Karnataka housing scheme: ವಿವಿಧ ವಸತಿ ಯೋಜನೆಗಳಲ್ಲಿ 3200 ಕೋಟಿ ರೂಪಾಯಿಗೂ ಅಧಿಕ ಅನುದಾನ; ಸದನಕ್ಕೆ ಸಚಿವ ವಿ.ಸೋಮಣ್ಣ ಮಾಹಿತಿ
Feb 13, 2023 08:02 PM IST
ವಸತಿ ಹಾಗೂ ಮೂಲಸೌಲಭ್ಯ ಅಭಿವೃದ್ಧಿ ಸಚಿವ ವಿ.ಸೋಮಣ್ಣ
Karnataka housing scheme: ವಸತಿ ಇಲಾಖೆಯಿಂದ ಅನುಷ್ಠಾನ ಮಾಡಲಾಗುತ್ತಿರುವ ವಿವಿಧ ವಸತಿ ಯೋಜನೆಗಳಿಗೆ ಪ್ರಸಕ್ತ ಆರ್ಥಿಕ ವರ್ಷ ಅಂದರೇ 2022-23ನೇ ಸಾಲಿನಲ್ಲಿ 3218.84 ಕೋಟಿ ರೂಪಾಯಿ ಅನುದಾನವನ್ನು ಹಂಚಿಕೆ ಮಾಡಲಾಗುವುದು ಎಂದು ಸಚಿವ ವಿ.ಸೋಮಣ್ಣ ತಿಳಿಸಿದರು.
ಬೆಂಗಳೂರು: ರಾಜ್ಯದಲ್ಲಿ ಪ್ರಸಕ್ತ ಆರ್ಥಿಕ ವರ್ಷದಲ್ಲಿ ವಿವಿಧ ವಸತಿ ಯೋಜನೆಗಳಲ್ಲಿ 3,200 ಕೋಟಿ ರೂಪಾಯಿಗೂ ಅಧಿಕ ಅನುದಾನ ಹಂಚಿಕೆ ಮಾಡಲಾಗುತ್ತಿದೆ ಎಂದು ವಸತಿ ಹಾಗೂ ಮೂಲಸೌಲಭ್ಯ ಅಭಿವೃದ್ಧಿ ಸಚಿವ ವಿ.ಸೋಮಣ್ಣ ವಿಧಾನಸಭೆಗೆ ತಿಳಿಸಿದೆ.
ಅವರು ಸೋಮವಾರ, ಸದಸ್ಯ ಡಾ.ಭರತ್ ಶೆಟ್ಟಿ ವೈ ಅವರ ಚುಕ್ಕೆಗುರುತಿನ ಪ್ರಶ್ನೆಗೆ ಉತ್ತರಿಸಿದರು.
ವಸತಿ ಇಲಾಖೆಯಿಂದ ಅನುಷ್ಠಾನ ಮಾಡಲಾಗುತ್ತಿರುವ ವಿವಿಧ ವಸತಿ ಯೋಜನೆಗಳಿಗೆ ಪ್ರಸಕ್ತ ಆರ್ಥಿಕ ವರ್ಷ ಅಂದರೇ 2022-23ನೇ ಸಾಲಿನಲ್ಲಿ 3218.84 ಕೋಟಿ ರೂಪಾಯಿ ಅನುದಾನವನ್ನು ಹಂಚಿಕೆ ಮಾಡಲಾಗುವುದು ಎಂದು ಸಚಿವ ವಿ.ಸೋಮಣ್ಣ ತಿಳಿಸಿದರು.
ಬಸವ ವಸತಿ ಯೋಜನೆ ಅಡಿ ಸಾಮಾನ್ಯ ವರ್ಗಕ್ಕೆ 1.20 ಲಕ್ಷ ರೂಪಾಯಿ, ಡಾ.ಬಿ.ಆರ್.ಅಂಬೇಡ್ಕರ್ ನಿವಾಸ್ ಯೋಜನೆ (ಗ್ರಾಮೀಣ ಮತ್ತು ನಗರ) ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡ ವರ್ಗಕ್ಕೆ 2 ಲಕ್ಷ ರೂಪಾಯಿ, ಪ್ರಧಾನಮಂತ್ರಿ ಆವಾಸ್ ಯೋಜನೆ ಅಡಿ ಸಾಮಾನ್ಯ ವರ್ಗಕ್ಕೆ 1.20 ಲಕ್ಷ ರೂಪಾಯಿ, ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡ ವರ್ಗಕ್ಕೆ 1.75 ಲಕ್ಷ ರೂಪಾಯಿ, ದೇವರಾಜು ಅರಸು ವಸತಿ ಯೋಜನೆ (ಗ್ರಾಮೀಣ ಮತ್ತು ನಗರ) ಯೋಜನೆಯಲ್ಲಿ ಸಾಮಾನ್ಯ ವರ್ಗಕ್ಕೆ 1.20 ಲಕ್ಷ ರೂಪಾಯಿ, ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡ ವರ್ಗಕ್ಕೆ 1.50 ಲಕ್ಷ ರೂಪಾಯಿ, ವಾಜಪೇಯಿ ನಗರ ವಸತಿ ಯೋಜನೆ ಅಡಿ ಸಾಮಾನ್ಯ ವರ್ಗಕ್ಕೆ 1.20 ಲಕ್ಷ ರೂಪಾಯಿ, ಪ್ರಧಾನಮಂತ್ರಿ ಆವಾಸ್ ಯೋಜನೆ (ನಗರ) ಅಡಿ ಸಾಮಾನ್ಯ ಮತ್ತು ಪರಿಶಿಷ್ಟ ವರ್ಗದ ಜನರಿಗೆ 1.50 ಲಕ್ಷ ರೂಪಾಯಿ ಸಹಾಯಧನವನ್ನು ಫಲಾನುಭವಿಗಳಿಗೆ ಒದಗಿಸಲಾಗುತ್ತಿದೆ ಎಂದು ಸಚಿವರು ವಿಧಾನ ಸಭೆಗೆ ವಿವರಿಸಿದರು.
