Anna Bhagya: ಕೇಂದ್ರಕ್ಕೆ ಕರ್ನಾಟಕವೇ ಮುಖ್ಯವಲ್ಲ, ತಲೆಯಲ್ಲಿ ಸಗಣಿ ಇತ್ತಾ; ಕಾಂಗ್ರೆಸ್ ಅಕ್ಕಿ ಆರೋಪಕ್ಕೆ ಬಿಜೆಪಿ ನಾಯಕರು ಹೇಳಿದ್ದು ಹೀಗೆ
Jun 23, 2023 01:14 PM IST
ಕಾಂಗ್ರೆಸ್ ಅಕ್ಕಿ ಆರೋಪಕ್ಕೆ ಬಿಜೆಪಿ ನಾಯಕರು ಪ್ರತ್ಯುತ್ತರ
- Anna Bhagya Scheme: ಪ್ರಧಾನಿ ಮೋದಿ ನೇತೃತ್ವದ ಕೇಂದ್ರ ಸರ್ಕಾರವನ್ನ ತೀವ್ರವಾಗಿ ಟೀಕಿಸಿದ ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರ ಸರ್ಕಾರದ ವಿರುದ್ಧ ಬಿಜೆಪಿ ಸಂಸದರು, ಹರಿಹಾಯ್ದಿದ್ದಾರೆ. ಆದರೆ ಕರ್ನಾಟಕ ಏಕೆ ಮುಖ್ಯ ಆಗಬಾರದು? ಎಂಬ ಪ್ರಶ್ನೆ ಎದ್ದಿದೆ.
ಕರ್ನಾಟಕದಲ್ಲಿ ಕಾಂಗ್ರೆಸ್ ಸರ್ಕಾರದ ಗ್ಯಾರಂಟಿ ಯೋಜನೆಗಳಿಗೆ ಸಂಬಂಧಿಸಿ ಒಂದಲ್ಲ, ಒಂದು ತಿಕ್ಕಾಟ ಹೆಚ್ಚಾಗುತ್ತಿದೆ. ಕಾಂಗ್ರೆಸ್ ಘೋಷಿಸಿರುವ 5 ಗ್ಯಾರಂಟಿಗಳ ಪೈಕಿ ಅನ್ನಭಾಗ್ಯ ಯೋಜನೆಯಡಿ (Anna Bhagya Scheme) ರಾಜ್ಯದ ಜನರಿಗೆ 10 ಕೆಜಿ ನೀಡುವುದೂ ಒಂದು. ಆದರೆ, ಅಕ್ಕಿ ಕೊಡಲು ನಿರಾಕರಿಸುತ್ತಿದೆ ಎಂದು ಕೇಂದ್ರ ಸರ್ಕಾರ ವಿರುದ್ಧ ಕಾಂಗ್ರೆಸ್ ಸರ್ಕಾರ ತೀವ್ರ ವಾಕ್ಸಮರ ನಡೆಸಿದೆ.
ಮತ್ತೊಂದೆಡೆ ಬಿಜೆಪಿ ಕೂಡ ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸಿದೆ. ಪ್ರಣಾಳಿಕೆಯಲ್ಲಿ ಘೋಷಿಸಿದಂತೆ ರಾಜ್ಯದ ಜನರಿಗೆ ರಾಜ್ಯ ಸರ್ಕಾರವೇ 10 ಕೆಜಿ ವಿತರಿಸಬೇಕು ಎಂದು ಆಗ್ರಹಿಸುತ್ತಿದೆ. ಅನ್ನ ಭಾಗ್ಯ ಯೋಜನೆಗೆ ಕೇಂದ್ರ ಸರ್ಕಾರ ಅಕ್ಕಿ ನೀಡುತ್ತಿಲ್ಲ ಎಂಬ ಕಾಂಗ್ರೆಸ್ ಆರೋಪಕ್ಕೆ ತಿರುಗೇಟು ನೀಡಿರುವ ರಾಜ್ಯ ಬಿಜೆಪಿ ನಾಯಕರು, ಕರ್ನಾಟಕವೊಂದೇ ಕೇಂದ್ರ ಸರ್ಕಾರಕ್ಕೆ ಮುಖ್ಯವಲ್ಲ ಎಂದು ಟೀಕಿಸುತ್ತಿದ್ದಾರೆ.
