logo
ಕನ್ನಡ ಸುದ್ದಿ  /  ಕರ್ನಾಟಕ  /  Karnataka Mlc Nominees: ವಿಧಾನ ಪರಿಷತ್‍ಗೆ ಉಮಾಶ್ರೀ, ಸೀತಾರಾಂ, ಸುಧಾಮ್‌ ದಾಸ್‌ ನಾಮನಿರ್ದೇಶನ; ಮಾಜಿ ಇಡಿ ಅಧಿಕಾರಿ ಆಯ್ಕೆ ಅಚ್ಚರಿ

Karnataka MLC Nominees: ವಿಧಾನ ಪರಿಷತ್‍ಗೆ ಉಮಾಶ್ರೀ, ಸೀತಾರಾಂ, ಸುಧಾಮ್‌ ದಾಸ್‌ ನಾಮನಿರ್ದೇಶನ; ಮಾಜಿ ಇಡಿ ಅಧಿಕಾರಿ ಆಯ್ಕೆ ಅಚ್ಚರಿ

HT Kannada Desk HT Kannada

Aug 19, 2023 06:29 PM IST

google News

ಮಾಜಿ ಸಚಿವರಾದ ಉಮಾಶ್ರೀ, ಎಂ.ಆರ್‌. ಸೀತಾರಾಂ ಮತ್ತು ಮಾಜಿ ಇಡಿ ಅಧಿಕಾರಿ ಸುಧಾಮ್‌ ದಾಸ್‌

  • Karnataka MLC Nominees: ವಿಧಾನ ಪರಿಷತ್‍ಗೆ ಮಾಜಿ ಸಚಿವರಾದ ಎಂ.ಆರ್. ಸೀತಾರಾಂ, ಉಮಾಶ್ರೀ ಮತ್ತು ಮಾಜಿ ಇಡಿ ಅಧಿಕಾರಿ ಸುಧಾಮ್ ದಾಸ್‍ ನಾಮನಿರ್ದೇಶನ ಅಂತಿಮವಾಗಿದ್ದು, ರಾಜ್ಯಪಾಲರ ಅಂಕಿತವೂ ಬಿದ್ದಿದೆ. ಮಾಜಿ ಅಧಿಕಾರಿ ಸುಧಾಮ್ ದಾಸ್ ನಾಮನಿರ್ದೇಶನಕ್ಕೆ ವಿರೋಧ ವ್ಯಕ್ತವಾಗಿದ್ದು, ಕೆಲವರು ಹೈಕಮಾಂಡ್‍ಗೆ ಪತ್ರ ಬರೆದಿದ್ದಾರೆ. ಈ ವಿವರ ನೀಡಿದ್ದಾರೆ ಎಚ್‍.ಮಾರುತಿ.

ಮಾಜಿ ಸಚಿವರಾದ ಉಮಾಶ್ರೀ, ಎಂ.ಆರ್‌. ಸೀತಾರಾಂ ಮತ್ತು ಮಾಜಿ ಇಡಿ ಅಧಿಕಾರಿ ಸುಧಾಮ್‌ ದಾಸ್‌
ಮಾಜಿ ಸಚಿವರಾದ ಉಮಾಶ್ರೀ, ಎಂ.ಆರ್‌. ಸೀತಾರಾಂ ಮತ್ತು ಮಾಜಿ ಇಡಿ ಅಧಿಕಾರಿ ಸುಧಾಮ್‌ ದಾಸ್‌

ವಿಧಾನ ಪರಿಷತ್ ಗೆ ನಿರೀಕ್ಷೆಯಂತೆ ಮಾಜಿ ಸಚಿವರಾದ ಉಮಾಶ್ರೀ, ಎಂ.ಆರ್‌. ಸೀತಾರಾಂ ಮತ್ತು ಮಾಜಿ ಇಡಿ ಅಧಿಕಾರಿ ಸುಧಾಮ್‌ ದಾಸ್‌ ಅವರ ನಾಮನಿರ್ದೇಶನಕ್ಕೆ ರಾಜ್ಯಪಾಲರು ಅನುಮತಿ ನೀಡಿದ್ದಾರೆ.

