ಬುಕ್ ಮಾಡಿದ್ದು ವಂದೇ ಭಾರತ್, ಆದರೆ ಬಂದಿದ್ದು..; ಅಚ್ಚರಿ-ಗಾಬರಿಯೊಂದಿಗೆ ಪ್ರಯಾಣಿಕರಿಗೆ ಗೊಂದಲವೋ ಗೊಂದಲ
Sep 01, 2024 09:39 PM IST
ಬುಕ್ ಮಾಡಿದ್ದು ವಂದೇ ಭಾರತ್, ಆದರೆ ಬಂದಿದ್ದು ಐಸಿಎಫ್ ಕೋಚ್ ಹೊಂದಿರುವ ರೈಲು.
- Vande Bharat Train: ಮಂಗಳೂರು ಮತ್ತು ಮಡಗಾಂವ್ ಮಾರ್ಗದಲ್ಲಿ ಸಂಚಾರ ಮಾಡಬೇಕಿದ್ದ ವಂದೇ ಭಾರತ್ ರೈಲು ಮಡಂಗಾವ್ನಿಂದ ಮಂಗಳೂರು ಸೆಂಟ್ರಲ್ ರೈಲು ನಿಲ್ದಾಣಕ್ಕೆ ಬರಬೇಕಿತ್ತು. ಆದರೆ ಮುಂದೆ ನಡೆದಿದ್ದೇ ಅಚ್ಚರಿ.
ಬೆಂಗಳೂರು: ಮಂಗಳೂರು ಸೆಂಟ್ರಲ್ ಮತ್ತು ಮಡಗಾಂವ್ ರೈಲ್ವೇ ಮಾರ್ಗದ ಪ್ರಯಾಣಿಕರಿಗೆ ಆಗಸ್ಟ್ 31ರ ಶನಿವಾರ ಅಚ್ಚರಿಯ ಘಟನೆಯೊಂದು ನಡೆದಿದೆ. ಹೌದು, ಪ್ರಯಾಣಿಕರು ತಾವು ಬುಕ್ ಮಾಡಿದ್ದು ವಂದೇ ಭಾರತ್ ರೈಲು. ಆದರೆ ನಿಲ್ದಾಣಕ್ಕೆ ಬಂದಿದ್ದು ಬೇರೆ ರೈಲು. ವಂದೇ ಭಾರತ್ ಬದಲಿಗೆ ಐಸಿಎಫ್ ಕೋಚ್ ಹೊಂದಿದ್ದ ವಿಶೇಷ ರೈಲು ಬಂದ್ದದ್ದು ಕಂಡು ಒಂದು ಕ್ಷಣ ದಂಗಾಗಿ ಹೋದರು. ತಾವು ಪ್ರಯಾಣಿಸಬೇಕಿರುವ ರೈಲು ಇದೇನಾ ಎಂದು ಅಚ್ಚರಿಪಟ್ಟರು.
ನಿಜವಾಗಲೂ ಪ್ರಯಾಣಿಕರು ಒಂದು ಕ್ಷಣ ಅಚ್ಚರಿಯ ಜತೆಗೆ, ಏನಾಗುತ್ತಿದೆ ಇಲ್ಲಿ ಎಂಬುದು ತಿಳಿಯದೆ ಗೊಂದಲಕ್ಕೂ ಒಳಗಾದರು. ಐಸಿಎಫ್ ಕೋಚ್ ರೈಲಿನ ಫೋಟೋ ಮತ್ತು ವಿಡಿಯೋಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಅಪ್ಲೋಡ್ ಮಾಡಿ, ಪರಿಸ್ಥಿತಿಯ ಕುರಿತು ಪುಟಗಟ್ಟಲೇ ಬರಹಗಳನ್ನು ಹಂಚಿಕೊಂಡಿದ್ದಾರೆ. ತದನಂತರ ರೈಲ್ವೆ ಇಲಾಖೆಗೆ ಈ ಬಗ್ಗೆ ಸ್ಪಷ್ಟನೆ ನೀಡಿತು. ಯಾವುದೇ ಸಮಸ್ಯೆ ಇಲ್ಲದೆ ನಿಗದಿತ ಸ್ಥಳಕ್ಕೆ ಪ್ರಯಾಣಿಕರು ಪ್ರಯಾಣಿಸಿದ್ದಾರೆ.
ರೈಲ್ವೇ ವೇಳಾಪಟ್ಟಿ ಪ್ರಕಾರದಂತೆ ಮಂಗಳೂರು ಮತ್ತು ಮಡಗಾಂವ್ ಮಾರ್ಗದಲ್ಲಿ ಸಂಚಾರ ಮಾಡಬೇಕಿದ್ದ ವಂದೇ ಭಾರತ್ ರೈಲು ಮಡಂಗಾವ್ನಿಂದ ಮಂಗಳೂರು ಸೆಂಟ್ರಲ್ ರೈಲು ನಿಲ್ದಾಣಕ್ಕೆ ಬರಬೇಕಿತ್ತು. ಆದರೆ, ನಿಲ್ದಾಣದಲ್ಲಿ ಕಾಯುತ್ತಿದ್ದ ಪ್ರಯಾಣಿಕರು ಸಮಯಕ್ಕೆ ಸರಿಯಾಗಿ ಬಂದ ಐಸಿಎಫ್ ಕೋಚ್ ಹೊಂದಿರುವ ವಿಶೇಷ ರೈಲು ಕಂಡು ಒಂದು ಕ್ಷಣ ದಂಗಾದರು. ಇದೇನಿದು ನಾವು ಬುಕ್ ಮಾಡಿದ್ದು ಈ ರೈಲು ಅಲ್ವಲ್ಲ ಎಂದು ಕಣ್ ಕಣ್ ಬಿಟ್ಟಿದ್ದಾರೆ.
