logo
ಕನ್ನಡ ಸುದ್ದಿ  /  ಕರ್ನಾಟಕ  /  ಕರ್ನಾಟಕದಲ್ಲಿ ಕನ್ನಡಿಗರ ಉದ್ಯೋಗ ಮೀಸಲಾತಿ ಪ್ರಶ್ನಿಸಿದ ಫೋನ್‌ಪೇ ಸಿಇಒ ಸಮೀರ್; ಆಪ್‌ ಅನ್‌ಇನ್‌ಸ್ಟಾಲ್‌ ಅಭಿಯಾನಕ್ಕೆ ಕರುನಾಡ ಜನರ ಬೆಂಬಲ

ಕರ್ನಾಟಕದಲ್ಲಿ ಕನ್ನಡಿಗರ ಉದ್ಯೋಗ ಮೀಸಲಾತಿ ಪ್ರಶ್ನಿಸಿದ ಫೋನ್‌ಪೇ ಸಿಇಒ ಸಮೀರ್; ಆಪ್‌ ಅನ್‌ಇನ್‌ಸ್ಟಾಲ್‌ ಅಭಿಯಾನಕ್ಕೆ ಕರುನಾಡ ಜನರ ಬೆಂಬಲ

Reshma HT Kannada

Jul 21, 2024 12:12 PM IST

google News

ಕರ್ನಾಟಕದಲ್ಲಿ ಕನ್ನಡಿಗರ ಉದ್ಯೋಗ ಮೀಸಲಾತಿ ಪ್ರಶ್ನಿಸಿದ ಫೋನ್‌ಪೇ ಸಿಇಒ ಸಮೀರ್ ನಿಗಮ್ ವಿರುದ್ಧ ಆಕ್ರೋಶದ ಕಿಡಿ

    • ಫೋನ್‌ ಪೇ ಸಿಇಒ ಸಮೀರ್‌ ನಿಗಮ್‌  ಕರ್ನಾಟಕ ಸರ್ಕಾರದ ಖಾಸಗಿ ಉದ್ಯೋಗ ಕೋಟಾ ಮಸೂದೆಯ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಈ ಬಗ್ಗೆ ಟ್ವೀಟ್‌ ಮಾಡಿರುವ ಸಮೀರ್‌ ಈಗ ಕನ್ನಡಿಗರ ಸಿಟ್ಟಿಗೆ ಗುರಿಯಾಗಿದ್ದಾರೆ. ಹಲವು ಕನ್ನಡಿಗರು ಫೋನ್‌ಪೇ ಆಪ್‌ ಅನ್‌ಇನ್‌ಸ್ಟಾಲ್‌ ಮಾಡುವ ಮೂಲಕ ಆಕ್ರೋಶ ಹೊರಹಾಕಿದ್ದಾರೆ. 
ಕರ್ನಾಟಕದಲ್ಲಿ ಕನ್ನಡಿಗರ ಉದ್ಯೋಗ ಮೀಸಲಾತಿ ಪ್ರಶ್ನಿಸಿದ ಫೋನ್‌ಪೇ ಸಿಇಒ ಸಮೀರ್ ನಿಗಮ್ ವಿರುದ್ಧ ಆಕ್ರೋಶದ ಕಿಡಿ
ಕರ್ನಾಟಕದಲ್ಲಿ ಕನ್ನಡಿಗರ ಉದ್ಯೋಗ ಮೀಸಲಾತಿ ಪ್ರಶ್ನಿಸಿದ ಫೋನ್‌ಪೇ ಸಿಇಒ ಸಮೀರ್ ನಿಗಮ್ ವಿರುದ್ಧ ಆಕ್ರೋಶದ ಕಿಡಿ