ಮೇಲ್ಮನೆಗೆ ನಾಮಕರಣಗೊಂಡ ಸದಸ್ಯರಾದ ಪಿ.ಆರ್. ರಮೇಶ್, ಮೋಹನ್ ಕೊಂಡಜ್ಜಿ ಮತ್ತು ಸಿ. ಎಂ. ಲಿಂಗಪ್ಪ ಅವರ ನಿವೃತ್ತಿಯಿಂದ ತೆರವಾದ ಸ್ಥಾನಗಳಿಗೆ ಇವರನ್ನು ಆಯ್ಕೆ ಮಾಡಲಾಗಿದೆ. ಕಲಾವಿದರ ಕೋಟಾ ಅಡಿಯಲ್ಲಿ ಉಮಾಶ್ರೀ, ಶಿಕ್ಷಣ ಕ್ಷೇತ್ರದಿಂದ ಸೀತಾರಾಂ ಮತ್ತು ಸಮಾಜ ಸೇವೆ ಕೋಟಾ ಅಡಿಯಲ್ಲಿ ಸುಧಾಮ್‌ ದಾಸ್‌ ಅವರ ಹೆಸರನ್ನು ಶಿಫಾರಸ್ಸು ಮಾಡಲಾಗಿತ್ತು.

ಉಮಾಶ್ರೀ ಅವರು ನೇಕಾರ, ಸೀತಾರಾಂ ಅವರು ಬಲಿಜ ಸಮುದಾಯ ಮತ್ತು ಸುಧಾಮ್‌ ದಾಸ್‌ ದಲಿತ ವರ್ಗವನ್ನು ಪ್ರತಿನಿಧಿಸುತ್ತಾರೆ.

ಈ ಮೊದಲು ಸುಧಾಮ್‌ ದಾಸ್‌ ಅವರಿಗೆ ಬದಲಾಗಿ ಹಿರಿಯ ಕಾಂಗ್ರೆಸ್ ಮುಖಂಡ ರೆಹಮಾನ್ ಖಾನ್ ಅವರ ಪುತ್ರ ಮನ್ಸೂರ್ ಆಲಿ ಖಾನ್ ಅವರ ಹೆಸರು ಮುಂಚೂಣಿಗೆ ಬಂದಿತ್ತು. ಇವರು ದೇಶಾದ್ಯಂತ ಡೆಲ್ಲಿ ಪಬ್ಲಿಕ್ ಸ್ಕೂಲ್ ಗಳನ್ನು ನಡೆಸುತ್ತಿದ್ದಾರೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಉಮಾಶ್ರೀ ಮತ್ತು ಸೀತಾರಾಂ ಪರವಾಗಿ ನಿಂತರೆ ಸುಧಾಮ್‌ ದಾಸ್‌ ಪರ ಉಪ ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಬ್ಯಾಟಿಂಗ್ ಮಾಡಿದ್ದರು.

ಮುಸ್ಲಿಂ ಸಮುದಾಯವನ್ನು ಕಡೆಗಣಿಸಲಾಗುತ್ತಿದೆ ಎಂಬ ಕೂಗು ಕೇಳಿ ಬರುತ್ತಿದ್ದು ಈ ಅಸಮಾಧಾನವನ್ನು ಹೇಗೆ ನಿಭಾಯಿಸುತ್ತಾರೆ ಎಂದು ಕಾದು ನೋಡಬೇಕಿದೆ. ಶಾಸನಸಭೆಗಳಿಗೆ ನೇರವಾಗಿ ಆಯ್ಕೆಯಾಗಲು ಸಾಧ್ಯವಾಗದ ಸಮುದಾಯಗಳಿಗೆ ಸೋಷಿಯಲ್ ಎಂಜಿನಿಯರಿಂಗ್ ಕಲ್ಪನೆ ಆಧಾರದಲ್ಲಿ ಮುಖ್ಯವಾಹಿನಿಗೆ ತರಲು ಅವಕಾಶ ಕಲ್ಪಿಸಲಾಗುತ್ತದೆ.

