ಮಿರೆಕಟ್ಟು ತೊಟ್ಟು ದೈವಾರಾಧನೆಗೆ ಅವಮಾನ ಮಾಡಿದ್ರ ನಟಿ ಭೂಮಿ ಪಡ್ನೇಕರ್; ಇದು ನಾಗಿಣಿ ಉಡುಗೆಯಲ್ಲ, ರುದ್ರಾಂಡಿ, ಧೂಮಾವತಿ ಕವಚ
Oct 01, 2024 06:17 PM IST
ಎದೆತಟ್ಟ, ಮಿರೆಕಟ್ಟು ತೊಟ್ಟು ತುಳುನಾಡಿನ ದೈವಾರಾಧನೆಗೆ ಅವಮಾನ ಮಾಡಿದ್ರ ನಟಿ ಭೂಮಿ ಪಡ್ನೇಕರ್
ನಟಿ ಭೂಮಿ ಪಡ್ನೇಕರ್ ಧರಿಸಿರುವ ಹೊಸ ಉಡುಗೆಯೊಂದು ಇಂಟರ್‌ನೆಟ್‌ನಲ್ಲಿ ಸಂಚಲನ ಮೂಡಿಸಿದೆ. ಅವರು ಧರಿಸಿರುವ ಉಡುಗೆಯನ್ನು ನೆಟ್ಟಿಗರು ನಾಗಿನಿ ಉಡುಗೆ ಎನ್ನುತ್ತಿದ್ದಾರೆ. ಆದರೆ, ಇದು ತುಳುನಾಡಿನ ಭೂತಾರಾಧನೆಯಲ್ಲಿ ಬಳಕೆಯಲ್ಲಿರುವ ಎದೆಕವಚದಿಂದ ಸ್ಪೂರ್ತಿ ಪಡೆದಿರುವ ಉಡುಗೆಯಾಗಿದೆ. ಮಿರೆಕಟ್ಟು, ಎದೆತಟ್ಟ ಎಂಬ ದೈವದ ಕವಚದ ಕುರಿತು ಹೆಚ್ಚಿನ ವಿವರ.
ಬೆಂಗಳೂರು: ನಟಿ ಭೂಮಿ ಪಡ್ನೇಕರ್ ಧರಿಸಿದ ಉಡುಗೆಯೊಂದು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಎಲ್ಲರೂ ನಾಗಿಣಿ ಡ್ರೆಸ್ ಎಂದು ಹೇಳುತ್ತಿದ್ದಾರೆ. ಆದರೆ, ಇದು ಅಷ್ಟೇ ಎಂದು ಸುಮ್ಮನಾಗುವಂತೆ ಇಲ್ಲ. ಇದು ತುಳುನಾಡಿನ ಭೂತಾರಾಧನೆಗೆ ಸಂಬಂಧಪಟ್ಟ ವಿಷಯ. ರುದ್ರಾಂಡಿ, ಧೂಮವತಿ, ಕಲ್ಲುರ್ಟಿ ಭೂತ ಸೇರಿದಂತೆ ವಿವಿಧ ದೈವಗಳು (ಹೆಣ್ಣು ದೈವಗಳು) ಧರಿಸುವ ಎದೆಗವಚದಿಂದ ಸ್ಪೂರ್ತಿ ಪಡೆದ ವಿನ್ಯಾಸವನ್ನು ನಟಿ ಭೂಮಿ ಪಡ್ನೇಕರ್ ಧರಿಸಿದ್ದಾರೆ. ಭೂತಗಳು ಧರಿಸುವ ಈ ಎದೆಗವಚಕ್ಕೆ ತುಳುವಿನಲ್ಲಿ ಮಿರೆಕಟ್ಟು ಎನ್ನಲಾಗುತ್ತದೆ. ಕನ್ನಡದಲ್ಲಿ ಎದೆತಟ್ಟ, ಎದೆ ಕಟ್ಟ ಎಂದೆಲ್ಲ ಕರೆಯಲಾಗುತ್ತದೆ.
ಇದು ನಾಗಿಣಿ ಉಡುಗೆಯಲ್ಲ, ಭೂತಾರಾಧನೆಗೆ ಸಂಬಂಧಪಟ್ಟದ್ದು!
ಸೋಷಿಯಲ್ ಮೀಡಿಯಾದಲ್ಲಿ ಇದು ನಾಗಿಣಿ ಉಡುಗೆ ಎಂದು ಎಲ್ಲರೂ ಹೇಳುತ್ತಿದ್ದಾರೆ. ಆದರೆ, ಈ ವಿಶಿಷ್ಟ ಉಡುಗೆ ವಿನ್ಯಾಸಕರು ತುಳುನಾಡಿನ ಭೂತಾರಾಧನೆಯಿಂದ ಸ್ಪೂರ್ತಿ ಪಡೆದಿದೆ. ರುದ್ರಾಂಡಿ, ಧೂಮವತಿ, ಕಲ್ಲುರ್ಟಿ ಮುಂತಾದ ಹೆಣ್ಣು ದೈವಗಳ ಎದೆಗವಚವನ್ನು ಹೋಲುವ ವಿನ್ಯಾಸದ ಉಡುಗೆಯನ್ನು ಭೂಮಿ ಪಡ್ನೇಕರ್ ಧರಿಸಿದ್ದಾರೆ.