ಕರ್ನಾಟಕದಲ್ಲಿನ ಖಾಸಗಿ ಸಂಸ್ಥೆಗಳಲ್ಲಿ ಕನ್ನಡಿಗರಿಗೆ ನೀಡಲು ಉದ್ದೇಶಿಸಿರುವ ಮೀಸಲಾತಿಯನ್ನು ಪ್ರಶ್ನಿಸಿರುವ ಫೋನ್‌ಪೇ ಸಿಇಒ ಸಮೀರ್ ನಿಗಮ್ ವಿರುದ್ಧ ಭಾರಿ ಆಕ್ರೋಶ ವ್ಯಕ್ತವಾಗುತ್ತಿದ್ದು, ಎಲ್ಲೆಡೆ ಫೋನ್‌ಪೇ ಅನ್‌ಇನ್‌ಸ್ಟಾಲ್ ಅಭಿಮಾಯಾನ ಶುರುವಾಗಿದೆ. ಕನ್ನಡಿಗರನ್ನು ಕೆಣಕಿದ ಫೋನ್‌ಪೇ ಸಿಇಒಗೆ ಬುದ್ದಿ ಕಲಿಸಬೇಕು. ಹೀಗಾಗಿ ಈ ಆಪ್ ಬಳಸದಂತೆ ಸಾಮಾಜಿಕ ಜಾಲತಾಣಗಳಲ್ಲಿ ಕರೆ ನೀಡಲಾಗಿದೆ. ಇದರ ನಡುವೆ ಆಪ್ ಅನ್‌ಇನ್‌ಸ್ಟಾಲ್ ಮಾಡುತ್ತಿರುವ ವಿಡಿಯೊಗಳು ವೈರಲ್ ಆಗುತ್ತಿವೆ.

ಕರ್ನಾಟಕ ಸರ್ಕಾರ ಖಾಸಗಿ ಉದ್ಯೋಗ ಕೋಟಾ ಮಸೂದೆಯನ್ನು ಬದಲಿಸುವ ಯೋಚನೆಯಲ್ಲಿದ್ದು ಈ ಬಗ್ಗೆ ಕರಡು ಮಸೂದೆಯನ್ನು ಸಿದ್ಧಪಡಿಸಿದೆ. ಅದರ ಪ್ರಕಾರ ಖಾಸಗಿ ಸಂಸ್ಥೆಗಳ ಆಡಳಿತಾತ್ಮಕ ಹುದ್ದೆಗಳಲ್ಲಿ ಶೇ 50 ರಷ್ಟು ಕನ್ನಡಿ ಹಾಗೂ ಆಡಳಿತಾತ್ಮಕವಲ್ಲದ ಹುದ್ದೆಗಳಲ್ಲಿ ಶೇ 75 ರಷ್ಟು ಮೀಸಲಾತಿ ನಿಗದಿ ಪಡಿಸುವ ಬಗ್ಗೆ ಕರಡು ಮಸೂದೆಯನ್ನು ನಿಗದಿ ಪಡಿಸಿದೆ. ಸದ್ಯ ಈ ಮಸೂದೆ ಅಂಗೀಕಾರವನ್ನು ಸರ್ಕಾರ ತಡೆ ಹಿಡಿದಿದೆ. ಆದರೂ ರಾಜ್ಯ ಸರ್ಕಾರದ ಈ ನಿರ್ಧಾರದ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕ ಪರ-ವಿರೋಧ ವ್ಯಕ್ತವಾಗುತ್ತಿದೆ. ಮೋಹನ್‌ದಾಸ್‌ ಪೈ, ಕಿರಣ್‌ ಮಜುಂದಾರ್‌ ಸೇರಿದಂತೆ ಹಲವು ಉದ್ಯಮಿಗಳು ಇದಕ್ಕೆ ವಿರೋಧ ವ್ಯಕ್ತಪಡಿಸಿದ್ದಾರೆ. 

ಈ ವಿಚಾರವಾಗಿ ಭಾರತದ ಪ್ರಸಿದ್ಧ ಡಿಜಿಟಲ್‌ ಪಾವತಿ ಸಂಸ್ಥೆ ಫೋನ್‌ ಪೇ ಸಿಇಒ ಕೂಡ ಟ್ವೀಟ್‌ ಮಾಡಿದ್ದು, ಸರ್ಕಾರದ ಮಸೂದೆಯನ್ನು ಪ್ರಶ್ನಿಸಿದ್ದಾರೆ. ಇದೇ ಕಾರಣಕ್ಕೆ ಇದೀಗ ಫೋನ್‌ಪೇ ಸಂಸ್ಥೆ ಬಗ್ಗೆ ಹಾಗೂ ಸಮೀರ್‌ ನಿಗಮ್‌ ಬಗ್ಗೆ ಕನ್ನಡಿಗರು ಗರಂ ಆಗಿದ್ದಾರೆ. ಸಮೀರ್ ನಿಗಮ್ ಅವರು ರಾಜ್ಯ ಸರ್ಕಾರದ ಉದ್ದೇಶಿತ ಉದ್ಯೋಗ ಕೋಟಾ ಮಸೂದೆಯನ್ನು ಟೀಕಿಸಿರುವುದು ಸಾಮಾಜಿಕ ಮಾಧ್ಯಮದಲ್ಲಿ ವ್ಯಾಪಕ ಟೀಕೆಗೆ ಒಳಗಾಗಿದೆ. 

