logo
ಕನ್ನಡ ಸುದ್ದಿ  /  ಕರ್ನಾಟಕ  /  Karnataka Industry Development: 81 ಹೊಸ ಕೈಗಾರಿಕಾ ಯೋಜನೆಗಳಿಗೆ ಅನುಮೋದನೆ

Karnataka Industry Development: 81 ಹೊಸ ಕೈಗಾರಿಕಾ ಯೋಜನೆಗಳಿಗೆ ಅನುಮೋದನೆ

HT Kannada Desk HT Kannada

Jun 17, 2022 01:30 PM IST

google News

ಸಾಂದರ್ಭಿಕ ಚಿತ್ರ

  • ಕರ್ನಾಟಕದ ಕೈಗಾರಿಕಾ ಇಲಾಖೆಯ 132ನೇ ರಾಜ್ಯ ಮಟ್ಟದ ಏಕಗವಾಕ್ಷಿ ತೆರವು ಸಮಿತಿ ಸಭೆ 81 ಹೊಸ ಯೋಜನೆಗಳಿಗೆ ಅನುಮೋದನೆ ನೀಡಿದೆ. ಇದರ ಮೌಲ್ಯ 2,689.51 ಕೋಟಿ ರೂ. ಆಗಿದ್ದು, 6,825 ಜನರಿಗೆ ಉದ್ಯೋಗಾವಕಾಶಗಳನ್ನು ಸೃಷ್ಟಿಸುವ ನಿರೀಕ್ಷೆಇದೆ.

ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ಬೆಂಗಳೂರು: ಕರ್ನಾಟಕದಲ್ಲಿ ಕೈಗಾರಿಕಾ ಬೆಳವಣಿಗೆಗೆ  ಮತ್ತಷ್ಟು ಉತ್ತೇಜನ ನೀಡಿ ಉದ್ಯೋಗಗಳ ಸೃಷ್ಟಿಗೆ ಒತ್ತು ನೀಡಿರುವ ವಾಣಿಜ್ಯ ಮತ್ತು ಕೈಗಾರಿಕೆ ಇಲಾಖೆಯು 81 ಹೊಸ ಕೈಗಾರಿಕಾ ಯೋಜನೆಗಳಿಗೆ ಗುರುವಾರ ಸಂಜೆ ಅನುಮೋದನೆ ನೀಡಿದೆ. ಈ ಯೋಜನೆಗಳಲ್ಲಿ 6,825 ಉದ್ಯೋಗ ಸೃಜನೆಯಾಗುವ ನಿರೀಕ್ಷೆ ಇದ್ದು, 2,689.51 ಕೋಟಿ ರೂಪಾಯಿ ಹೂಡಿಕೆ ನಿರೀಕ್ಷಿಸಲಾಗಿದೆ. 

ಬೃಹತ್ ಮತ್ತು ಮಧ್ಯಮ ಕೈಗಾರಿಕಾ ಸಚಿವ ಡಾ.ಮುರುಗೇಶ್ ಆರ್. ನಿರಾಣಿ ಅಧ್ಯಕ್ಷತೆಯಲ್ಲಿ ಕರ್ನಾಟಕ ಉದ್ಯೋಗಮಿತ್ರ ಕಚೇರಿಯಲ್ಲಿ ನಡೆದ 132ನೇ ರಾಜ್ಯ ಮಟ್ಟದ ಏಕಗವಾಕ್ಷಿ ತೆರವು ಸಮಿತಿ (ಎಸ್‍ಎಲ್‍ಎಸ್‍ಡಬ್ಲ್ಯುಸಿಸಿ) ಸಭೆಯು ಈ ಅನುಮೋದನೆ ನೀಡಿದೆ. 50 ಕೋಟಿ ರೂಪಾಯಿಗಿಂತ ಹೆಚ್ಚಿನ ಹೂಡಿಕೆಯ 7 ಪ್ರಮುಖ ಬೃಹತ್ ಮತ್ತು ಮಧ್ಯಮ ಗಾತ್ರದ ಕೈಗಾರಿಕಾ ಯೋಜನೆಗಳನ್ನು ಪರಿಗಣಿಸಿ ಅನುಮೋದನೆ ನೀಡಿದೆ. 

ಈ ಏಳು ಯೋಜನೆಗಳ ಮೌಲ್ಯ 1,229.43 ಕೋಟಿ ರೂಪಾಯಿ ಆಗಿದ್ದು, ರಾಜ್ಯದಲ್ಲಿ 1,734 ಜನರಿಗೆ ಉದ್ಯೋಗಾವಕಾಶಗಳನ್ನು ಸೃಷ್ಟಿಸಲಿದೆ. ಇದಲ್ಲದೆ, 15 ಕೋಟಿ ರೂಪಾಯಿಗಿಂತ ಹೆಚ್ಚು, 50 ಕೋಟಿ ರೂಪಾಯಿಗಿಂತ ಕಡಿಮೆ ಹೂಡಿಕೆಯ 71 ಹೊಸ ಯೋಜನೆಗಳಿಗೂ ಸಭೆ ಅನುಮತಿ ನೀಡಿದೆ. ಇವುಗಳ ಮೌಲ್ಯ 1,308.06 ಕೋಟಿ ರೂಪಾಯಿ ಆಗಿದ್ದು, ರಾಜ್ಯದಲ್ಲಿ 5,091 ಜನರಿಗೆ ಉದ್ಯೋಗ ಸೃಷ್ಟಿಸಲಿದೆ ಎಂದು ಸಚಿವ ಮುರುಗೇಶ್‌ ನಿರಾಣಿ ವಿಶ್ವಾಸ ವ್ಯಕ್ತಪಡಿಸಿದರು. 