ವಂದೇ ಭಾರತ್ ರೈಲಿನ ನಂಬರ್ 20646/645. ಇದು ಮಂಗಳೂರು ಸೆಂಟ್ರಲ್ ಮತ್ತು ಮಡಗಾಂವ್ ನಡುವೆ ಸಂಚಾರ ಮಾಡುತ್ತದೆ. ಇದು ಒಟ್ಟು 8 ಬೋಗಿಗಳಿದ್ದು 560 ಸೀಟುಗಳನ್ನು ಹೊಂದಿದೆ. ಆದರೆ, ಆಗಸ್ಟ್ 31ರಂದು ವಂದೇ ಭಾರತ್ ರೈಲಿನ ಬದಲಿಗೆ ಐದು ಐಸಿಎಫ್ ಕೋಚ್ ಹೊಂದಿರುವ ವಿಶೇಷ ರೈಲು ಪ್ರಯಾಣಿಕರ ಮುಂದೆ ನಿಂತಿದೆ. ಆದರೆ ಇದು ಪ್ರಯಾಣಿಕರ ಆಕ್ರೋಶಕ್ಕೂ ಕಾರಣವಾಯಿತು. ಹಾಗಾದರೆ, ವಿಶೇಷ ಕೋಚ್ ರೈಲು ಬಂದಿದ್ದೇಕೆ? ಇಲ್ಲಿದೆ ವಿವರ.
ವಂದೇ ಭಾರತ್ ತಾಂತ್ರಿಕ ದೋಷ
ಮಂಗಳೂರು ಸೆಂಟ್ರಲ್ ರೈಲು ನಿಲ್ದಾಣಕ್ಕೆ ಆಗಮಿಸಬೇಕಿದ್ದ ವಂದೇ ಭಾರತ್ ರೈಲು ಬೋಗಿಯಲ್ಲಿ ತಾಂತ್ರಿಕ ದೋಷ ಉಂಟಾಗಿತ್ತು. ಹೀಗಾಗಿ ಮಾರ್ಗ ಮಧ್ಯೆ ನಿಂತುಬಿಟ್ಟಿತ್ತು. ಏನೇ ಪ್ರಯತ್ನ ನಡೆಸಿದರೂ ರೈಲು ಸರಿ ಹೋಗಲಿಲ್ಲ. ಹಾಗಾಗಿ, ಪ್ರಯಾಣಿಕರಿಗೆ ತೊಂದರೆ ಉಂಟಾಗಬಾರದು ಎಂಬ ಕಾರಣಕ್ಕೆ ಐಸಿಎಫ್ ಕೋಚ್ ಹೊಂದಿರುವ ಸ್ಪೆಷಲ್ ರೈಲನ್ನು ಕಳುಹಿಸಿಕೊಡಲಾಯಿತು. ವಂದೇ ಭಾರತ್ ರೈಲಿನ 238 ಸೀಟುಗಳನ್ನು ಐಸಿಎಫ್‌ನ ಐಷಾರಾಮಿ ಕೋಚ್ಗಳಿಗೆ (ಎಸಿ) ಬದಲಾವಣೆ ಮಾಡಲಾಗಿತ್ತು.
ಮರು ಪಾವತಿಗೆ ಅರ್ಜಿ ಸಲ್ಲಿಸಬಹುದು
ಈ ವಿಶೇಷ ರೈಲು ಮಂಗಳೂರು ಸೆಂಟ್ರಲ್ ನಿಲ್ದಾಣಕ್ಕೆ ಆಗಮಿಸುತ್ತಿದ್ದಂತೆ ಸಿಬ್ಬಂದಿ ಸೀಟು ಮತ್ತು ಬೋಗಿ ನಂಬರ್ ಚಾರ್ಟ್ಗಳನ್ನು ಅಂಟಿಸಿದರು. ಆ ಮೂಲಕ ಪ್ರಯಾಣಿಕರಿಗೆ ಯಾವುದೇ ಸಮಸ್ಯೆ ಉಂಟಾಗದಂತೆ ಸುಗಮ ಸಂಚಾರಕ್ಕೆ ಅವಕಾಶ ಮಾಡಿಕೊಟ್ಟರು. ಪ್ರಯಾಣಿಕರು ಬಯಸಿದರೆ ಟಿಕೆಟ್ ಹಣ ಮರು ಪಾವತಿಗೆ ಅರ್ಜಿ ಸಲ್ಲಿಸಬಹುದು. ವಂದೇ ಭಾರತ್ ರೈಲು ಎಕ್ಸಿಕ್ಯುಟಿವ್ ಕ್ಲಾಸ್ ದರ 2,350 ರೂಪಾಯಿ ಮತ್ತು ಚೇರ್ ಕಾರ್ ದರ 1,330 ರೂಪಾಯಿಗಳು. ಅದೇ ರೀತಿ 2-ಎಸಿ ದರ 1065 ಮತ್ತು 3-ಎಸಿ ದರ 765 ರೂಪಾಯಿ ದರಗಳು.