ರಾಜ್ಯ ಸರ್ಕಾರದ ಮಹತ್ವದ ಘೋಷಣೆ, ಮುಂದಿನ ವರ್ಷದಿಂದ ಪ್ರತಿ ಜಿಲ್ಲೆಗಳಲ್ಲೂ ಸಾಮೂಹಿಕ ಸೀಮಂತ ಕಾರ್ಯಕ್ರಮ
Published Mar 26, 2025 07:12 AM IST
ಬೆಳಗಾವಿಯಲ್ಲಿ ನಡೆದ ಸಾಮೂಹಿಕ ಸೀಮಂತ ಕಾರ್ಯಕ್ರಮದಲ್ಲಿ ಲಕ್ಷ್ಮೀ ಹೆಬ್ಬಾಳ್ಕರ್
- 2026ರ ಮಾರ್ಚ್ ತಿಂಗಳಿಂದ ಪ್ರತಿ ಜಿಲ್ಲೆಯಲ್ಲೂ ಸೀಮಂತ ಕಾರ್ಯಕ್ರಮ ಆಯೋಜಿಸಲಾಗುವುದು ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಹೇಳಿದ್ದಾರೆ. ಬೆಳಗಾವಿಯಲ್ಲಿ ನಡೆದ ಸಾಮೂಹಿಕ ಸೀಮಂತ ಕಾರ್ಯಕ್ರಮದಲ್ಲಿ ಅವರು ಕಾಂಗ್ರೆಸ್ ಸರ್ಕಾರದ ಈ ಹೊಸ ಯೋಜನೆಯ ಬಗ್ಗೆ ತಿಳಿಸಿದ್ದಾರೆ.

ಬೆಳಗಾವಿ: 2026ರ ಮಾರ್ಚ್ ತಿಂಗಳಿಂದ ರಾಜ್ಯದ ಎಲ್ಲಾ ಗರ್ಭಿಣಿಯರಿಗೂ ಜಿಲ್ಲಾವಾರು ಸಾಮೂಹಿಕ ಸೀಮಂತ ಮಾಡುವ ಬಗ್ಗೆ ಸರ್ಕಾರ ಆದೇಶ ಹೊರಡಿಸಲಿದೆ. ಮಹಿಳೆಯರ ಸಬಲೀಕರಣಕ್ಕಾಗಿ ಸಿದ್ದರಾಮಯ್ಯ ನೇತೃತ್ವದ ಸರ್ಕಾರ ಜಾರಿಗೆ ತರಲಿರುವ ಪಂಚ ಗ್ಯಾರೆಂಟಿ ಯೋಜನೆಗಳಲ್ಲಿ ಇದು ಕೂಡ ಒಂದು‘ ಎಂದು ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ತಿಳಿಸಿದ್ದಾರೆ.
ಬೆಳಗಾವಿ ಜಿಲ್ಲಾಡಳಿತ ಜಿಲ್ಲಾ ಪಂಚಾಯಿತಿ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಹಾಗೂ ವಿಕಲ ಚೇತನರ ಮತ್ತು ಹಿರಿಯ ನಾಗರಿಕರ ಸಬಲೀಕರಣ ಇಲಾಖೆ ವತಿಯಿಂದ ನಗರ ಸಿಪಿಎಡ್ ಮೈದಾನದಲ್ಲಿ ಅಂತರಾಷ್ಟ್ರೀಯ ಮಹಿಳಾ ದಿನಾಚರಣೆಯ ಅಂಗವಾಗಿ ನಡೆದ 3000 ಮಹಿಳೆಯರಿಗೆ ಸಾಮೂಹಿಕ ಸೀಮಂತ ಕಾರ್ಯಕ್ರಮದಲ್ಲಿ ಅವರು ಮಾತನಾಡಿದ್ದಾರೆ.
‘ಸೀಮಂತವೂ ಭಾರತದ ಸಂಸ್ಕೃತಿಯ ಭಾಗ, ಗರ್ಭಿಣಿ ಆರೋಗ್ಯವಾಗಿದ್ದರೆ ಮಗು ಕೂಡ ಆರೋಗ್ಯವಂತವಾಗಿ ಜನಿಸುತ್ತದೆ. ಸಾಮೂಹಿಕ ಸೀಮಂತದಂತಹ ಕಾರ್ಯಕ್ರಮಗಳ ಮೂಲಕ ಗರ್ಭಿಣಿಯರು ಹಾಗೂ ಅವರಿಗೆ ಹುಟ್ಟಲಿರುವ ಮಗುವಿನ ಬಗ್ಗೆ ಸರ್ಕಾರ ಕಾಳಜಿ ತೋರಲು ಮುಂದಾಗಿದೆ. ಗರ್ಭಿಣಿಯರು ಹಾಗೂ ಕಂದಮ್ಮಗಳ ಆರೋಗ್ಯ ಕಾಪಾಡಲು ಕಾಂಗ್ರೆಸ್ ಸರ್ಕಾರ ಬದ್ಧವಾಗಿದೆ‘ ಎಂದು ಅವರು ಹೇಳಿದ್ದಾರೆ.
ಈ ವೇಳೆ ಜಿಲ್ಲೆಯ 100 ಮಂದಿ ಅಂಗವಿಕಲರಿಗೆ ಬ್ಯಾಟರಿ ಚಾಲಿತ ವೀಲ್‌ಚೇರ್, ಬ್ರೈಲ್ ವಾಚ್ ಹಾಗೂ ಲ್ಯಾಪ್‌ಟಾಪ್‌ಗಳನ್ನು ವಿತರಿಸಿದರು. ಸ್ತ್ರೀ ಶಕ್ತಿ ಗುಂಪುಗಳ ವಿಭಾಗೀಯ ಮಟ್ಟದ ವಸ್ತು ಪ್ರದರ್ಶನ ಹಾಗೂ ಮಾರಾಟ ಮಳಿಗೆಯನ್ನೂ ಇವರು ಉದ್ಘಾಟಿಸಿದರು.
ನಾನು ಮಂತ್ರಿಯಾದ ನಂತರ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಗೆ ಹೊಸ ರೂಪ ನೀಡಿದ್ದೇನೆ. ಅಂಗನವಾಡಿ ಇಲಾಖೆಗೆ ಹೈಟೆಕ್ ಸ್ಪರ್ಶ ನೀಡಿದ್ದು, ಸರ್ಕಾರಿ ಮಾಂಚೆಸರಿ ಶಾಲೆಗಳನ್ನು ತೆರೆಯಲಾಗಿದೆ. ಇದೀಗ ಇಲಾಖೆಯ ವತಿಯಿಂದ ಸಾಮೂಹಿಕ ಸೀಮಂತ ಕಾರ್ಯಕ್ರಮ ಕೂಡ ನಡೆಯುತ್ತಿದೆ ಎಂದು ಅವರು ಹೇಳಿದ್ದಾರೆ.
ಈ ಕಾರ್ಯಕ್ರಮದಲ್ಲಿ ಲಕ್ಷ್ಮೀ ಹೆಬ್ಬಾಳ್ಕರ್‌ಗೆ ಮುಂದಿನ ಮುಖ್ಯಮಂತ್ರಿಯಾಗುವ ಅವಕಾಶ ಸಿಗಲಿ ಎನ್ನುವ ಮಾತು ಕೇಳಿಬಂದಿತು.