JDS MLA Politics: ಕರ್ನಾಟಕದಲ್ಲಿ ಮತ್ತೊಂದು ಪಕ್ಷಾಂತರ ಸದ್ದು, ಕಾಂಗ್ರೆಸ್ ಸೆಳೆಯುವ ಪಟ್ಟಿಯಲ್ಲಿ ಜೆಡಿಎಸ್ ಶಾಸಕರು ಯಾರಿದ್ದಾರೆ?
Nov 29, 2024 08:09 PM IST
ಕರ್ನಾಟಕದಲ್ಲಿ ಜೆಡಿಎಸ್ ಶಾಸಕರನ್ನು ಸೆಳೆಯುವ ಪ್ರಯತ್ನಗಳು ಮತ್ತೆ ಶುರುವಾಗುವ ಲಕ್ಷಣ ಕಾಣಿಸುತ್ತಿವೆ.
JDS MLA Politics: ಕರ್ನಾಟಕದ ಪ್ರಮುಖ ಪ್ರಾದೇಶಿಕ ಜೆಡಿಎಸ್‌ಗೂ ಪಕ್ಷಾಂತರ ಮಾಡುವ ಶಾಸಕರಿಗೂ ಬಿಡಿಸಲಾಗದ ನಂಟು. ಪ್ರತಿ ಚುನಾವಣೆಯಲ್ಲೂ ಜೆಡಿಎಸ್ ಶಾಸಕರು ಗೆದ್ದರೂ ಅರ್ಧಕ್ಕೂ ಹೆಚ್ಚು ಪಕ್ಷಾಂತರ ಮಾಡುವುದು ನಡೆದೇ ಇದೆ. ಈ ಬಾರಿಯೂ ಈ ಚಟುವಟಿಕೆ ಶುರುವಾಗುವ ಲಕ್ಷಣಗಳು ಕಾಣುತ್ತಿವೆ.
ಕರ್ನಾಟಕದಲ್ಲೀ ಈಗಷ್ಟೇ ಮುಗಿದ ವಿಧಾನಸಭೆ ಮೂರು ಕ್ಷೇತ್ರಗಳ ಚುನಾವಣೆಯಲ್ಲಿ ಗೆದ್ದು ಬೀಗಿರುವ ಕಾಂಗ್ರೆಸ್‌ಗೆ ಮತ್ತಷ್ಟು ಶಾಸಕರ ಸಂಖ್ಯೆ ಹೆಚ್ಚಿಸುಕೊಳ್ಳುವ ಇರಾದೆಯಂತೂ ಇದೆ. ಇದಕ್ಕಿಂತ ಹೆಚ್ಚಾಗಿ ಮೊದಲಿನಿಂದಲೂ ಕೆಲ ನಾಯಕರಿಗೆ ಮಗ್ಗುಲು ಮುಳ್ಳಾಗಿರುವ ಜೆಡಿಎಸ್ ನ ಬಲು ಕುಗ್ಗಿಸಬೇಕು ಎನ್ನುವ ರಾಜಕೀಯ ಲೆಕ್ಕಾಚಾರ ಇದ್ದೇ ಇದೆ. ಇದು ಈಗಿನಿಂದ ನಡೆಯುತ್ತಿರುವುದರಿಂದ ಕರ್ನಾಟಕದಲ್ಲ ಜನತಾದಳ ವಿಭಜನೆಯಾಗಿ 1999ರಲ್ಲಿ ಜೆಡಿಎಸ್ ರೂಪುಗೊಂಡಾಗಿನಿಂದಲೂ ನಡೆದಿದೆ. ಈಗಲೂ ಅಂತಹ ಪ್ರಯತ್ನಗಳು ನಡೆಯುತ್ತಿರುವುದು ಕೆಲ ನಾಯಕರ ಹೇಳಿಕೆಯಿಂದಲೂ ಸ್ಪಷ್ಟವಾಗುತ್ತಿದೆ. ಜೆಡಿಎಸ್‌ನಲ್ಲಿ ಈಗ ಇರುವ 18 ಶಾಸಕರಲ್ಲಿ ಕನಿಷ್ಠ ಎಂಟು ಶಾಸಕರನ್ನಾದರೂ ಸೆಳೆಯುವ ಪ್ರಯತ್ನಗಳೂ ನಡೆದಿವೆ. ಕೆಲವರು ಅಸಮಾಧಾನಿತರು ಇದ್ದರೆ, ಇನ್ನು ಕೆಲವು ಶಾಸಕರು ಭವಿಷ್ಯದ ದೃಷ್ಟಿಯಿಂದ ಕಾಂಗ್ರೆಸ್ ಸೇರುವ ಯೋಚನೆಯನ್ನೂ ಇದ್ದಾರೆ.
