Kalaburagi News: ಬಾರದ ಮಳೆ, ಮುಗಿಲಿನತ್ತ ನೋಡುತ್ತಿರುವ ಅನ್ನದಾತ; ವರುಣನ ಆಗಮನಕ್ಕಾಗಿ ಕಾಯುತ್ತಿರುವ ಭೂಮಿತಾಯಿ
Jun 24, 2023 02:23 PM IST
ಮಳೆಗಾಗಿ ಕಾಯುತ್ತಿರುವ ಅನ್ನದಾತ
- Monsoon 2023: ಬಿಸಿಲೂರು ಕಲಬುರಗಿ ಜಿಲ್ಲೆಯ ಅನ್ನದಾತ ಬಿತ್ತನೆಗೆ ಸಿದ್ಧತೆ ಮಾಡಿಕೊಂಡಿದ್ದಾನೆ. ಕೃಷಿ ಇಲಾಖೆ ಈ ಬಿತ್ತನೆಗೆ ಬೇಕಾಗಿರುವ ಬೀಜ, ರಸಗೊಬ್ಬರು ದಾಸ್ತಾನು ಮಾಡಿಕೊಂಡಿದೆ. ಆದರೆ, ಮುಂಗಾರು ಮಳೆ ಬಾರದೆ ಇರುವುದರಿಂದ ಅನ್ನದಾತ ಮುಗಿಲಿನತ್ತ ಮುಖ ಮಾಡಿ ವರುಣ ದೇವರನ್ನು ಪ್ರಾರ್ಥನೆ ಮಾಡುತ್ತಿದ್ದಾರೆ.
ಕಲಬುರಗಿ: ದೇಶದ ಬೆನ್ನಲು ಅನ್ನದಾತ. ಈ ಅನ್ನದಾತನಿಗೆ ಜಮೀನು ಭೂಮಿತಾಯಿ. ಪ್ರತಿ ವರ್ಷ ವರುಣನ ಕೃಪೆಯಿಂದ ಈ ಭೂಮಿತಾಯಿ ಅನ್ನದಾತನಿಗೆ ಉತ್ತಮ ಫಸಲು ನೀಡುತ್ತಿರುವುದರಿಂದ ಅನ್ನದಾತ ಋಷಿಯಿಂದ ಜೀವನ ಸಾಗಿಸುತ್ತ ಜನತೆಗೆ ಬೆಳೆ ನೀಡಿ ಸಂತೃಪ್ತಿ ಜೀವನಕ್ಕೆ ನಾಂದಿ ಹಾಡುತ್ತಿದ್ದ. ಆದರೆ ಈ ವರ್ಷ ವರುಣ ದೇವ ಮುನಿಸಿಕೊಂಡಿರುವುದರಿಂದ ಜೂನ್ ತಿಂಗಳ ಆರಂಭದಲ್ಲಿ ಬರಬೇಕಾಗಿರುವ ಮುಂಗಾರು ಮಳೆ ತಿಂಗಳ ಅಂತ್ಯಕ್ಕೂ ಬಾರದೆ ಇರುವುದರಿಂದ ಭೂಮಿತಾಯಿ ತನ್ನ ಒಡಲಲ್ಲಿ ನೀರಿಲ್ಲದೆ ಬತ್ತಿ ಹೋಗುತ್ತಿದ್ದಾಳೆ.
