logo
ಕನ್ನಡ ಸುದ್ದಿ  /  ಕರ್ನಾಟಕ  /  Indira Canteen: ಇಂದಿರಾ ಕ್ಯಾಂಟೀನ್‌ ಹೊಸ ಟೆಂಡರ್‌ಗೆ ಅಧಿಕಾರಿಗಳಿಗೆ ನಿರ್ದೇಶನ; ಸಿಎಂ ಮಹತ್ವದ ಸಭೆ

Indira Canteen: ಇಂದಿರಾ ಕ್ಯಾಂಟೀನ್‌ ಹೊಸ ಟೆಂಡರ್‌ಗೆ ಅಧಿಕಾರಿಗಳಿಗೆ ನಿರ್ದೇಶನ; ಸಿಎಂ ಮಹತ್ವದ ಸಭೆ

HT Kannada Desk HT Kannada

Jun 12, 2023 04:47 PM IST

google News

ಇಂದಿರಾ ಕ್ಯಾಂಟೀನ್‌ ಮರು ಆರಂಭಕ್ಕೆ ಸೂಚನೆ - ಸಿಎಂ ಸಿದ್ದರಾಮಯ್ಯ

  • Indira Canteen: ಇಂದಿರಾ ಕ್ಯಾಂಟೀನ್‌ ಮತ್ತೆ ಮುನ್ನೆಲೆಗೆ ಬಂದಿದೆ. ಇಂದಿರಾ ಕ್ಯಾಂಟೀನ್‌ ನಿರ್ವಹಣೆಗೆ ಹೊಸ ಟೆಂಡರ್‌ ಕರೆಯುವಂತೆ ಅಧಿಕಾರಿಗಳಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಸೂಚನೆ ನೀಡಿದ್ದಾರೆ. ಈ ಸಭೆಯ ವಿವರ ಇಲ್ಲಿದೆ.

ಇಂದಿರಾ ಕ್ಯಾಂಟೀನ್‌ ಮರು ಆರಂಭಕ್ಕೆ ಸೂಚನೆ - ಸಿಎಂ ಸಿದ್ದರಾಮಯ್ಯ
ಇಂದಿರಾ ಕ್ಯಾಂಟೀನ್‌ ಮರು ಆರಂಭಕ್ಕೆ ಸೂಚನೆ - ಸಿಎಂ ಸಿದ್ದರಾಮಯ್ಯ (HT Kannada File Photo)

ಬೆಂಗಳೂರು: ರಾಜ್ಯ ರಾಜಧಾನಿ ಬೆಂಗಳೂರಿನ ಎಲ್ಲ ವಾರ್ಡ್‌ಗಳಲ್ಲೂ ತಲಾ ಒಂದು ಇಂದಿರಾ ಕ್ಯಾಂಟೀನ್‌ (Indira Canteen) ಇರಬೇಕು. ಬೆಂಗಳೂರು (Bengaluru) ಮಹಾನಗರದಲ್ಲಿ ಒಟ್ಟು 250 ಇಂದಿರಾ ಕ್ಯಾಂಟೀನ್‌ ಕಾರ್ಯನಿರ್ವಹಿಸುವುದಕ್ಕೆ ಅಗತ್ಯ ಕ್ರಮ ಕೈಗೊಳ್ಳುವಂತೆ ಅಧಿಕಾರಿಗಳಿಗೆ ಸೂಚಿಸಲಾಗಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ (CM Siddaramaiah) ಇಂದು (ಜೂ.12) ತಿಳಿಸಿದರು.

ಗೃಹಕಚೇರಿ ಕೃಷ್ಣಾದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅಧ್ಯಕ್ಷತೆಯಲ್ಲಿ ಸೋಮವಾರ (ಜೂ.12) ನಡೆದ ಸಭೆಯಲ್ಲಿ ಇಂದಿರಾ ಕ್ಯಾಂಟೀನ್‌ ವಿಚಾರ ಚರ್ಚೆಗೆ ಒಳಗಾಗಿದೆ.