ಜೆಡಿಎಸ್ ನಲ್ಲಿ ಸದ್ಯ ಇರುವ ಶಾಸಕರು
ಎಚ್.ಡಿ.ರೇವಣ್ಣ(ಹೊಳೆ ನರಸೀಪುರ- ಹಾಸನ ಜಿಲ್ಲೆ), ಜಿ.ಟಿ.ದೇವೇಗೌಡ( ಚಾಮುಂಡೇಶ್ವರಿ- ಮೈಸೂರು ಜಿಲ್ಲೆ), ವೆಂಕಟಶಿವಾರೆಡ್ಡಿ( ಶ್ರೀನಿವಾಸಪುರ- ಕೋಲಾರ), ಸಿ.ಬಿ.ಸುರೇಶ್ ಬಾಬು( ಚಿಕ್ಕನಾಯಕನಹಳ್ಳಿ- ತುಮಕೂರು), ಎ.ಮಂಜು( ಅರಕಲಗೂಡು- ಹಾಸನ ಜಿಲ್ಲೆ), ಎಂ.ಟಿ.ಕೃಷ್ಣಪ್ಪ( ತುರುವೇಕೆರೆ- ತುಮಕೂರು), ಶಾರದಾ ಪೂರ್ಯಾನಾಯಕ್( ಶಿವಮೊಗ್ಗ ಗ್ರಾಮಾಂತರ- ಶಿವಮೊಗ್ಗ ಜಿಲ್ಲೆ), ಸಿ.ಎನ್.ಬಾಲಕೃಷ್ಣ( ಚನ್ನರಾಯಪಟ್ಟಣ- ಹಾಸನ ಜಿಲ್ಲೆ), ನೇಮಿರಾಜ ನಾಯಕ್( ಹಗರಿಬೊಮ್ಮನಹಳ್ಳಿ-ವಿಜಯನಗರ ಜಿಲ್ಲೆ), ರಾಜುಗೌಡ ಪಾಟೀಲ್( ದೇವರಹಿಪ್ಪರಗಿ-ವಿಜಯಪುರ), ಶರಣಗೌಡ ಕಂದಕೂರ( ಗುರುಮಿಟ್ಕಲ್- ಯಾದಗಿರಿ ಜಿಲ್ಲೆ), ಕರೆಮ್ಮ ನಾಯಕ್( ದೇವದುರ್ಗ- ರಾಯಚೂರು ಜಿಲ್ಲೆ), ಸ್ವರೂಪ್ ಪ್ರಕಾಶ್( ಹಾಸನ ನಗರ), ಸಮೃದ್ದಿ ಮಂಜುನಾಥ್( ಮುಳಬಾಗಿಲು- ಕೋಲಾರ), ಬಿ.ಎನ್.ರವಿಕುಮಾರ್( ಶಿಡ್ಲಘಟ್ಟ- ಚಿಕ್ಕಬಳ್ಳಾಪುರ), ಎಚ್.ಟಿ.ಮಂಜು( ಕೆಆರ್‌ಪೇಟೆ- ಮಂಡ್ಯ), ಎಂ.ಆರ್.ಮಂಜುನಾಥ್( ಹನೂರು- ಚಾಮರಾಜನಗರ ಜಿಲ್ಲೆ), ಜಿ.ಡಿ.ಹರೀಶ್ ಗೌಡ( ಹುಣಸೂರು-ಮೈಸೂರು ಜಿಲ್ಲೆ).