ವರುಣ ದೇವ ಏಕೆ ಮುನಿಸಿಕೊಂಡಿರುವೆ, ನಿನ್ನ ಕೃಪೆ ಇಲ್ಲದೆ ನಾನು ಈ ಅನ್ನದಾತನಿಗೆ ಫಸಲು ನೀಡಲು ಆಗದು. ಈ ಫಸಲು ಬಾರದೆ ಇದ್ದರೆ ನನ್ನನ್ನೆ ನಂಬಿರುವ ಅನ್ನದಾತರು ಸಾವಿನ ದಾರಿ ತುಳಿಯಲಿದ್ದಾರೆ ಜೊತೆಗೆ ಆಹಾರ ಧಾನ್ಯಗಳನ್ನು ನಂಬಿ ಜೀವನ ಸಾಗಿಸುತ್ತಿರುವ ನನ್ನ ಮಕ್ಕಳು (ಸಾರ್ವಜನಿಕರು) ಬೆಳೆ ಕಾಳಿಗಾಗಿ ಹಾಹಾಕಾರ ಪಡಬೇಕಾಗುತ್ತದೆ. ಬೇಡ ವರುಣ ಮುನಿಸು ಬಿಡು ಬಾ ಬೇಗ ಧರೆಗಿಳಿದು ಬಂದು ತನ್ನನ್ನು ತಂಪಾಗಿಸುವ ಮೂಲಕ ಈ ಭೂಮಿಯಲ್ಲಿ ಫಸಲು ಬೆಳೆಯಲು ನೆರವಾಗು ಎಂದು ಭೂಮಿತಾಯಿ ವರುಣ ದೇವನನ್ನು ಪ್ರಾರ್ಥಿಸುವ ಪರಿ ಇದಾಗಿದೆ.
ಅನ್ನದಾತರ ಆತಂಕ
ಬಿಸಿಲೂರು ಕಲಬುರಗಿ ಜಿಲ್ಲೆಯ ಅನ್ನದಾತ ಬಿತ್ತನೆಗೆ ಸಿದ್ಧತೆ ಮಾಡಿಕೊಂಡಿದ್ದಾನೆ. ಕೃಷಿ ಇಲಾಖೆ ಈ ಬಿತ್ತನೆಗೆ ಬೇಕಾಗಿರುವ ಬೀಜ, ರಸಗೊಬ್ಬರು ದಾಸ್ತಾನು ಮಾಡಿಕೊಂಡಿದೆ. ಆದರೆ, ಮುಂಗಾರು ಮಳೆ ಬಾರದೆ ಇರುವುದರಿಂದ ಅನ್ನದಾತ ಮುಗಿಲಿನತ್ತ ಮುಖ ಮಾಡಿ ವರುಣ ದೇವರನ್ನು ಪ್ರಾರ್ಥನೆ ಮಾಡುತ್ತಿದ್ದಾರೆ. ಆದರೆ ವರುಣ ದೇವನ ಕೃಪ ಕಟಾಕ್ಷೆ ಇನ್ನು ಬೀಳದೆ ಇರುವುದರಿಂದ ಭೂಮಿತಾಯಿ ಮತ್ತು ಅನ್ನದಾತ ಚಿಂತಿತರಾಗಿದ್ದಾರೆ.
ಜೂನ್ ತಿಂಗಳಲ್ಲಿ 78 ಮಿ.ಮೀ ಮಳೆ ಬರಬೇಕಿತ್ತಾದರೂ ಕೇವಲ 24 ಮಿ.ಮೀ.ಮಳೆ ಬಂದಿರುವುದು ಅನ್ನದಾತರಲ್ಲಿ ಆತಂಕ ಹೆಚ್ಚಿಸಿದೆ. ಜೂನ್‌ನಲ್ಲಿ ಮಳೆ ಬರದಿದ್ದರೆ ಉದ್ದು, ಹೆಸರು ಬೆಳೆ ತೆಗೆದುಕೊಂಡು ತೊಗರಿ ಬಿತ್ತನೆ ಮಾಡಬೇಕೆಂದು ರೈತರು ಕಾದು ಕುಳಿತಿದ್ದರು. ಆದರೆ, ಸಕಾಲಕ್ಕೆ ಮಳೆ ಬಾರದೆ ಇರುವುದರಿಂದ ಅನ್ನದಾತರ ಲೆಕ್ಕಾಚಾರ ತಲೆಕೆಳಗಾಗಿದೆ.
