IFS Officer Suspend: ಅರಣ್ಯ ಪ್ರದೇಶದಲ್ಲಿ ಗಣಿಗಾರಿಕೆಗೆ ಅನುಮತಿ ಕೊಟ್ಟ ಐಎಫ್‌ಎಸ್ ಅಧಿಕಾರಿ ಸಸ್ಪೆಂಡ್
Jun 15, 2023 09:08 AM IST
ಹಾಸನ ಜಿಲ್ಲೆಯಲ್ಲಿ ಡೀಮ್ಡ್ ಅರಣ್ಯದಲ್ಲಿ ಗಣಿಗಾರಿಕೆಗೆ ಅನುಮತಿ ನೀಡಿದ ಡಿಸಿಎಫ್ ಹರೀಶ್ ಅವರನ್ನು ಅಮಾನತುಪಡಿಸಲಾಗಿದೆ.
- ಹಾಸನ ಜಿಲ್ಲೆ ಚನ್ನರಾಯಪಟ್ಟಣ ತಾಲ್ಲೂಕಿನ ದಿಡಘಟ್ಟ ಗ್ರಾಮದಲ್ಲಿ 21 ಎಕರೆ ಅರಣ್ಯ ಭೂಮಿಯಲ್ಲಿ ಕಲ್ಲು ಕ್ವಾರಿ ಗಣಿಗಾರಿಕೆ ನಡೆಸಲು ನಿರಪೇಕ್ಷಣಾ ಪತ್ರವನ್ನು ಉಪ ಅರಣ್ಯ ಸಂರಕ್ಷಣಾಧಿಕಾರಿ ಹರೀಶ್ ನೀಡಿದ್ದರು. ಮಾಹಿತಿ ಕೇಳಿದಾಗ ಇದು ಅರಣ್ಯ ಭೂಮಿಯಲ್ಲ ಎನ್ನುವ ಉತ್ತರವನ್ನೂ ನೀಡಿದ್ದರು. ದಾಖಲೆ ಪರಿಶೀಲಿಸಿದಾಗ ಇದು ಡೀಮ್ಡ್ ಅರಣ್ಯ ಎನ್ನುವುದು ಖಚಿತವಾಗಿತ್ತು.
ಬೆಂಗಳೂರು: ಸರ್ಕಾರವೇ ಹೊಸ ಗಣಿಗಾರಿಕೆಗೆ ಅನುಮತಿ ನೀಡಲು ನಿರಾಕರಿಸುತ್ತಿರುವಾಗ ಡೀಮ್ಡ್ ಅರಣ್ಯ ಪ್ರದೇಶದಲ್ಲಿ ಗಣಿಗಾರಿಕೆ ಅನುಮತಿ ಕೊಟ್ಟ ಉಪ ಅರಣ್ಯ ಸಂರಕ್ಷಣಾಧಿಕಾರಿ ತಲೆದಂಡವಾಗಿದೆ.
ಹಾಸನ ಜಿಲ್ಲಾ ಉಪಸಂರಕ್ಷಣಾಧಿಕಾರಿಯಾಗಿರುವ ಐಎಫ್‌ಎಸ್ ಅಧಿಕಾರಿ ಕೆ.ಹರೀಶ್ ಅವರನ್ನು ಅಮಾನತು ಮಾಡಲಾಗಿದೆ. ನೂತನ ಅರಣ್ಯ ಸಚಿವ ಈಶ್ವರ ಖಂಡ್ರೆ ಅವರ ಕಟ್ಟುನಿಟ್ಟಿನ ಸೂಚನೆ ಹಿನ್ನೆಲೆಯಲ್ಲಿ ಈ ಕ್ರಮ ತೆಗೆದುಕೊಳ್ಳಲಾಗಿದೆ.
ಹಾಸನ ಜಿಲ್ಲೆ ಚನ್ನರಾಯಪಟ್ಟಣ ತಾಲ್ಲೂಕಿನ ದಿಡಘಟ್ಟ ಗ್ರಾಮದಲ್ಲಿ 21 ಎಕರೆ ಅರಣ್ಯ ಭೂಮಿಯಲ್ಲಿ ಕಲ್ಲು ಕ್ವಾರಿ ಗಣಿಗಾರಿಕೆ ನಡೆಸಲು ನಿರಪೇಕ್ಷಣಾ ಪತ್ರ( ಎನ್‌ಒಸಿ)ಯನ್ನು ಉಪ ಅರಣ್ಯ ಸಂರಕ್ಷಣಾಧಿಕಾರಿ ನೀಡಿದ್ದರು. ಮಾಹಿತಿ ಕೇಳಿದಾಗ ಇದು ಅರಣ್ಯ ಭೂಮಿಯಲ್ಲ ಎನ್ನುವ ಉತ್ತರವನ್ನು ಹರೀಶ್ ನೀಡಿದ್ದರು. ದಾಖಲೆ ಪರಿಶೀಲಿಸಿದಾಗ ಇದು ಡೀಮ್ಡ್ ಅರಣ್ಯ ಎನ್ನುವುದು ಖಚಿತವಾಗಿತ್ತು.