ಸೂಕ್ಷ್ಮ ಮತ್ತು ಅತಿ ಸೂಕ್ಷ್ಮ ಸಮುದಾಯಗಳಾದ ತಿಗಳ, ಚಮ್ಮಾರ, ಕಾಡುಗೊಲ್ಲ, ಸವಿತಾ, ಕೊರಚ ಕುಂಬಾರ ಇಂತಹ ಸಮುದಾಯಗಳ ಪ್ರಜ್ಞಾವಂತರನ್ನು ಪರಿಷತ್ ಗೆ ಆಯ್ಕೆ ಮಾಡಲು ಒತ್ತು ನೀಡಲಾಗುತ್ತದೆ. ಈ ಹಿಂದೆ ಇದೇ ಸಿದ್ದರಾಮಯ್ಯ ಅವರು ಕಾಡುಗೊಲ್ಲ ಸಮುದಾಯದ ಜಯಮ್ಮ ಅವರನ್ನು ಪರಿಷತ್ ಗೆ ನಾಮಕರಣ ಮಾಡುವ ಮೂಲಕ ಅಚ್ಚರಿ ಮೂಡಿಸಿದ್ದರು. ಈಗ ಅವರು ತಾವು ದೇವರಾಜ ಅರಸು ಅವರ ಶಿಷ್ಯ ಎನ್ನುವುದನ್ನು ಮರೆತರೇ ಎಂಬ ಅನುಮಾನ ನೀಡಿದೆ. ಆರ್ಥಿಕವಾಗಿ ಬಲಾಢ್ಯರಾದ ಮತ್ತು ಈಗಾಗಲೇ ವಿಧಾನಸಭೆ ಮತ್ತು ಪರಿಷತ್ ಸದಸ್ಯರಾಗಿ ಸಚಿವರೂ ಆಗಿದ್ದವರಿಗೆ ಮತ್ತೆ ಮಣೆ ಹಾಕಿರುವುದು ಅನೇಕ ಮುಖಂಡರ ಅಸಮಾಧಾನಕ್ಕೆ ಕಾರಣವಾಗಿದೆ.

ಯಾರು ಸುಧಾಮ್‌ ದಾಸ್? ಇವರಿಗೆ ವಿರೋಧ ಏಕೆ ?

ಜಾರಿ ನಿರ್ದೇಶನಾಲಯದ ಮಾಜಿ ಅಧಿಕಾರಿ ಸುಧಾಮ್‌ ದಾಸ್‌ ಅವರನ್ನು ವಿಧಾನ ಪರಿಷತ್‌ಗೆ ನಾಮನಿರ್ದೇಶನ ಮಾಡುವ ಪ್ರಸ್ತಾವಕ್ಕೆ ನಾಲ್ವರು ಹಿರಿಯ ಸಚಿವರು ಆಕ್ಷೇಪ ವ್ಯಕ್ತಪಡಿಸಿ ಕಾಂಗ್ರೆಸ್‌ ಹೈಕಮಾಂಡ್‌ಗೆ ಪತ್ರ ಬರೆದಿದ್ದರು.