ಸಮೀರ್‌ ನಿಗಮ್‌ ಟ್ವೀಟ್‌ನಲ್ಲೇನಿದೆ?

ಸ್ಥಳೀಯರಿಗೆ ಖಾಸಗಿ ವಲಯದ ಉದ್ಯೋಗಗಳಲ್ಲಿ ಹೆಚ್ಚಿನ ಪಾಲನ್ನು ಕಾಯ್ದಿರಿಸುವ ಗುರಿಯನ್ನು ಹೊಂದಿರುವ ಮಸೂದೆಗೆ ತಮ್ಮ ವಿರೋಧವನ್ನು ವ್ಯಕ್ತಪಡಿಸಿದ್ದರು ನಿಗಮ್. ಇವರು ಈ ವಿಚಾರ ಸಂಬಂಧಿಸಿ ವಿರೋಧ ವ್ಯಕ್ತಪಡಿಸಿ ಟ್ವೀಟ್‌ ಮಾಡಿದ ಬಳಿಕ ಸಾಕಷ್ಟು ಟೀಕೆಗೆ ಒಳಗಾಗಿದ್ದರು. ಮಾತ್ರವಲ್ಲ, ಹಲವರು ಫೋನ್‌ ಪೇ ಆಪ್‌ ಅನ್ನು ಅನ್‌ಇನ್‌ಸ್ಟಾಲ್‌ ಮಾಡಿ ಆಕ್ರೋಶ ವ್ಯಕ್ತಪಡಿಸಿದ್ದರು.

ʼನನಗೀಗ 46 ವರ್ಷ. ನಾನು ಯಾವುದೇ ರಾಜ್ಯದಲ್ಲಿ 15 ವರ್ಷಕ್ಕಿಂತ ಹೆಚ್ಚು ಇರಲಿಲ್ಲ. ನನ್ನ ತಂದೆ ಭಾರತೀಯ ನೌಕಾಪಡೆಯಲ್ಲಿದ್ದರು, ಅವರು ದೇಶದಾದ್ಯಂತ ಕೆಲಸ ಮಾಡಿದ್ದರು. ಅವರ ಮಕ್ಕಳು ಕರ್ನಾಟಕದಲ್ಲಿ ಕೆಲಸ ಮಾಡಲು ಅರ್ಹರಲ್ಲವೇ? ನಾನು ಕಂಪನಿಗಳನ್ನು ನಿರ್ಮಾಣ ಮಾಡಿದ್ದೇನೆ. 25 ಸಾವಿರಕ್ಕೂ ಹೆಚ್ಚು ಜನರಿಗೆ ಉದ್ಯೋಗ ನೀಡಿದ್ದೇನೆ, ನನ್ನ ಮಕ್ಕಳು ತವರು ನೆಲದಲ್ಲಿ ಕೆಲಸ ಮಾಡಲು ಅರ್ಹರಲ್ಲವೇ?ʼ ಎಂದು ಅವರು ಟ್ವೀಟ್‌ ಮಾಡುವ ಮೂಲಕ ಪ್ರಶ್ನಿಸಿದ್ದರು.