ಯಾರ ಮೇಲೆ ಕಣ್ಣಿದೆ
ಜೆಡಿಎಸ್‌ನಲ್ಲಿದ್ದರೂ ಕೆಲವರಿಗೆ ಬೇಸರವಿದೆ. ಅದರಲ್ಲೂ ಕೆಲವರಿಗೆ ಬಿಜೆಪಿಯೊಂದಿಗೆ ಮೈತ್ರಿ ಮಾಡಿಕೊಂಡ ಬಗ್ಗೆ ಅಸಮಾಧಾನವಿದ್ದರೆ, ಇನ್ನು ಕೆಲವರು ಹುದ್ದೆ ಸಿಗದದ್ದಕ್ಕೆ ಬಹಿರಂಗವಾಗಿಯೇ ಹೇಳಿಕೆ ನೀಡುತ್ತಿದ್ದಾರೆ. ಈ ಹಿಂದೆ ಗುರಮಿಟ್ಕಲ್ ಶಾಸಕ ಶರಣಗೌಡ ಕಂದಕೂರ ಬಹಿರಂಗವಾಗಿಯೇ ಹೇಳಿಕೆ ನೀಡಿದ್ದರು. ಅವರೂ ಕೂಡ ಈಗ ಮೌನವಾಗಿದ್ದರೂ, ಕಾಂಗ್ರೆಸ್ ಕಡೆ ದೃಷ್ಟಿ ನೆಟ್ಟಿದ್ದಾರೆ. ಮೈಸೂರಿನ ಹಿರಿಯ ಶಾಸಕ ಹಾಗೂ ಸಿಎಂ ಸಿದ್ದರಾಮಯ್ಯ ಅವರ ಒಂದು ಕಾಲದ ಒಡನಾಡಿ ಜಿ.ಟಿ.ದೇವೇಗೌಡ ಅವರಿಗೆ ವಿಧಾನಸಭೆಯಲ್ಲಿ ಪಕ್ಷದ ನಾಯಕನ ಸ್ಥಾನ ನೀಡದ್ದಕ್ಕೆ ಬೇಸರವಿದೆ. ಹಿಂದೆ ಒಮ್ಮೆ ಬೇಸರಗೊಂಡು ಬಿಜೆಪಿ ಸೇರಿ ಅಲ್ಲಿ ಸೋತು ಜೆಡಿಎಸ್‌ಗೆ ಮರಳಿದ್ದವರು ಜಿ.ಟಿ.ದೇವೇಗೌಡ. ವರ್ಷದ ಹಿಂದೆ ನಡೆದಿದ್ದ ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್‌ಗೆ ಹೋಗಲು ಅಣಿಯಾಗಿದ್ದರೂ ಅಪ್ಪ ಮಗನಿಗೆ ಟಿಕೆಟ್ ಸಿಗುವುದು ಅಸಾಧ್ಯವಾಗಿದ್ದರಿಂದ ಜೆಡಿಎಸ್‌ನಲ್ಲೇ ಉಳಿದು ಜಿಟಿಡಿ ಹಾಗೂ ಅವರ ಪುತ್ರ ಹರೀಶ್‌ಗೌಡ ಗೆದ್ದಿದ್ದಾರೆ. ಜಿಟಿಡಿ ಸ್ವಂತ ಬಲ ಇರುವ ನಾಯಕ. ಆದರೆ ಅವರಿಗೆ ಜೆಡಿಎಸ್ ಬಲವೂ ಬೇಕು. ಈಗಲೂ ಕಾಂಗ್ರೆಸ್ ನೊಂದಿಗೆ ಸಂಪರ್ಕದಲ್ಲಿದ್ದಾರೆ. ಮುಂದೆ ಮಗನಿಗೆ ಚಾಮುಂಡೇಶ್ವರಿ ಕ್ಷೇತ್ರದಿಂದ ಟಿಕೆಟ್ ಪಡೆದು ಕಾಂಗ್ರೆಸ್ ಸೇರುವ ಲೆಕ್ಕಾಚಾರವೂ ಅವರಲ್ಲಿದೆ.
ಹಿಂದೆ ಬಿಜೆಪಿಯಲ್ಲಿ ಶಾಸಕರಾಗಿದ್ದ ನೇಮಿರಾಜನಾಯಕ್ ಕಾಂಗ್ರೆಸ್‌ಗೆ ಹೋಗುವ ಸಾಧ್ಯತೆ ಕಡಿಮೆ. ಬಿಜೆಪಿ ಕಡೆಗೆ ವಾಲಬಹುದು. ಶಿವಮೊಗ್ಗ ಗ್ರಾಮಾಂತರ ಶಾಸಕಿ ಎರಡನೇ ಬಾರಿ ಗೆದ್ದಿದ್ದು ಅವರಿಗೂ ಕಾಂಗ್ರೆಸ್‌ಗೆ ಬರುವ ಒತ್ತಡವಿದೆ. ಆದರೆ ಅವರು ಸದ್ಯಕ್ಕೆ ಹೋಗುವ ಸಾಧ್ಯತೆ ಕಡಿಮೆ. ಶಿವಮೊಗ್ಗದಲ್ಲಿ ಬಿಜೆಪಿ ಬಲ ಇರುವುದರಿಂದ ಅತ್ತ ಕಡೆ ವಾಲಲೂ ಬಹುದು ಎನ್ನಲಾಗುತ್ತಿದೆ.