ಅಚ್ಚರಿವೆಂದರೆ ಮಿನಿ ಮಲೆನಾಡು ಎಂದೇ ಕರೆಯಲಾಗುವ ಜಿಲ್ಲೆಯ ಚಿಂಚೋಳಿ ತಾಲೂಕಿನ ಕೊಂಚಾರವಂ ಪ್ರದೇಶದಲ್ಲಿ ಆರಂಭದ ವೇಳೆ ಉತ್ತಮ ಮಳೆಯಾಗಿದ್ದರಿಂದ ಉದ್ದು, ಹೆಸರು ಬಿತ್ತನೆಯಾಗಿ ನಾಟಿಯಾಗಿದೆ. ಇಲ್ಲಿ ಶೇ.19ರಷ್ಟು ಪ್ರಮಾಣದಲ್ಲಿ ಬಿತ್ತನೆಯಾಗಿದ್ದು, ಈಗ ಮಳೆ ಕೈ ಕೊಟ್ಟಿರುವುದರಿಂದ ಬಿತ್ತನೆಯಾದ ಬೆಳೆ ಬಾಡಿ ಬೆಂಡಾಗುತ್ತಿರುವುದು ಅನ್ನದಾತರಲ್ಲಿ ಆತಂಕ ದ್ವಿಗುಣಗೊಂಡಿದೆ.
ಜೂನ್ 25ರ ಬಳಿಕ ಮಳೆ ಬರುವ ನಿರೀಕ್ಷೆ
ಜೂನ್ ತಿಂಗಳ ಮೊದಲ ವಾರ ಮಳೆ ಬಂದಿದ್ದರೆ ರೈತರು ಉದ್ದು ಮತ್ತು ಹೆಸರು ಬಿತ್ತನೆ ಮಾಡುತ್ತಿದ್ದರು. ಮಳೆ ವಿಳಂಬದಿಂದಾಗಿ ಎರಡು ಬೆಳೆಗಳನ್ನು ರೈತರು ಕಳೆದುಕೊಂಡಂತಾಗಿದೆ. ಕಳೆದ ಬಾರಿ ಪ್ರವಾಹದಿಂದ ಈ ಬೆಳೆ ಕಳೆದುಕೊಂಡಿದ್ದ ಅನ್ನದಾತ ಈ ಬಾರಿಯಾದರೂ ಪಡೆಯಬೇಕೆಂಬ ನಿರೀಕ್ಷೆ ಹುಸಿಯಾಗಿದೆ. ಈ ಬೀಜ ಮತ್ತು ಗೊಬ್ಬರ ಖರೀದಿ ಮಾಡಿಕೊಂಡು ಇಟ್ಟಿದ್ದ ಅನ್ನದಾತನಿಗೆ ನಿರಾಸೆಯಾಗಿದ್ದು, ಜೂನ್ 25 ರಿಂದ ಮಳೆ ಬರುವ ನಿರೀಕ್ಷೆ ಇದ್ದು, ಇದಾದರೆ ಉದ್ದಾದರೂ ಬೆಳೆಯಬಹುದು ಎಂಬ ನಿರೀಕ್ಷೆಯಲ್ಲಿದ್ದಾರೆ.
ಜಿಲ್ಲೆಯಲ್ಲಿ ಶೇ. 70ರಷ್ಟು ಮಳೆ ಕೊರತೆ
ಜಿಲ್ಲೆಯಲ್ಲಿ ಜೂನ್ ಮೊದಲ ವಾರದಲ್ಲಿ ಮಳೆ ಬರದೆ ಇರುವುದರಿಂದ ಜಿಲ್ಲೆಯಲ್ಲಿ ಜೂನ್ ತಿಂಗಳಲ್ಲೇ ಶೇ.70ರಷ್ಟು ಮಳೆ ಕೊರತೆಯಾಗಿದೆ. ಜಿಲ್ಲೆಯ ಅಫಜಲಪುರ ತಾಲೂಕಿನಲ್ಲಿ ಶೇ.95ರಷ್ಟು, ಆಳಂದ ತಾಲೂಕಿನಲ್ಲಿ 90ರಷ್ಟು, ಚಿಂಚೋಳಿಯಲ್ಲಿ 36 ರಷ್ಟು, ಚಿತ್ತಾಪುರ ತಾಲೂಕಿನಲ್ಲಿ 62ರಷ್ಟು, ಕಲಬುರಗಿ ತಾಲೂಕಿನಲ್ಲಿ 81ರಷ್ಟು, ಜೇವರ್ಗಿ ತಾಲೂಕಿನಲ್ಲಿ 75ರಷ್ಟು, ಸೇಡಂ ತಾಲೂಕಿನಲ್ಲಿ 33ರಷ್ಟು, ಕಾಳಗಿ ತಾಲೂಕಿನಲ್ಲಿ 72ರಷ್ಟು, ಕಮಲಾಪುರ ತಾಲೂಕಿನಲ್ಲಿ 58ರಷ್ಟು, ಯಡ್ರಾಮಿ ತಾಲೂಕಿನಲ್ಲಿ 94ರಷ್ಟು ಮತ್ತು ಶಹಾಬಾದ್ ತಾಲೂಕಿನಲ್ಲಿ ಶೇ.72ರಷ್ಟು ಮಳೆ ಕೊರತೆಯಾಗಿದೆ.