ನಿಗಮ್‌ ಅವರ ಹೇಳಿಕೆಗಳು ಹಲವು ಕನ್ನಡಿಗರ ಆಕ್ರೋಶಕ್ಕೆ ಕಾರಣವಾಗಿದೆ. ನಿಗಮ್‌ ಅವರು ಕನ್ನಡಿಗರ ಹಿತಾಸಕ್ತಿಗೆ ವಿರುದ್ಧವಾಗಿದ್ದಾರೆ ಎಂದು ಆರೋಪಿಸಲಾಗಿದೆ. ಇವರ ಮಾತಿನಿಂದ ಕೋಪಗೊಂಡ ಹಲವರು ಫೋನ್‌ಪೇ ಆಪ್‌ ಅನ್‌ಇನ್‌ಸ್ಟಾಲ್‌ ಮಾಡುವ ಮೂಲಕ ಅದರ ಸ್ಕ್ರೀನ್‌ಶಾಟ್‌ ಅನ್ನು ಸಾಮಾಜಿಕ ಮಾಧ್ಯಮಗಳಲ್ಲಿ ಹಂಚಿಕೊಂಡಿದ್ದಾರೆ.

ಆಪ್‌ ಅನ್‌ಇನ್‌ಸ್ಟಾಲ್‌ಗಾಗಿ ಅಭಿಯಾನ

"ಎಲ್ಲಾ ಕನ್ನಡಿಗರೇ ನಮಸ್ಕಾರ, ಈ ವ್ಯಕ್ತಿ PhonePe ನ ಸಂಸ್ಥಾಪಕ ಮತ್ತು ಸಿಇಒ ಆಗಿದ್ದಾರೆ. ಅವರು ಕನ್ನಡಿಗರು ಮತ್ತು ಕರ್ನಾಟಕದ ಹಿತಾಸಕ್ತಿಗಳಿಗೆ ಬಹಿರಂಗವಾಗಿ ವಿರುದ್ಧವಾಗಿದ್ದಾರೆ. ದಯವಿಟ್ಟು ನಿಮ್ಮ ಮೊಬೈಲ್‌ಗಳಲ್ಲಿ PhonePe ಅನ್ನು ಅನ್‌ಇನ್‌ಸ್ಟಾಲ್ ಮಾಡಿ ಮತ್ತು GooglePay ಅಥವಾ ನಿಮ್ಮ ಆಯ್ಕೆಯ ಯಾವುದೇ ಇತರ ಅಪ್ಲಿಕೇಶನ್‌ಗಳನ್ನು ಬಳಸಲು ಪ್ರಯತ್ನಿಸಿʼ ಎಂದು ಎಕ್ಸ್‌ನಲ್ಲಿ ಬಳಕೆದಾರರು ಒತ್ತಾಯಿಸಿದ್ದಾರೆ. ಇದರಿಂದ ಫೋನ್‌ಪೇ ಅನ್‌ಇನ್‌ಸ್ಟಾಲ್‌ ಮಾಡುವ ಪ್ರಕ್ರಿಯೆ ವೇಗ ಪಡೆದಿತ್ತು.

ಬೆಂಕಿಗೆ ತುಪ್ಪ ಸುರಿಯುತ್ತಿರುವ ಕನ್ನಡ ಪರ ಸಂಘಟನೆಯಾದ ಕರ್ನಾಟಕ ರಕ್ಷಣಾ ವೇದಿಕೆ (ಕೆಆರ್‌ವಿ) ಸದಸ್ಯರು ವಾರಗಳಲ್ಲಿ ಮಸೂದೆಯನ್ನು ಅಂಗೀಕರಿಸದಿದ್ದರೆ ಪ್ರತಿಭಟನೆ ನಡೆಸುವುದಾಗಿ ಬೆದರಿಕೆ ಹಾಕಿದ್ದಾರೆ. ಕ.ರ.ವೇ ಮುಖ್ಯಸ್ಥ ಟಿ.ಎ.ನಾರಾಯಣಗೌಡ ಅವರು ಐಟಿ ಕಂಪನಿಗಳತ್ತ ಬೊಟ್ಟು ಮಾಡಿ, ಮಸೂದೆ ಜಾರಿಯನ್ನು ಸ್ಥಗಿತಗೊಳಿಸುವಂತೆ ಸರ್ಕಾರದ ಮೇಲೆ ಒತ್ತಡ ಹೇರುತ್ತಿದ್ದಾರೆ ಎಂದು ಆರೋಪಿಸಿದರು.

 

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