ಕಾಂಗ್ರೆಸ್, ಬಿಜೆಪಿ ಎರಡೂ ಪಕ್ಷದಿಂದ ಹಿಂದೆ ಗೆದ್ದಿರುವ ಎ.ಮಂಜು ಅವರನ್ನು ಕಾಂಗ್ರೆಸ್ ಕಡೆ ಸೆಳೆಯುವ ಯತ್ನಗಳು ನಡೆದಿವೆ. ಅವರ ಪುತ್ರ ಮಂಥರ್ ಗೌಡ ಕಾಂಗ್ರೆಸ್‌ನ ಮಡಿಕೇರಿ ಶಾಸಕ. ಮುಳಬಾಗಿಲಿನ ಶಾಸಕ ಸಮೃದ್ದಿ ಮಂಜುನಾಥ್ ಕೂಡ ಮೈತ್ರಿಗೆ ವಿರೋಧ ವ್ಯಕ್ತಪಡಿಸಿ ಅವರು ಕಾಂಗ್ರೆಸ್ ಕಡೆಗೆ ಹೋಗಬಹುದು ಎನ್ನುವ ಲೆಕ್ಕಾಚಾರವಿದೆ. ಕೋಲಾರದ ಹಿರಿಯ ಶಾಸಕ ವೆಂಕಟಶಿವಾರೆಡ್ಡಿ ಕಾಂಗ್ರೆಸ್‌ನಲ್ಲಿದ್ದವರು. ಅವರ ಕಡೆಯೂ ಕೈ ನಾಯಕರ ಚಿತ್ತವಿದೆ. ಹನೂರು ಶಾಸಕ ಮಂಜುನಾಥ್‌ಗೆ ಮುಂದೆ ಕಾಂಗ್ರೆಸ್ ಟಿಕೆಟ್ ಸಿಕ್ಕರೆ ಅತ್ತ ಕಡೆ ಹೋದರೂ ಅಚ್ಚರಿಯಿಲ್ಲ. ವಿಜಯಪುರದ ದೇವರಹಿಪ್ಪರಗಿ ಶಾಸಕ ರಾಜುಗೌಡ ಅವರನ್ನು ಬಿಜೆಪಿ ಹಾಗೂ ಕಾಂಗ್ರೆಸ್‌ನವರು ಸಂಪರ್ಕಿಸುತ್ತಿದ್ದಾರೆ. ಸಚಿವ ಎಂ.ಬಿ.ಪಾಟೀಲ್ ಪ್ರಯತ್ನಿಸಿದರೆ ಅವರು ಕಾಂಗ್ರೆಸ್ ಸೇರಲೂಬಹುದು. ದೇವದುರ್ಗ ಶಾಸಕಿ ಕರೆಮ್ಮ ನಾಯಕ್ ಅವರನ್ನೂ ಕಾಂಗ್ರೆಸ್ ಸಂಪರ್ಕಿಸಿದೆ. ಅವರೂ ಪರಿಸ್ಥಿತಿ ನೋಡಿಕೊಂಡು ಕಾಂಗ್ರೆಸ್ ಕಡೆ ವಾಲಲೂ ಬಹುದು. ಇದರಿಂದ ಕನಿಷ್ಠ ಹತ್ತು ಶಾಸಕರನ್ನು ಸೆಳೆಯುವ ಚಟುವಟಿಕೆಯಂತೂ ನಡೆದಿದೆ
ಜೆಡಿಎಸ್‌ನಿಂದ ಪಕ್ಷಾಂತರ ಹೊಸದಲ್ಲ