ಪ್ರಧಾನಿ ಮೋದಿ ನೇತೃತ್ವದ ಕೇಂದ್ರ ಸರ್ಕಾರವನ್ನ ತೀವ್ರವಾಗಿ ಟೀಕಿಸಿದ ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರ ಸರ್ಕಾರದ ವಿರುದ್ಧ ಬಿಜೆಪಿ ಸಂಸದರು, ಹರಿಹಾಯ್ದಿದ್ದಾರೆ. ಆದರೆ ಕರ್ನಾಟಕ ಏಕೆ ಮುಖ್ಯ ಆಗಬಾರದು? ಎಂಬ ಪ್ರಶ್ನೆ ಎದ್ದಿದೆ. ರಾಜ್ಯ ಬಿಜೆಪಿ ಅಧ್ಯಕ್ಷ ಮತ್ತು ಸಂಸದ ನಳೀನ್ ಕುಮಾರ್ ಕಟೀಲ್ ಅವರು, ಕೇಂದ್ರ ಸರ್ಕಾರಕ್ಕೆ ಇರುವುದು ಕೇವಲ ಕರ್ನಾಟಕ ಮಾತ್ರವಲ್ಲ. ಉಳಿದ ರಾಜ್ಯಗಳಿಗೂ ಅಕ್ಕಿ ಪೂರೈಸುವ ಜವಾಬ್ದಾರಿ ಇದೆ ಎಂದು ಹೇಳಿದ್ದಾರೆ.
ಕರ್ನಾಟಕವೇ ಮುಖ್ಯವಲ್ಲ ಎಂದ ಕಟೀಲ್
ಅಧಿಕಾರಕ್ಕೆ ಬರುವುದಕ್ಕೂ ಮುನ್ನ ಪ್ರತಿ ಮನೆಗೆ 10 ಕೆಜಿ ಅಕ್ಕಿ ಕೊಡುವುದಾಗಿ ಕಾಂಗ್ರೆಸ್ ಹೇಳಿತ್ತು. ಈ ಬಗ್ಗೆ ಪ್ರಧಾನಿ ಮೋದಿ ಮತ್ತು ಕೇಂದ್ರ ಆಹಾರ ಸಚಿವರೊಂದಿಗೆ ಯಾವುದೇ ಚರ್ಚೆ ನಡೆಸಿಲ್ಲ. ಘೋಷಿಸಿದ್ದು ನೀವು, ಕೊಡಬೇಕಿರುವುದು ನೀವೇ ಅಲ್ಲವೇ? ಆದರೆ ಪ್ರಧಾನಿ ಅವರನ್ನು ಕೇಳುವುದು ಏಕೆ? ಕೇಂದ್ರ ಸರ್ಕಾರಕ್ಕೆ ಕರ್ನಾಟಕವೊಂದೇ ಮುಖ್ಯವಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.