ದಕ್ಷಿಣ ಕನ್ನಡ ಜಿಲ್ಲೆಗೆ 9215 ಮನೆಗಳ ಹಂಚಿಕೆ
ಕಳೆದ ಹಣಕಾಸು ವರ್ಷದಲ್ಲಿ ಅಂದರೆ 2021 ಮತ್ತು 2022ನೇ ಸಾಲಿನಲ್ಲಿ ವಿವಿಧ ವಸತಿ ಯೋಜನೆಗಳಲ್ಲಿ ದಕ್ಷಿಣ ಕನ್ನಡ ಜಿಲ್ಲೆಗೆ 9215 ಮನೆಗಳನ್ನು ಹಂಚಿಕೆ ಮಾಡಲಾಗಿದೆ. 2022 ಮತ್ತು 23ನೇ ಸಾಲಿನಲ್ಲಿ ಯಾವುದೇ ಗುರಿ ನಿಗದಿ ಮಾಡಿಲ್ಲ ಎಂದು ವಸತಿ ಹಾಗೂ ಮೂಲಸೌಲಭ್ಯ ಅಭಿವೃದ್ಧಿ ಸಚಿವ ವಿ.ಸೋಮಣ್ಣ ಸ್ಪಷ್ಟಪಡಿಸಿದರು.
ನವೆಂಬರ್ ಸಭೆಯಲ್ಲಿ ಸಿಎಂ ಏನು ಹೇಳಿದ್ದರು?
ಕಳೆದ ನವೆಂಬರ್‌ನಲ್ಲಿ ವಸತಿ ಇಲಾಖೆಯ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಸಿಎಂ ಬಸವರಾಜ ಬೊಮ್ಮಾಯಿ, ನಿರ್ಮಾಣದ ವಿವಿಧ ಹಂತಗಳಲ್ಲಿರುವ ಮನೆಗಳನ್ನು ಪೂರ್ಣಗೊಳಿಸಲು ಕ್ರಮ ವಹಿಸಬೇಕು. ಇದೊಂದು ಆಂದೋಲನದ ರೀತಿಯಲ್ಲಿ ಕೈಗೊಂಡು ಅಗತ್ಯವಿರುವ ಸಿಬ್ಬಂದಿ ಪೂರೈಸುವುದಾಗಿ ತಿಳಿಸಿದರು. ಎಲ್ಲಾ ಜಿಲ್ಲೆಗಳಿಗೆ ಭೇಟಿ ನೀಡಿ ಸಭೆ ನಡೆಸಿ ಸ್ಥಳದಲ್ಲಿಯೇ ಸಮಸ್ಯೆಗಳನ್ನು ಇತ್ಯರ್ಥಗೊಳಿಸಬೇಕು ಎಂದು ನಿರ್ದೇಶನ ನೀಡಿದ್ದರು.
ಎಲ್ಲಾ ಕೆಡಿಪಿ ಸಭೆಗಳಲ್ಲಿ ವಿವಿಧ ವಸತಿ ಯೋಜನೆಗಳಡಿ ಗೃಹ ನಿರ್ಮಾಣ ಪ್ರಮುಖ ವಿಷಯವಾಗಬೇಕು. ಹಿಂದಿನ ವರ್ಷಗಳ ಮನೆಗಳ ಪೈಕಿ 2 ಲಕ್ಷ ಹೆಚ್ಚಿನ ಮನೆಗಳು ಹಾಗೂ ಪ್ರಸಕ್ತ ಸಾಲಿನ 2 ರಿಂದ 3 ಲಕ್ಷ ಮನೆಗಳನ್ನು ಪೂರ್ಣಗೊಳಿಸಲು ಮುಖ್ಯಮಂತ್ರಿಗಳು ಸೂಚಿಸಿದರು. ನಗರ ಪ್ರದೇಶಕ್ಕೆ ಸಂಬಂಧಿಸಿದಂತೆ ಖಾಸಗಿ ಬ್ಯಾಂಕ್ ಗಳ ಮುಖ್ಯಸ್ಥರ ಸಭೆ ಕರೆದು ಸಾಲ ನೀಡುವ ನಿಯಮಗಳ ಬಗ್ಗೆ ಚರ್ಚಿಸಲು ಸೂಚಿಸಿದರು.