ಗೃಹ ಸಚಿವ ಡಾ.ಜಿ.ಪರಮೇಶ್ವರ, ಆಹಾರ ಮತ್ತು ನಾಗರಿಕ ಪೂರೈಕೆ ಸಚಿವ ಕೆ.ಎಚ್‌.ಮುನಿಯಪ್ಪ, ಸಮಾಜ ಕಲ್ಯಾಣ ಸಚಿವ ಡಾ.ಎಚ್‌.ಸಿ.ಮಹದೇವಪ್ಪ ಹಾಗೂ ಅಬಕಾರಿ ಸಚಿವ ಆರ್.ಬಿ.ತಿಮ್ಮಾಪುರ ಅವರು ಕಾಂಗ್ರೆಸ್‌ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಹಾಗೂ ಪಕ್ಷದ ನಾಯಕ ರಾಹುಲ್‌ ಗಾಂಧಿ ಅವರಿಗೆ ಪತ್ರ ಬರೆದು ಸುಧಾಮ್‌ ದಾಸ್‌ ಹೆಸರನ್ನು ಶಿಫಾರಸ್ಸು ಮಾಡಬಾರದು ಎಂದು ಒತ್ತಾಯಿಸಿದ್ದರು.

ಇವರಷ್ಟೇ ಅಲ್ಲದೆ ಮಾಜಿ ಸಚಿವ ಹೆಚ್. ಆಂಜನೇಯ. ಮಾಜಿ ಸಂಸದ ಬಿಎನ್ ಚಂದ್ರಪ್ಪ ಮೊದಲಾದವರೂ ಆಕ್ಷೇಪ ವ್ಯಕ್ತಪಡಿಸಿದ್ದರು.

ಜಾರಿ ನಿರ್ದೇಶನಾಲಯದ ಅಧಿಕಾರಿಯಾಗಿದ್ದ ಸುಧಾಮ್‌ ದಾಸ್‌ ಕೆಲವು ವರ್ಷಗಳ ಹಿಂದೆ ತಮ್ಮ ಹುದ್ದೆಗೆ ರಾಜೀನಾಮೆ ನೀಡಿದರು. ಬಳಿಕ ಅವರನ್ನು ಕರ್ನಾಟಕ ಮಾಹಿತಿ ಆಯುಕ್ತರನ್ನಾಗಿ ನೇಮಕ ಮಾಡಲಾಯಿತು. ಅವರು ಈ ವರ್ಷದ ಮಾರ್ಚ್‌ನಲ್ಲಿ ಮಾಹಿತಿ ಆಯುಕ್ತ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿ ಕಾಂಗ್ರೆಸ್‌ ಪಕ್ಷಕ್ಕೆ ಸೇರ್ಪಡೆಯಾಗಿದ್ದರು. ಅವರು ಪಕ್ಷಕ್ಕೆ ಹೊಸಬರಾಗಿದ್ದು ಅವರು ಯಾವುದೇ ಕೊಡುಗೆ ನೀಡಿಲ್ಲ. ಪಕ್ಷ ಸಂಘಟನೆಯಲ್ಲಿಯೂ ಅವರ ಪಾತ್ರ ನಗಣ್ಯವಾಗಿದೆ. ಅವರ ಹೆಸರನ್ನು ಮೇಲ್ಮನೆಗೆ ಪರಿಗಣಿಸುವುದಕ್ಕೆ ನಮ್ಮ ಬಲವಾದ ಆಕ್ಷೇಪವಿದೆ. ದಲಿತ ಸಮುದಾಯ ಮತ್ತು ಪಕ್ಷ ಸಂಘಟನೆಗಾಗಿ ಹಲವಾರು ದಶಕಗಳಿಂದ ದುಡಿದ ನೂರಾರು ನಾಯಕರು ಸಾಕಷ್ಟು ಮಂದಿ ಇದ್ದಾರೆ. ಅಂತಹ ಅವಕಾಶ ವಂಚಿತರನ್ನು ಪರಿಗಣಿಸಬೇಕು ಎಂದೂ ಪತ್ರದಲ್ಲಿ ಉಲ್ಲೇಖಿಸಿದ್ದರು.