ಈ ಕುರಿತು ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ( ಪಿಸಿಸಿಎಫ್) ಅವರಿಗೆ ದೂರು ನೀಡಲಾಗಿತ್ತು. ಅವರು ವಿಚಾರಣೆಗೆ ಸೂಚನೆ ನೀಡಿದ್ದರು. ಡೀಮ್ಡ್ ಅರಣ್ಯವನ್ನು ಯಾವುದೇ ಚಟುವಟಿಕೆಗೆ ನೀಡಲು ಅವಕಾಶವಿಲ್ಲ. ಈ ರೀತಿ ನಿರಪೇಕ್ಷಣಾ ಪತ್ರ ನೀಡುವುದು ಅರಣ್ಯ ಕಾಯಿದೆ 1980 ರ ಹಾಗೂ ಸರ್ವೋಚ್ಛ ನ್ಯಾಯಾಲದ ಸ್ಪಷ್ಟ ಉಲ್ಲಂಘನೆ. ಕರ್ನಾಟಕ ನಾಗರೀಕ ಸೇವಾ ನಿಯಮಕ್ಕೆ ವಿರುದ್ದವಾಗಿ ನಡೆದುಕೊಂಡಿರುವ ಅಧಿಕಾರಿ ವಿರುದ್ದ ಕ್ರಮ ಸೂಕ್ತ ಎಂದು ವರದಿಯಲ್ಲಿ ತಿಳಿಸಲಾಗಿತ್ತು. ಹಾಸನ ವೃತ್ತ ಸಂರಕ್ಷಣಾಧಿಕಾರಿಯಿಂದ ವರದಿ ಪಡೆದ ನಂತರ ಅಮಾನತು ಕ್ರಮ ಆಗಿದೆ.
ಪಿಸಿಸಿಎಫ್ ಸೂಚನೆ
ಅಲ್ಲದೇ ಅರಣ್ಯ ಇಲಾಖೆಯೂ ರಾಜ್ಯದಲ್ಲಿರುವ 3.3 ಲಕ್ಷ ಹೆಕ್ಟೇರ್ ಡೀಮ್ಡ್ ಅರಣ್ಯದ ಸಂರಕ್ಷಣೆಗೆ ಮಾರ್ಗಸೂಚಿಗಳನ್ನು ಪ್ರಕಟಿಸಿದ್ದು., ಅದನ್ನು ಅರಣ್ಯ ಇಲಾಖೆಯ ಪ್ರತಿಯೊಬ್ಬ ಅಧಿಕಾರಿಯು ಪಾಲಿಸಬೇಕು ಎಂದು ಪಿಸಿಸಿಎಫ್ ಕಟ್ಟುನಿಟ್ಟಿನ ಸೂಚನೆ ನೀಡಿದ್ದಾರೆ.