ಸದ್ಯ ಇಂದಿರಾ ಕ್ಯಾಂಟೀನ್‌ ನಿರ್ವಹಣೆಗೆ ಬಿಬಿಎಂಪಿ ಕಡೆಯಿಂದ ಶೇಕಡ 70 ರಾಜ್ಯ ಸರ್ಕಾರದ ಕಡೆಯಿಂದ ಶೇಕಡ 30 ಅನುದಾನ ಹಂಚಿಕೆಯಾಗುತ್ತದೆ. ಇನ್ನು ಮುಂದೆ, ಇಂದಿರಾ ಕ್ಯಾಂಟೀನ್‌ ನಿರ್ವಹಣೆಗೆ ರಾಜ್ಯ ಸರ್ಕಾರ ಮತ್ತು ಬಿಬಿಎಂಪಿ ಸಮಪಾಲಿನ ಅಂದರೆ 50:50 ಅನುದಾನ ನೀಡಲಿವೆ.

ಹೊಸ ಇಂದಿರಾ ಕ್ಯಾಂಟೀನ್‌ ಸ್ಥಾಪಿಸಬೇಕು ಎಂಬ ಆಲೋಚನೆ ಇದ್ದು, ಇದಕ್ಕಾಗಿ ಅವಶ್ಯಕತೆ ಇರುವ ಜಾಗಗಳನ್ನು ಗುರುತಿಸಿ ಪ್ರಸ್ತಾವನೆ ಸಲ್ಲಿಸಲು ಸೂಚಿಸಲಾಗಿದೆ. ಸದ್ಯ ದರ ಪರಿಷ್ಕರಣೆ ಇಲ್ಲ, ಮೆನುವಿನಲ್ಲಿ ಬದಲಾವಣೆ ಆಗಲಿದೆ. ಹೊಸ ಟೆಂಡರ್‌ ಕರೆದು, ಕ್ವಾಲಿಟಿ, ಕ್ವಾಂಟಿಟಿ, ಕ್ಲೀನ್ಲೀನೆಸ್‌ ಅನ್ನು ನಿರ್ವಹಿಸುವುದಕ್ಕೆ ಆದ್ಯತೆ ನೀಡಲಾಗುವುದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು.

ಬೆಂಗಳೂರು ನಗರ ಹೊರತುಪಡಿಸಿ ಉಳಿದೆಡೆಯೂ ಇಂದಿರಾ ಕ್ಯಾಂಟೀನ್‌

ಬೆಂಗಳೂರು ಮಹಾನಗರ ಹೊರತುಪಡಿಸಿ ಉಳಿದ ಸ್ಥಳಗಳಲ್ಲಿ ಅಗತ್ಯ ಇರುವ ಕಡೆಗೆ ಹೊಸದಾಗಿ ಇಂದಿರಾ ಕ್ಯಾಂಟೀನ್‌ ಸ್ಥಾಪಿಸುವ ಉದ್ದೇಶ ಸರ್ಕಾರಕ್ಕೆ ಇದೆ. ಇದಕ್ಕಾಗಿ ಸ್ಥಳ ಗುರುತಿಸಲು ಅಧಿಕಾರಿಗಳಿಗೆ ಸೂಚಿಸಲಾಗಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು.

ಬೆಂಗಳೂರು ಮಹಾನಗರದಲ್ಲಿ ಇಂದಿರಾ ಕ್ಯಾಂಟೀನ್‌ ನಿರ್ವಹಣೆಗೆ ಬಿಬಿಎಂಪಿ ಮತ್ತು ರಾಜ್ಯ ಸರ್ಕಾರ ಶೇಕಡ 50:50 ರ ಅನುಪಾತದಲ್ಲಿ ಅನುದಾನ ನೀಡಲಾಗುತ್ತದೆ. ಬೆಂಗಳೂರು ಮಹಾನಗರ ಬಿಟ್ಟು ಉಳಿದ ಕಡೆ ಅನುದಾನ ನೀಡಿಕೆ ಅನುಪಾತ ರಾಜ್ಯ ಸರ್ಕಾರ ಶೇಕಡ 70 ಮತ್ತು ಸ್ಥಳೀಯಾಡಳಿತ ಸಂಸ್ಥೆ ಶೇಕಡ 30 ಇರಲಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಸೋಮವಾರ ಸ್ಪಷ್ಟಪಡಿಸಿದರು.