ಆಕ್ರೋಶ
ಈ ಬೆನ್ನಲ್ಲೇ ತೀವ್ರ ಆಕ್ರೋಶ ವ್ಯಕ್ತವಾಗಿದೆ. ಕರ್ನಾಟಕವೊಂದೇ ಮುಖ್ಯ ಅಲ್ಲ ಎನ್ನುವ ಹೇಳಿಕೆ ಸರಿಯಲ್ಲ. ಹಾಗಾದರೆ ನೀವು ಯಾವ ರಾಜ್ಯದಲ್ಲಿ ಇದೀರಾ? ಚುನಾವಣೆಗೂ ಮುನ್ನ ಕರ್ನಾಟಕ ತುಂಬಾ ಮುಖ್ಯ ಆಗಿತ್ತು. ಸೋತ ನಂತರ ಕರ್ನಾಟಕ ಮುಖ್ಯ ಅಲ್ಲವೇ? ನೀವು ಕೂಡ ರಾಜ್ಯಕ್ಕೆ ಹೊರಟುಬಿಡಿ ಎಂಬ ಟೀಕೆಗಳು ವ್ಯಕ್ತವಾಗಿವೆ. ಒಕ್ಕೂಟ ವ್ಯವಸ್ಥೆಯಲ್ಲಿ ಎಲ್ಲಾ ರಾಜ್ಯಗಳು ಒಂದೇ? ಹಾಗಾದರೆ ತೆರಿಗೆ ಹಣವನ್ನು ಕೇಂದ್ರಕ್ಕೆ ಕೊಡದೆ ರಾಜ್ಯದ ಅಭಿವೃದ್ದಿಗೆ ಉಳಿಸಿಕೊಳ್ಳಬಹುದು ಅಲ್ಲವೇ? ಎಂಬುದು ಆಡಳಿತ ಪಕ್ಷದ ನಾಯಕರ ಮಾತು.
ಸಗಣಿ ತುಂಬ್ಕೊಂಡಿದ್ರಾ ಎಂದ ಕರಂದ್ಲಾಜೆ
ರಾಜ್ಯ ಸರ್ಕಾರದ ಆರೋಪಕ್ಕೆ ಕೇಂದ್ರ ಕೃಷಿ ಸಚಿವೆ ಶೋಭಾ ಕರಂದ್ಲಾಜೆ ತಿರುಗೇಟು ನೀಡಿದ್ದಾರೆ. ಗ್ಯಾರಂಟಿಗಳ ಘೋಷಿಸುವಾಗ ತಲೆಯಲ್ಲಿ ಸಗಣಿ ತುಂಬ್ಕೊಂಡಿದ್ರಾ ಎಂದು ಪ್ರಶ್ನಿಸಿದ್ದಾರೆ. ಕೇಂದ್ರ ಸರ್ಕಾರ ಅಕ್ಕಿ ದಾಸ್ತಾನು ಮಾಡಿಟ್ಟಿರುವುದು ತುರ್ತು ಸಂದರ್ಭಕ್ಕಾಗಿ. ಕರ್ನಾಟಕಕ್ಕೆ ನೀಡಲು ಅಲ್ಲ. ಬರ, ಪ್ರವಾಹ.. ಹೀಗೆ ತುರ್ತು ಪರಿಸ್ಥಿತಿಗೆ ಬೇಕಾಗಿರುವುದಕ್ಕಾಗಿ ದಾಸ್ತಾನಿಡಲಾಗಿದೆ. ರಾಜ್ಯದ ರೈತರಿಂದಲೇ ನೇರವಾಗಿ ಖರೀದಿಸಿ, ಜನರಿಗೆ ವಿತರಿಸಲಿ ಎಂದು ಹೇಳಿದ್ದಾರೆ.
ಕುಣಿಯಲಾರದವನಿಗೆ ನೆಲಡೊಂಕು ಎಂದ ಡಿವಿಎಸ್
ಕೇಂದ್ರ ನಮ್ಮ ರಾಜ್ಯಕ್ಕೆ ಅಕ್ಕಿ ಕೊಡುಲ್ಲಿ ಎಂಬ ಆರೋಪಕ್ಕೆ ಪ್ರತಿಕ್ರಿಯಿಸಿರುವ ಮತ್ತೊಬ್ಬ ಬಿಜೆಪಿ ಸಂಸದ ಡಿವಿ ಸದಾನಂದಗೌಡ ಅವರು, ಕಾಂಗ್ರೆಸ್ ವಿರುದ್ಧ ಹರಿಹಾಯ್ದಿದ್ದಾರೆ. ರಾಜ್ಯದ ಬಡ ಜನರಿಗೆ ಅಕ್ಕಿ ಕೊಡಬಾರದೆಂಬ ನೀಚ ಬುದ್ದಿ ನಮಗಿಲ್ಲ (ಬಿಜೆಪಿ). ನಿಮ್ಮಂತೆ (ಕಾಂಗ್ರೆಸ್) ಬಡವರ ಹೊಟ್ಟೆಯ ಮೇಲೆ ಎಂದೂ ಕಲ್ಲು ಹಾಕಿದವರಲ್ಲ ಎಂದು ಸದಾನಂದಗೌಡ ಅವರು ಕಾಂಗ್ರೆಸ್ ವಿರುದ್ಧ ಕಿಡಿಕಾರಿದ್ದಾರೆ.
ದೇಶದ ಆಹಾರ ಭದ್ರತೆ ಮತ್ತು ತುರ್ತು ಪರಿಸ್ಥಿತಿಯ ಅಗತ್ಯತೆಗಳಿಗೆ ಸಂಬಂಧಿಸಿ ರಾಜ್ಯಗಳಿಗೆ ಅಕ್ಕಿ ಮಾರಾಟ ಮಾಡದಿರುವ ನಿರ್ಧಾರ ಕೇಂದ್ರ ಸರ್ಕಾರ ತೆಗೆದುಕೊಂಡಿದೆ. 10 ಕೆಜಿ ಅಕ್ಕಿ ಕೊಡುತ್ತೇವೆ ಎಂದು ಹೇಳುವಾಗ ಪರಿಜ್ಞಾನ ಇರಲಿಲ್ಲವೇ? ಏನೇ ಆಗಲಿ ಅಕ್ಕಿ ಕೊಡುತ್ತೇನೆ ಎಂದಿದ್ದರು. ಈಗವರ ಹೆಗಲ ಮೇಲಿದ್ದ ಟವಲ್ ಎಲ್ಲಿ ಹೋಗಿದೆ ಎಂದು ಟೀಕಿಸಿದ್ದಾರೆ.
ರಾಜ್ಯ ಸರ್ಕಾರ ಪರದಾಟ
ಬಿಪಿಎಲ್ ಕುಟುಂಬದ ಪ್ರತಿ ವ್ಯಕ್ತಿಗೆ ತಿಂಗಳಿಗೆ 10 ಕೆಜಿ ಅಕ್ಕಿ ಉಚಿತ ನೀಡುವ ಯೋಜನೆಯೇ ಅನ್ನಭಾಗ್ಯ. ಚುನಾವಣೆಗೂ ಮುನ್ನ ಈ ಮಾತನ್ನು ಕಾಂಗ್ರೆಸ್ ಹೇಳಿತ್ತು. ಈ 10 ಕೆಜಿ ಪೈಕಿ 5 ಕೆಜಿ ಕೇಂದ್ರ ಉಚಿತವಾಗಿ ಸಿಗಲಿದ್ದು, ರಾಷ್ಟ್ರೀಯ ಆಹಾರ ಭದ್ರತಾ ಕಾಯ್ದೆ ಅಡಿ ಪ್ರತಿ ವ್ಯಕ್ತಿಗೂ ತಿಂಗಳಿಗೆ 5 ಕೆಜಿ ಅಕ್ಕಿ ಉಚಿತವಾಗಿ ನೀಡಲಾಗುತ್ತಿದೆ. ಈ 5 ಕೆಜಿ ಅಕ್ಕಿ ಮತ್ತು ರಾಜ್ಯ ಸರ್ಕಾರದ 5 ಕೆಜಿ ಅಕ್ಕಿ ಸೇರಿ ಒಟ್ಟು 10 ಕೆಜಿ ಅಕ್ಕಿ ನೀಡುವುದಾಗಿ ಗ್ಯಾರಂಟಿಯಲ್ಲಿ ಪ್ರಕಟಿಸಿತ್ತು. ಈಗಾಗಲೇ ಕೇಂದ್ರದಿಂದ ಉಚಿತ 5 ಕೆಜಿ ದೊರೆಯುತ್ತಿದೆ. ಆದರೆ ಉಳಿದ ಐದು ಕೆಜಿ ಹೊಂದಿಸಲು ರಾಜ್ಯ ಪರದಾಟ ನಡೆಸುತ್ತಿದೆ.