ಮಿರೆಕಟ್ಟು ಬಗ್ಗೆ ಇನ್ನಷ್ಟು ವಿವರ
ಸಾಂಪ್ರದಾಯಿಕ ಮಿರೆಕಟ್ಟು ಅನ್ನು ಲೋಹದಿಂದ ಅಥವಾ ಮರದಿಂದ ಮಾಡಲಾಗುತ್ತಿತ್ತು. ಈಗ ಸಾಮಾನ್ಯವಾಗಿ ಹಿತ್ತಾಳೆ ಅಥವಾ ಬೆಳ್ಳಿಯಿಂದ ಮಾಡಲಾಗುತ್ತದೆ. ಭೂತಾರಾಧನೆಯಲ್ಲಿ ವಿವಿಧ ಬಗೆಯ ಮೊಗಗಳನ್ನು, ರಕ್ಷಾ ಕವಚಗಳನ್ನು ಹಿತ್ತಾಳೆಯಿಂದ ಮಾಡಲಾಗುತ್ತದೆ. ಕೆಲವೊಮ್ಮೆ ಅಡಿಕೆ ಗಿಡದ ಹಾಳೆಯಿಂದಲೂ ಮೊಗಗಳನ್ನು ಮಾಡಲಾಗುತ್ತದೆ.
"ಇದು ಹೆಣ್ಣು ಭೂತಗಳಿಗೆ ಬಳಸುವಂತದ್ದು. ರುದ್ರಾಂಡಿ, ಧೂಮಾವತಿ, ಕಲ್ಲುರ್ಟಿ ದೈವಗಳು ಧರಿಸುತ್ತವೆ. ಸಾಮಾನ್ಯವಾಗಿ ಇದು ಹಿತ್ತಾಳೆಯಲ್ಲಿ ಮಾಡಲಾಗುತ್ತದೆ. ಕೆಲವರು ಬೆಳ್ಳಿಯಲ್ಲೂ ಮಾಡಿಸುವುದುಂಟು. ಹಿತ್ತಾಳೆಯ ಎದೆತಟ್ಟದ ದರ 30-40 ಸಾವಿರ ರೂಪಾಯಿ ಇರುತ್ತದೆ. ಅವಶ್ಯಕತೆಗೆ ತಕ್ಕಂತೆ ಇದಕ್ಕಿಂತ ಕಡಿಮೆ ದರದಲ್ಲೂ ಮಾಡಿಕೊಡಲಾಗುತ್ತದೆ. ಕೆಲವರು ದಪ್ಪ ಗಾತ್ರದಲ್ಲಿ ಮಾಡಿಸಿಕೊಳ್ಳುತ್ತಾರೆ. ಬಳಕೆ ಮಾಡಿದ ಹಿತ್ತಾಳೆ, ಬೆಳ್ಳಿಗೆ ತಕ್ಕಂತೆ ದರ ಇರುತ್ತದೆ" ಎಂದು ಭೂತಾರಾಧನೆ ಸಾಮಾಗ್ರಿಗಳ ತಯಾರಕರೊಬ್ಬರು ಹಿಂದೂಸ್ತಾನ್ ಟೈಮ್ಸ್‌ಗೆ ಮಾಹಿತಿ ನೀಡಿದ್ದಾರೆ. ಸಇಷ್ಟು ಮಾತ್ರವಲ್ಲ ಆರ್ಟ್‌ಕೆಫೆ (artcafe.in) ಎಂಬ ತಾಣದಲ್ಲಿ ಮಿರೆಕಟ್ಟು(ಬ್ರೀಸ್ಟ್ ಪ್ಲೇಟ್) ಹೆಸರಿನಲ್ಲಿ ಇದು ಮಾರಾಟಕ್ಕೆ ಇದೆ. ಇಲ್ಲಿ ಇದರ ದರ 35 ಸಾವಿರ ರೂಪಾಯಿ ಇದೆ.
ಅರ್ಕೈವಲ್ ಸಂಸ್ಥೆಯ ಸಂಸ್ಥಾಪಕಿ ದೀಪ್ತಿ ಶಶಿಧರನ್ ಹೀಗೆ ಹೇಳುತ್ತಾರೆ. "ಭೂಮಿ ಪಡ್ನೇಕರ್‌ಗೂ ಈ ಉಡುಗೆಯು ಪ್ರತಿನಿಧಿಸುವ ಸಂಸ್ಕೃತಿಗೂ ಯಾವುದೇ ಸಂಬಂಧ ಇಲ್ಲದೆ ಇರಬಹುದು. ಈಗಾಗಲೇ ಈ ಉಡುಗೆ ನಿರ್ಮಿಸಿರುವ ಸಂಸ್ಥೆಯು ಈ ಉಡುಗೆಯು ಕೇರಳದ ತೆಯ್ಯಂ ಮತ್ತು ಕರ್ನಾಟಕದ ಭೂತಕೋಲದ ಆಚರಣೆಗಳನ್ನು ಹೋಲುತ್ತವೆ ಎಂದು ಒಪ್ಪಿಕೊಂಡಿದೆ" ಎಂದು ಅವರು ಮಾಹಿತಿ ನೀಡಿದ್ದಾರೆ.
ಭೂಮಿ ಉಡುಗೆಗೂ ತೆಯ್ಯಂಗೂ ನಂಟು
ಕೇರಳದ ತೆಯ್ಯಂ ಉಡುಗೆಯನ್ನೂ ಇದು ಹೋಲುತ್ತದೆ. ಆದರೆ, ಇಲ್ಲಿ ನಾಗ ವಿನ್ಯಾಸ ಇರುವುದಿಲ್ಲ. ತೆಯ್ಯಂಗೆ ಒಂದೇ ಮರದಲ್ಲಿ ನಿರ್ಮಿಸಲಾಗಿರುತ್ತದೆ.
ಭೂಮಿ ಪಡ್ನೇಕರ್ ಧರಿಸಿರುವ ಉಡುಗೆಯ ಕುರಿತು ಸೋಷಿಯಲ್ ಮೀಡಿಯಾದಲ್ಲಿ ಚರ್ಚೆಗಳು ನಡೆಯುತ್ತಿವೆ.