ಹಾಗೆ ನೋಡಿದರೆ ಜೆಡಿಎಸ್‌ನಿಂದ ಕಾಂಗ್ರೆಸ್, ಬಿಜೆಪಿಗೆ ಹೋಗುವ ಪರ್ವ ಹೊಸದೇನೂ ಅಲ್ಲ. ಈವರೆಗಿನ ಆರು ವಿಧಾನಸಭೆ ಚುನಾವಣೆಯಲ್ಲಿ ಜೆಡಿಎಸ್ ನಿರೀಕ್ಷೆಯಷ್ಟು ಫಲಿತಾಂಶ ಪಡೆಯದೇ ಇದ್ದರೂ ಹೆಚ್ಚಿನ ಶಾಸಕರು ಗೆದ್ದು ಬರುತ್ತಿದ್ದಾರೆ ಜೆಡಿಎಸ್‌ಗೆ 2023ರ ಚುನಾವಣೆಯಲ್ಲಿ 19 ಶಾಸಕರು, 2018ರಲ್ಲಿ 37 ಶಾಸಕರು, 2013ರಲ್ಲಿ 40 ಶಾಸಕರು, 2008ರಲ್ಲಿ 28 ಶಾಸಕರು, 2004ರ ವಿಧಾನಸಭಾ ಚುನಾವಣೆಯಲ್ಲಿ 58 ಶಾಸಕರು ಆರಿಸಿ ಬಂದಿದ್ದಾರೆ. 1999ರಲ್ಲಿ ಜೆಡಿಎಸ್ ರೂಪುಗೊಂಡ ಚುನಾವಣೆಯಲ್ಲಿ 10 ಶಾಸಕರು ಮಾತ್ರ ಗೆದ್ದಿದ್ದರು. ಆಗ ಜೆಡಿಯುನಿಂದ ಶಾಸಕರಾದವರು 18 ಮಂದಿ. ಪ್ರತಿ ಚುನಾವಣೆ ನಂತರವೂ ಹಲವು ಶಾಸಕರು ಪಕ್ಷ ಬಿಟ್ಟು ಹೋದ ಬೆಳವಣಿಗೆ ನಡೆದಿದೆ.2004ರಲ್ಲಿ ಗೆದ್ದು ಸಿದ್ದರಾಮಯ್ಯ, ಡಾ.ಮಹದೇವಪ್ಪ, ಬಿ.ಆರ್.ಪಾಟೀಲ್ ಸಹಿತ ಹಲವು ನಾಯಕರು ಕಾಂಗ್ರೆಸ್ ಸೇರಿದರು. 2013ರ ಹೊತ್ತಿಗೆ ಉಮೇಶ್ ಕತ್ತಿ. ಬಾಲಚಂದ್ರ ಜಾರಕಿಹೊಳಿ, ಸುಭಾಷ್ ಗುತ್ತೇದಾರ್ ಸಹಿತ ಹಲವರು ಜೆಡಿಎಸ್ ಬಿಟ್ಟು ಬಿಜೆಪಿ ಸೇರಿಕೊಂಡರು. 2018ಕ್ಕೂ ಮೊದಲು ಕಾಂಗ್ರೆಸ್ ಸೇರಿದವರು ಚಲುವರಾಯಸ್ವಾಮಿ, ಜಮೀರ್ ಅಹಮ್ಮದ್ ಖಾನ್, ಮಾಗಡಿ ಬಾಲಕೃಷ್ಣ ಇತರರು. 2019ಲ್ಲಿ ಎಚ್. ವಿಶ್ವನಾಥ್ , ಗೋಪಾಲಯ್ಯ ಸಹಿತ ಹಲವರು ಪಕ್ಷಾಂತರ ಮಾಡಿದರು. ಈ ಬಾರಿ ಶಿವಲಿಂಗೇಗೌಡ ಕೂಡ ಪಕ್ಷ ಬಿಟ್ಟರು. ಹೀಗೆ ಪ್ರತಿ ಚುನಾವಣೆ ನಂತರ ಪಕ್ಷಾಂತರ ಜೆಡಿಎಸ್ ನಿಂದ ಮುಂದುವರಿದಿದೆ. ಈ ವರ್ಷದ ಪಕ್ಷಾಂತರಕ್ಕೆ ಮತ್ತೆ ಚಾಲನೆ ಕೊಡುವ ಬೆಳವಣಿಗೆಗಳೂ ನಡೆದಿವೆ.