ಮೂರು ತಾಲೂಕುಗಳಲ್ಲಿ ಬಿತ್ತನೆ
ಮಳೆ ಕೊರತೆ ಮಧ್ಯೆಯೂ ಜಿಲ್ಲೆಯ ಚಿಂಚೋಳಿ, ಕಮಲಾಪುರ ಮತ್ತು ಸೇಡಂ ತಾಲೂಕುಗಳಲ್ಲಿ ಬಿತ್ತನೆರಯಾಗಿದೆ. ಮಳೆ ಬರಬಹುದು ಎಂಬ ಭರವಸೆಯೊಂದಿಗೆ ಬಿತ್ತನೆ ಮಾಡಲಾಗಿದ್ದು, ಚಿಂಚೋಳಿಯಲ್ಲಿ ಶೇ 19, ಕಮಲಾಪುರದಲ್ಲಿ ಶೇ.3, ಸೇಡಂನಲ್ಲಿ ಶೇ.7ರಷ್ಟು ಬಿತ್ತನೆ ಮಾಡಲಾಗಿದೆ. ಬಿತ್ತನೆಯಾದ ಬೆಳೆ ಮೊಳಕೆ ಹಂತದಲ್ಲಿದ್ದು, ಹತ್ತಿ ಬೆಳೆ 2-3 ಎಲೆಗಳೂ ಬಿಡುವ ಹಂತದಲ್ಲಿದೆ.
ಹೆಚ್ಚಿನ ತೊಗರಿ ಬಿತ್ತನೆ ಗುರಿ
ಮಳೆ ಕೊರತೆಯಿಂದಾಗಿ ಉದ್ದು, ಹೆಸರು ಬಿತ್ತನೆ ಮಾಡುವುದು ಕಷ್ಟ ಹೀಗಾಗಿ ಈ ಬಾರಿ ಕೃಷಿ ಇಲಾಖೆ ಗುರಿಗಿಂತಲೂ ಹೆಚ್ಚು ಕ್ಷೇತ್ರದಲ್ಲಿ ತೊಗರಿ ಬಿತ್ತನೆ ಮಾಡುವ ಯೋಜನೆ ರೂಪಿಸಿದೆ. ಆರಂಭದಲ್ಲಿ 5 ಲಕ್ಷ ಹೆಕ್ಟೇರ್‌ನಲ್ಲಿ ಬಿತ್ತನೆ ಗುರಿ ಹೊಂದಿದ್ದ ಇಲಾಖೆ ಮಳೆ ವಿಳಂಬದಿಂದಾಗಿ ತೊಗರಿ ಕ್ಷೇತ್ರವನ್ನು 6 ಲಕ್ಷ ಹೆಕ್ಟೇರ್ ಗಿಂತಲೂ ಹೆಚ್ಚಿನ ಪ್ರಮಾಣದಲ್ಲಿ ಗುರಿ ವಿಸ್ತರಿಸಿಕೊಂಡಿದೆ. ಕಳೆದ ವರ್ಷ ನೆಟೆರೋಗದಿಂದ ಅಪಾರ ಪ್ರಮಾಣದಲ್ಲಿ ತೊಗರಿ ನಷ್ಟವಾಗಿದ್ದರಿಂದ ಈ ಬಾರಿ ರೈತರು ಈ ಬೆಳೆ ಮೇಲೆ ಅಷ್ಟೊಂದು ಒಲವು ಇಲ್ಲವೆಂದು ಭಾವಿಸಲಾಗಿತ್ತು. ಆದರೆ, ಮಳೆ ಕೈಕೊಟ್ಟಿರುವುದರಿಂದ ತೊಗರಿಯತ್ತ ಒಲವು ಹೊಂದುವಂತೆ ಮಾಡಿದೆ. ಈ ಬಾರಿ ತೊಗರಿ ದರವೂ ಭಾರಿ ಪ್ರಮಾಣದಲ್ಲಿ ಹೆಚ್ಚಿದ್ದರಿಂದ ರೈತರಿಗೆ ಹೆಚ್ಚು ಒಲವು ಹೆಚ್ಚಾಗಿದೆ. ಕ್ಷೇತ್ರಕ್ಕೆರ ತಕ್ಕಂತೆ ಬಿತ್ತನೆ ಬೀಜಗಳ ವ್ಯವಸ್ಥೆ ಮಾಡಿಕೊಳ್ಳಲಾಗಿದೆ ಎನ್ನುತ್ತಾರೆ ಕೃಷಿ ಅಧಿಕಾರಿಗಳು. ಈ ಬಾರಿ ತೊಗರಿ ಜತೆಗೆ ಹತ್ತಿ ಕ್ಷೇತ್ರವೂ ವಿಸ್ತಾರವಾಗುವ ಸಾಧ್ಯತೆ ಇದೆ. ಹತ್ತಿಗೆ ಉತ್ತಮ ದರ ಇದ್ದು, ಜೇವರ್ಗಿ, ಅಫಜಲಪುರ, ಚಿತ್ತಾಪುರ ತಾಲೂಕುಗಳಲ್ಲಿ ಇದು ಹೆಚ್ಚಾಗುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ.
ಜೂನ್ 25ರ ನಂತರ ಮಳೆ ಬರುವ ಮುನ್ಸೂಚನೆ ಇದೆ. ಕಳೆದ ವರ್ಷವೂ ಇದೆ ಅವಧಿಯಲ್ಲಿ ಮಳೆ ಬಂದಿತ್ತು. ಮಳೆ ಬಂದು ಭೂಮಿ ಹಸಿಯಾದ ಬಳಿಕ ರೈತರು ಬಿತ್ತನೆ ಮಾಡಬೇಕು. ಬೀಜ, ರಸಗೊಬ್ಬರದ ವ್ಯವಸ್ಥೆ ಮಾಡಲಾಗಿದ್ದು, ರೈತರು ಯಾವುದೇ ಆತಂಕ ಪಡಬಾರದು ಎಂದು ಕೃಷಿ ಇಲಾಖೆಯ ಜಂಟಿ ನಿರ್ದೇಶಕ ಸಮದ್ ಪಟೇಲ್ ಸಲಹೆ ನೀಡಿದ್ದಾರೆ.
8,87 ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ ಬಿತ್ತನೆ ಗುರಿ
ಜಿಲ್ಲೆಯ ಒಟ್ಟು 8.91 ಲಕ್ಷ ಹೆಕ್ಟೇರು ನಿವ್ವಳ ಬಿತ್ತನೆ ಕ್ಷೇತ್ರ ಹೊಂದಿದ್ದು, ಮುಂಗಾರು ಹಂಗಾಮಿನಲ್ಲಿ 8.87 ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ ಬಿತ್ತನೆ ಕಾರ್ಯ ಕೈಗೊಳ್ಳುವ ಗುರಿ ಹೊಂದಲಾಗಿದೆ. ಈ ಪೈಕಿ 1 ಲಕ್ಷ ಹೆಕ್ಟೇರ್‌ನಷ್ಟು ಮುಂಗಾರು ಬೆಳೆ ನೀರಾವರಿ ಆಶ್ರಯದಲ್ಲಿ ಹಾಗೂ ಖುಷ್ಕಿ ಆಶ್ರಯದಲ್ಲಿ 7.870 ಲಕ್ಷದಷ್ಟು ಬಿತ್ತನೆ ಗುರಿ ಹೊಂದಲಾಗಿದೆ.