ರಾಜ್ಯದಲ್ಲಿ1.8 ಲಕ್ಷ ಹೆಕ್ಟೇರ್ ಅರಣ್ಯ ಭೂಮಿ ಒತ್ತುವರಿಯಾಗಿದ್ದನ್ನು ತೆರವುಗೊಳಿಸುವ ಕಾರ್ಯವೂ ನಡೆದಿದೆ. ಇದರಲ್ಲಿ ಸುಮಾರು 60 ಸಾವಿರ ಎಕರೆ ಭೂಮಿ ಗಣಿಗಾರಿಕೆ ಸೇರಿದಂತೆ ವಿವಿಧ ಚಟುವಟಿಕೆಗಳ ನೆಪದಲ್ಲಿ ಒತ್ತುವರಿಯಾಗಿದ್ದು ವಶಕ್ಕೆ ಪಡೆಯಲು ಅರಣ್ಯ ಇಲಾಖೆಗೂ ಕಷ್ಟವಾಗಿದೆ. ಇದಕ್ಕಾಗಿ ಅರಣ್ಯ ಸಚಿವ ಈಶ್ವರ ಖಂಡ್ರೆ ಅವರು ಕಂದಾಯ ಇಲಾಖೆ ಸಹಯೋಗದಲ್ಲಿ ಜಂಟಿ ಸಮೀಕ್ಷೆ ನಡೆಸಿ ಅರಣ್ಯ ಭೂಮಿ ಬಗ್ಗೆ ಇರುವ ಗೊಂದಲ ಬಗೆಹರಿಸಿಕೊಳ್ಳುವಂತೆ ಸೂಚನೆ ನೀಡಿದ್ದಾರೆ. ಈ ನಿಟ್ಟಿನಲ್ಲಿ ಸಮೀಕ್ಷೆ ಇನ್ನಷ್ಟೇ ಆರಂಭವಾಗಬೇಕಿದೆ ಎನ್ನುವುದು ಅರಣ್ಯ ಇಲಾಖೆ ಅಧಿಕಾರಿಯೊಬ್ಬರ ವಿವರಣೆ.
ಡೀಮ್ಡ್ ಅರಣ್ಯ ಎಂದರೆ ಹೇಗೆ
ಹೆಚ್ಚಿನ ಮರಗಳು, ಹಸಿರು ಪ್ರದೇಶ ಇರುವ ಅರಣ್ಯದ ರೂಪದಲ್ಲಿರುವ ಭೂಮಿ ಕಂದಾಯ ಇಲಾಖೆ ಸುಪರ್ದಿಯಿಂದ ಅರಣ್ಯಗೆ ಬಂದಿದ್ದರೆ ಅದನ್ನು ಡೀಮ್ಡ್ ಅರಣ್ಯ ಎಂದು ಕರೆಯಲಾಗುತ್ತದೆ. ಮುಂದೆ ಅರಣ್ಯವಾಗಬಲ್ಲ ಪ್ರದೇಶ ಎನ್ನುವುದು ಡೀಮ್ಡ್ ಪದ ಅರ್ಥ.
ಸುಪ್ರೀಂ ಕೋರ್ಟ್ ಆದೇಶದ ನಂತರ ಕರ್ನಾಟಕ ಸರ್ಕಾರವು ರಚಿಸಿದ ಪರಿಣಿತ ಸಮಿತಿಯು ಟಿಎನ್ ಗೋದಾವರ್ಮನ್ ತಿರುಮಲ್ಪಾಡ್ (1996) ಪ್ರಕರಣದಲ್ಲಿ 'ಡೀಮ್ಡ್ ಅರಣ್ಯಗಳನ್ನು' "ಒಡೆತನದ ಹೊರತಾಗಿಯೂ ಅರಣ್ಯಗಳ ವಿಶಿಷ್ಟತೆಯನ್ನು ಹೊಂದಿರುವ ಭೂಮಿ ಎಂದು ಗುರುತಿಸಿದೆ. ಇದರಲ್ಲಿ ದಟ್ಟವಾದ ಮರಗಳಿಂದ ಕೂಡಿದ ತೋಟಗಳು, ಕಂದಾಯ ಇಲಾಖೆಯ ಸುಪರ್ದಿಯಲ್ಲಿರುವ ದಟ್ಟ ಅರಣ್ಯ ಪ್ರದೇಶಗಳನ್ನು ಡೀಮ್ಡ್ ಅರಣ್ಯ ಎಂದು ತಿಳಿಸಲಾಗಿದೆ. ಡೀಮ್ಡ್ ಅರಣ್ಯ ಎಂದು ಜಿಲ್ಲಾಧಿಕಾರಿಯಿಂದ ಘೋಷಣೆಗೊಂಡು ರಾಜ್ಯ ಸರ್ಕಾರ ಘೋಷಣೆ ಮಾಡಿದರೆ ಅದು ಅರಣ್ಯ ಇಲಾಖೆ ಸುಪರ್ದಿಗೆ ಬರುತ್ತದೆ. ಅಂತಹ ಭೂಮಿಯನ್ನು ಅರಣ್ಯ ಉದ್ದೇಶಕ್ಕೆ ಬಳಸಬೇಕು. ಡೀಮ್ಡ್ ಅರಣ್ಯದ ಬದಲಾವಣೆ ಕೇಂದ್ರ ಸರ್ಕಾರದಿಂದಲೇ ಆಗಬೇಕು.
ವಿಭಾಗ