151.42 ಕೋಟಿ ರೂಪಾಯಿ ಹೂಡಿಕೆಯ ಮೂರು ಯೋಜನೆಗಳಿಗೂ ಸಭೆ ಅನುಮೋದನೆ ನೀಡಿದೆ. ಒಟ್ಟಾರೆಯಾಗಿ 2,689.51 ಕೋಟಿ ರೂಪಾಯಿ ಹೂಡಿಕೆಯೊಂದಿಗೆ 6,825 ಜನರಿಗೆ ಉದ್ಯೋಗಾವಕಾಶ ಒದಗಿಸಬಹುದಾದ 81 ಯೋಜನೆಗಳಿಗೆ ಸಭೆ ಅನುಮೋದನೆ ಕೊಟ್ಟಿದೆ.  ಈ ಹಿಂದೆ ಸಚಿವ ಮುರುಗೇಶ್ ನಿರಾಣಿ ನೇತೃತ್ವದ ಎಸ್‍ಎಲ್‍ಎಸ್‍ಡಬ್ಲ್ಯುಸಿಸಿ 2022ರ ಏಪ್ರಿಲ್ 30ರಂದು ನಡೆದ 131ನೇ ಸಭೆಯಲ್ಲಿ 8,575 ಜನರಿಗೆ ಉದ್ಯೋಗಾವಕಾಶ ನೀಡುವ 2,465.94 ಕೋಟಿ ರೂಪಾಯಿಯ 60 ಕೈಗಾರಿಕಾ ಯೋಜನೆಗಳಿಗೆ ಅನುಮತಿ ನೀಡಿತ್ತು.

ವಾಣಿಜ್ಯ ಮತ್ತು ಕೈಗಾರಿಕೆ ಇಲಾಖೆಯ  ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಡಾ.ಇವಿ ರಮಣರೆಡ್ಡಿ, ಕೈಗಾರಿಕಾ ಆಯುಕ್ತೆ ಗುಂಜನ್ ಕೃಷ್ಣ, ಕೆಐಎಡಿಬಿ ಸಿಇಒ ಡಾ.ಎನ್ ಶಿವಶಂಕರ, ಕರ್ನಾಟಕ ಉದ್ಯೋಗ ಮಿತ್ರ ವ್ಯವಸ್ಥಾಪಕ ನಿರ್ದೇಶಕ ದೊಡ್ಡಬಸವರಾಜ್ ಮತ್ತು ಇತರ ಹಿರಿಯ ಅಧಿಕಾರಿಗಳು ಸಭೆಯಲ್ಲಿ ಭಾಗವಹಿಸಿದ್ದರು.

 ಅನುಮೋದನೆ ಪಡೆದುಕೊಂಡ ಪ್ರಮುಖ ಪ್ರಸ್ತಾವನೆಗಳಿವು 

  • ಪರ್ಪಲ್‍ಸ್ಟಾರ್ ಹೈಜೀನ್ ಪ್ರೈವೇಟ್ ಲಿಮಿಟೆಡ್ - 270 ಕೋಟಿ ರೂ. ಹೂಡಿಕೆ, ಉದ್ಯೋಗ ಸೃಷ್ಟಿ 400 
  • ಬೆಳಗಾವಿ ಶುಗರ್ಸ್ ಪ್ರೈವೇಟ್ 240.84 ಕೋಟಿ ರೂ. ಹೂಡಿಕೆ, ಉದ್ಯೋಗ ಸೃಷ್ಟಿ 170
  • ಪರಾತ್ಪರ ಕಾಫಿ ಲಿಮಿಟೆಡ್ 236.8 ಕೋಟಿ ರೂ. ಹೂಡಿಕೆ, ಉದ್ಯೋಗ ಸೃಷ್ಟಿ 200
  • ಲಾಜಿಕಲಿ ಇನ್ಫೋಮೀಡಿಯಾ ಪ್ರೈವೇಟ್ ಲಿಮಿಟೆಡ್- 228.19 ಕೋಟಿ ರೂ. ಹೂಡಿಕೆ,  ಉದ್ಯೋಗ ಸೃಷ್ಟಿ 614 
  • ಎಎನ್‍ಎಸ್ ಪೇಪರ್ ಪ್ರೈವೇಟ್ ಲಿಮಿಟೆಡ್ -100 ಕೋಟಿ ರೂ. ಹೂಡಿಕೆ, ಉದ್ಯೋಗ ಸೃಷ್ಟಿ 100 
  • ಗೋದಾವತ್ ಪುಡ್ ಪ್ರೋ ಪ್ರೈವೇಟ್ ಲಿಮಿಟೆಡ್ -98.60 ಕೋಟಿ ರೂ. ಹೂಡಿಕೆ, ಉದ್ಯೋಗ ಸೃಷ್ಟಿ- 30
  • ಜ್ಯೋತಿಸ್ನಾ ಲೈ-ಹೈಟೆಕ್ ಪ್ರೈವೇಟ್ ಲಿಮಿಟೆಡ್-  50 ಕೋಟಿ ರೂ. ಹೂಡಿಕೆ, ಉದ್ಯೋಗ ಸೃಷ್ಟಿ 220 

ವಿಭಾಗ

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