ಮೊರೆ ಹೋಗಿದ್ದರು. ಅರ್ಜಿಯ ವಿಚಾರಣೆ ನಡೆಸಿರುವ ಕೋರ್ಟ್ ಫೇಸ್‌ಬುಕ್ ಬಂದ್ ಮಾಡುವ ಎಚ್ಚರಿಕೆ ನೀಡಿದೆ.
ಸೌದಿ ದೊರೆ ಬಗ್ಗೆ ಅವಹೇಳನಕಾರಿ ಪೋಸ್ಟ್ ಹಾಕಿದ್ದ ಪ್ರಕರಣದಲ್ಲಿ ತನಿಖೆಗೆ ಸೂಕ್ತ ಸಹಕಾರ ನೀಡಬೇಕು. ಇಲ್ಲದಿದ್ದರೆ ಭಾರತದಲ್ಲೇ ಫೇಸ್‌ಬುಕ್ ಬಂದ್ ಮಾಡುವ ಆದೇಶ ನೀಡಬೇಕಾಗುತ್ತದೆ ಎಂದು ಹೇಳಿದೆ.
ನ್ಯಾಯಮೂರ್ತಿ ಕೃಷ್ಣ ಎಸ್ ದೀಕ್ಷಿತ್ ಅವರ ಪೀಠ ಅರ್ಜಿ ವಿಚಾರಣೆ ನಡೆಸಿದ್ದು, ಘಟನೆ ಸಂಬಂಧ ಒಂದು ವಾರದೊಳಗೆ ವರದಿ ಸಲ್ಲಿಸಬೇಕು ಎಂದು ಫೇಸ್‌ಬುಕ್‌ಗೆ ಸೂಚಿಸಿದೆ. ಮಂಗಳೂರು ನಗರ ಪೊಲೀಸ್ ಆಯುಕ್ತ ಕುಲದೀಪ್ ಜೈನ್ ಹಾಗೂ ಪ್ರಕರಣದ ತನಿಖಾಧಿಕಾರಿ ನಿನ್ನೆ (ಜೂನ್ 14, ಬುಧವಾರ) ನಡೆದ ವಿಚಾರಣೆಗೆ ಹಾಜರಾಗಿದ್ದರು.
ಅನಾಮಧೇಯ ವ್ಯಕ್ತಿಗಳು ಶೈಲೇಶ್ ಕುಮಾರ್ ಹೆಸರಿನಲ್ಲಿ ನಕಲಿ ಖಾತೆ ತೆರೆದು ಅವಹೇಳಕಾರಿ ಪೋಸ್ಟ್ ಮಾಡಿದ್ದ ಈ ಕೇಸ್‌ನಲ್ಲಿ ಶೈಲೇಶ್‌ಗೆ ಸೌದಿ ಅರೇಬಿಯಾ ಕೋರ್ಟ್ 15 ವರ್ಷ ಜೈಲು ಶಿಕ್ಷೆ ವಿಧಿಸಿದ್ದು, ಮೂರು ವರ್ಷಗಳಿಂದ ಅಲ್ಲಿನ ಜೈಲಿನಲ್ಲೇ ಶಿಕ್ಷೆ ಅನುಭವಿಸುತ್ತಿದ್ದಾರೆ.
ಶೈಲೇಶ್ ಕುಮಾರ್ 25 ವರ್ಷಗಳಿಂದ ಸೌದಿ ಅರೇಬಿಯಾದ ಅಲ್ ಕುಬೆಲ್ ಎಂಬಲ್ಲಿ ಉದ್ಯೋಗಿಯಾಗಿದ್ದಾರೆ. ಇವರ ಪತ್ನಿ ಕವಿತಾ ಮತ್ತು ಮಕ್ಕಳು ಮಂಗಳೂರಿನ ಬಿಕರನಕಟ್ಟೆಯಲ್ಲಿ ವಾಸವಾಗಿದ್ದಾರೆ.