ಸುಧಾಮ್‌ ದಾಸ್ ಹಿನ್ನೆಲೆ

ಎಚ್.ಪಿ. ಸುಧಾಮ್‌ ದಾಸ್, ಸಾತನೂರು ಶಾಸಕರಾಗಿದ್ದ ಪುಟ್ಟದಾಸ ಅವರ ಪುತ್ರ. ಇವರು 1967 ರಲ್ಲಿ ಸ್ವತಂತ್ರ ಅಭ್ಯರ್ಥಿಯಾಗಿ ಮತ್ತು 1972 ರಲ್ಲಿ ಕಾಂಗ್ರೆಸ್ ಪಕ್ಷದಿಂದ ಚುನಾಯಿತರಾಗಿದ್ದರು. ಸುಧಾಮ್‌ ದಾಸ್ ಕಂದಾಯ ಸೇವೆ ಅಧಿಕಾರಿಯಾಗಿ ಜಾರಿ ನಿರ್ದೇಶನಾಲಯದ ಕರ್ನಾಟಕ ಮತ್ತು ಕೇರಳ ರಾಜ್ಯಗಳ ಪ್ರಭಾರಿಯಾಗಿದ್ದರು.

ಇಡಿ ದಾಳಿಗೆ ಗುರಿಯಾದ ಶಿವಕುಮಾರ್ ಅವರಿಗೆ ಆಪ್ತರು ಎನ್ನಲಾಗಿದೆ. ಐಟಿ ಇಡಿ ದಾಳಿ ಕುರಿತು ಹಲವಾರು ಕಾಂಗ್ರೆಸ್ ಮುಖಂಡರಿಗೆ ಸಲಹೆಗಾರರು ಎಂದು ತಿಳಿದು ಬಂದಿದೆ.

ಇವರು ದಲಿತ ಎಡಗೈ ಸಮುದಾಯಕ್ಕೆ ಸೇರಿದವರಾಗಿದ್ದಾರೆ. ಚುನಾವಣೆಗೂ ಮುನ್ನ ಇವರನ್ನು ಕಾಂಗ್ರೆಸ್ ಪಕ್ಷದ ಪ್ರಚಾರ ಸಮಿತಿ ಸಹ ಅಧ್ಯಕ್ಷರನ್ನಾಗಿ ನೇಮಕ ಮಾಡಲಾಗುತ್ತದೆ. ಆದರೆ ಇವರು ಪ್ರಚಾರಕ್ಕೆ ಹೆಣೆದ ರಣತಂತ್ರ ಯಾವುದು ಎಂದು ಯಾರಿಗೂ ತಿಳಿದಿಲ್ಲ. ಅರ್ಥಾತ್ ಇವರು ಆ ಹುದ್ದೆಗೆ ನೇಮಕವಾಗಿದ್ದ ಸುದ್ದಿಯಾಗಿದ್ದು ಬಿಟ್ಟರೆ ಬೇರೆ ಯಾವುದೇ ಕೆಲಸ ಮಾಡಿಲ್ಲ.

ಇವರು ನೆಲಮಂಗಲ ಕ್ಷೇತ್ರದ ಟಿಕೆಟ್ ಆಕಾಂಕ್ಷಿ ಯಾಗಿದ್ದರು. ತೀವ್ರ ವಿರೋಧ ವ್ಯಕ್ತವಾಗಿದ್ದರಿಂದ ಟಿಕೆಟ್ ಕೈ ತಪ್ಪಿತ್ತು. ಒಟ್ಟಾರೆ ಉಪ ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅವರು ಮೇಲುಗೈ ಸಾಧಿಸಿದ್ದಾರೆ.

(Karnataka News, Election News and Explainers from Hindustan Times Kannada. ಭಾರತದ, ವಿವಿಧ ರಾಜ್ಯಗಳು ರಾಜಕೀಯ ವಿದ್ಯಮಾನದ ಮತ್ತಷ್ಟು ಮಾಹಿತಿಗೆ kannada.hindustantimes.com ಜಾಲತಾಣ ನೋಡಿ)

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