ಮುಂಗಾರು ಹಂಗಾಮಿನಲ್ಲಿ 14,382 ಹೆಕ್ಟೇರ್‌ನಲ್ಲಿ ಏಕದಳ ಧಾನ್ಯಗಳನ್ನು, 6,69,238 ಹೆಕ್ಟೇರ್‌ನಲ್ಲಿ ದ್ವಿದಳ ಧಾನ್ಯಗಳನ್ನು, 58,314 ಹೆಕ್ಟೇರ್‌ನಲ್ಲಿ ಎಣ್ಣೆ ಕಾಳುಗಳನ್ನು ಹಾಗೂ 1,45,080 ಹೆಕ್ಟೇರ್ ವಾಣಿಜ್ಯ ಬೆಳೆಗಳನ್ನು ಬೆಳೆಯುವ ಯೋಜನೆ ಹಮ್ಮಿಕೊಳ್ಳಲಾಗಿದೆ. ವಿವಿಧ ಮುಂಗಾರು ಬೆಳೆಗಳಿಂದ ಸಮರ್ಪಕವಾದ ಇಳುವರಿ ಪಡೆಯಲು ಬೇಕಿರುವ 76,648 ಮೆಟ್ರಿಕ್ ಟನ್ ರಸಗೊಬ್ಬರ ಪೈಕಿ ಜಿಲ್ಲೆಯಲ್ಲಿ ಈಗಾಗಲೇ 50,461 ಮೆಟ್ರಿಕ್ ಟನ್‌ಗಳಷ್ಟು ರಸಗೊಬ್ಬರವನ್ನು ಕೃಷಿ ಇಲಾಖೆ ಪೂರ್ವಭಾವಿ ದಾಸ್ತಾನು ಮಾಡಿದೆ.
ಬೀಜ, ರಸಗೊಬ್ಬರ ಲಭ್ಯ
ಡಿಎಪಿ 27,216 ಟನ್ ಬೇಡಿಕೆಯಿದ್ದು, 19,802 ಟನ್ ದಾಸ್ತಾನು ಮಾಡಲಾಗಿದೆ. ಯೂರಿಯಾ 23,653 ಟನ್ ಬೇಡಿಕೆಯಿದ್ದು, 17,363 ಟನ್ ದಾಸ್ತಾನು ಮಾಡಲಾಗಿದೆ. ಕಾಂಪ್ಲೇಕ್ಷ್ 21,494 ಟನ್ ಬೇಡಿಕೆಯಿದ್ದು, 10,740 ಟನ್ ದಾಸ್ತಾನು ಮಾಡಲಾಗಿದೆ. ಎಮ್ಒಪಿ 2035 ಟನ್ ಬೇಡಿಕೆಯಿದ್ದು 238 ಟನ್ ದಾಸ್ತಾನು ಮಾಡಲಾಗಿದೆ. ಎಸ್ಎಸ್ಪಿ 2250 ಟನ್ ಬೇಡಿಕೆಯಿದ್ದು, 2318 ಟನ್ ದಾಸ್ತಾನು ಮಾಡಲಾಗಿದೆ. ಈ ಗೊಬ್ಬರಗಳನ್ನು ಖಾಸಗಿ ಮಾರಾಟಗಾರರ ಹಾಗೂ ವ್ಯವಸಾಯ ಸೇವ ಸಹಕಾರ ಸಂಘಗಳ ಮೂಲಕ ರೈತರಿಗೆ ಲಭ್ಯಗೊಳಿಸಲಾಗುತ್ತಿದೆ.