ಇಂದಿರಾ ಕ್ಯಾಂಟೀನ್‌ ಕುರಿತು ಸಭೆಯಲ್ಲಿ ಅಧಿಕಾರಿಗಳಿಗೆ ಸೂಚನೆ ಏನು?

  • ಇಂದಿರಾ ಕ್ಯಾಂಟೀನ್‌ ಗಳಿಗೆ ಭೇಟಿ ನೀಡಿ, ಸುಸ್ಥಿತಿ ಮತ್ತು ಕಾರ್ಯನಿರ್ವಹಣೆ ಕುರಿತು ವರದಿ ಸಲ್ಲಿಸಲು ಸೂಚಿಸಲಾಯಿತು.
  • ಇಂದಿರಾ ಕ್ಯಾಂಟೀನ್‌ಗಳ ದುರಸ್ತಿ ಅಗತ್ಯ ಇರುವಲ್ಲಿ ಕೂಡಲೇ ಕ್ರಮ ಕೈಗೊಂಡು, ಸುಸ್ಥಿತಿಯಲ್ಲಿರಬೇಕು. ಆಹಾರದ ಗುಣಮಟ್ಟ ಕಾಯ್ದುಕೊಳ್ಳಬೇಕು. ನಿಗದಿ ಪಡಿಸಿದ ಮೆನುವನ್ನು ಕಟ್ಟುನಿಟ್ಟಾಗಿ ಪಾಲಿಸಬೇಕು.
  • ಹೊಸದಾಗಿ ಟೆಂಡರ್‌ ಪ್ರಕ್ರಿಯೆಯನ್ನು ವಿಕೇಂದ್ರೀಕರಣಗೊಳಿಸಿ ಎಂಟು ವಲಯಗಳಲ್ಲಿ ಟೆಂಡರ್‌ ಕರೆಯಲು ಸೂಚಿಸಲಾಯಿತು. ಟೆಂಡರ್‌ ಪ್ರಕ್ರಿಯೆಯಲ್ಲಿ ಪಾರದರ್ಶಕತೆ ಕಾಯ್ದುಕೊಳ್ಳಲು ಸೂಚಿಸಲಾಯಿತು.
  • ಸ್ವಚ್ಛತೆ, ಗುಣಮಟ್ಟ ಹಾಗೂ ಪ್ರಮಾಣದಲ್ಲಿ ಯಾವುದೇ ರಾಜಿ ಮಾಡಬಾರದು. ಉತ್ತರ ಕರ್ನಾಟಕದಲ್ಲಿ ಸ್ಥಳೀಯ ಆಹಾರ ಒದಗಿಸಲು ಅಧಿಕಾರಿಗಳಿಗೆ ಸೂಚನೆ.
  • ಸಚಿವರು, ಶಾಸಕರನ್ನು ಉಪಾಹಾರ ಸ್ವೀಕರಿಸಲು ಆಹ್ವಾನಿಸಬೇಕು. ಇದು ಗುಣಮಟ್ಟ ಕಾಪಾಡಲು ಅನುಕೂಲ ಎಂದು ಅಧಿಕಾರಿಗಳಿಗೆ ಸೂಚಿಸಲಾಯಿತು.
  • ಕಾಲೇಜು, ಆಸ್ಪತ್ರೆ, ಬಸ್‌ ನಿಲ್ದಾಣ, ತಾಲೂಕು ಕಚೇರಿಗಳಂತಹ ಜನ ಸೇರುವ ಸ್ಥಳಗಳಲ್ಲಿ ಹೊಸ ಇಂದಿರಾ ಕ್ಯಾಂಟೀನ್‌ ಸ್ಥಾಪಿಸುವ ಕುರಿತು ಪ್ರಸ್ತಾವನೆ ಸಲ್ಲಿಸಲು ಸೂಚಿಸಲಾಯಿತು.

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