ಮುಂಗಾರು ಹಂಗಾಮಿಗಾಗಿ ಬೀಜ ಬದಲಿಕೆ ಆಧಾರದ ಮೇಲೆ 27,865 ಕ್ವಿಂಟಾಲ್ಗಳಷ್ಟು ವಿವಿಧ ಬೀಜಗಳ ಬೇಡಿಕೆ ಇದೆ. ಈಗಾಗಲೆ 27,865 ಕ್ವಿಂಟಾಲ್‌ನಷ್ಟು ಪ್ರಮಾಣಿತ ಬೀಜಗಳನ್ನು ವಿತರಣೆಗಾಗಿ ದಾಸ್ತಾನ್ನು ಸಿದ್ದಪಡಿಸಿಕ್ಕೊಳ್ಳಲಾಗಿದ್ದು, ಜಿಲ್ಲೆಯ 32 ರೈತ ಸಂಪರ್ಕ ಕೇಂದ್ರಗಳಲ್ಲಿ ಮತ್ತು 7 ಹೆಚ್ಚುವರಿ ಬೀಜ ವಿತರಣಾ ಕೇಂದ್ರಗಳ ಮುಖಾಂತರ ರಿಯಾಯ್ತಿ ದರದಲ್ಲಿ ರೈತರಿಗೆ ವಿತರಿಸಲು ಸಿದ್ದತೆ ಮಾಡಿಕೊಳ್ಳಲಾಗಿದೆ.
ಈ ಸಲದ ಮುಂಗಾರು ಹಂಗಾಮಿಗೆ ಒಟ್ಟು 8.87 ಲಕ್ಷ ಹೆಕ್ಟೇರ್ ಗುರಿ ನಿಗದಿಪಡಿಸಲಾಗಿದೆ. ಇದರಲ್ಲಿ 5.93 ಲಕ್ಷ ಹೆಕ್ಟೇರ್ ತೊಗರಿ, 24,000 ಹೆಕ್ಟೇರ್ ಉದ್ದು, 51,000 ಹೆಕ್ಟೇರ್ ಹೆಸರು, 99,450 ಹೆಕ್ಟೇರ್ ಹತ್ತಿ, 45, 535 ಹೆಕ್ಟೇರ್ ಕಬ್ಬು, 48,200 ಹೆಕ್ಟೇರ್ ಸೋಯಾಬಿನ್ ಗುರಿ ನಿಗದಿಪಡಿಸಲಾಗಿದೆ. ಈ ಪೈಕಿ ಪ್ರಸ್ತುತ ಹೆಸರು 1000 ಕ್ವಿಂಟಾಲ್, ಉದ್ದು 500 ಕ್ವಿಂಟಾಲ್, ತೊಗರಿ 6334 ಕ್ವಿಂಟಾಲ್, ಸೋಯಾಬಿನ್ 18,516 ಕ್ವಿಂಟಾಲ್, ಸೂರ್ಯಕಾಂತಿ 120 ಕ್ವಿಂಟಾಲ್ ಬಿತ್ತನೆ ಬೀಜ ಲಭ್ಯವಿದೆ ಎಂದು ಕಲಬುರಗಿ ಕೃಷಿ ಇಲಾಖೆಯ ಜಂಟಿ ನಿರ್ದೇಶಕ ಸಮದ್ ಪಟೇಲ್ ತಿಳಿಸಿದ್ದಾರೆ.
ಕಲಬುರಗಿ ಜಿಲ್ಲೆಯ ಮುಂಗಾರು ಹಂಗಾಮಿನಲ್ಲಿ 8.87 ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ ಬಿತ್ತನೆಕಾರ್ಯ ಕೈಗೊಳ್ಳುವ ಗುರಿ ಹೊಂದಲಾಗಿದೆ. ಜಿಲ್ಲೆಯ 32 ರೈತ ಸಂಪರ್ಕ ಕೇಂದ್ರಗಳಲ್ಲಿ ರಸಗೊಬ್ಬರ ಮತ್ತು ಬೀಜಗಳ ವಿತರಣೆಗೆ ಅಗತ್ಯ ಕ್ರಮ ಕೈಗೊಳ್ಳಲಾಗಿದೆ ಎಂದು ಸಮದ್ ಪಟೇಲ್ ತಿಳಿಸಿದ್ದಾರೆ.